ಜೈಲುವಾಸದಿಂದ ಸುರೇಂದ್ರನ್ ಬಿಡುಗಡೆ

«ಮೆರವಣಿಗೆ ಮೂಲಕ ಸ್ವಾಗತಿಸಿದ ಬಿಜೆಪಿ ಕಾರ್ಯಕರ್ತರು»

ವಿಜಯವಾಣಿ ಸುದ್ದಿಜಾಲ ಕಾಸರಗೋಡು
22 ದಿನಗಳಿಂದ ನ್ಯಾಯಾಂಗ ಬಂಧನದಲ್ಲಿದ್ದ ಬಿಜೆಪಿ ರಾಜ್ಯ ಸಮಿತಿ ಪ್ರಧಾನ ಕಾರ್ಯದರ್ಶಿ ಕೆ.ಸುರೇಂದ್ರನ್ ಶನಿವಾರ ಪೂಜಾಪುರಂ ಕೇಂದ್ರ ಕಾರಾಗೃಹದಿಂದ ಬಿಡುಗಡೆಗೊಂಡರು. ಹೊರಬರುತ್ತಿದ್ದಂತೆ ಭಾರಿ ಸಂಖ್ಯೆಯಲ್ಲಿದ್ದ ಪಕ್ಷದ ಕಾರ್ಯಕರ್ತರು ಹಾಗೂ ಅಯ್ಯಪ ಭಕ್ತರು ಅವರನ್ನು ಬರಮಾಡಿಕೊಂಡರು.

ಶಬರಿಮಲೆ ಅಯ್ಯಪ್ಪ ವ್ರತಧಾರಿಯಾಗಿದ್ದ ಕೆ.ಸುರೇಂದ್ರನ್ ಮೆರವಣಿಗೆಯುದ್ದಕ್ಕೂ ಇರುಮುಡಿ ಕಟ್ಟನ್ನು ಹೆಗಲಲ್ಲಿರಿಸಿ ಮುನ್ನಡೆದರು. ಅವರನ್ನು ತೆರೆದ ಜೀಪಿನಲ್ಲಿ ಕುಳ್ಳಿರಿಸಿ ಮೆರವಣಿಗೆ ಮೂಲಕ ಪಳವಂಗಾಡಿ ಶ್ರೀ ಗಣಪತಿ ದೇವಸ್ಥಾನಕ್ಕೆ ಕರೆದೊಯ್ಯಲಾಯಿತು. ನಂತರ ಅವರು ತಿರುವನಂತಪುರ ಸೆಕ್ರೆಟೇರಿಯೆಟ್ ಎದುರು ಆರು ದಿನಗಳಿಂದ ನಿರಾಹಾರ ಸತ್ಯಾಗ್ರಹ ನಡೆಸುತ್ತಿರುವ ಎ.ಎನ್.ರಾಧಾ ಕೃಷ್ಣನ್ ಅವರನ್ನು ಭೇಟಿ ಮಾಡಿದರು.

ನ.17ರಂದು ಇರುಮುಡಿ ಕಟ್ಟಿನೊಂದಿಗೆ ಶಬರಿಮಲೆ ತೆರಳಲು ನೀಲಕ್ಕಲ್ ತಲುಪುತ್ತಿದ್ದಂತೆ ನಿಷೇಧಾಜ್ಞೆ ಉಲ್ಲಂಘನೆ ಆರೋಪದಲ್ಲಿ ಸುರೇಂದ್ರನ್ ಅವರನ್ನು ಬಂಧಿಸಲಾಗಿತ್ತು. ನಂತರ 15ಕ್ಕೂ ಹೆಚ್ಚು ಪ್ರಕರಣಗಳನ್ನು ದಾಖಲಿಸಲಾಗಿತ್ತು. ಎರಡು ತಿಂಗಳ ಕಾಲ ಪತ್ತನಂತಿಟ್ಟ ಜಿಲ್ಲೆಗೆ ಭೇಟಿ ನೀಡದಂತೆ ಹಾಗೂ ಪಾಸ್‌ಪೋರ್ಟ್ ಪೊಲೀಸ್ ವಶಕ್ಕೆ ಒಪ್ಪಿಸುವಂತೆ ಹೈಕೋರ್ಟ್ ಷರತ್ತುಬದ್ಧ ಜಾಮೀನು ನೀಡಿದೆ.

 

ಹೋರಾಟ ಮುಂದುವರಿಯಲಿದೆ. ಶಬರಿಮಲೆ ವಿಷಯದಲ್ಲಿ ನನ್ನಿಂದ ಅಥವಾ ಪಕ್ಷದ ಕಾರ್ಯಕರ್ತರಿಂದ ತಪ್ಪಾಗಿಲ್ಲ. ಪಕ್ಷದ ರಾಜ್ಯಾಧ್ಯಕ್ಷ ಪಿ.ಎಸ್.ಶ್ರೀಧರನ್ ಪಿಳ್ಳೆ, ರಾಜ್ಯಸಭಾ ಸದಸ್ಯ ವಿ.ಮುರಳೀಧರನ್ ಸಹಿತ ಹಲವು ಮುಖಂಡರ ನೇತೃತ್ವದಲ್ಲಿ ಪಕ್ಷ ಮತ್ತಷ್ಟು ಹೋರಾಟ ನಡೆಸಲಿದೆ.
– ಸುರೇಂದ್ರನ್, ಬಿಜೆಪಿ ಮುಖಂಡ