ಕೆಂಜಾರಿನಲ್ಲಿಳಿದ ಅಪರೂಪದ ಅತಿಥಿ ಕಿಂಗ್ ಕ್ವೈಲ್

>

– ಪ್ರಕಾಶ್ ಮಂಜೇಶ್ವರ ಮಂಗಳೂರು
ನಗರದಿಂದ 11 ಕಿ.ಮೀ. ದೂರ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಸಮೀಪದ ಕೆಂಜಾರು ಪ್ರದೇಶದ ನಿಸರ್ಗ ಸೌಂದರ್ಯದ ಮಡಿಲಲ್ಲಿ ಬಂದಿಳಿದಿದೆ ಬಹುವರ್ಣದ ಕಿಂಗ್ ಕ್ವೈಲ್.
ಪಕ್ಷಿ ವೀಕ್ಷಕರಾದ ಅರ್ನಾಲ್ಡ್ ಗೋವಿಯಸ್, ರೋಶನ್ ಕಾಮತ್ ಮತ್ತು ವಿವೇಕ್ ನಾಯಕ್ ತಂಡ ಮಾರ್ಚ್ 28 ರಂದು ಗದ್ದೆಯಲ್ಲಿರುವ ಮುಳ್ಳಿನ ಗಿಡಗಳಲ್ಲಿರುವ ಸಣ್ಣ ಬೀಜಗಳನ್ನು ತಿನ್ನುತ್ತಿದ್ದ ರೆಡ್ ಮುನಿಯಾ ಹಕ್ಕಿಯನ್ನು ತಮ್ಮ ಕ್ಯಾಮರಾ ಕಣ್ಣಲ್ಲಿ ಸೆರೆಹಿಡಿಯುವ ಸಂದರ್ಭ ಅತಿಥಿಯ ಆಗಮನದ ವಿಷಯ ತಿಳಿದಿದೆ.

ದಿಢೀರ್ ಪ್ರತ್ಯಕ್ಷ:  ಕ್ಯಾಮರಾ ಫೋಕಸ್ ನಡೆಸುವ ಸಂದರ್ಭ ಹೊಸ ಹಕ್ಕಿಯೊಂದು ಎದುರು ಹಾರಿಹೋಯಿತು. ಇದನ್ನು ಮೊದಲು ಗಮನಿಸಿರುವುದು ರೋಶನ್ ಕಾಮತ್. ತಕ್ಷಣವೇ ತಂಡದ ಇತರ ಇಬ್ಬರು ಸದಸ್ಯರು ಒಳಗೊಂಡ ತಂಡ ಹೊಸ ಹಕ್ಕಿಯ ಯಾವುದು ಎಂದು ಪತ್ತೆ ಹಚ್ಚಿದೆ. ಆದರೆ ಕ್ಯಾಮರಾ ತಿರುಗಿಸುವ ಮೊದಲೇ ಹಕ್ಕಿ ಕಣ್ಮರೆಯಾಗಿದೆ.
ಹಕ್ಕಿ ಹಾರಿ ಹೋದ ದಿಕ್ಕಿನ ಜಾಡು ಹಿಡಿದು ತಮ್ಮ ಪಕ್ಷಿ ಜತೆಗಿನ ಒಡನಾಟದ ಅನುಭವ ಆಧರಿಸಿ ಸಾಗಿದ ತಂಡಕ್ಕೆ ಮತ್ತೆ ಗಂಡು ಕಿಂಗ್ ಕ್ವೈಲ್ ಎದುರಾಗಿದೆ. ಬಳಿಕ ಕೆಲವು ದಿನಗಳು ನಿರಂತರ ಈ ಹಕ್ಕಿಯು ವೀಕ್ಷಣೆಗೆ ಲಭ್ಯವಾಗಿದ್ದು, ಕಳೆದ ಮೂರು ದಿನಗಳಿಂದ ಗೋಚರಿಸಿಲ್ಲ. ಅದು ಸ್ಥಳ ಬದಲಾಯಿಸಿರುವ ಸಾಧ್ಯತೆಯೂ ಇದೆ ಎಂದು ಅರ್ನಾಲ್ಡ್ ಗೋವಿಯಸ್ ಅಭಿಪ್ರಾಯಪಟ್ಟಿದ್ದಾರೆ.

ತೀರಾ ಅಪರೂಪ: ಕಿಂಗ್ ಕ್ವೈಲ್ ವಲಸೆ ಹಕ್ಕಿ ಅಲ್ಲ. ಆದರೂ ಅದು ಭಾರತದಲ್ಲೇ ಕಡಿಮೆ ಬಾರಿ ಗೋಚರಿಸಿದ ಬಗ್ಗೆ ಮಾಹಿತಿ ಇದೆ. ಅಂತರ್ಜಾಲದಲ್ಲಿ ಅಸ್ಸಾಂನಲ್ಲಿ ತೆಗೆದ ಕೆಲವು ಫೋಟೋಗಳು ಹೊರತುಪಡಿಸಿ ಹೆಚ್ಚಿನ ಮಾಹಿತಿ ತಕ್ಷಣಕ್ಕೆ ಲಭ್ಯವಾಗಿಲ್ಲ. ಕರ್ನಾಟಕ ಕರಾವಳಿಗೆ ಇಲ್ಲಿವರೆಗೆ ಭೇಟಿ ನೀಡಿದ ಭೇಟಿ ನೀಡಿದ ದಾಖಲೆ ಲಭ್ಯವಾಗಿಲ್ಲ. ಸಿಂಗಾಪುರ ಮತ್ತು ಆಸ್ಟ್ರೇಲಿಯಾದಲ್ಲಿ ಮನೆಯಲ್ಲಿಯೂ ಈ ಪಕ್ಷಿಯನ್ನು ಸಾಕುತ್ತಾರಂತೆ. ಏಷ್ಯಾದ ಆಗ್ನೇಯ ಭಾಗದ ವಿವಿಧೆಡೆ ಹಕ್ಕಿಗಳನ್ನು ಗುರುತಿಸಲಾಗಿದೆ.

ಬಹುವರ್ಣದ ಪಕ್ಷಿ: ಗಂಡು ಕ್ವೈಲ್ ಬಹುವರ್ಣದ ಹಕ್ಕಿಯಾಗಿದ್ದು, ಗಾತ್ರದಲ್ಲಿ ಚಿಕ್ಕದು. ಕೋಳಿ ಮರಿಗಿಂತ ಸ್ವಲ್ಪ ದೊಡ್ಡದು. ಹೊಟ್ಟೆಯ ನಡುವಿನ ಭಾಗ ಕೆಂಪು ಕಂದು ಹಾಗೂ ಎದೆಯ ಭಾಗ ನೀಲಿ ಮಿಶ್ರಿತ ಬೂದಿ ಬಣ್ಣ, ಕೊರಳಲ್ಲಿ ಕಪ್ಪು ಮತ್ತು ಬಿಳಿಯ ಪಟ್ಟಿ ಇದೆ. ಬೆನ್ನಿನ ಭಾಗ ಕಪ್ಪು ಮತ್ತು ಕಂದು ಬಣ್ಣದ ಮಿಶ್ರಿತ ಗೆರೆಗಳಿವೆ. ಹೆಣ್ಣು ಹಕ್ಕಿ ಇಷ್ಟು ಆಕರ್ಷಕವಾಗಿರುವುದಿಲ್ಲ. ಸಾಮಾನ್ಯವಾಗಿ ಹುಲ್ಲು ಮತ್ತು ಪೊದೆಗಳು ಇರುವ ಕಡೆ ಆಹಾರ ಹುಡುಕುತ್ತವೆ. ಜನರು ನಡೆದಾಡುವ ಅಥವಾ ಯಾವುದೇ ರೀತಿಯ ಅಪಾಯದ ಸುಳಿವು ದೊರೆತ ಕೂಡಲೇ ಇವು ತಕ್ಷಣ ಹತ್ತಿರದಲ್ಲೇ ಲಭ್ಯವಾಗುವ ಸಣ್ಣ ತಗ್ಗು ಪ್ರದೇಶದಲ್ಲಿ ಇಳಿದು ನಿಂತರೆ ಯಾರ ಕಣ್ಣಿಗೂ ಸುಲಭದಲ್ಲಿ ಗೋಚರಿಸುವುದಿಲ್ಲ. ಎಷ್ಟೋ ಬಾರಿ ನಾವು ನಡೆದಾಡುವ ಸಂದರ್ಭ ಭರ‌್ರನೆ ನಮ್ಮ ಕಾಲ ಬುಡದಿಂದ ಹಾರುವಾಗಲೇ ನಮಗೆ ಗೊತ್ತಾಗುವುದು ಎಂದು ಹಕ್ಕಿಯ ಒಡನಾಟದ ಕ್ಷಣಗಳನ್ನು ನೆನಪಿಸಿಕೊಳ್ಳುತ್ತಾರೆ ಪಕ್ಷಿ ವೀಕ್ಷಕರು.

ದಕ್ಷಿಣ ಕನ್ನಡ, ಉಡುಪಿ ಕರಾವಳಿ ಭಾಗದಲ್ಲಿ ಕಿಂಗ್ ಕ್ವೈಲ್ ಗೋಚರಿಸಿದ ಬಗ್ಗೆ ಮಾಹಿತಿ ಲಭ್ಯವಿಲ್ಲ. ಹಾಗೆ ನೋಡಿದರೆ ಭಾರತದಲ್ಲಿ ಅಸ್ಸಾಂ ನಲ್ಲಿ ತೆಗೆದ ಫೋಟೆಗಳು ಮಾತ್ರ ಸುಲಭದಲ್ಲಿ ಸಿಗುತ್ತವೆ. ಈ ಪಕ್ಷಿಯ ಜೀವನ ಕ್ರಮ, ವಾಸಸ್ಥಾನ ಬಗ್ಗೆ ಹೆಚ್ಚಿನ ಅಧ್ಯಯನ ನಡೆಯಬೇಕಾಗಿದೆ.
– ಅರ್ನಾಲ್ಡ್ ಗೋವಿಯಸ್, ಹಿರಿಯ ಪಕ್ಷಿ ವೀಕ್ಷಕರು.

Leave a Reply

Your email address will not be published. Required fields are marked *