ಕೆಂಗೋ ಹನುಮಂತಪ್ಪಗೆ ಟಿಕೆಟ್ ನೀಡುವಂತೆ ಒತ್ತಾಯ

ದಾವಣಗೆರೆ: ಲೋಕಸಭಾ ಚುನಾವಣೆಯಲ್ಲಿ ದಾವಣಗೆರೆಯಲ್ಲಿ ಸ್ಪರ್ಧಿಸಲು ಕೆಂಗೋ ಹನುಮಂತಪ್ಪ ಅವರಿಗೆ ಕಾಂಗ್ರೆಸ್ ಟಿಕೆಟ್ ನೀಡುವಂತೆ ಕುರುಬ ಸಮುದಾಯದ ಮುಖಂಡರು ಮನವಿ ಮಾಡಿದರು.

ಎರಡು ದಶಕಗಳಿಂದ ಕಾಂಗ್ರೆಸ್‌ನ ಸಕ್ರಿಯ ಕಾರ್ಯಕರ್ತನಾಗಿ ಕಾರ್ಯನಿರ್ವಹಿಸಿದ್ದು, ಹೈ ಕಮಾಂಡ್ ತಮಗೆ ಟಿಕೆಟ್ ನೀಡಿದರೆ ಗೆಲುವು ನಿಶ್ಚಿತ ಎಂದು ಟಿಕೆಟ್ ಆಕಾಂಕ್ಷಿ ಕೆಂಗೋ ಹನುಮಂತಪ್ಪ ಗುರುವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.

ದಾವಣಗೆರೆ ಜಿಲ್ಲೆಯಲ್ಲಿ 1994ರಿಂದ ಪಕ್ಷದಲ್ಲಿ ವಿವಿಧ ಹಂತದಲ್ಲಿ ಕೆಲಸ ಮಾಡುತ್ತಿದ್ದೇನೆ. ಹೀಗಾಗಿ ಸಿದ್ದರಾಮಯ್ಯ ಅವರು ನನ್ನನ್ನು ಗುರುತಿಸಿ ಬಯಲು ಸೀಮೆ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಸ್ಥಾನ ನೀಡಿದ್ದರು.
ಜಿಲ್ಲೆಯಲ್ಲಿ ಅಹಿಂದ ವರ್ಗಕ್ಕೆ ಆದ್ಯತೆ ನೀಡಲಾಗಿದೆ. ಕಾಂಗ್ರೆಸ್‌ಗೆ ಅಹಿಂದ ವರ್ಗವೇ ಬಲ. ಆದರೆ, ಚನ್ನವೀರ ಒಡೆಯರ್ ಬಳಿಕ ಅಹಿಂದ ಸಮುದಾಯದಿಂದ ಚುನಾವಣೆಗೆ ಸ್ಪರ್ಧಿಸಿಲ್ಲ. ಈ ಹಿಂದೆಯೂ ಅನೇಕ ಬಾರಿ ಟಿಕೆಟ್ ಕೇಳಿದ್ದರೂ ಸಿಕ್ಕಿಲ್ಲ. ಈ ಬಾರಿ ಟಿಕೆಟ್ ನೀಡುವಂತೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ದಿನೇಶ್ ಗುಂಡೂರಾವ್ ಮತ್ತಿತರರಿಗೆ ಒತ್ತಾಯಿಸಲಾಗಿದೆ. ಶೀಘ್ರವೇ ನಿಯೋಗ ತೆರಳಿ ಮನವಿ ಮಾಡಲಾಗುವುದು. ಟಿಕೆಟ್ ನೀಡಿದರೂ ಪಕ್ಷದ ಪರ ಕೆಲಸ ಮಾಡುತ್ತೇನೆ ಎಂದರು.

ಮುಖಂಡ ಜೆ.ಕೆ. ಕೊಟ್ರಬಸಪ್ಪ ಮಾತನಾಡಿದರು. ಮುಖಂಡರಾದ ಬಳ್ಳಾರಿ ಷಣ್ಮುಖಪ್ಪ, ರಂಗಣ್ಣ, ಲೋಕಿಕೇರೆ ಸಿದ್ದಪ್ಪ, ದ್ಯಾಮಣ್ಣ, ಎಚ್.ಜಿ. ಸಂಗಪ್ಪ, ನಿಂಗಪ್ಪ, ನಾಗಪ್ಪ, ಡಿ. ತಿಪ್ಪಣ್ಣ ಇತರರಿದ್ದರು.