ಹರಿಹರ: ನಗರಸಭೆಯ ನೂತನ ಅಧ್ಯಕ್ಷರಾಗಿ ಜೆಡಿಎಸ್‌ನ ಕವಿತಾ ಮಾರುತಿ ಬೇಡರ್, ಉಪಾಧ್ಯಕ್ಷರಾಗಿ ಜೆಡಿಎಸ್‌ನ ಜಂಬಣ್ಣ ಅವಿರೋಧ ಆಯ್ಕೆಯಾಗಿದ್ದಾರೆ.
ನಗರಸಭೆ ಅಧ್ಯಕ್ಷ ಸ್ಥಾನಕ್ಕೆ ಎಸ್‌ಟಿ ಮಹಿಳೆ ಮೀಸಲು ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಸಾಮಾನ್ಯ ಮೀಸಲು ಘೋಷಣೆಯಾಗಿತ್ತು. ಅದರಂತೆ ಸೋಮವಾರ ನಡೆದ ಚುನಾವಣೆ ಪ್ರಕ್ರಿಯೆಯಲ್ಲಿ ಅಧ್ಯಕ್ಷ ಸ್ಥಾನಕ್ಕೆ 31ನೇ ವಾರ್ಡ್‌ನ ಕವಿತಾ ಹಾಗೂ 1ನೇ ವಾರ್ಡ್‌ನ ಜಂಬಣ್ಣ ಉಪಾಧ್ಯಕ್ಷ ಸ್ಥಾನಕ್ಕೆ ನಾಮಪತ್ರ ಸಲ್ಲಿದ್ದರು.
ಬೇರೆ ಯಾರೂ ನಾಮಪತ್ರ ಸಲ್ಲಿಸದ ಕಾರಣ ಅಧ್ಯಕ್ಷ, ಉಪಾಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ ಎಂದು ಚುನಾವಣಾ ಅಧಿಕಾರಿ ಸಂತೋಷ ಕುಮಾರ್ ಘೋಷಿಸಿದರು. ಈ ಮೂಲಕ ಹರಿಹರ ನಗರಸಭಾ ಆಡಳಿತ ಜೆಡಿಎಸ್ ತೆಕ್ಕೆಗೆ ಸಿಕ್ಕಂತಾಗಿದೆ.
ನಗರಸಭೆ ಅಧಿಕಾರ ಹಿಡಿಯಲು 3 ಪಕ್ಷಗಳು ಅತಂತ್ರ ಸಂಖ್ಯಾಬಲ ಹೊಂದಿದ್ದರು ಕೂಡ ಜೆಡಿಎಸ್ ಅಧ್ಯಕ್ಷ, ಉಪಾಧ್ಯಕ್ಷರ ಸ್ಥಾನ ತನ್ನ ವಶಕ್ಕೆ ಪಡೆದುಕೊಳ್ಳುವ ಮೂಲಕ ಸ್ವತಂತ್ರವಾಗಿ ಆಡಳಿತ ನಡೆಸಲು ಅವಕಾಶ ದಕ್ಕಿಸಿಕೊಂಡಿದೆ. ನಗರಸಭಾ ಸದಸ್ಯರ ಸಂಖ್ಯಾಬಲ ಜೆಡಿಎಸ್ 15, ಕಾಂಗ್ರೆಸ್ 10, ಬಿಜೆಪಿ 4, ಪಕ್ಷೇತರ ಎರಡು ಸದಸ್ಯರಿದ್ದಾರೆ.
ಚುನಾವಣಾ ಪ್ರಕ್ರಿಯೆ ನಡೆದ ನಂತರ ಶಾಸಕ ಬಿ.ಪಿ. ಹರೀಶ್, ಬಿಜೆಪಿ ಮಾಜಿ ಜಿಲ್ಲಾಧ್ಯಕ್ಷ ಎಸ್.ಎಂ. ವೀರೇಶ್, ನಗರಸಭಾ ಸದಸ್ಯರಾದ ಎ. ವಾಮನಮೂರ್ತಿ, ಎನ್. ರಜನಿಕಾಂತ್, ಬಿ. ಅತಾವುಲ್ಲಾ, ಪಿ.ಎನ್. ವಿರೂಪಾಕ್ಷ, ಆಟೋ ಹನುಮಂತಪ್ಪ, ಆರ್. ದಿನೇಶ್ ಬಾಬು, ಶಂಕರ್ ಖಟಾವ್‌ಕರ್ ಎಸ್.ಎಂ. ವಸಂತ್, ದಾದಾ ಖಲಂದರ್, ಎಂ.ಆರ್. ಮುಜಾಮಿಲ್, ಪೌರಾಯುಕ್ತ ಸುಬ್ರಮಣ್ಯ ಶೆಟ್ಟಿ ಇತರರಿದ್ದು ಶುಭ ಹಾರೈಸಿದರು.