More

    ಜೆಎನ್​ಯು ವಿದ್ಯಾರ್ಥಿ ಸಂಘಟನೆ ಅಧ್ಯಕ್ಷೆ ಐಷೆ ಘೋಷ್​ರನ್ನು ಭೇಟಿ ಮಾಡಿ, ನಿಮ್ಮ ಹೋರಾಟಕ್ಕೆ ಇಡೀ ದೇಶದ ಬೆಂಬಲವಿದೆ ಎಂದ ಕೇರಳ ಮುಖ್ಯಮಂತ್ರಿ

    ತಿರುವನಂತಪುರಂ: ನವದೆಹಲಿಯ ಜವಾಹರ್ ಲಾಲ್​ ಯೂನಿವರ್ಸಿಟಿಯಲ್ಲಿ ಜ.5ರಂದು ನಡೆದ ಹಿಂಸಾಚಾರದಲ್ಲಿ ತೀವ್ರವಾಗಿ ಗಾಯಗೊಂಡಿರುವ ವಿದ್ಯಾರ್ಥಿ ಸಂಘಟನೆ ಅಧ್ಯಕ್ಷೆ ಐಷೆ ಘೋಷ್​ ಅವರನ್ನು ಇಂದು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್​ ಭೇಟಿ ಮಾಡಿದರು.

    ಹಿಂಸಾಚಾರಕ್ಕೆ ಸಂಬಂಧಪಟ್ಟಂತೆ ಇಂದು ಪೊಲಿಸರು ಒಂಭತ್ತು ಜನ ಶಂಕಿತರ ಫೋಟೋವನ್ನು ಇಂದು ಬಿಡುಗಡೆ ಮಾಡಿದ್ದು, ಅದರಲ್ಲಿ ಐಷೆ ಘೋಷ್​ ಕೂಡ ಒಬ್ಬರು.

    ಜ.5ರಂದು ನಡೆದ ಹಿಂಸಾಚಾರದಲ್ಲಿ ಐಷೆ ಘೋಷ್​ ಅವರ ತಲೆ ಹಾಗೂ ಕೈಗೆ ತೀವ್ರ ಏಟಾಗಿತ್ತು. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಡಿಸ್​ಚಾರ್ಜ್​ ಆಗಿರುವ ಐಷೆ ಘೋಷ್​ರನ್ನು ಇಂದು ನವದೆಹಲಿಯಲ್ಲಿರುವ ಕೇರಳ ಹೌಸ್​ನಲ್ಲಿ ಭೇಟಿಯಾದ ಪಿಣರಾಯಿ ವಿಜಯನ್​, ಅವರ ಆರೋಗ್ಯ ವಿಚಾರಿಸಿದರು. ಅಲ್ಲದೆ, ಗಾಯಗೊಂಡಿದ್ದ ಉಳಿದ ವಿದ್ಯಾರ್ಥಿಗಳ ಆರೋಗ್ಯದ ಬಗ್ಗೆಯೂ ಮಾಹಿತಿ ಪಡೆದರು.

    ಅಷ್ಟೇ ಅಲ್ಲದೆ, ಸುಧನ್ವ ದೇಶಪಾಂಡೆ ಅವರು ಬರೆದ ‘ಹಲ್ಲಾ ಬೋಲ್​: ದಿ ಡೆತ್​ ಆ್ಯಂಡ್​ ಲೈಫ್​ ಆಫ್​ ಸಫ್ದರ್​ ಹಶ್ಮಿ’ ಪುಸ್ತಕವನ್ನು ಉಡುಗೊರೆಯನ್ನಾಗಿ ನೀಡಿದ್ದಾರೆ.

    ಶುಲ್ಕ ಹೆಚ್ಚಳ ಮತ್ತು ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧ ನ್ಯಾಯಕ್ಕಾಗಿ ಹೋರಾಟ ಮಾಡುತ್ತಿರುವ ಜೆಎನ್​ಯು ವಿದ್ಯಾರ್ಥಿ ಸಂಘಟನೆಯೊಂದಿಗೆ ಇಡೀ ದೇಶವೇ ಇದೆ. ನಿಮ್ಮ ಪ್ರತಿಭಟನೆ ಬಗ್ಗೆ ಎಲ್ಲರಿಗೂ ಗೊತ್ತು. ನ್ಯಾಯಕ್ಕಾಗಿ ಹೋರಾಟ ಮಾಡುತ್ತಿರುವ ನಿಮಗೆ ಏನಾಗಿದೆ ಎಂಬುದೂ ಎಲ್ಲರಿಗೂ ತಿಳಿದಿದೆ ಎಂದು ಐಷೆ ಘೋಷ್​ ಬಳಿ ಪಿಣರಾಯಿ ವಿಜಯನ್​ ಹೇಳಿದ್ದಾರೆ ಎನ್ನಲಾಗಿದೆ.

    ಪಿಣರಾಯಿ ವಿಜಯನ್​ ಭೇಟಿಯ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿ ಐಷೆ ಘೋಷ್​, ತಮ್ಮ ಪರವಾಗಿ ನಿಂತಿದ್ದಕ್ಕೆ ಇಡೀ ಕೇರಳಕ್ಕೆ ಧನ್ಯವಾದ ತಿಳಿಸಿದ್ದಾರೆ.

    ಇನ್ನು ಕೇರಳ ಸಿಎಂ ಪಿಣರಾಯಿ ವಿಜಯನ್​ ಅವರು ಫೇಸ್​ಬುಕ್​ನಲ್ಲಿ ಪೋಸ್ಟ್ ಹಾಕಿಕೊಂಡಿದ್ದು, ಸಂಘಪರಿವಾರ ಬಲಪ್ರಯೋಗದಿಂದ ಜೆಎನ್​ಯು ವಿದ್ಯಾರ್ಥಿಗಳ ಧ್ವನಿಯನ್ನು ಅಡಗಿಸಲು ಪ್ರಯತ್ನಿಸಿತು. ಆದರೆ ಜೆಎನ್​ಯು ಯಾವುದೇ ಕಾರಣಕ್ಕೂ ರಾಜಿಯಾಗಲಿಲ್ಲ. ಐಷೆ ಘೋಷ್​ ತನ್ನ ತಲೆಗೆ ಗಾಯವಾಗಿದ್ದರೂ ಲೆಕ್ಕಿಸದೆ ಹೋರಾಟದ ಮುಂದಾಳತ್ವ ವಹಿಸಿದ್ದಾರೆ ಎಂದು ಬರೆದಿದ್ದಾರೆ. (ಏಜೆನ್ಸೀಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts