ಕಬಾಬ್ ವ್ಯಾಪಾರಿ ಹತ್ಯೆ ಆರೋಪಿಗಳ ಸೆರೆ

ಬೆಂಗಳೂರು: ಹೆಗ್ಗನಹಳ್ಳಿಯ ಶ್ರೀಗಂಧನಗರದಲ್ಲಿ ನಡೆದಿದ್ದ ಕಬಾಬ್ ವ್ಯಾಪಾರಿ ಕೊಲೆ ಪ್ರಕರಣ ಭೇದಿಸಿರುವ ರಾಜಗೋ ಪಾಲನಗರ ಪೊಲೀಸರು ನಾಲ್ವರನ್ನು ಬಂಧಿಸಿದ್ದಾರೆ.

ಹಾಸನ ಮೂಲದ ರವೀಶ್ (44), ಜಿತೇಂದ್ರ (30), ಚಿಕ್ಕಮಗಳೂರು ಮೂಲದ ಸುಮಂತ್​ರಾಜ್ (29) ಹಾಗೂ ಚಿತ್ರದುರ್ಗ ಮೂಲದ ಪ್ರದೀಪ್ ಕುಮಾರ್ (40) ಬಂಧಿತರು. ಕಬಾಬ್ ವ್ಯಾಪಾರಿ ಉಮೇಶ್ (37) ಕೊಲೆಯಾದವ. ಪ್ರಕರಣದ ಪ್ರಮುಖ ಆರೋಪಿ ಕಿಶೋರ್ ತಲೆಮರೆಸಿಕೊಂಡಿದ್ದು, ಶೋಧ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಕೆಲ ವರ್ಷಗಳ ಹಿಂದೆ ನಗರಕ್ಕೆ ಬಂದು ನೆಲೆಸಿದ್ದ ಆರೋಪಿಗಳು ರಾಜಗೋಪಾಲನಗರದಲ್ಲಿರುವ ಅಲ್ಯು ಮಿನಿಯಂ ಪುಡಿ ತಯಾರಿಕಾ ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿದ್ದರು. ಜಿತೇಂದ್ರ ಮತ್ತು ಸುಮಂತ ವಾಹನ ಚಾಲಕರಾಗಿದ್ದರೆ, ಪ್ರದೀಪ್ ಹಾಗೂ ರವೀಶ್ ತಯರಿಕಾ ಘಟಕದಲ್ಲಿ ಕೆಲಸ ಮಾಡುತ್ತಿದ್ದರು. 25 ದಿನಗಳ ಹಿಂದೆ ಕಿಶೋರ್​ನನ್ನು ರವೀಶ್ ತನ್ನ ಕಾರ್ಖಾನೆಯಲ್ಲೇ ಕೆಲಸಕ್ಕೆ ಸೇರಿಸಿದ್ದ. ಕಿಶೋರ್ ಕೊಲೆಯಾದ ಉಮೇಶ್ ಪತ್ನಿ ರೂಪಾ ಜತೆ ಅಕ್ರಮ ಸಂಬಂಧ ಹೊಂದಿದ್ದ. ರೂಪಾ ಜತೆಗಿದ್ದ ಖಾಸಗಿ ಕ್ಷಣದ ದೃಶ್ಯದ ವಿಡಿಯೋವನ್ನು ಆಕೆಯ ಗಮನಕ್ಕೆ ಬಾರದಂತೆ ಸೆರೆಹಿಡಿದಿದ್ದ. ಇತ್ತೀಚೆಗೆ ಇಬ್ಬರ ನಡುವೆ ಜಗಳವಾಗಿ ದೂರವಾಗಿದ್ದರು.

ಖಾಸಗಿ ದೃಶ್ಯ ಫೇಸ್​ಬುಕ್​ಗೆ: ರೂಪಾ ಜತೆಯಿದ್ದ ಖಾಸಗಿ ದೃಶ್ಯದ ವಿಡಿಯೋವನ್ನು ತನ್ನ ಫೇಸ್​ಬುಕ್ ಖಾತೆಯಲ್ಲಿ ಕಿಶೋರ್ ಹಾಕಿದ್ದ. ಈ ಸಂಬಂಧ ರೂಪಾ ಹಾಗೂ ಆಕೆಯ ಪತಿ ಉಮೇಶ್ ರಾಜಗೋಪಾಲನಗರ ಠಾಣೆಯಲ್ಲಿ ದೂರು ನೀಡಿದ್ದರು. ಪೊಲೀಸರು ಕಿಶೋರ್​ನನ್ನು ಬಂಧಿಸಿ ಜೈಲಿಗೆ ಕಳಿಸಿದ್ದರು. ಎರಡು ತಿಂಗಳ ಹಿಂದೆಯಷ್ಟೇ ಜಾಮೀನಿನ ಮೇಲೆ ಹೊರಬಂದಿದ್ದ ಆರೋಪಿ ರೂಪಾಳಿಗೆ ಕರೆ ಮಾಡಿ ತನ್ನ ಜತೆ ಸಂಬಂಧ ಮುಂದುವರಿಸುವಂತೆ ಪೀಡಿಸುತ್ತಿದ್ದ. ಆದರೆ, ಆಕೆ ನಿರಾಕರಿಸಿದ್ದಳು. ಇದರಿಂದ ಆಕ್ರೋಶಗೊಂಡ ಕಿಶೋರ್ ಮೇ 12ರ ರಾತ್ರಿ 10.30ರಲ್ಲಿ ಬಂಧಿತ ನಾಲ್ವರು ಆರೋಪಿಗಳನ್ನು ಕರೆದುಕೊಂಡು ಉಮೇಶ್ ಬಳಿ ಬಂದಿದ್ದ. ರಸ್ತೆ ಬದಿ ಕಬಾಬ್ ಮಾರಾಟ ಮಾಡುತ್ತಿದ್ದ ಉಮೇಶ್ ಮುಖಕ್ಕೆ ಪ್ರದೀಪ್ ಖಾರದ ಪುಡಿ ಎರಚುತ್ತಿದ್ದಂತೆ ಇತರೆ ಆರೋಪಿಗಳು ದೊಣ್ಣೆಯಲ್ಲಿ ಹಲ್ಲೆ ನಡೆಸಿದ್ದರು. ಈ ವೇಳೆ ಕಿಶೋರ್ ಮಾರಕಾಸ್ತ್ರದಿಂದ ಉಮೇಶ್​ನನ್ನು ಕೊಚ್ಚಿ ಕೊಲೆ ಮಾಡಿದ್ದ. ನಂತರ ಉಮೇಶ್​ನ ಮನೆಗೆ ಹೋದ ಕಿಶೋರ್, ರೂಪಾಳನ್ನು ಭೇಟಿಯಾಗಿ ‘ನನ್ನೊಂದಿಗೆ ಬರಲು ಹಿಂದೇಟು ಹಾಕುತ್ತಿಯಾ. ಹೋಗು ನಿನ್ನ ಗಂಡನನ್ನು ಹೊಡೆದು ಸಾಯಿಸಿದ್ದೇನೆ. ಮತ್ಯಾರು ನನಗೆ ಅಡ್ಡಿ ಆಗುವುದಿಲ್ಲ’ ಎಂದು ಹೇಳಿ ಬೈಕ್​ನಲ್ಲಿ ಪರಾರಿಯಾಗಿದ್ದ. ಇದರಲ್ಲಿ ಉಮೇಶ್ ಪತ್ನಿ ರೂಪಾ ಪಾತ್ರ ಕಂಡು ಬಂದಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.

ಮೊದಲೇ ಸಂಚು ರೂಪಿಸಿದ್ದ 

ಕೃತ್ಯಕ್ಕೂ ಕೆಲ ದಿನಗಳ ಮೊದಲು ಕಿಶೋರ್ ರಾಜಗೋಪಾಲನಗರದ ಬಾರ್​ವೊಂದಕ್ಕೆ ನಾಲ್ವರನ್ನು ಕರೆಸಿಕೊಂಡು ಉಮೇಶ್ ಮೇಲೆ ಹಲ್ಲೆ ನಡೆಸುವ ಬಗ್ಗೆ ರ್ಚಚಿಸಿದ್ದ. ಉಮೇಶ್​ಗೆ ಹಲ್ಲೆ ನಡೆಸಿ ಎಚ್ಚರಿಕೆ ನೀಡಲಾಗುವುದು ಎಂದು ಹೇಳಿದ್ದ ಹಿನ್ನೆಲೆಯಲ್ಲಿ ಸ್ನೇಹಿ ತರು ಒಪ್ಪಿಕೊಂಡಿದ್ದರು. ಕೊಲೆ ಮಾಡುವುದಾಗಿ ಹೇಳಿರ ಲಿಲ್ಲ. ಮೇ 12ರ ರಾತ್ರಿ ಸ್ನೇಹಿತರಿಗೆ ಮದ್ಯ ಕುಡಿಸಿ ಕೃತ್ಯ ಎಸಗಿದ್ದಾನೆ.

Leave a Reply

Your email address will not be published. Required fields are marked *