ಶಾಸಕಿ ಅಲ್ಕಾ ಲಾಂಬಾರ ರಾಜೀನಾಮೆ ಕೇಳಿದ ಅರವಿಂದ್​ ಕೇಜ್ರಿವಾಲ್​

ನವದೆಹಲಿ: 1984ರಲ್ಲಿ ನಡೆದ ಸಿಖ್​ ವಿರೋಧಿ ಗಲಭೆಯನ್ನು ತಡೆಯುವಲ್ಲಿ ವಿಫಲವಾದ ಮಾಜಿ ಪ್ರಧಾನಿ ದಿವಂಗತ ರಾಜೀವ್​ ಗಾಂಧಿಗೆ ನೀಡಲಾಗಿರುವ ಭಾರತ ರತ್ನ ಪ್ರಶಸ್ತಿ ಹಿಂಪಡೆಯುವ ದೆಹಲಿ ವಿಧಾನಸಭೆಯ ನಿರ್ಣಯವನ್ನು ನಿರಾಕರಿಸಿದ ಆಮ್​ ಆದ್ಮಿ ಪಕ್ಷದ ಶಾಸಕಿಯನ್ನು ಪಕ್ಷದ ಮುಖ್ಯಸ್ಥ ಅರವಿಂದ್​ ಕೇಜ್ರಿವಾಲ್ ರಾಜೀನಾಮೆ ಕೇಳಿದ್ದಾರೆ.

ಚಾಂದಿನಿ ಚೌಕ್​ ಶಾಸಕಿ ಅಲ್ಕಾ ಲಾಂಬಾ ಅವರನ್ನು ರಾಜೀನಾಮೆ ನೀಡುವಂತೆ ಪಕ್ಷ ಕೇಳಿದೆ. ದೆಹಲಿ ಮುಖ್ಯಮಂತ್ರಿ ಅರವಿಂದ್​ ಕೇಜ್ರಿವಾಲ್​ ಬೇಡಿಕೆಯಂತೆ ನಾನು ರಾಜೀನಾಮೆಯನ್ನು ಸಲ್ಲಿಸುತ್ತೇನೆ ಎಂದು ಆಪ್​ ಶಾಸಕಿ ಲಾಂಬ ತಿಳಿಸಿದ್ದಾರೆ.

ಶುಕ್ರವಾರ ದೆಹಲಿಯ ವಿಧಾನಸಭೆಯಲ್ಲಿ ನಿರ್ಣಯವೊಂದನ್ನು ತೆಗೆದುಕೊಂಡು ರಾಜೀವ್​ ಗಾಂಧಿಗೆ ನೀಡಲಾಗಿರುವ ಭಾರತ ರತ್ನವನ್ನು ಹಿಂಪಡೆಯವಂತೆ ಸಭೆಯಲ್ಲಿ ಬೇಡಿಕೆಯಿಡಲಾಗಿತ್ತು. ಆದರೆ, ಪ್ರಾರಂಭದಲ್ಲಿ ಸುಮ್ಮನಿದ್ದ ಆಪ್​ ಪಕ್ಷ ಆನಂತರ ಈ ನಿರ್ಧಾರದಿಂದ ದೂರವೇ ಉಳಿದಿತ್ತು. ಆದರೆ, ಈ ವಿಚಾರ ತೀವ್ರ ಸ್ವರೂಪ ಪಡೆದುಕೊಳ್ಳುತ್ತಿದ್ದಂತೆ ನಿರ್ಣಯ ಬೆಂಬಲಿಸುವಂತೆ ಒತ್ತಡ ಬಂದಿದ್ದರಿಂದ ಶಾಸಕಿ ಲಾಂಬಾ ಸಭೆಯಿಂದ ಎದ್ದು ಹೊರ ನಡೆದಿದ್ದರು.

ಈ ಬಗ್ಗೆ ಮಾತನಾಡಿದ ಲಂಬಾ, ಈ ವಿಚಾರವಾಗಿ ಯಾವುದೇ ತೊಂದರೆಗಳಾದರು ಎದುರಿಸುತ್ತೇನೆ. ಸಿಎಂ ಕೇಜ್ರಿವಾಲ್​ ಅವರೊಂದಿಗೆ ಮಾತನಾಡಲಿದ್ದೇನೆ. ಅವರು ರಾಜೀನಾಮೆ ನೀಡು ಎಂದರೆ ಖಂಡಿತ ನೀಡುತ್ತೇನೆ. ದೇಶಕ್ಕಾಗಿ ಸಾಕಷ್ಟು ಸೇವೆ ಸಲ್ಲಿಸಿರುವ ರಾಜೀವ್​ ಗಾಂಧಿ ಅವರಿಗೆ ನೀಡಿರುವ ಭಾರತರತ್ನ ಗೌರವವನ್ನು ಹಿಂಪಡೆಯುವ ನಿರ್ಧಾರಕ್ಕೆ ನನ್ನ ಪ್ರತಿರೋಧವಿದೆ. ವಿಧಾನಸಭೆಯ ನಿರ್ಣಯಕ್ಕೆ ನನ್ನ ಬೆಂಬಲವಿಲ್ಲ ಎಂದು ಹೇಳಿದ್ದಾರೆ. (ಏಜೆನ್ಸೀಸ್​)