ಕೆಸಿಆರ್‌ ನೇತೃತ್ವದ ಟಿಆರ್‌ಎಸ್‌ 2ನೇ ಬಾರಿಗೆ ತೆಲಂಗಾಣದ ಗದ್ದುಗೆ ಏರುವುದು ಫಿಕ್ಸ್‌!

ಹೈದರಾಬಾದ್​: ತೆಲಂಗಾಣ ವಿಧಾನಸಭಾ ಚುನಾವಣೆಯ ಮತಎಣಿಕೆ ಆರಂಭವಾದಾಗಿನಿಂದಲೂ ಮುನ್ನಡೆ ಕಾಯ್ದುಕೊಂಡಿದ್ದ ಕೆ.ಸಿ.ಚಂದ್ರಶೇಖರ್‌ ರಾವ್‌ ನೇತೃತ್ವದ ಟಿಆರ್‌ಎಸ್‌ ನಿರೀಕ್ಷೆಗೂ ಮೀರಿದ ಫಲಿತಾಂಶ ಪಡೆದಿದ್ದು, ಸತತ 2ನೇ ಬಾರಿಗೆ ಸರ್ಕಾರ ರಚನೆಯತ್ತ ಹೆಜ್ಜೆ ಹಾಕಿದೆ.

ಕಾಂಗ್ರೆಸ್​, ಟಿಡಿಪಿ ಸೇರಿ ಇತರೆ ಪಕ್ಷಗಳ ಮೈತ್ರಿಗೆ ಹಿನ್ನಡೆಯಾಗಿದ್ದು, ಟಿಆರ್‌ಎಸ್‌ 93 ಸೀಟುಗಳನ್ನು ಗೆಲ್ಲುವ ಮೂಲಕ ಸ್ಪಷ್ಟ ಬಹುಮತದೊಂದಿಗೆ ತೆಲಂಗಾಣದ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ. 119 ವಿಧಾನಸಭಾ ಕ್ಷೇತ್ರಗಳ ಪೈಕಿ ಮ್ಯಾಜಿಕ್‌ ನಂಬರ್‌ 60 ಆಗಿರುವ ತೆಲಂಗಾಣದಲ್ಲಿ ಟಿಆರ್‌ಎಸ್‌ ಸ್ಪಷ್ಟ ಬಹುಮತ ಪಡೆದಿದ್ದು, ಕಾಂಗ್ರೆಸ್‌ 16, ಬಿಜೆಪಿ 1 ಮತ್ತು ಇತರೆ 2 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿವೆ.

ಅವಧಿಗೂ ಮುನ್ನವೇ ಮುಖ್ಯಮಂತ್ರಿ ಚಂದ್ರಶೇಖರ್‌ ರಾವ್‌ ಅವರು ವಿಧಾನಸಭೆ ವಿಸರ್ಜಿಸಿದ ಬೆನ್ನಲ್ಲೇ ಡಿ.7ರಂದು ನಡೆದಿದ್ದ ಚುನಾವಣೆ ಬಳಿಕ ಮತದಾನೋತ್ತರ ಸಮೀಕ್ಷೆಯಲ್ಲಿಯೂ ಟಿಆರ್‌ಎಸ್‌ ಸರಳ ಬಹುಮತ ಪಡೆಯುವ ಸೂಚನೆಯನ್ನು ಪಡೆದಿತ್ತು.

ಇನ್ನು ತೆಲಂಗಾಣ ರಾಜ್ಯ ರಚನೆಯಾದ ಬಳಿಕ ಮೊದಲ ಬಾರಿ 2014ರಲ್ಲಿ ಚುನಾವಣೆ ಎದುರಿಸಿದ್ದ ಟಿಆರ್‌ಎಸ್‌, 119 ವಿಧಾನಸಭಾ ಕ್ಷೇತ್ರಗಳ ಪೈಕಿ 63 ಸ್ಥಾನಗಳಲ್ಲಿ ಗೆಲುವು ಸಾಧಿಸುವ ಮೂಲಕ ಸರ್ಕಾರ ರಚನೆ ಮಾಡಿತ್ತು. ಇಂದಿಗೆ ಹೋಲಿಸಿಕೊಂಡರೆ ಸುಮಾರು 26 ಸ್ಥಾನಗಳಲ್ಲಿ ಅಧಿಕ ಮುನ್ನಡೆ ಕಾಯ್ದುಕೊಂಡಿರುವ ಟಿಆರ್‌ಎಸ್‌, ಸ್ಪಷ್ಟ ಬಹುಮತದ ಮೂಲಕ ಸರ್ಕಾರದ ಚುಕ್ಕಾಣಿ ಹಿಡಿಯಲಿದೆ.

2014ರ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ 21, ಟಿಡಿಪಿ 15, ಆಲ್‌ ಇಂಡಿಯಾ ಮಜ್ಲಿಸ್‌ ಇ ಇತ್ತೆಹಾದುಲ್‌ ಮುಸ್ಲಿಮೀನ್‌ 7, ಬಿಜೆಪಿ 5, ವೈಎಸ್‌ಆರ್‌ ಕಾಂಗ್ರೆಸ್‌ ಪಕ್ಷ 3, ಬಿಎಸ್‌ಪಿ 2, ಸಿಪಿಐ, ಸಿಪಿಎಂ ಮತ್ತು ಇತರೆ ತಲಾ 1 ಸ್ಥಾನಗಳಲ್ಲಿ ಗೆಲುವು ಸಾಧಿಸಿದ್ದವು. (ಏಜೆನ್ಸೀಸ್)