ವಿರಾಜಪೇಟೆ: ಇಲ್ಲಿನ ತಾಲೂಕು ಮೈದಾನದ ಅಭಿವೃದ್ಧಿ ಕಾರ್ಯ ಭರದಿಂದ ಸಾಗಿದ್ದು, ಆ ಮೂಲಕ ಕಾಯಕಲ್ಪ ದೊರೆಯಲಿದೆ.
ಸೂಕ್ತ ವ್ಯವಸ್ಥೆ ಹಾಗೂ ಮೂಲ ಸೌಲಭ್ಯಗಳ ಕೊರತೆಯಿಂದಾಗಿ ಕ್ರೀಡಾಪಟುಗಳು ಹಾಗೂ ಆಯೋಜಕರು ಪರದಾಡುವಂತಾಗಿತ್ತು. ಅಲ್ಲದೆ ಸೌಲಭ್ಯ ಕಲ್ಪಿಸುವಂತೆ ಕ್ರೀಡಾಪಟುಗಳು ಸಲ್ಲಿಸಿದ ಮನವಿಗೆ ಶಾಸಕರು ಸ್ಪಂದಿಸಿದ್ದು, ತಾಲೂಕು ಮೈದಾನಕ್ಕೆ ಹೊಸ ರೂಪ ನೀಡಲೆಂದು ಅನುದಾನ ಒದಗಿಸಿದ್ದಾರೆ. ಅದರ ಫಲವಾಗಿ ಮೆಸ್ ನೆಟ್, ಫೆಡ್‌ಲೈಟ್ ಅಳವಡಿಕೆಯೊಂದಿಗೆ ಹೊಸ ಛಾವಣಿಯೂ ಬರಲಿದೆ.
ರಾಷ್ಟ್ರೀಯ ಹಬ್ಬ ಆಚರಣೆ, ಪೊಲೀಸ್ ಇಲಾಖೆ ಹಾಗೂ ಗೃಹರಕ್ಷಕ ದಳದ ಸಿಬ್ಬಂದಿ ಪರೇಡ್ ಅಭ್ಯಾಸ, ವಾಹನ ಪಾರ್ಕಿಂಗ್ ಸೇರಿದಂತೆ ಅನೇಕ ಚಟುವಟಿಕೆಗಳಿಗೆ ಬಳಕೆ ಆಗುತ್ತಿದ್ದರಿಂದ ಮೈದಾನ ತನ್ನ ರೂಪವನ್ನು ಕಳೆದುಕೊಂಡಿತ್ತು. ಅಲ್ಲದೆ ವೀಕ್ಷಕರ ಗ್ಯಾಲರಿಯ ಛಾವಣಿ ಹಾಳಾಗಿ ಸಂಪೂರ್ಣ ಸೋರುತ್ತಿತ್ತು. ಈ ನಡುವೆ ಕ್ರೀಡೆಗೆ ಬಳಕೆಯಾಗದೆ ಶಿಥಿಲಾವಸ್ಥೆ ತಲುಪಿತ್ತು.
ವಿವಿಧ ಕೆಲಸಕ್ಕೆ, ತಾಲೂಕು ಕಚೇರಿ ಆಗಮಿಸುವವರು, ಬ್ಯಾಂಕ್ ಕೆಲಸಕ್ಕೆಂದು ಆಗಮಿಸುವವರು, ಆರ್ಮಿ ಕ್ಯಾಂಟೀನ್‌ಗೆ ಬರುವವರು ಮೈದಾನದಲ್ಲಿ ವಾಹನ ನಿಲುಗಡೆ ಮಾಡುತ್ತಿದ್ದರು. ಇದರಿಂದ ಮಳೆಗಾಲದ ಸಂದರ್ಭ ಮೈದಾನ ಕೆಸರುಮಯವಾಗಿ ಉಳುಮೆ ಮಾಡಿದ ಗದ್ದೆಯಂತಾಗುತ್ತಿತ್ತು. ಮತ್ತೊಂದು ಕಡೆ ವಾಹನ ಕಲಿಯುವವರು ಇಲ್ಲಿಯೇ ಕಲಿಯುತ್ತಿದ್ದರು. ಸಂಜೆ ವೇಳೆ ಕೆಲವು ವಿದ್ಯಾರ್ಥಿಗಳು ಹಾಗೂ ಯುವಕರ ಗುಂಪು ಇಲ್ಲಿ ಕಾಲ್ಚೆಂಡು ಆಟ ಆಡುವುದನ್ನು ಹೊರತುಪಡಿಸಿದರೆ ಈ ಮೈದಾನ ಕ್ರೀಡೆಗೆ ಬಳಕೆಯಾಗುತ್ತಿದ್ದು ಬಹಳ ಕಡಿಮೆ. ಯಾವುದಾದರೂ ಸಮಾವೇಶಗಳಿದ್ದರೂ ಇದೇ ಮೈದಾನದಲ್ಲಿ ನಡೆಯುತ್ತಿತ್ತು. ಇದರೊಂದಿಗೆ ಹುತ್ತರಿ ಇ ತರ ಹಬ್ಬದ ಸಂದರ್ಭದಲ್ಲಿ ತಾತ್ಕಾಲಿಕ ಮಳಿಗೆಗಳನ್ನು ಇರಿಸಲಾಗುತ್ತಿತ್ತು. ರಾತ್ರಿ ಸಮಯದಲ್ಲಿ ಈ ಮೈದಾನ ನಗರ ಪ್ರದೇಶದಲ್ಲಿ ಸಂಚರಿಸುವ ಹಸುಗಳ ವಿಶ್ರಾಂತಿ ತಾಣವಾಗಿತ್ತು.
ತಾಲೂಕು ಮೈದಾನದಲ್ಲಿ ಕ್ರೀಡಾಕೂಟಗಳನ್ನು ಆಯೋಜಿಸುತ್ತಿದ್ದ ಆಯೋಜಕರು ಈ ಎಲ್ಲ ಕಾರಣದಿಂದಾಗಿ ಬೇರೆ ಕಡೆಗಳಲ್ಲಿ ಕ್ರೀಡಾಕೂಟ ಆಯೋಜಿಸಲು ಆರಂಭಿಸಿದರು. ಕ್ರೀಡೆಗಿಂತ ಇತರ ಕಾರ್ಯಕ್ರಮಗಳಿಗೆ ಮೈದಾನ ಹೆಚ್ಚಾಗಿ ಬಳಕೆಯಾಗುವುದನ್ನು ಗಮನಿಸಿದ ಕ್ರೀಡಾಪಟುಗಳು ಹಾಗೂ ಕ್ರೀಡಾಭಿಮಾನಿಗಳು ಅಂತಾರಾಷ್ಟ್ರೀಯ ರಗ್ಬಿ ಆಟಗಾರ ಮಾದಂಡ ತಿಮ್ಮಯ್ಯ ನೇತೃತ್ವದಲ್ಲಿ ’ತಾಲೂಕು ಮೈದಾನ ಉಳಿಸಿ ಅಭಿವೃದ್ಧಿಪಡಿಸಿ’ ಎಂದು ದೊಡ್ಡ ಮಟ್ಟದಲ್ಲಿ ಪ್ರತಿಭಟನೆಯನ್ನೂ ನಡೆಸಿದ್ದರು. ಪ್ರತಿಭಟನೆಯ ಫಲವಾಗಿ ಪುರಸಭೆ ಇದೀಗ ಅಭಿವೃದ್ಧಿ ಕಾರ್ಯಕ್ಕೆ ಮುಂದಾಯಿತು.
ಮೊದಲ ಹಂತದಲ್ಲಿ ಮೈದಾನ ಪ್ರವೇಶಿಸುವ ಸ್ಥಳದಲ್ಲಿ ಚೈನ್ ಗೇಟ್ ಅಳವಡಿಸಿ ಮೈದಾನದ ಒಳಗಡೆ ವಾಹನ ನಿಲುಗಡೆಯನ್ನು ನಿಷೇಧಿಸಲಾಯಿತು. ಎ.ಎಸ್.ಪೊನ್ನಣ್ಣ ವಿರಾಜಪೇಟೆ ಶಾಸಕರಾಗಿ ಆಯ್ಕೆಯಾದ ನಂತರ ತಿಮ್ಮಯ್ಯ ಅವರನ್ನು ಒಳಗೊಂಡ ಕ್ರೀಡಾಪಟುಗಳ ತಂಡ ತಾಲೂಕು ಮೈದಾನದಲ್ಲಿ ಮೆಶ್ ನೆಟ್ ಹಾಗೂ ಫೆಡ್ ಲೈಟ್ ಅಳವಡಿಸುವಂತೆ ಮನವಿ ಸಲ್ಲಿಸಿತು. ಇದಕ್ಕೆ ಸ್ಪಂದಿಸಿದ ಶಾಸಕರು, ಮೈದಾನ ಅಭಿವೃದ್ಧಿಪಡಿಸುವ ಭರವಸೆ ನೀಡಿ ಅನುದಾನ ಬಿಡುಗಡೆ ಗೊಳಿಸಿದರು. ಅದರಂತೆ ಇದೀಗ ತಾಲೂಕು ಮೈದಾನದಲ್ಲಿ ಮೆಶ್ ನೆಟ್ ಅಳವಡಿಕೆ ಕಾಮಗಾರಿ ಬಹುತೇಕ ಪೂರ್ಣಗೊಂಡಿದೆ.
ಮೈದಾನದ ಮುಂಭಾಗದಲ್ಲಿನ ವೇದಿಕೆಯ ಸ್ಥಳಕ್ಕೆ ಇಂಟರ್ ಲಾಕ್ ಅಳವಡಿಸಲಾಗಿದೆ. ಮೈದಾನದ ಎರಡೂ ದಿಕ್ಕಿನಲ್ಲಿ ಒಟ್ಟು ನಾಲ್ಕು ಫೆಡ್ ಲೈಟ್ ಅಡವಳಿಕೆ ಕಾರ್ಯ ಪೂರ್ಣಗೊಂಡಿದ್ದು, ಸಂಪೂರ್ಣವಾಗಿ ಸೋರುತ್ತಿದ್ದ ವೀಕ್ಷಕರ ಗ್ಯಾಲರಿಯ ಮೇಲ್ಚಾವಣಿಯನ್ನು ಬದಲಾಯಿಸಿ ಹೊಸ ಶೀಟ್ಗಳನ್ನು ಅಳವಡಿಸಲಾಗಿದೆ. ವೀಕ್ಷಕರು ಕುಳಿತುಕೊಳ್ಳುವ ಕಟ್ಟೆಗೆ ಬಣ್ಣ ಬಳಿದು ಹೊಸ ರೂಪ ನೀಡಲಾಗಿದೆ. ಕೆಲವೇ ದಿನಗಳಲ್ಲಿ ವಿರಾಜಪೇಟೆಯ ತಾಲೂಕು ಮೈದಾನ ಮೂಲಸೌಲಭ್ಯವನ್ನು ಒಳಗೊಂಡು ಹೊಸ ರೂಪ ಪಡೆಯಲಿದೆ.
ನಾನೊಬ್ಬ ಅಂತಾರಾಷ್ಟ್ರೀಯ ಕ್ರೀಡಾಪಟು. ತಾಲೂಕಿನಲ್ಲಿ ಸುಸಜ್ಜಿತವಾದ ಕ್ರೀಡಾಂಗಣ ಹಾಗೂ ಮೈದಾನ ಇಲ್ಲದ ಕಾರಣ ಬೆಂಗಳೂರಿಗೆ ಹೋಗಬೇಕಾಗಿತ್ತು. ಕೊಡಗಿನಲ್ಲಿ ಹೆಚ್ಚಿನ ಪ್ರತಿಭೆಗಳಿದ್ದು ಸಮರ್ಪಕ ಮೈದಾನಗಳಿಲ್ಲದೆ ಕ್ರೀಡಾಪಟುಗಳು ನಿರ್ಲಕ್ಷೃಕ್ಕೆ ಒಳಗಾಗಿದ್ದರು. ತಾಲೂಕು ಮೈದಾನ ಐತಿಹಾಸಿಕ ಮಹತ್ವ ಹೊಂದಿದ್ದು, ಹಲವು ವರ್ಷದಿಂದ ಇಲ್ಲಿ ಕ್ರೀಡಾಕೂಟಗಳು ನಡೆಯುತ್ತಿತ್ತು. ಇತ್ತೀಚಿಗೆ ಮೈದಾನ ಶಿಥಿಲಾವಸ್ಥೆ ತಲುಪಿರುವುದರಿಂದ ಕ್ರೀಡಾಕೂಟಗಳು ನಡೆಯುತ್ತಿಲ್ಲ. ಆದ್ದರಿಂದ ತಾಲೂಕು ಮೈದಾನ ಒಳಗೊಂಡಂತೆ ತಾಲೂಕಿನ ಎಲ್ಲ ಮೈದಾನಗಳನ್ನು ಅಭಿವೃದ್ಧಿಪಡಿಸಬೇಕೆಂಬುದು ನಮ್ಮ ಪ್ರತಿಭಟನೆಯ ಉದ್ದೇಶ.
ಮಾದಂಡ ತಿಮ್ಮಯ್ಯ ಅಂತಾರಾಷ್ಟ್ರೀಯ ರಗ್ಬಿ ಆಟಗಾರ ವಿರಾಜಪೇಟೆ
ಹಲವು ವರ್ಷಗಳಿಂದ ನಾನು ತಾಲೂಕು ಮೈದಾನದಲ್ಲಿ ಕ್ರೀಡೆ ಆಯೋಜನೆ ಮಾಡುತಿದ್ದೆ. ಆದರೆ 3-4 ವರ್ಷದಿಂದ ಕ್ರೀಡಾಂಗಣ ಬಹಳಷ್ಟು ಹದಗೆಟ್ಟ ಕಾರಣ ಕ್ರೀಡೆಯನ್ನು ಬೇರೆಡೆ ಆಯೋಜಿಸುತ್ತಿದ್ದೇವೆ. ಇದಕ್ಕೆ 2ರಿಂದ 3 ಲಕ್ಷ ರೂ. ವೆಚ್ಚವಾಗುತ್ತಿತ್ತು. ಆದದೀಗ ತಾಲೂಕು ಮೈದಾನ ಅಭಿವೃದ್ಧಿಯಾಗುತ್ತಿದ್ದು, ಇದರಿಂದ ಆಯೋಜಕರಿಗಾಗುವ ದುಂದು ವೆಚ್ಚ ತಪ್ಪಿದಂತಾಗಿದೆ. ಅಲ್ಲದೆ ಹೆಚ್ಚಿನ ಸಂಖ್ಯೆಯಲ್ಲಿ ಕ್ರೀಡಾಕೂಟ ಆಯೋಜಿಸಬಹುದು.
ಲಕ್ಷ್ಮೀಶ ಕ್ರೀಡಾಕೂಟ ಆಯೋಜಕರು, ವಿರಾಜಪೇಟೆ
ಕ್ರೀಡಾಭಿಮಾನಿಗಳಿಗೆ ತಾಲೂಕು ಮೈದಾನದಲ್ಲಿ ಕ್ರೀಡಾಕೂಟ ವೀಕ್ಷಿಸಲು ಬಹಳ ಸಮಸ್ಯೆ ಆಗುತ್ತಿತ್ತು. ಗ್ಯಾಲರಿಯ ಛಾವಣಿ ಸೋರುವುದು ಹಾಗೂ ಕುಸಿದು ಬೀಳುವ ಆತಂಕವಿತ್ತು. ಇದೀಗ ವೀಕ್ಷಕರ ಗ್ಯಾಲರಿ ಅಭಿವೃದ್ಧಿ ಪಡಿಸಿ ಮೇಲ್ಚಾವಣಿಗೆ ಶೀಟ್ ಅಳವಡಿಸಿರುವುದು ಉತ್ತಮ ಕಾರ್ಯ.
ರಘುಪತಿ ಕ್ರೀಡಾಭಿಮಾನಿ, ವಿರಾಜಪೇಟೆ