ಉತ್ತರಾಖಂಡದ 7 ಜಿಲ್ಲೆಗಳಲ್ಲಿ ವಿವಾದಾತ್ಮಕ ಕೇದಾರನಾಥ್​ ಚಿತ್ರ ಪ್ರದರ್ಶನಕ್ಕೆ ತಡೆ

ಡೆಹ್ರಾಡೂನ್​: ಬಾಲಿವುಡ್​ ಹಿರಿಯ ನಟ ಸೈಫ್ ಅಲಿ ಖಾನ್​ ಪುತ್ರಿ ಸಾರಾ ಅಲಿ ಖಾನ್​ ಮತ್ತು ಸುಶಾಂತ್ ಸಿಂಗ್ ರಜಪೂತ್ ಅಭಿನಯದ ಕೇದಾರನಾಥ್​ ಚಿತ್ರ ಪ್ರದರ್ಶನವನ್ನು ಉತ್ತರಾಖಂಡ ಸರ್ಕಾರ ಬ್ಯಾನ್​ ಮಾಡಿದೆ.

ಚಿತ್ರ ಪ್ರದರ್ಶನಕ್ಕೆ ಹಿಂದು ಸಂಘಟನೆಗಳು ಮತ್ತು ಬಿಜೆಪಿ ನಾಯಕರು ವ್ಯಾಪಕ ವಿರೋಧ ವ್ಯಕ್ತಪಡಿಸಿದ್ದರು. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡಲು 7 ಜಿಲ್ಲೆಗಳಲ್ಲಿ ಚಿತ್ರ ಪ್ರದರ್ಶನವನ್ನು ತಡೆ ಹಿಡಿಯಲಾಗಿದೆ. ಈ ಕುರಿತು ರಾಜ್ಯ ಸರ್ಕಾರ ಯಾವುದೇ ಅಧಿಕೃತ ಆದೇಶ ಹೊರಡಿಸಿಲ್ಲ. ಆದರೆ, ಜಿಲ್ಲಾಧಿಕಾರಿಗಳು ತಮ್ಮ ಜಿಲ್ಲೆಯ ಪರಿಸ್ಥಿತಿಗನುಗುಣವಾಗಿ ಚಿತ್ರ ಪ್ರದರ್ಶನದ ಕುರಿತು ನಿರ್ಧಾರ ತೆಗೆದುಕೊಂಡಿದ್ದಾರೆ.

ಚಿತ್ರದ ಟ್ರೇಲರ್​ ಬಿಡುಗಡೆಯಾದ ನಂತರ ಚಿತ್ರದಲ್ಲಿ ಲವ್​ ಜಿಹಾದ್​ಗೆ ಪ್ರಚೋದನೆ ನೀಡಲಾಗಿದೆ. ಹಿಂದುಗಳ ಭಾವನೆಗೆ ಧಕ್ಕೆಯಾಗುವಂತಹ ಅಂಶಗಳಿವೆ ಎಂದು ಹಿಂದು ಸಂಘಟನೆಗಳು ಆರೋಪಿಸಿದ್ದವು. ಜತೆಗೆ ಕೇದಾರನಾಥ ದೇಶದ ಪ್ರಮುಖ ಧಾರ್ಮಿಕ ಸ್ಥಳ. ಇದು ಹಿಂದುಗಳ ಧಾರ್ಮಿಕತೆಯೊಂದಿಗೆ ಬೆರೆತುಹೋಗಿದೆ. ಚಿತ್ರಕ್ಕೆ ಕೇದಾರನಾಥ್​ ಎಂದು ಹೆಸರಿಟ್ಟಿರುವುದಕ್ಕೆ ನಮ್ಮ ಆಕ್ಷೇಪವಿದೆ. ರಾಜ್ಯದಲ್ಲಿ ಚಿತ್ರ ಪ್ರದರ್ಶನವಾಗಬಾರದು ಎಂದು ಹಿಂದು ಸಂಘಟನೆಗಳು ತಿಳಿಸಿವೆ.

ಚಿತ್ರ ಪ್ರದರ್ಶನಕ್ಕೆ ತಡೆ ನೀಡಬೇಕು ಎಂದು ಉತ್ತರಾಖಂಡ ಹೈಕೋರ್ಟ್​ಗೆ ಸಲ್ಲಿಸಲಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಕೋರ್ಟ್​ ವಜಾ ಮಾಡಿ, ಈ ವಿಷಯದಲ್ಲಿ ಮಧ್ಯಪ್ರವೇಶಿಸುವುದಿಲ್ಲ ಎಂದು ತಿಳಿಸಿತ್ತು.

2013ರ ಜೂನ್​ನಲ್ಲಿ ಉತ್ತರಾಖಂಡದಲ್ಲಿ ಮೇಘಸ್ಫೋಟವಾಗಿ ಭೀಕರ ಪ್ರವಾಹ ಉಂಟಾಗಿತ್ತು. ನೈಸರ್ಗಿಕ ವಿಕೋಪಕ್ಕೆ ಸಿಲುಕಿ ಸುಮಾರು 4000 ಜನರು ಮೃತಪಟ್ಟಿದ್ದರು. (ಏಜೆನ್ಸೀಸ್​)