30 ವರ್ಷದ ಬಳಿಕ 200 ರೂ. ಸಾಲವನ್ನು ಮರುಪಾವತಿಸಲು ಭಾರತಕ್ಕೆ ಮರಳಿದ ಕೀನ್ಯಾ ವ್ಯಕ್ತಿಯ ಹಿಂದಿದೆ ಮನಮುಟ್ಟುವ ಕತೆ!

ನವದೆಹಲಿ: ಮನ ಮುಟ್ಟುವ ಘಟನೆಯೊಂದರಲ್ಲಿ ಕೀನ್ಯಾ ರಾಷ್ಟ್ರದ ವ್ಯಕ್ತಿಯೊಬ್ಬ ತಾನು ತೆಗದುಕೊಂಡಿದ್ದ 200 ರೂಪಾಯಿ ಸಾಲವನ್ನು ಮರು ಪಾವತಿಸಲು 30 ವರ್ಷಗಳ ಬಳಿಕ ಭಾರತಕ್ಕೆ ಮರಳಿದ್ದಾನೆ.

ಕೀನ್ಯಾದ ನ್ಯಾರಿಬರಿ ಛಾಛೆ ಕ್ಷೇತ್ರದ ಸಂಸದನಾಗಿರುವ ರಿಚರ್ಡ್​ ಟಾಂಗಿ ಇತ್ತೀಚೆಗೆ ಮಹಾರಾಷ್ಟ್ರದ ಐತಿಹಾಸಿಕ ಕ್ಷೇತ್ರ ಔರಂಗಬಾದ್​ಗೆ ಬಂದಿದ್ದರು. ಅವರ ಆಗಮನಕ್ಕೆ ಕಾರಣ ಹುಡುಕಿದಾಗ 30 ವರ್ಷಗಳ ಹಿಂದೆ ಔರಂಗಾಬಾದ್​ನ ಕಾಶಿನಾಥ್​ ಗಾವ್ಲಿ ಎಂಬುವವರಿಂದ ಪಡೆದುಕೊಂಡಿದ್ದ 200 ರೂಪಾಯಿ ಸಾಲವನ್ನು ಹಿಂದಿರುಗಿಸಲು ಬಂದಿದ್ದಾಗಿ ತಿಳಿದುಬಂದಿದೆ.

ರಿಚರ್ಡ್​ ಟಾಂಗಿ, ತಮ್ಮ ಪತ್ನಿ ಮೈಕೆಲೆಯೊಂದಿಗೆ ಆಗಮಿಸಿ 70 ವರ್ಷದ ಕಾಶೀನಾಥ್​ ಗಾವ್ಲಿ ಅವರ ಮನೆ ಹೊಸ್ತಿಲ ಬಳಿ ಬಂದು ಬಾಗಿಲನ್ನು ಬಡಿದ್ದರು. ಬಾಗಿಲು ತೆರೆದ ಕಾಶೀನಾಥ್​ ಅವರಿಗೆ ಅದು ಜೀವಮಾನದ ಅಚ್ಚರಿಯಾಗಿತ್ತು ಎಂದು ಹೇಳಲಾಗಿದೆ.

ಟಾಂಗಿ ಅವರನ್ನು ಸಂಪೂರ್ಣವಾಗಿ ಮರೆತಿದ್ದ ಕಾಶೀನಾಥ್​ ಪ್ರಾರಂಭದಲ್ಲಿ ಅವರನ್ನು ಗುರುತಿಸಲು ಸಾಧ್ಯವಾಗಿಲ್ಲ. ಆದರೆ, ಯಾವಾಗ ಹಳೆಯ ದಿನಗಳ ಬಗ್ಗೆ ನೆನಪು ಮಾಡಿ ತನಗೆ ಸಹಾಯ ಮಾಡಿದ್ದರ ಬಗ್ಗೆ ಟಾಂಗಿ ವಿವರಿಸಿದರೋ, ಆಗ ಕಾಶೀನಾಥ್​ಗೆ ಎಲ್ಲವೂ ನೆನಪಾಗಿದೆ.

ವಿದ್ಯಾರ್ಥಿಗಳ ವಿನಿಮಯ ಕಾರ್ಯಕ್ರಮದ ಭಾಗವಾಗಿ ಭಾರತಕ್ಕೆ ಬಂದಿದ್ದ ರಿಚರ್ಡ್​ ಟಾಂಗಿ 1985 ರಿಂದ 89ರವರೆಗೆ ಔರಂಗಬಾದ್​ನ ಸ್ಥಳೀಯ ಕಾಲೇಜಿನಲ್ಲಿ ನಿರ್ವಹಣಾಶಾಸ್ತ್ರ ವಿಭಾಗದಲ್ಲಿ ವ್ಯಾಸಂಗ ಮಾಡಿದ್ದರು. ಕಾಲೇಜು ದಿನಗಳಲ್ಲಿ ಟಾಂಗಿಗೆ ಕಾಶೀನಾಥ್​ ಕುಟುಂಬದ ಪರಿಚಯವಾಗಿತ್ತು. ನಂತರದ ದಿನಗಳಲ್ಲಿ ಈ ಪರಿಚಯ ತುಂಬಾ ಗಾಢವಾಗಿತ್ತು. ಬಡಕುಟುಂಬದ ಹಿನ್ನೆಲೆಯಿಂದ ಬಂದಿದ್ದ ಟಾಂಗಿಗೆ ಕಿರಾಣಿ ಅಂಗಡಿ ನಡೆಸುತ್ತಿದ್ದ ಕಾಶೀನಾಥ್​ ಕುಟುಂಬ ಸಹಾಯ ಮಾಡಿತ್ತು.

ನಾನು ಔರಂಗಬಾದ್​ ಕಾಲೇಜಿನ ವಿದ್ಯಾರ್ಥಿಯಾಗಿದ್ದಾಗ ನಾನು ತುಂಬಾ ಕಷ್ಟದಲ್ಲಿದ್ದೆ. ಆಗ ಕಾಶೀನಾಥ್​ ಕುಟುಂಬ ನನಗೆ ತುಂಬಾ ಸಹಾಯ ಮಾಡಿದ್ದರು. ಅವರ ಸಹಾಯವನ್ನು ನೆನೆದು ಒಂದು ದಿನ ಅವರ ಋಣವನ್ನು ತೀರಿಸಬೇಕೆಂದು ನಿರ್ಧರಿಸಿದ್ದೆ. ನಾನು ಅವರಿಗೆ ಧನ್ಯವಾದಗಳನ್ನು ತಿಳಿಸಲು ಬಯಸುತ್ತೇನೆ. ಇದು ನನ್ನ ಜೀವನದ ಅತ್ಯಂತ ಭಾವುಕ ಕ್ಷಣಗಳಲ್ಲಿ ಒಂದು ಎಂದು ರಿಚರ್ಡ್​ ಟಾಂಗಿ ಸುದ್ದಿಗಾರರಿಗೆ ತಿಳಿಸಿದರು.

ಕಾಶೀನಾಥ್ ಅವರ ಹಳೆಯ​ ಸಾಲವನ್ನು ಮರುಪಾವತಿಸಲು ಭಾರತಕ್ಕೆ ಪ್ರಯಾಣಿಸಲು ಸಾಕಷ್ಟು ಬಾರಿ ಪ್ರಯತ್ನಿಸಿದೆ. ಆದರೆ, ಸರ್ಕಾರಿ ಕಾರ್ಯಕ್ರಮಗಳ ಒತ್ತಡದಿಂದಾಗಿ ಅದು ಸಾಧ್ಯವಾಗಿರಲಿಲ್ಲ ಎಂದು ತಿಳಿಸಿದ ಟಾಂಗಿ ಈ ಬಾರಿ ಭೇಟಿ ಆಗಿ ಧನ್ಯವಾದ ತಿಳಿಸಲೇಬೇಕೆಂದು ನಿರ್ಧರಿಸಿ ಭಾರತಕ್ಕೆ ಬಂದಿದ್ದಾಗಿ ಹೇಳಿದರು.

ಕಾಶೀನಾಥ್​ ಹಾಗೂ ಅವರ ಕುಟುಂಬಕ್ಕೆ ದೇವರು ಒಳ್ಳೆಯದು ಮಾಡಲಿ, ನನ್ನ ಪಾಲಿಗೆ ಅವರು ನಿಜಕ್ಕೂ ಅದ್ಭುತ. ಅವರನ್ನು ಹೋಟೆಲ್​ಗೆ ಕರೆದುಕೊಂಡು ಹೋಗಿ ಊಟ ಮಾಡೋಣ ಎಂದುಕೊಂಡಿದ್ದೆ, ಆದರೆ ಅವರ ಮನೆಯಲ್ಲಿಯೇ ಒಳ್ಳೆಯ ಊಟ ಆಯಿತು ಎಂದು ಹೇಳಿಕೊಂಡಿದ್ದಾರೆ.

ತಮ್ಮ ದೇಶಕ್ಕೆ ಮರಳುವಾಗ ಕೀನ್ಯಾದಲ್ಲಿನ ಅವರ ಮನೆಗೆ ಬರುವಂತೆ ಕಾಶೀನಾಥ್​ ಕುಟುಂಬಕ್ಕೆ ರಿಚರ್ಡ್​ ಟಾಂಗಿ ಆಹ್ವಾನಿಸಿದ್ದಾಗಿ ಕಾಶಿನಾಥ್​ ತಿಳಿಸಿದ್ದಾರೆ. (ಏಜೆನ್ಸೀಸ್​)

Leave a Reply

Your email address will not be published. Required fields are marked *