ತೆಲಂಗಾಣ ರಾಜ್ಯ ಪರೀಕ್ಷೆಯಲ್ಲಿ ಫೇಲ್​ ಆಗಿ ಆತ್ಮಹತ್ಯೆ ಮಾಡಿಕೊಂಡವರ ಸಂಖ್ಯೆ 19ಕ್ಕೆ ಏರಿಕೆ: ಸಿಎಂ ಕೆಸಿಆರ್ ಆದೇಶವೇನು?

ಹೈದರಾಬಾದ್​: ತೆಲಂಗಾಣದ ಮಧ್ಯಂತರ ಸಾರ್ವಜನಿಕ ಪರೀಕ್ಷೆಗಳಲ್ಲಿ ಫೇಲಾಗಿ ಆತ್ಮಹತ್ಯೆ ಮಾಡಿಕೊಂಡು ಸಾವಿಗೀಡಾದವರ ಸಂಖ್ಯೆ ಬುಧವಾರ 19ಕ್ಕೆ ಏರಿದೆ. ಪರೀಕ್ಷೆಯಲ್ಲಿ ಯಶಸ್ಸು ಸಾಧಿಸದ ಸುಮಾರು 300,000 ಅಭ್ಯರ್ಥಿಗಳ ಉತ್ತರ ಪತ್ರಿಕೆಯನ್ನು ಯಾವುದೇ ಶುಲ್ಕವಿಲ್ಲದೆ ಉಚಿತವಾಗಿ ಮರು ಪರಿಶೀಲನೆ ನಡೆಸಲು ಮುಖ್ಯಮಂತ್ರಿ ಕೆ.ಚಂದ್ರಶೇಖರ್​ ರಾವ್​​ ಆದೇಶಿಸಿದ್ದಾರೆ.

ಹಿರಿಯ ಅಧಿಕಾರಿಗಳ ಜತೆ ಎರಡು ಗಂಟೆ ಚರ್ಚೆ ನಡೆಸಿದ ಬಳಿಕ ಮರು ಪರಿಶೀಲನೆಗೆ ಆದೇಶಿಸಿರುವ ಚಂದ್ರಶೇಖರ್​ ರಾವ್​, ವಿದ್ಯಾರ್ಥಿಗಳಿಗೆ ಶೈಕ್ಷಣಿಕ ವರ್ಷಕ್ಕೆ ತೊಂದರೆಯಾಗದಂತೆ ಸಾಧ್ಯವಾದಷ್ಟು ಬೇಗ ಉತ್ತರ ಪತ್ರಿಕೆಯನ್ನು ಮರುಪರಿಶೀಲಿಸುವಂತೆ ತಿಳಿಸಿದ್ದಾರೆ.

ಪರೀಕ್ಷೆಯಲ್ಲಿ ಕಡಿಮೆ ಅಂಕ ಪಡೆದಿರುವ ವಿದ್ಯಾರ್ಥಿಗಳು ಮತ್ತೊಮ್ಮೆ ಮರು ಪರಿಶೀಲನೆ ಹಾಗೂ ಮರು ಎಣಿಕೆಗೆ ಅರ್ಜಿ ಹಾಕಬಹುದಾಗಿದೆ. ಆದರೆ, ಇದಕ್ಕೆ ಶುಲ್ಕ ಪಾವತಿಸಬೇಕಿದೆ.

ತೆಲಂಗಾಣ ರಾಜ್ಯದ ಮಧ್ಯಂತರ ಪರೀಕ್ಷಾ ಮಂಡಳಿ(TSBIE)ಯು ಏ. 18ರಂದು ಫಲಿತಾಂಶವನ್ನು ಪ್ರಕಟಿಸಿತ್ತು. ಅಚ್ಚರಿಯೆಂದರೆ ಈ ವೇಳೆ ಸಾವಿರಾರು ವಿದ್ಯಾರ್ಥಿಗಳ ಅಂಕಪಟ್ಟಿಯಲ್ಲಿ ದೊಡ್ಡ ಪ್ರಮಾದ ಕಂಡುಬಂದಿತ್ತು. ಮೊದಲ ವರ್ಷದ ಪರೀಕ್ಷೆಯಲ್ಲಿ ಶೇ.90 ರಷ್ಟು ಅಂಕ ಗಳಿಸಿದ್ದ ವಿದ್ಯಾರ್ಥಿಗಳು ಎರಡನೇ ವರ್ಷದ ಪರೀಕ್ಷೆಯಲ್ಲಿ ಅನುತ್ತೀರ್ಣರಾಗಿದ್ದರು. ವಿವಿಧ ವಿಷಯಗಳಲ್ಲಿ ಕೇವಲ ಸೊನ್ನೆ, ಒಂದು ಹಾಗೂ ಎರಡು ಅಂಕಗಳನ್ನು ಮಾತ್ರ ಕೊಡಲಾಗಿದೆ ಎಂದು ಸಾಕಷ್ಟು ದೂರುಗಳನ್ನು ವಿದ್ಯಾರ್ಥಿಗಳು ಸಲ್ಲಿಸಿದ್ದರು.

ಮಂಗಳವಾರವಷ್ಟೇ ತೆಲಂಗಾಣದ ಹೈಕೋರ್ಟ್​ ಕೂಡ ಪರೀಕ್ಷಾ ಮಂಡಳಿಗೆ ಮರು ಪರಿಶೀಲನೆ ಮಾಡುವಂತೆ ಸೂಚನೆಯನ್ನು ನೀಡಿತ್ತು.

ಕಳೆದ 24 ಗಂಟೆಗಳಲ್ಲಿ ಮತ್ತೆ ಮೂವರು ವಿದ್ಯಾರ್ಥಿಗಳು ಆತ್ಮಹತ್ಯೆಗೆ ಶರಣಾಗಿದ್ದಾರೆ. ಈ ರೀತಿಯ ಪ್ರಕರಣಗಳಿಂದ ಇನ್ನುಳಿದ ವಿದ್ಯಾರ್ಥಿಗಳು ಹಾಗೂ ಅವರ ಪಾಲಕರಲ್ಲಿ ತಳಮಳ ಉಂಟುಮಾಡಿದೆ. ಪರೀಕ್ಷೆಯಲ್ಲಿ ಫೇಲ್​ ಆಗುವುದರಿಂದ ಜೀವನವೇ ಮುಗಿದುಹೋಯಿತು ಎಂಬುದಕ್ಕೆ ಅರ್ಥವಿಲ್ಲ. ಹೀಗಾಗಿ ವಿದ್ಯಾರ್ಥಿಗಳ ಆತ್ಮಹತ್ಯೆಯ ಯೋಚನೆ ಮಾಡಬೇಡಿ ಎಂದು ಕೆಸಿಆರ್​ ಮನವಿ ಮಾಡಿಕೊಂಡಿದ್ದಾರೆ.

ಈ ವರ್ಷ 4,09,133 ವಿದ್ಯಾರ್ಥಿಗಳು ನಿಯಮಿತ ಪದ್ದತಿಯಂತೆ ಮೊದಲ ವರ್ಷದ ಪರೀಕ್ಷೆಯನ್ನು ಎದುರಿಸಿದ್ದು, ಅದರಲ್ಲಿ 2,47,407 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ದ್ವಿತೀಯ ವರ್ಷದಲ್ಲಿ 3,82,534 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದರು. ಇವರಲ್ಲಿ 2,47,555 ವಿದ್ಯಾರ್ಥಿಗಳು ಮಾತ್ರ ಪಾಸ್​ ಆಗಿದ್ದಾರೆ.

ಪರೀಕ್ಷಾ ಫಲಿತಾಂಶದಲ್ಲಿನ ಪ್ರಮಾದದ ತನಿಖೆಗಾಗಿ ಈಗಾಗಲೇ ಸಮಿತಿಯೊಂದನ್ನು ರಚಿಸಿದ್ದು, ಗುರುವಾರವಷ್ಟೇ ತನ್ನ ವರದಿಯನ್ನು ಸಲ್ಲಿಸಿದೆ ಎಂದು ಹೇಳಲಾಗಿದೆ. (ಏಜೆನ್ಸೀಸ್​)

Leave a Reply

Your email address will not be published. Required fields are marked *