Wednesday, 12th December 2018  

Vijayavani

ಟ್ರಿನಿಟಿ ಸರ್ಕಲ್​​​ ಬಳಿ ಬಿರುಕು ಬಿಟ್ಟ ಪಿಲ್ಲರ್ - 10 ಕಿಮೀ ವೇಗದಲ್ಲಿ ಮೆಟ್ರೋ ಓಡಾಟ - ಸಮಸ್ಯೆ ಬಗೆಹರಿಸೋದಾಗಿ ಹೇಳಿದ ಸಿಎಂ        ಸದನದ ಹೊರಗೆ NPS ಆದೇಶ ಹಿನ್ನೆಲೆ - ಸಿಎಂ ವಿರುದ್ಧ ಹಕ್ಕುಚ್ಯುತಿ ಮಂಡನೆಗೆ ಬಿಜೆಪಿ ಸಿದ್ದತೆ -  ಸಂಕಷ್ಟ ತಂದ ಪೆನ್ಶನ್‌ ಸ್ಕೀಂ        ಮಧ್ಯಪ್ರದೇಶದಲ್ಲಿ ಸರ್ಕಾರ ರಚನೆ ಕಸರತ್ತು -  ರಾಜ್ಯಪಾಲರನ್ನು ಭೇಟಿಯಾಗಿ ಕಾಂಗ್ರೆಸ್ ಹಕ್ಕು ಮಂಡನೆ        ನಾಳೆ ಕೆಸಿಆರ್ ಪಟ್ಟಾಭಿಷೇಕ- ಪ್ರಮಾಣವಚನಕ್ಕೆ ಚಂದ್ರಶೇಖರ್ ರಾವ್ ಸಿದ್ಧತೆ - ರಾಜ್ಯಪಾಲರನ್ನು ಭೇಟಿಯಾದ ನಾಯಕ        ಶ್ರೀರಂಗಪಟ್ಟಣದಲ್ಲಿ ಶೂಟಿಂಗ್ ವೇಳೆ ಅವಾಂತರ - ಭರತ ಬಾಹುಬಲಿ ತಂಡದ ಮೇಲೆ ಹೆಜ್ಜೇನು ದಾಳಿ -ಏಳು ಮಂದಿ ಆಸ್ಪತ್ರೆಗೆ       
Breaking News

ಲೌಡ್ ಸ್ಪೀಕರ್​ನಲ್ಲಿ ಕಾವ್ಯಾ ಮಾತು

Friday, 10.08.2018, 11:11 AM       No Comments

ಕನ್ನಡದ ಜತೆಗೆ ತಮಿಳು ಚಿತ್ರರಂಗದಲ್ಲೂ ಏಕಕಾಲದಲ್ಲಿ ತೊಡಗಿಕೊಂಡಿದ್ದಾರೆ ನಟಿ ಕಾವ್ಯಾ ಶಾ. ‘ಮಿಸ್ಟರ್ ಆಂಡ್ ಮಿಸೆಸ್ ರಾಮಾಚಾರಿ’, ‘ಮುಕುಂದ ಮುರಾರಿ’ ನಂತರ ಅವರ ನಟನೆಯ ‘ಲೌಡ್ ಸ್ಪೀಕರ್’ ಚಿತ್ರ ಇಂದು (ಆ.10) ತೆರೆಗೆ ಬರುತ್ತಿದೆ. ಸಿನಿಮಾದ ಕಾನ್ಸೆಪ್ಟ್ ಬಗ್ಗೆ ಸಿಕ್ಕಾಪಟ್ಟೆ ನಿರೀಕ್ಷೆ ಇಟ್ಟುಕೊಂಡಿರುವ ಕಾವ್ಯಾ ಶಾ, ಲೌಡ್ ಸ್ಪೀಕರ್ ಬಗ್ಗೆ ನಮಸ್ತೆ ಬೆಂಗಳೂರು ಜತೆ ಒಂದಷ್ಟು ಮಾಹಿತಿ ಹಂಚಿ ಕೊಂಡಿದ್ದಾರೆ.

| ಅವಿನಾಶ್ ಜಿ. ರಾಮ್ ಬೆಂಗಳೂರು

ನಿಮ್ಮ ಹಿನ್ನೆಲೆ… ಚಿತ್ರರಂಗದ ಪ್ರವೇಶ ಆಗಿದ್ದು ಹೇಗೆ?

ನಾನು ಮೂಲತಃ ಡಾನ್ಸರ್. ಹರ್ಷ, ಇಮ್ರಾನ್ ಸರ್ದಾರಿಯಾ ಮುಂತಾದ ಡಾನ್ಸ್ ಮಾಸ್ಟರ್​ಗಳ ತಂಡಗಳಲ್ಲಿ ಕೆಲಸ ಮಾಡಿದ್ದೇನೆ. ‘ಕಿಕ್’, ‘ಸೈ’, ‘ಡಾನ್ಸ್ ಕರ್ನಾಟಕ ಡಾನ್ಸ್’ ಸೇರಿ ಸಾಕಷ್ಟು ರಿಯಾಲಿಟಿ ಶೋಗಳಲ್ಲಿ ಭಾಗವಹಿಸಿದ್ದೇನೆ. ಜತೆಗೆ ಕೆಲ ಧಾರಾವಾಹಿಗಳಲ್ಲೂ ಬಣ್ಣ ಹಚ್ಚಿದ್ದೆ. ಎಲ್ಲಕ್ಕಿಂತ ಮುಖ್ಯವಾಗಿ ಶಾರುಖ್ ಖಾನ್ ಅವರಿಂದ ‘ಇಂಡಿಯನ್ ಮಲ್ಟಿ ಟ್ಯಾಲೆಂಟೆಡ್ ಗರ್ಲ್’ ಪ್ರಶಸ್ತಿ ಪಡೆದುಕೊಂಡಿದ್ದು ನನ್ನ ವೃತ್ತಿ ಬದುಕಿಗೆ ದೊಡ್ಡ ತಿರುವು ನೀಡಿತು. ಅಲ್ಲಿಂದ ಸಿನಿಮಾಗಳಲ್ಲಿ ಅವಕಾಶ ಸಿಕ್ಕಿತು.

ಚಿತ್ರದ ನಿರ್ದೇಶಕರು ಮತ್ತು ತಂಡದ ಬಗ್ಗೆ ಹೇಳಿ…

ಶಿವತೇಜಸ್ ಅವರೊಂದಿಗೆ ಈ ಹಿಂದೆಯೇ ಒಂದು ಸಿನಿಮಾದಲ್ಲಿ ಕೆಲಸ ಮಾಡಬೇಕಿತ್ತು. ಆದರೆ, ಕಾಲ್​ಶೀಟ್ ಸಮಸ್ಯೆಯಿಂದ ಅದು ಸಾಧ್ಯವಾಗಿರಲಿಲ್ಲ. ಈ ಬಾರಿ ಕಥೆ ಇಷ್ಟವಾಗಿದ್ದರಿಂದ ಒಪ್ಪಿಕೊಂಡು ನಟಿಸುತ್ತಿದ್ದೇನೆ. ಎಲ್ಲರೂ ಖುಷಿಯಿಂದ ಕೆಲಸ ಮಾಡಿದ್ದೇವೆ. ಜ್ವರ ಬಂದಿದ್ದರೂ, ಅದನ್ನೆಲ್ಲ ಲೆಕ್ಕಿಸದೆ ನಟಿಸಿದ್ದೇನೆ. ಈ ಸಿನಿಮಾದಲ್ಲಿ ಇರುವ ಬಹುತೇಕ ಕಲಾವಿದರು ಹೊಸಬರು. ಎಲ್ಲರೂ ಅನ್ಯೋನ್ಯವಾಗಿ ಹೊಂದಿಕೊಂಡು ಚಿತ್ರಕ್ಕಾಗಿ ಶ್ರಮ ಹಾಕಿದ್ದೇವೆ.

ಸದ್ಯ ಯಾವ್ಯಾವ ಸಿನಿಮಾಗಳನ್ನು ಒಪ್ಪಿಕೊಂಡಿದ್ದೀರಿ?

ತಮಿಳಿನಲ್ಲಿ ಬಾಲಾ ನಿರ್ದೇಶನದಲ್ಲಿ ಮೂಡಿಬಂದ ‘ತಾರಾ ತಪ್ಪಟೈ’ ಹಾಗೂ ‘ವೀರ ಶಿವಾಜಿ’ ಚಿತ್ರದ ‘ಸ್ವಪ್ನ ಸುಂದರಿ..’ ಹಾಡಿನಲ್ಲಿ ಕಾಣಿಸಿಕೊಂಡೆ. ಅದು ದೊಡ್ಡ ಹಿಟ್ ಆಯಿತು. ಸದ್ಯ ನಟ ಜೈ ಜತೆ ‘ಜರುಗಂಡಿ’ ಹಾಗೂ ಕಾಜಲ್ ಅಗರ್​ವಾಲ್ ನಟನೆಯ, ರಮೇಶ್ ಅರವಿಂದ್ ನಿರ್ದೇಶನದ ‘ಪ್ಯಾರಿಸ್ ಪ್ಯಾರಿಸ್’ ಸಿನಿಮಾಗಳಲ್ಲಿ ಬಣ್ಣ ಹಚ್ಚಿದ್ದೇನೆ. ಕನ್ನಡದಲ್ಲಿ ಇನ್ನೂ ಹೆಸರಿಡದ ಹೊಸ ಚಿತ್ರವೊಂದನ್ನು ಒಪ್ಪಿಕೊಂಡಿದ್ದೇನೆ. ಅದರ ಶೂಟಿಂಗ್ ಕುದುರೆಮುಖದಲ್ಲಿ ನಡೆಯುತ್ತಿದೆ.

ನಿಮ್ಮ ಕರಿಯರ್​ಗೆ ಈ ಚಿತ್ರ ಎಷ್ಟು ವಿಶೇಷ?

‘ಮಿಸ್ಟರ್ ಆಂಡ್ ಮಿಸೆಸ್ ರಾಮಾಚಾರಿ’, ‘ಮುಕುಂದ ಮುರಾರಿ’ಯಲ್ಲಿ ಪೋಷಕ ಪಾತ್ರಗಳನ್ನು ಮಾಡಿದ್ದೆ. ಆದರೆ, ಈ ಸಿನಿಮಾದಲ್ಲಿ ಬಹುಮುಖ್ಯವಾದ ಪಾತ್ರ ಮಾಡಿದ್ದೇನೆ. ಕಥೆ ತುಂಬ ವಿಶೇಷವಾಗಿದೆ. ಒಂದು ಪ್ರಯೋಗಾತ್ಮಕ ಸಿನಿಮಾವನ್ನು ಕಮರ್ಷಿಯಲ್ ಮಾದರಿಯಲ್ಲಿ ಮಾಡಿದ್ದಾರೆ. ನಿರ್ದೇಶಕ ಶಿವತೇಜಸ್ ಅವರ ಪ್ರಯತ್ನ ಇಷ್ಟವಾಯಿತು. ಮೊಬೈಲ್ ಬಳಕೆ ಮಾಡುವವರೆಲ್ಲ ಈ ಚಿತ್ರ ನೋಡಲೇಬೇಕು. ಮೊಬೈಲ್​ಗೆ ಅಡಿಕ್ಟ್ ಆಗಿರುವವರಿಗೆ ಒಂದು ಸಂದೇಶ ನೀಡಿದ್ದೇವೆ. ಮೊಬೈಲ್​ನಿಂದ ನಮ್ಮ ಬದುಕಿನ ಶೈಲಿ ಯಾವ ರೀತಿ ಬದಲಾಗಿದೆ ಎಂಬುದನ್ನು ಈ ಸಿನಿಮಾದಲ್ಲಿ ಅದ್ಭುತವಾಗಿ ತೋರಿಸಿದ್ದೇವೆ.

‘ಲೌಡ್ ಸ್ಪೀಕರ್’ನಲ್ಲಿ ಯಾವ ರೀತಿಯ ಪಾತ್ರ ಮಾಡಿದ್ದೀರಿ?

ಇದು ಕನ್ನಡದಲ್ಲಿ ನನ್ನ 4ನೇ ಸಿನಿಮಾ. ಈವರೆಗೂ ಇಂಥದ್ದೊಂದು ಪಾತ್ರ ಮಾಡಿರಲಿಲ್ಲ. ನಾನಿದರಲ್ಲಿ ಗೃಹಿಣಿಯಾಗಿ ನಟಿಸಿದ್ದೇನೆ. ಈ ಚಿತ್ರದ ಕಾನ್ಸೆಪ್ಟ್ ತುಂಬ ವಿಶೇಷವಾಗಿದೆ. ಅದೇ ಕಾರಣಕ್ಕೆ ನಾನು ಈ ಸಿನಿಮಾವನ್ನು ಒಪ್ಪಿಕೊಂಡಿದ್ದು. ಇದರಲ್ಲಿ ನಟಿಸಿರುವವರೆಲ್ಲ ಬಹುತೇಕ ಹೊಸಬರೇ.

ಸಿನಿಮಾದಲ್ಲಿ ಒಂದು ಆಟ ಇದೆಯಂತೆ. ಏನದು?

ನಮ್ಮ ಮೊಬೈಲ್​ಗೆ ಬರುವ ಎಲ್ಲ ಕರೆಗಳನ್ನು ಸ್ವೀಕರಿಸಿ, ಲೌಡ್ ಸ್ಪೀಕರ್ ಆನ್ ಮಾಡಿ ಮಾತಾಡಬೇಕು. ಮೆಸೇಜ್​ಗಳನ್ನು ಎಲ್ಲರ ಮುಂದೆ ಓಪನ್ ಆಗಿ ಓದಬೇಕು. ಈ ಥರದ್ದೊಂದು ಸವಾಲನ್ನು ಸ್ವೀಕರಿಸಿದಾಗ ಯಾವ ರೀತಿ ಪರಿಸ್ಥಿತಿ ಎದುರಾಗುತ್ತದೆ ಎಂಬುದನ್ನು ಸಿನಿಮಾದಲ್ಲಿ ಹೇಳಿದ್ದೇವೆ. ಕನ್ನಡದ ಮಟ್ಟಿಗೆ ಇದು ಹೊಸ ಪರಿಕಲ್ಪನೆ.

ಸ್ಯಾಂಡಲ್​ವುಡ್​ನ ಕೆಲ ಗಣ್ಯರು ನಿಮ್ಮ ಸಿನಿಮಾಕ್ಕೆ ಶುಭ ಕೋರಿದ್ದಾರೆ..

ನಿಜಕ್ಕೂ ಇದು ತುಂಬ ಖುಷಿಯ ವಿಚಾರ. ಕನ್ನಡ ಚಿತ್ರರಂಗದಲ್ಲಿ ಹೊಸತನಕ್ಕೆ ಯಾವಾಗಲೂ ಬೆಂಬಲ ಸಿಕ್ಕಿದೆ. ಪುನೀತ್ ರಾಜ್​ಕುಮಾರ್, ಶಿವರಾಜ್​ಕುಮಾರ್, ಅಕುಲ್ ಬಾಲಾಜಿ, ‘ಜೋಗಿ’ ಪ್ರೇಮ್ ಮುಂತಾದವರು ಸಿನಿಮಾಕ್ಕೆ ಹಾರೈಸಿ ವಿಡಿಯೋ ಬೈಟ್ ನೀಡಿದ್ದಾರೆ. ಕಡಿಮೆ ಬಜೆಟ್​ನಲ್ಲಿ ಉತ್ತಮ ಕಥೆ ಇಟ್ಟುಕೊಂಡು ಸಿನಿಮಾ ಮಾಡಿರುವ ಬಗ್ಗೆ ಮೆಚ್ಚುಗೆ ಮಾತುಗಳನ್ನಾಡಿದ್ದಾರೆ.

Leave a Reply

Your email address will not be published. Required fields are marked *

Back To Top