ಕಟ್ಟಡ ತ್ಯಾಜ್ಯ ವಿಲೇವಾರಿ ಮೇಲೆ ನಿಗಾ

ಬೆಂಗಳೂರು : ಎಲ್ಲೆಂದರಲ್ಲಿ ಕಟ್ಟಡ ತ್ಯಾಜ್ಯ ವಿಲೇವಾರಿ ಮಾಡುವವರ ಮೇಲೆ ನಿಗಾವಹಿಸಲು ಖಾಸಗಿ ಸಂಸ್ಥೆ ನೆರವು ಪಡೆಯಲು ಬಿಬಿಎಂಪಿ ಚಿಂತನೆ ನಡೆಸಿದೆ.

ಹಸಿ, ಒಣ ತ್ಯಾಜ್ಯ ಸಂಗ್ರಹ ಮತ್ತು ವಿಲೇವಾರಿಗೆ ಬಿಬಿಎಂಪಿ ಟೆಂಡರ್ ಪ್ರಕ್ರಿಯೆ ನಡೆಸಿದೆ. ಶೀಘ್ರದಲ್ಲಿ ಅರ್ಹ ಗುತ್ತಿಗೆದಾರರನ್ನು ಆಯ್ಕೆ ಮಾಡಿ ಕಾರ್ಯಾದೇಶ ಪತ್ರ ನೀಡಲಾಗುತ್ತದೆ. ಅದರ ಜತೆಗೆ ಇದೀಗ ಕಟ್ಟಡ ತ್ಯಾಜ್ಯದಿಂದ ಉಂಟಾಗುತ್ತಿರುವ ಸಮಸ್ಯೆ ನಿವಾರಣೆಗೆ ಖಾಸಗಿ ಸಂಸ್ಥೆಯೊಂದನ್ನು ನೇಮಿಸುವ ಬಗ್ಗೆ ಚಿಂತನೆ ನಡೆಸಲಾಗಿದೆ. ಈ ಕುರಿತು ಆಯುಕ್ತ ಮಂಜುನಾಥಪ್ರಸಾದ್ ಜತೆ ಮೇಯರ್ ಗಂಗಾಂಬಿಕೆ ಚರ್ಚೆ ನಡೆಸಿದ್ದು, ಅಂತಿಮ ರೂಪ ಸಿಗಬೇಕಿದೆ.

ಸಮರ್ಪಕ ವಿಲೇವಾರಿಯಿಲ್ಲ: ಬಿಬಿಎಂಪಿ ವ್ಯಾಪ್ತಿಯಲ್ಲಿ ನಿರ್ಮಾಣ ವಾಗುವ ಮತ್ತು ಕೆಡವಲಾಗುವ ಕಟ್ಟಡಗಳಿಂದ ಉತ್ಪತ್ತಿಯಾಗುವ ತ್ಯಾಜ್ಯವನ್ನು ಎಲ್ಲಿ ವಿಲೇವಾರಿ ಮಾಡಲಾಗುತ್ತಿದೆ ಎಂಬುದು ಈವರೆಗೆ ತಿಳಿದಿಲ್ಲ. ಕೆರೆ, ರಾಜಕಾಲುವೆ, ರಸ್ತೆ ಬದಿಗಳಲ್ಲೂ ಕಟ್ಟಡ ತ್ಯಾಜ್ಯ ವಿಲೇವಾರಿ ಮಾಡುತ್ತಿರುವುದರಿಂದ ಸಮಸ್ಯೆಯಾಗುತ್ತಿದೆ.

ಘಟಕ ಸ್ಥಾಪನೆ ಸದ್ಯಕ್ಕಿಲ್ಲ: ಕಟ್ಟಡ ತ್ಯಾಜ್ಯ ಸಂಸ್ಕರಣೆಗಾಗಿ ಬಿಬಿಎಂಪಿ ಮೂರು ಕಡೆ ಜಾಗ ಗುರುತಿಸಿತ್ತು. ಟೆಂಡರ್ ಕೂಡ ಆಹ್ವಾನಿಸಲಾಗಿತ್ತು. ಟೆಂಡರ್​ನಲ್ಲಿ ಗುತ್ತಿಗೆದಾರರು ಪಾಲ್ಗೊಳ್ಳದ ಕಾರಣ ಆ ಯೋಜನೆಯನ್ನು ಹಾಗೆಯೇ ಬಿಡಲಾಗಿದೆ.

ಖಾಸಗಿ ಸಂಸ್ಥೆಯಿಂದ ನಿಗಾ: ಸಮರ್ಪಕ ನಿಯಮವಿಲ್ಲದ ಕಾರಣ ಮತ್ತು ಎಲ್ಲೆಂದರಲ್ಲಿ ತ್ಯಾಜ್ಯ ಸುರಿಯುವವರ ಮೇಲೆ ನಿಗಾವಹಿಸದ ಕಾರಣ ನಗರದ ಹೊರವಲಯದ ಬಡಾವಣೆಗಳಲ್ಲಿ ಸಮಸ್ಯೆ ಹೆಚ್ಚುವಂತಾಗಿದೆ. ಹೀಗಾಗಿ ಕಟ್ಟಡ ತ್ಯಾಜ್ಯವನ್ನು ಎಲ್ಲಿ ವಿಲೇವಾರಿ ಮಾಡಲಾಗುತ್ತದೆ ಎಂಬ ಬಗ್ಗೆ ನಿಗಾವಹಿಸಲು ಖಾಸಗಿ ಸಂಸ್ಥೆ ನೇಮಕ ಮಾಡುವ ಬಗ್ಗೆ ಚರ್ಚೆ ನಡೆಸಲಾಗಿದೆ. ಸಂಸ್ಥೆ ನೇಮಕ ನಂತರ ತ್ಯಾಜ್ಯವನ್ನು ಎಲ್ಲೆಂದರಲ್ಲಿ ಎಸೆಯುವವರಿಗೆ ದಂಡ ವಿಧಿಸುವ ಅಧಿಕಾರ ನೀಡಲಾಗುತ್ತದೆ ಎಂದು ಮೇಯರ್ ತಿಳಿಸಿದ್ದಾರೆ.

ಕಟ್ಟಡ ತ್ಯಾಜ್ಯ ನಿರ್ವಹಣೆಗೆ ಸಂಬಂಧಿಸಿದಂತೆ ಸೂಕ್ತ ವ್ಯವಸ್ಥೆಯಿಲ್ಲ. ಹೀಗಾಗಿ ತ್ಯಾಜ್ಯವನ್ನು ಎಲ್ಲೆಂದರಲ್ಲಿ ವಿಲೇವಾರಿ ಮಾಡುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ಖಾಸಗಿ ಸಂಸ್ಥೆ ನೇಮಿಸುವಂತೆ ಆಯುಕ್ತರ ಬಳಿ ಚರ್ಚೆ ನಡೆಸಿದ್ದೇನೆ.

| ಗಂಗಾಂಬಿಕೆ, ಮೇಯರ್

ಎಚ್​ಬಿಆರ್ ಲೇಔಟ್​ಗೆ ಗಂಗಾಂಬಿಕೆ ಭೇಟಿ

ತ್ಯಾಜ್ಯ ಸಮಸ್ಯೆಗೆ ಸಂಬಂಧಿಸಿ ಸ್ಥಳೀಯರೊಬ್ಬರು ಶನಿವಾರ ನಡೆದಿದ್ದ ವಿಜಯವಾಣಿ ಫೋನ್​ಇನ್ ಕಾರ್ಯಕ್ರಮದಲ್ಲಿ ಮೇಯರ್​ಗೆ ದೂರು ನೀಡಿದ್ದರು. ಮಂಗಳವಾರ ಎಚ್​ಬಿಆರ್ ಲೇಔಟ್​ಗೆ ಗಂಗಾಂಬಿಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಬಡಾವಣೆಯ ರಸ್ತೆ ಬದಿಗಳಲ್ಲಿ ಕಟ್ಟಡ ತ್ಯಾಜ್ಯ ವಿಲೇ ಮಾಡಿರುವುದನ್ನು ಕಂಡು ಆಕ್ರೋಶ ವ್ಯಕ್ತಪಡಿಸಿದರು. ತಕ್ಷಣ ತೆರವುಗೊಳಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು. ಇನ್ನು ಮುಂದೆ ರಸ್ತೆ ಬದಿ ತ್ಯಾಜ್ಯ ವಿಲೇವಾರಿ ಮಾಡುವವರ ಮೇಲೆ ಕ್ರಮ ಕೈಗೊಳ್ಳುವಂತೆ ತಾಕೀತು ಮಾಡಿದರು.

Leave a Reply

Your email address will not be published. Required fields are marked *