ಬೆಂಗಳೂರು:
ತಮಿಳುನಾಡಿಗೆ 56.73 ಟಿಎಂಸಿ ನೀರು ಹರಿಸಬೇಕಿದ್ದರೆ ಸಾಕಿತ್ತು. ಆದರೆ ಹೆಚ್ಚುವರಿಯಾಗಿ 97 ಟಿಎಂಸಿ ಅಂದರೆ, ಒಟ್ಟು 153.802 ಟಿಎಂಸಿ ನೀರು ಹರಿಸಲಾಗಿದೆ ಎಂದು ರಾಜ್ಯ ಸರ್ಕಾರ ಕಾವೇರಿ ಜಲ ನಿಯಂತ್ರಣ ಸಮಿತಿಗೆ (ಸಿಡಬ್ಲೂೃಆರ್‌ಸಿ)ತಿಳಿಸಿದೆ.
ಕಾವೇರಿ ಜಲ ನಿಯಂತ್ರಣ ಸಮಿತಿ ಅಧ್ಯಕ್ಷ ವಿನೋದ್ ಗುಪ್ತ ಅಧ್ಯಕ್ಷತೆಯಲ್ಲಿ ವಿಡಿಯೋ ಕಾನ್ಫರೆನ್ಸ್ ಮೂಲಕ ನಡೆದ 101ನೇ ಸಭೆಯಲ್ಲಿ 11.08.2024 ರಂತೆ ನಿಗದಿಪಡಿಸಿದ ನೀರಿನ ಹರಿವಿಗಿಂತ ಹೆಚ್ಚುವರಿಯಾಗಿ ಹರಿಸಲಾಗಿದೆ. ಇದು ಬಿಳಿಗುಂಡ್ಲುವಿನ ಮಾಪನದಲ್ಲಿ ದಾಖಲುಗೊಂಡಿದೆ ಎಂದು ತಿಳಿಸಲಾಗಿದೆ.
ಬಿಳಿಗುಂಡ್ಲುವಿನಲ್ಲಿ ಹರಿದ ಹೆಚ್ಚುವರಿ ನೀರಿನ ಪ್ರಮಾಣವನ್ನು ಮುಂಬರುವ ತಿಂಗಳುಗಳಲ್ಲಿ ಕರ್ನಾಟಕ ರಾಜ್ಯವು ಹರಿಸಬೇಕಾದ ನೀರಿನ ಮೊತ್ತಕ್ಕೆ ಜಮೆ ಮಾಡಿಕೊಳ್ಳತಕ್ಕದ್ದು. ಮುಂದಿನ ಮಾನ್ಸೂನ್ ತಿಂಗಳುಗಳಲ್ಲಿಯೂ ಸಹ ಒಳ್ಳೆಯ ಮಳೆಯ ನಿರೀಕ್ಷೆ ಇದ್ದು, ಎರಡೂ ರಾಜ್ಯದ ರೈತರು ಸಹ ಲಾಭ ಪಡೆದುಕೊಳ್ಳಬಹುದೆಂದು ಆಶಿಸುತ್ತೇವೆ ಎಂದು ರಾಜ್ಯ ತಿಳಿಸಿದೆ.
ತಮಿಳುನಾಡು ವಾದ:
ಬಿಳಿಗುಂಡ್ಲುವಿನಲ್ಲಿ ಹರಿದ ನೀರಿನ ಪ್ರಮಾಣವು ಕರ್ನಾಟಕದ ಜಲಾಶಯಗಳಲ್ಲಿನ ಹೆಚ್ಚುವರಿ ನೀರಿನ ಪ್ರಮಾಣವಾಗಿರುತ್ತದೆ. ಈ ಬಾರಿಯೂ ಸಹ ಕರ್ನಾಟಕ ರಾಜ್ಯವು ತನ್ನ ಜಲಾಶಯಗಳು ತುಂಬಿದ ನಂತರವಷ್ಟೇ ನೀರನ್ನು ಹರಿಸಿರುತ್ತದೆ ಎಂದು ತಮಿಳುನಾಡು ವಾದಿಸಿತು.
3.04.1992 ರ ಕಾವೇರಿ ನ್ಯಾಯಾಧಿಕರಣದ ಆದೇಶದಂತೆ ಒಂದು ವಾರದಲ್ಲಿ ಹರಿಸಬೇಕಾದ ನೀರಿನ ಪ್ರಮಾಣದಲ್ಲಿ ಕೊರತೆ ಉಂಟಾದಲ್ಲಿ, ಅದನ್ನು ಮುಂಬರುವ ವಾರಗಳಲ್ಲಿ ಹರಿಸತಕ್ಕದ್ದು. ಆದ್ದರಿಂದ, ಕರ್ನಾಟಕ ರಾಜ್ಯವು ತನ್ನ ಜಲಾಶಯಗಳು ಭರ್ತಿ ಆಗುವವರೆಗೆ ನಿರೀಕ್ಷಿಸಿ ಹೆಚ್ಚುವರಿ ನೀರನ್ನು ಹರಿಸಲು ಕಾಯುವ ಹಾಗಿಲ್ಲ ಎಂದಿತು.
ಕಾವೇರಿ ಜಲ ನಿಯಂತ್ರಣ ಸಮಿತಿಯಲಲ್ಲಿ (ಇಗ್ಕಇ) ಕರ್ನಾಟಕ ರಾಜ್ಯಕ್ಕೆ ಸಂಬಂಧಿಸಿದಂತೆ ಅಂತಿಮವಾಗಿ ಯಾವುದೇ ರೀತಿಯ ನಿರ್ಣಯಗಳು/ಆದೇಶಗಳು ಆಗದೆ ಸಭೆಯು ಮುಕ್ತಾಯಗೊಂಡಿತು.