More

    ಕೆಸಿ ವ್ಯಾಲಿ ಯೋಜನೆಯಲ್ಲೂ ಅಕ್ರಮ ; ಜಿಪಂ ಅಧ್ಯಕ್ಷ ವೆಂಕಟೇಶ್ ಗಂಭೀರ ಆರೋಪ

    ಕೋಲಾರ: ಕೆಸಿ ವ್ಯಾಲಿ ಯೋಜನೆಯಡಿ ಸಾಕಷ್ಟು ಅಕ್ರಮ ನಡೆದಿದೆ, ಎರಡನೇ ಹಂತದ ಯೋಜನೆಯಡಿ ಕೆಲ ಜನಪ್ರತಿನಿಧಿ, ಪ್ರಭಾವಿಗಳಿಗೆ ಮಣಿದು ಕೆರೆಗಳ ಆಯ್ಕೆ ಮಾಡಲಾಗುತ್ತಿದೆ ಎಂದು ಜಿಲ್ಲಾಪಂಚಾಯ್ತಿ ಅಧ್ಯಕ್ಷ ಸಿಎಸ್.ವೆಂಕಟೇಶ್ ಗಂಭೀರ ಆರೋಪ ಮಾಡಿದರು.

    ಜಿಪಂ ಸಭಾಂಗಣದಲ್ಲಿ ಮಂಗಳವಾರ ನಡೆದ ಕೆಡಿಪಿ ಸಭೆಯಲ್ಲಿ ಮಾತನಾಡಿ, ಕೆಸಿ ವ್ಯಾಲಿ ಯೋಜನೆಯಡಿ ಅಧಿಕಾರಿಗಳು ಹಣ ಲೂಟಿ ಮಾಡಿರುವ ಮಾಹಿತಿಯಿದೆ. ತನಿಖೆ ನಡೆಸೋಣವೇ ಎಂದು ಸಣ್ಣನೀರಾವರಿ ಇಲಾಖೆ ಅಧಿಕಾರಿಗಳನ್ನು ಪ್ರಶ್ನಿಸಿದರು.

    2ನೇ ಹಂತದ ಯೋಜನೆಯಲ್ಲಿ ಕೆರೆಗಳ ಆಯ್ಕೆ ಬಗ್ಗೆ ಯಾರದ್ದೋ ಮನೆಯಲ್ಲಿ ಕುಳಿತು ಜನಪ್ರತಿನಿಧಿಗಳು, ಪ್ರಭಾವಿಗಳ ಒತ್ತಡಕ್ಕೆ ಮಣಿದು ಅವರಿಗೆ ಬೇಕಾದ ಹಾಗೆ ಪಟ್ಟಿ ಮಾಡಲಾಗುತ್ತಿದೆ ಎಂದು ಆಪಾದಿಸಿದರು. ಎಸ್.ಅಗ್ರಹಾರ ಕೆರೆಗೆ ಬಾಗಿನ ಅರ್ಪಿಸುವ ಕಾರ್ಯಕ್ರಮಕ್ಕೆ ಉಸ್ತುವಾರಿ ಸಚಿವರು ನನ್ನನ್ನು ಕರೆದಿಲ್ಲ, ತಿಂಡಿ ವ್ಯವಸ್ಥೆಯನ್ನೂ ಸಣ್ಣ ನೀರಾವರಿ ಇಲಾಖೆಯಿಂದಲೇ ಮಾಡಲಾಗಿತ್ತು. ಕೆಸಿ ವ್ಯಾಲಿ ಯೋಜನೆ ಇಂಜಿನಿಯರ್ ಕೃಷ್ಣ ತನ್ನದೇ ಧಾಟಿಯಲ್ಲಿ ಕೆಲಸ ಮಾಡುತ್ತಿದ್ದಾರೆ, ಇವರನ್ನು ಬದಲಿಸಬೇಕು. ತೋಟಗಾರಿಕೆ ಸಚಿವರು ಜಿಲ್ಲೆಗೆ ಬಂದಾಗಲೂ ಮಾಹಿತಿ ನೀಡಿಲ್ಲ, ಶಿಷ್ಟಾಚಾರ ಪಾಲಿಸಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

    ಶೇ.80ರಷ್ಟು ಅಂಗವಿಕಲತೆ ಇದ್ದರಿಗೆ ಶೇ.60ರಷ್ಟು ಅಂಗವಿಕಲತೆ ಇರುವ ಪ್ರಮಾಣ ಪತ್ರ ನೀಡಲಾಗಿದೆ. ಅಂಗವಿಕಲರಲ್ಲೂ ವ್ಯಾಪಾರ, ರಾಜಕಾರಣ ಮಾಡುತ್ತಾರೆ ಎಂದರೆ ಹೇಗೆ ಎಂದು ವೈದ್ಯಾಧಿಕಾರಿಗಳನ್ನು ಪ್ರಶ್ನಿಸಿದ ಅಧ್ಯಕ್ಷ ವೆಂಕಟೇಶ್, ಈ ಬಗ್ಗೆ ತನಿಖೆ ನಡೆಸಬೇಕೆಂದು ಜಿಲ್ಲಾಧಿಕಾರಿ ಒತ್ತಾಯಿಸಿದಾಗ ಗಮನಕ್ಕೆ ತಂದಲ್ಲಿ ಕ್ರಮ ವಹಿಸುವುದಾಗಿ ಅನುಷ್ಠಾನಾಧಿಕಾರಿ ಡಾ. ಎನ್.ಸಿ.ನಾರಾಯಣಸ್ವಾಮಿ ತಿಳಿಸಿದರು.

    ಸರ್ಕಾರಿ ಕಾರ್ಯಕ್ರಮ ಅಲ್ಲ:  ಕೆರೆಗೆ ಬಾಗಿನ ಸಲ್ಲಿಕೆ ಕುರಿತು ಉಸ್ತುವಾರಿ ಸಚಿವರೂ ಗಮನಕ್ಕೆ ತಂದಿದ್ದರು. ಸರ್ಕಾರದಿಂದ ವ್ಯವಸ್ಥೆ ಮಾಡಿರಲಿಲ್ಲ. ತಿಂಗಳಲ್ಲಿ ಅಧಿಕೃತವಾಗಿ ಕಾರ್ಯಕ್ರಮ ಆಯೋಜಿಸಲಾಗುವುದು ಎಂದ ಡಿಸಿ ಸತ್ಯಭಾಮ, ಜನಪ್ರತಿನಿಧಿಗಳು ಕರೆದ ಮಾತ್ರಕ್ಕೆ ಅಧಿಕಾರಿಗಳು ಹೋಗುವುದಲ್ಲ, ಶಿಷ್ಟಾಚಾರದ ಬಗ್ಗೆ ಅರಿವು ಇರಬೇಕು. ಮುಂದೆ ಹೀಗಾಗದಂತೆ ಎಚ್ಚರ ವಹಿಸಿ, ಸಂಬಂಧಪಟ್ಟವರಿಗೆ ನೋಟಿಸ್ ನೀಡೋಣ, ಕೆಸಿ ವ್ಯಾಲಿ 2ನೇ ಹಂತದ ಯೋಜನೆಯಡಿ ಕೆರೆಗಳ ಪಟ್ಟಿ ಅಂತಿಮಗೊಳಿಸುವ ಮುನ್ನ ಜನಪ್ರತಿನಿಧಿಗಳೊಂದಿಗೆ ಸಭೆ ನಡೆಸೋಣ ಎಂದರು.

    2ನೇ ಹಂತದಲ್ಲಿ 286 ಕೆರೆಗಳಿಗೆ ಕೆಸಿ ವ್ಯಾಲಿ ನೀರು ಹರಿಸುವ ಯೋಜನೆಗೆ ಡಿಪಿಆರ್ ಆಗಿದೆ, ಕೆರೆಗಳ ಸರಪಣಿ ಆಧಾರದಲ್ಲಿ ಆಯ್ಕೆ ಮಾಡಿ ಇಲಾಖೆ ಕಾರ್ಯದರ್ಶಿಗಳ ಮಟ್ಟದಲ್ಲಿ ಅಂತಿಮಗೊಳ್ಳುತ್ತದೆ. ಇಲಾಖೆಯಿಂದ ಕೆರೆಗೆ ಬಾಗೀನ ಸಲ್ಲಿಕೆ ಇಟ್ಟುಕೊಂಡಿರಲಿಲ್ಲ, ತಿಂಡಿ ವ್ಯವಸ್ಥೆ ನಮ್ಮಿಂದ ಮಾಡಿಲ್ಲ ಎಂದು ಇಂಜಿನಿಯರ್ ಶಶಿಕುಮಾರ್ ಮತ್ತು ಬಸವರಾಜ್ ಸಮಜಾಯಿಷಿ ನೀಡಿದರು.

    ಕ್ರೆಡಲ್, ನಿರ್ಮಿತಿ ಕೇಂದ್ರದ ಕಾಮಗಾರಿ ಸಕಾಲದಲ್ಲಿ ಮುಗಿಸುತ್ತಿಲ್ಲ, ಅಂಬೇಡ್ಕರ್ ಭವನ ಕಾಮಗಾರಿ ಪಿಆರ್‌ಇಡಿಯಿಂದ ವಾಪಸ್ ಪಡೆದು ನಿರ್ಮಿತಿ ಕೇಂದ್ರಕ್ಕೆ ನೀಡುವುದಕ್ಕೆ ಜಿಪಂ ಅಧ್ಯಕ್ಷ ವೆಂಕಟೇಶ್, ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ ಅಧ್ಯಕ್ಷ ಅರುಣ್‌ಪ್ರಸಾದ್ ಆಕ್ಷೇಪಿಸಿದಾಗ ಜಿಪಂ ಅನುದಾನದ ಕಾಮಗಾರಿ ಗುತ್ತಿಗೆ ಯಾರಿಗೆ ನೀಡಬೇಕೆಂಬುದನ್ನು ಜಿಪಂ ನಿರ್ಧರಿಸಲಿ, ರಾಜ್ಯ ವಲಯ ನನ್ನ ವ್ಯಾಪ್ತಿ, ನನ್ನ ತೀರ್ಮಾನಕ್ಕೆ ಬಿಟ್ಟಿದ್ದು ಎಂದು ಡಿಸಿ ನಿರಾಕರಿಸಿದರು.

    ಜಿಪಂ ಉಪಾಧ್ಯಕ್ಷೆ ಯಶೋದಾ ಕೃಷ್ಣಮೂರ್ತಿ, ಉಪ ಕಾರ್ಯದರ್ಶಿ ಕೆ.ಪಿ.ಸಂಜೀವಪ್ಪ ಸೇರಿ ಜಿಲ್ಲಾ ಮಟ್ಟದ ವಿವಿಧ ಇಲಾಖೆ ಅಧಿಕಾರಿಗಳು ಹಾಜರಿದ್ದು, ಇಲಾಖೆ ಪ್ರಗತಿಯ ಮಾಹಿತಿ ನೀಡಿದರು. ಸಭೆಗೆ ಗೈರಾದ ಕೆಜಿಎಫ್ ಇಒಗೆ ನೋಟಿಸ್ ಜಾರಿ ಮಾಡುವಂತೆ ಉಪಕಾರ್ಯದರ್ಶಿಗೆ ಆದೇಶಿಸಿದರು.

    ಪಿಡಿ, ಇಒಗಳ ಸಂಬಳ ಕಟ್: ನರೇಗಾ ಯೋಜನೆಯಲ್ಲಿ ಜಿಲ್ಲೆ ಹಲವು ವಾರಗಳಿಂದ 16ನೇ ಸ್ಥಾನದಲ್ಲೇ ಉಳಿದಿದೆ. ಶ್ರೀನಿವಾಸಪುರ ತಾಲೂಕಿನಲ್ಲಿ ಶೇ.121ರಷ್ಟು ಸಾಧನೆ ಮಾಡಿರುವಾಗ ಉಳಿದವರಿಗೆ ಏಕೆ ಸಾಧ್ಯವಾಗಿಲ್ಲ. ಐದು ತಾಪಂ ಇಒಗಳಿಗೆ 4 ದಿನದ ಹಾಗೂ ನರೇಗಾ ತಾಂತ್ರಿಕ ಸಹಾಯಕರು, ಡಿಐಎಂಎಸ್‌ಗಳ ಒಂದು ವಾರದ ಸಂಬಳ ಕಡಿತ ಮಾಡಲಾಗುವುದು. ಸ್ವಚ್ಛ ಭಾರತ್ ಅಭಿಯಾನದಲ್ಲೂ ಪ್ರಗತಿ ಕಂಡಿಲ್ಲ, ಪ್ರತಿ ಗ್ರಾಪಂನಲ್ಲೂ ಸ್ವಚ್ಛ ಶನಿವಾರ ಆಚರಿಸುವಂತೆ ಸೂಚಿಸಿದ್ದರೂ ಆಸಕ್ತಿ ವಹಿಸಿಲ್ಲ. ನೋಟಿಸ್ ನೀಡಿದರೆ ಪ್ರಯೋಜನವಿಲ್ಲವಾದ್ದರಿಂದ ಜಿಪಂ ಪಿಡಿ, ಎಪಿಒಗಳ 4 ದಿನದ ವೇತನ ಕಡಿತ ಮಾಡಿ, ಸುಧಾರಿಸದಿದ್ದರೆ ವಾರಗಳ ಲೆಕ್ಕದಲ್ಲಿ ಸಂಬಳ ಕಡಿತ ಮಾಡ್ತೀನಿ ಎಂದು ಕೆಡಿಪಿ ಸಭೆಯಲ್ಲಿ ಡಿಸಿ ಸತ್ಯಭಾಮ ಎಚ್ಚರಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts