ಕೆಡಿಪಿ ಸಭೆಯಲ್ಲಿ ಏಪ್ರಾನ್ ಹಗರಣ ಸದ್ದು

ಬಾಗಲಕೋಟೆ: ಸುರಕ್ಷತೆ ಮತ್ತು ಶುಚಿತ್ವದ ದೃಷ್ಟಿಯಿಂದ ಜಿಲ್ಲೆಯ ಅಡುಗೆ ಸಿಬ್ಬಂದಿ, ಅಡುಗೆ ಸಹಾಯಕರಿಗೆ ಖರೀದಿ ಮಾಡಿದ ಅಗ್ರಿ ನಿರೋಧಕ ಏಪ್ರಾನ್ ವಿಷಯ ಗುರುವಾರ ನಡೆದ ಜಿಲ್ಲಾ ಪಂಚಾಯಿತಿ ಸಭೆಯಲ್ಲಿ ಪ್ರತಿಧ್ವನಿಸಿತು.

ಈ ವಿಷಯದಲ್ಲಿ ಶಿಕ್ಷಣ ಇಲಾಖೆ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಳ್ಳುವ ಜತೆಗೆ ಅಧ್ಯಕ್ಷರು, ಉಪಾಧ್ಯಕ್ಷರು, ಸಿಇಒ ಸ್ವತಃ ಏಪ್ರಾನ್​ಗೆ ಬೆಂಕಿ ಹಚ್ಚಿ ಗುಣಮಟ್ಟ ಪರೀಕ್ಷಿಸಿದರು.

ಜಿಲ್ಲಾ ಪಂಚಾಯಿತಿ ಮಾಸಿಕ ಪ್ರಗತಿ ಪರಿಶೀಲನೆ ಸಭೆಯಲ್ಲಿ ಜಿಪಂ ಸದಸ್ಯೆ ಶೋಭಾ ಬಿರಾದಾರ ಪಾಟೀಲ, ಏಪ್ರಾನ್ ಖರೀದಿಯಲ್ಲಿ ಶಿಕ್ಷಣ ಇಲಾಖೆ ಅಧಿಕಾರಿಗಳು ದೊಡ್ಡ ಪ್ರಮಾಣದಲ್ಲಿ ಭ್ರಷ್ಟಾಚಾರ ಮಾಡಿದ್ದಾರೆ. 600, 650 ರೂ. ಸಿಗುವ ಏಪ್ರಾನನ್ನು ಪ್ರತಿಯೊಂದಕ್ಕೆ 2000 ರೂ. ನೀಡಿ ಶಾಲೆಗಳು ಖರೀದಿ ಮಾಡಿವೆ. ಡಿಡಿಪಿಐ ಎಂ.ಆರ್.ಕಾಮಾಕ್ಷಿ ಇದರಲ್ಲಿ ಭಾಗಿಯಾಗಿದ್ದಾರೆ ಎನ್ನುವ ಆರೋಪ ಸ್ವತಃ ಶಿಕ್ಷಕರಿಂದ ಕೇಳಿ ಬಂದಿದೆ. ಮಾಧ್ಯಮಗಳಲ್ಲಿಯೂ ಈ ವಿಷಯ ಪ್ರಸ್ತಾಪವಾಗಿದೆ ಎಂದು ದೂರಿದರು.

ಡಿಡಿಪಿಐ ಎಂ.ಆರ್.ಕಾಮಾಕ್ಷಿ ಮಾತನಾಡಿ, ಇಂತಹವರಿಂದ ಏಪ್ರಾನ್ ಖರೀದಿ ಮಾಡುವಂತೆ ನಾನು ಸೂಚನೆ ನೀಡಿಲ್ಲ. ಸರ್ಕಾರದ ಆದೇಶ ಬಂದಿತ್ತು, ಹೀಗಾಗಿ ಎಲ್ಲ ಶಾಲೆಗಳಿಗೆ ಸೂಚನೆ ನೀಡಿರುವೆ ಎಂದರು. ಈ ವೇಳೆ ಜಿಪಂ ಅಧ್ಯಕ್ಷೆ ವೀಣಾ ಕಾಶಪ್ಪನವರ ಶಿಕ್ಷಣ ಇಲಾಖೆ ಅಧಿಕಾರಿಗಳನ್ನು ತೀವ್ರ ತರಾಟೆಗೆ ತೆಗೆದುಕೊಂಡು, ಜಿಲ್ಲಾ ಪಂಚಾಯಿತಿ ಅಧ್ಯಕ್ಷರು, ಉಪಾಧ್ಯಕ್ಷರು, ಶಿಕ್ಷಣ ಸ್ಥಾಯಿ ಸಮಿತಿ, ಕೊನೆಗೆ ಜಿಪಂ ಸಿಇಒ ಗಮನಕ್ಕೂ ತರದೆ ಹೇಗೆ ನೀವು ಏಪ್ರಾನ್ ಖರೀದಿಗೆ ಸೂಚನೆ ನೀಡಿದ್ದೀರಿ ಎಂದು ಪ್ರಶ್ನಿಸಿದರು.

ಜಿಪಂ ಉಪಾಧ್ಯಕ್ಷ ಮುತ್ತಪ್ಪ ಕೋಮಾರ ಮಾತನಾಡಿ, ಮಾರುಕಟ್ಟೆಯಲ್ಲಿ ಏಪ್ರಾನ್​ಗೆ ಯಾವ ಬೆಲೆ ಇದೆ. ಬೇರೆ ಜಿಲ್ಲೆಯ ವ್ಯಕ್ತಿ ಬಾಗಲಕೋಟೆಗೆ ಬಂದು ಎಲ್ಲ ಶಾಲೆಗಳಿಗೆ ಏಪ್ರಾನ್ ವಿತರಣೆ ಮಾಡುತ್ತಾರೆ ಎಂದರೆ ಏನರ್ಥ. ಈಗಾಗಲೇ ಖರೀದಿ ಮಾಡಿದ ಏಪ್ರಾನ್​ಗಳು ಗುಣಮಟ್ಟದಿಂದ ಕೂಡಿರುವ ಬಗ್ಗೆ ಪರಿಶೀಲನೆ ಮಾಡಲಾಗಿದೀಯಾ ಎಂದು ಕೇಳಿದರು. ಇದಕ್ಕೆ ಪ್ರತಿಕ್ರಿಯೆ ನೀಡಿದ ಅಕ್ಷರದಾಸೋಹ ಅಧಿಕಾರಿ ಎನ್.ಬಿ.ಗೊರವರ ಆನ್​ಲೈನ್​ನಲ್ಲಿ 2100 ರೂ. ಇದೆ. ಗುಣಮಟ್ಟ ಕೂಡ ಪರೀಕ್ಷೆ ಮಾಡಲಾಗಿದೆ. ಶಾಲೆಗಳು ನೇರವಾಗಿ ಖರೀದಿ ಮಾಡಿವೆ ಎಂದಾಗ ಏಪ್ರಾನ್ ಗುಣಮಟ್ಟ ಬಗ್ಗೆ ಇದೇ ಸಭೆಯಲ್ಲಿ ಪರೀಕ್ಷೆ ಮಾಡೋಣ ಎಂದು ಅಧ್ಯಕ್ಷೆ ವೀಣಾ ಕಾಶಪ್ಪನವರ, ಉಪಾಧ್ಯಕ್ಷ ಕೋಮಾರ ಹೇಳಿದರು.

ಬಾುಂಕ್​ಗಳಿಂದ ಕಿರುಕುಳ: ವಿವಿಧ ಇಲಾಖೆಗಳಿಂದ ಫಲಾನುಭವಿಗಳ ಆಯ್ಕೆ ಪಟ್ಟಿಯನ್ನು ಬ್ಯಾಂಕ್​ಗಳಿಗೆ ನೀಡಿದರೂ ಅವರಿಗೆ ಸಕಾಲಕ್ಕೆ ಸಾಲ ನೀಡದಿರುವ ಬಗ್ಗೆ ಆರೋಪಗಳು ಕೇಳಿಬರುತ್ತಿದ್ದು, ಆಯ್ಕೆಯಾದ ಎಲ್ಲ ಫಲಾನುಭವಿಗಳಿಗೆ ಸಮಯಕ್ಕೆ ಸರಿಯಾಗಿ ಸಾಲ ಒದಗಿಸುವ ಕೆಲಸ ಆಗಬೇಕು. ಎನ್​ಒಸಿ ನೀಡುವ ವಿಚಾರದಲ್ಲಿ ಬ್ಯಾಂಕ್​ಗಳು ರೈತರಿಗೆ ಕಿರುಕುಳ ನೀಡುತ್ತಿವೆ. ಈ ಬಗ್ಗೆ ಗಮನ ಹರಿಸಬೇಕು ಎಂದು ಲೀಡ್​ಬ್ಯಾಂಕ್ ಮ್ಯಾನೇಜರ್ ಗೋಪಾಲ ರೆಡ್ಡಿ ಅವರಿಗೆ ಸಭೆಯಲ್ಲಿ ಸೂಚಿಸಲಾಯಿತು. ಅಲ್ಲದೆ, ಜಿಲ್ಲೆಯಲ್ಲಿ ಕುಡಿಯವ ನೀರಿನ ಸಮಸ್ಯೆಯಾಗದಂತೆ ಎಲ್ಲ ರೀತಿಯ ಕ್ರಮ ಕೈಗೊಳ್ಳಬೇಕು. ಅಗತ್ಯವೆನಿಸಿದಲ್ಲಿ ತಾತ್ಕಾಲಿಕವಾಗಿ ಟ್ಯಾಂಕರ್ ಮೂಲಕ ನೀರು ಪೂರೈಸಬೇಕು. ನಂತರ ಅವರಿಗೆ ಶಾಶ್ವತ ಕುಡಿಯುವ ನೀರಿನ ಯೋಜನೆ ರೂಪಿಸುವ ಕೆಲಸವಾಗಬೇಕು ಎಂದು ಪಿಆರ್​ಇಡಿ ಇಇ ಕಕರೆಡ್ಡಿ ಅವರಿಗೆ ನಿರ್ದೇಶನ ನೀಡಲಾಯಿತು.

ಗುಣಮಟ್ಟ ಪರೀಕ್ಷೆ: ಕೆಲ ಸಮಯದ ನಂತರ ಏಪ್ರಾನನ್ನು ತಂದು ಸಭೆಯಲ್ಲಿ ಪರೀಕ್ಷೆ ಮಾಡಲಾಯಿತು. ಜಿಪಂ ಅಧ್ಯಕ್ಷೆ ವೀಣಾ ಕಾಶಪ್ಪನವರ ಸ್ವತಃ ತಾವೇ ಏಫ್ರಾನ್ ಧರಿಸಿದರು. ಅಲ್ಲದೆ, ಏಪ್ರಾನ್​ಗೆ ಬೆಂಕಿ ಹಚ್ಚಿದ ಅಧ್ಯಕ್ಷರು, ಉಪಾಧ್ಯಕ್ಷರು ಗುಣಮಟ್ಟ ಬಗ್ಗೆ ಪರೀಕ್ಷೆ ಮಾಡಿದರು. ನಂತರ ಸುದೀರ್ಘ ಚರ್ಚೆ ಬಳಿಕ ಅಧ್ಯಕ್ಷೆ ವೀಣಾ ಕಾಶಪ್ಪನರ ಮಾತನಾಡಿ, ಯಾರ ಗಮನಕ್ಕೂ ತರದೆ ಏಪ್ರಾನ್ ಖರೀದಿಸಲಾಗಿದೆ. ಭ್ರಷ್ಟಾಚಾರ ನಡೆದಿರುವ ಬಗ್ಗೆ ಅನುಮಾನ ವ್ಯಕ್ತವಾಗಿದೆ. ಈ ಕುರಿತು ಸತ್ಯಾಸತ್ಯತೆ ಅರಿಯಲು ತನಿಖೆಗೆ ಆದೇಶಿಸುವಂತೆ ಜಿಪಂ ಸಿಇಒ ಅವರಿಗೆ ಸೂಚಿಸಿ, ತಪ್ಪಿತಸ್ಥರ ಮೇಲೆ ಪ್ರಕರಣ ದಾಖಲಿಸುವ ಮೂಲಕ ಸೂಕ್ತ ಕ್ರಮ ತೆಗೆದುಕೊಳ್ಳಬೇಕು ಎಂದು ತಿಳಿಸಿದರು.

1450 ಮಕ್ಕಳು ಶಾಲೆಯಿಂದ ಹೊರಗೆ: ಪ್ರಸಕ್ತ ವರ್ಷದಲ್ಲಿ ಸರ್ವೆ ಕಾರ್ಯದಿಂದ ಒಟ್ಟು 1450 ಮಕ್ಕಳು ಶಾಲೆಯಿಂದ ಹೊರಗೆ ಉಳಿದಿದ್ದಾರೆ ಎಂದು ತಿಳಿದು ಬಂದಿದೆ. ಆ ಮಕ್ಕಳ ಶಾಲೆ ದಾಖಲಾತಿಗೆ ವಿವಿಧ ಕಾರ್ಯಕ್ರಮ ಹಾಕಿಕೊಳ್ಳಲಾಗುತ್ತಿದೆ ಎಂದು ಡಿಡಿಪಿಐ ಕಾಮಾಕ್ಷಿ ಸಭೆಗೆ ತಿಳಿಸಿದರು. ನೀವು ಕಾರ್ಯಕ್ರಮ ಮಾಡಿರುವ ಬಗ್ಗೆ ಇದುವರೆಗೂ ನಾನು ಕಂಡಿಲ್ಲ. ಮಾಹಿತಿ ಕೂಡ ಇಲ್ಲ. ಇದು ನಿಮ್ಮಲ್ಲಿರುವ ಬೇಜವಾಬ್ದಾರಿತನ ಎತ್ತಿ ತೋರಿಸುತ್ತದೆ ಎಂದು ಡಿಡಿಪಿಐ ವಿರುದ್ಧ ಅಧ್ಯಕ್ಷರು ಹರಿಹಾಯ್ದರು. ಈ ವರ್ಷ ಎಸ್ಸೆಸ್ಸೆಲ್ಸಿ ಫಲಿತಾಂಶ ಸುಧಾರಣೆಗೆ ವಿಶೇಷ ಕ್ಲಾಸ್ ಹಾಕಿಕೊಳ್ಳಬೇಕು. ಉತ್ತಮ ಫಲಿತಾಂಶಕ್ಕೆ ಶ್ರಮಿಸಬೇಕೆಂದು ಹೇಳಿದರು. ಜಿಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಗಂಗೂಬಾಯಿ ಮಾನಕರ, ಜಿಪಂ ಸಿಪಿಒ ನಿಂಗಪ್ಪ ಗೋಠೆ, ಜಿಪಂ ಉಪ ಕಾರ್ಯದರ್ಶಿ ದುರ್ಗೆಶ ರುದ್ರಾಕ್ಷಿ, ಮುಖ್ಯ ಲೆಕ್ಕಾಧಿಕಾರಿ ಶಾಂತಾ ಕಡಿ ಸೇರಿ ಜಿಪಂ ಸದಸ್ಯರು, ವಿವಿಧ ಇಲಾಖೆ ಅಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.

ತೋಟಗಾರಿಕೆ: ಜಿಲ್ಲೆಯಲ್ಲಿ ತೀವ್ರ ಬರ ಆವರಿಸಿದ್ದು, ತೋಟಗಾರಿಕೆ ಬೆಳೆಗಳ ಬಗ್ಗೆ ರೈತರಲ್ಲಿ ಆತ್ಮವಿಶ್ವಾಸ ಮೂಡಿಸುವ ಕೆಲಸವಾಗ ಬೇಕು. ಲಾಭದಾಯಕವಾದ ಬೆಳೆಗಳ ಬಗ್ಗೆ ಅರಿವು ಮೂಡಿಸ ಬೇಕು. ನಿಮಗೆ ನೀಡಿದ ಗುರಿ ತಲುಪಬೇಕು. ಯಾವುದೇ ತರಹದ ಸಬೂಬು ಹೇಳಬಾರದು ಎಂದು ತೋಟಗಾರಿಕೆ ಇಲಾಖೆ ಉಪನಿರ್ದೇಶಕರಿಗೆ ಸಭೆಯಲ್ಲಿ ಚಾಟಿ ಬೀಸಲಾಯಿತು. ಜಿಲ್ಲೆಯಲ್ಲಿ ನೆಟ್ಟ ಸಸಿಗಳನ್ನು ಸರಿಯಾಗಿ ನಿರ್ವಹಣೆ ಮಾಡುತ್ತಿಲ್ಲ. ಬೆಳೆದ ಸಸಿಗಳಿಗೆ ರಕ್ಷಣೆ ಇಲ್ಲದೆ ದನ, ಆಡು, ಕುರಿಗಳು ತಿನ್ನುತ್ತಿವೆ. ಅವುಗಳ ನಿರ್ವಹಣೆಗೆ ಒತ್ತು ನೀಡಬೇಕು ಎಂದು ಅರಣ್ಯ ಇಲಾಖೆ ಅಧಿಕಾರಿಗಳಿಗೆ ಜಿಪಂ ಅಧ್ಯಕ್ಷೆ ವೀಣಾ ಕಾಶಪ್ಪನವರ ಖಡಕ್ ಸೂಚನೆ ನೀಡಿದರು.

ಎಚ್​ಐವಿ ಅಲ್ಲ ಶಿಕ್ಷಣದಲ್ಲಿ ಮುಂದೆ ಬರಲಿ: ಆರೋಗ್ಯ ಇಲಾಖೆ ಪ್ರಗತಿ ಪರಿಶೀಲನೆ ವೇಳೆ ಜಿಪಂ ಅಧ್ಯಕ್ಷೆ ವೀಣಾ ಕಾಶಪ್ಪನವರ ಮಾತನಾಡಿ, ಎಚ್​ಐವಿ ರೋಗಿಗಳ ಪ್ರಮಾಣದಲ್ಲಿ ಬಾಗಲಕೋಟೆ ಜಿಲ್ಲೆ ಎರಡನೇ ಸ್ಥಾನದಲ್ಲಿದೆ. ಶಿಕ್ಷಣ ಇಲಾಖೆ ಮೊದಲ ಸ್ಥಾನ ಪಡೆದರೆ ಖುಷಿ ಆಗುತ್ತೆ. ಎಚ್​ಐವಿ ಪ್ರಮಾಣದ ಸ್ಥಾನ ಗಮನಿಸಿದರೆ ಬೇಜಾರ ಆಗುತ್ತದೆ. ಈ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವುದು ಅವಶ್ಯವಾಗಿದೆ ಎಂದರು. ಡಿಎಚ್​ಒ ಡಾ.ಅನಂತ ದೇಸಾಯಿ ಮಾತನಾಡಿ, ಎಲ್ಲ ತಾಲೂಕುಗಳಲ್ಲಿ ಜಾಗೃತಿ ಕಾರ್ಯ ನಡೆದಿದೆ. ಮೊದಲಿಗಿಂತ ಪ್ರಮಾಣ ಕಡಿಮೆಯಾಗಿದೆ ಎಂದ ಅವರು, 223 ಪುರುಷರ ಸಂತಾನಶಕ್ತಿ ಹರಣ ಚಿಕಿತ್ಸೆಗೆ ಗುರಿ ನೀಡಲಾಗಿತ್ತು. ಕೇವಲ ಹತ್ತು 10 ಜನ ಮಾತ್ರ ಸಂತಾನಶಕ್ತಿ ಹರಣ ಚಿಕಿತ್ಸೆ ಮಾಡಿಸಿದ್ದಾರೆ ಎಂದು ತಿಳಿಸಿದಾಗ ಅಧ್ಯಕ್ಷೆ ವೀಣಾ, ಸಿಇಒ ಮಾನಕರ ಮಾತನಾಡಿ, ಕೇವಲ ಹೆಣ್ಣು ಮಕ್ಕಳು ಮಾತ್ರ ಎಲ್ಲದಕ್ಕೂ ನೋವು ಅನುಭವಿಸಬೇಕಾ ಎಂದು ನಗೆ ಚಟಾಕಿ ಹಾರಿಸಿ ಪುರುಷರು ಕೂಡ ಈ ಚಿಕಿತ್ಸೆ ಮಾಡಿಸಿಕೊಳ್ಳಲು ಮನವರಿಕೆ ಮಾಡಿ ಎಂದು ಡಿಎಚ್​ಒ ಅವರಿಗೆ ನಿರ್ದೇಶನ ನೀಡಿದರು.

ಸಿಡಿಪಿಒಗೆ ನೋಟಿಸ್: ಬಾಗಲಕೋಟೆ ತಾಲೂಕಿನಲ್ಲಿ ಅಂಗನವಾಡಿ ಕೇಂದ್ರಗಳಿಗೆ ಆಹಾರ ಸಾಮಗ್ರಿಗಳನ್ನು ನಿಯಮಿತವಾಗಿ ಸರಬರಾಜು ಮಾಡá-ತ್ತಿಲ್ಲ ಎನ್ನುವ ಆರೋಪಗಳು ಕೇಳಿ ಬಂದಿವೆ. ಈ ವಿಷಯಕ್ಕೆ ಸಂಬಂಧಿಸಿದಂತೆ ಈಗಾಗಲೇ ಬಾಗಲಕೋಟೆ ತಾಲೂಕು ಸಿಡಿಪಿಒ ಹಾಗೂ ಆಹಾರ ಹಂಚಿಕೆ ವ್ಯವಸ್ಥಾಪಕರಿಗೆ ಕಾರಣ ಕೇಳಿ ನೋಟಿಸ್ ನೀಡಲಾಗಿದೆ. ಅವರಿಂದ ಯಾವ ಉತ್ತರ ಬರá-ತ್ತದೆ ಎನ್ನುವುದನ್ನು ತಿಳಿದá-ಕೊಂಡು ಮುಂದಿನ ಕ್ರಮ ತೆಗೆದá-ಕೊಳ್ಳುವುದಾಗಿ ಎನ್.ಬಿ.ಗೊರವರ ಸಭೆಗೆ ತಿಳಿಸಿದರು.