‘ಕೇದಾರನಾಥ’ದಲ್ಲಿ ಲವ್​ ಜಿಹಾದ್​ಗೆ ಬೆಂಬಲ: ದೇವಾಲಯ ಪುರೋಹಿತ ಮಂಡಳಿಯಿಂದ ಉಗ್ರ ಪ್ರತಿಭಟನೆ ಎಚ್ಚರಿಕೆ

ಮುಂಬೈ: ಸುಶಾಂತ್​ ಸಿಂಗ್​ ರಜಪೂತ್​ ಹಾಗೂ ಸಾರಾ ಅಲಿ ಅಭಿನಯದ ಕೇದಾರನಾಥ ಸಿನಿಮಾಕ್ಕೆ ಉತ್ತರಖಾಂಡದ ಕೇದಾರನಾಥ ದೇವಾಲಯದ ಪುರೋಹಿತರಿಂದ ವ್ಯಾಪಕ ವಿರೋಧ ವ್ಯಕ್ತವಾಗಿದೆ. ಸಿನಿಮಾದಲ್ಲಿ ಹಿಂದುಗಳ ಭಾವನೆಗೆ ಧಕ್ಕೆ ಆಗುವ ಸಂಗತಿಗಳು ಇದ್ದು ಬಿಡುಗಡೆಯಾಗದಂತೆ ನಿಷೇಧ ವಿಧಿಸಬೇಕು ಎಂದು ಆಗ್ರಹಿಸಿದ್ದಾರೆ.

ಕೇದಾರನಾಥ್​ ಟೀಸರ್​ ಬಿಡುಗಡೆಯಾದ ಒಂದು ದಿನದ ಬಳಿಕ ಈ ವಿರೋಧ ವ್ಯಕ್ತವಾಗಿದೆ. ಕೇದಾರನಾಥ ಸಿನಿಮಾವನ್ನು ಲವ್​ ಜಿಹಾದ್​ ಪರವಾಗಿ ಚಿತ್ರಿಸಲಾಗಿದ್ದು ಹಿಂದುಗಳ ಧಾರ್ಮಿಕ ಭಾವನೆಗೆ ನೋವುಂಟುಮಾಡುತ್ತದೆ. ಯಾವ ಕಾರಣಕ್ಕೂ ಚಿತ್ರ ಬಿಡುಗಡೆಯಾಗಬಾರದು. ಒಂದೊಮ್ಮೆ ನಿಷೇಧಿಸದಿದ್ದರೆ ಇದರ ವಿರುದ್ಧ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ಕೇದಾರನಾಥ ದೇವಾಲಯದ ಪುರೋಹಿತರ ಕೇದಾರಸಭಾ ಅಧ್ಯಕ್ಷ ವಿನೋದ್​ ಶುಕ್ಲಾ ಹೇಳಿದ್ದಾರೆ.

ಅಸಭ್ಯ ನೃತ್ಯಗಳ ದೃಶ್ಯವನ್ನು ದೇವಾಲಯದ ಸುತ್ತಮುತ್ತ ಚಿತ್ರೀಕರಣ ಮಾಡುವಾಗಲೇ ಸ್ಥಳೀಯರು ಪ್ರತಿಭಟನೆ ನಡೆಸಿದ್ದಾರೆ. ಇದರ ಟೀಸರ್​ ನೋಡಿದ ಬಳಿಕ ಬಿಡುಗಡೆ ಮಾಡಲೇ ಬಾರದು ಎಂದು ಒತ್ತಾಯಿಸುತ್ತಿದ್ದಾರೆ ಎಂದು ಶುಕ್ಲಾ ತಿಳಿಸಿದ್ದಾರೆ.
ಇನ್ನು ಬಿಜೆಪಿ ಮುಖಂಡ ಅಜೇಂದ್ರ ಅಜಯ್​ ಅವರು ಕೂಡ, ಸಿನಿಮಾವನ್ನು ಬಿಡುಗಡೆ ಮಾಡಬಾರದು ಎಂದು ಟ್ವಿಟರ್​ ಮೂಲಕ ಸಿನಿಮಾ ಸೆನ್ಸಾರ್ ಮಂಡಳಿಯ ಅಧ್ಯಕ್ಷ ಪ್ರಸೂನ್​ ಜೋಶಿಯನ್ನು ಒತ್ತಾಯಿಸಿದ್ದಾರೆ.

ಚಿತ್ರದ ಟೀಸರ್​ ಉಲ್ಲೇಖಿಸಿ ಮಾತನಾಡಿ, ಅವತ್ತಿನ ಪ್ರವಾಹಕ್ಕೆ ಸಾವಿರಕ್ಕೂ ಹೆಚ್ಚು ಜನ ಮೃತಪಟ್ಟಿದ್ದಾರೆ. ಆ ಕಥೆ ಆಧಾರಿತ ಸಿನಿಮಾದಲ್ಲಿ ಮುಖ್ಯಪಾತ್ರ ಮಾಡುವವರ ಅತಿಯಾದ ಬೋಲ್ಡ್​ ದೃಶ್ಯಗಳನ್ನು ಚಿತ್ರೀಕರಿಸಲಾಗಿದೆ ಎಂದು ಹೇಳಿದ ಅವರು, ಮುಸ್ಲಿಂ ಯುವಕ ಹಿಂದು ಹುಡುಗಿಯನ್ನು ಹೊತ್ತಿರುವ ಪೋಸ್ಟರ್​ಗೆ ವಿರೋಧ ವ್ಯಕ್ತಪಡಿಸಿದ್ದಾರೆ.

ಕೇದಾರನಾಥ್​ ಸೈಫ್​ ಅಲಿ ಖಾನ್​ ಪುತ್ರಿ ಸಾರಾ ಅವರ ಚೊಚ್ಚಲ ಚಿತ್ರ. ಸತತ ಎರಡು ವರ್ಷಗಳ ಹಿಂದೆ ಕೇದಾರನಾಥ ದೇವಾಲಯದ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಚಿತ್ರೀಕರಿಸಲಾಗಿದೆ. 2013ರಲ್ಲಿ ಆ ಪಟ್ಟಣ ಪ್ರವಾಹಕ್ಕೆ ತುತ್ತಾಗಿರುವ ಕಥೆಯನ್ನು ಒಳಗೊಂಡಿದೆ. ಅಭಿಷೇಕ್​ ಕಪೂರ್ ಚಿತ್ರವನ್ನು ನಿರ್ದೇಶಿಸಿದ್ದು ಬಿಡುಗಡೆಗೆ ಸಿದ್ಧವಾಗಿದೆ.