ಸಂಸತ್ತಿನಲ್ಲಿ ಮೇಕೆದಾಟು ಹೋರಾಟ

ನವದೆಹಲಿ: ಮೇಕೆದಾಟು ಯೋಜನೆ ವಿರೋಧಿಸಿ ತಮಿಳುನಾಡು ಸಂಸದರು ಸಂಸತ್ತಿನಲ್ಲಿ ಕೋಲಾಹಲ ಎಬ್ಬಿಸುತ್ತಿರುವ ಹಿನ್ನೆಲೆಯಲ್ಲಿ ಡಿ.27ರಂದು ಸಂಸತ್ತಿನ ಗಾಂಧಿ ಪ್ರತಿಮೆ ಎದುರು ಮೇಕೆದಾಟು ಯೋಜನೆ ಪರ ಘೊಷಣಾ ಪತ್ರ ಹಿಡಿದು ಹೋರಾಟ ನಡೆಸಲು ರಾಜ್ಯದ ಸಂಸದರು ತೀರ್ವನಿಸಿದ್ದಾರೆ.

ಮಹದಾಯಿ ನದಿ ವ್ಯಾಜ್ಯದ ಬಗ್ಗೆ ನ್ಯಾಯಾಧಿಕರಣ ನೀಡಿರುವ ಐತೀರ್ಪಿನ ಅಧಿಸೂಚನೆ ಹೊರಡಿಸುವ ಬಗ್ಗೆ ಕೇಂದ್ರ ಜಲ ಸಂಪನ್ಮೂಲ ಸಚಿವ ನಿತಿನ್ ಗಡ್ಕರಿ ಅವರನ್ನು ರಾಜ್ಯದ ಉನ್ನತ ಮಟ್ಟದ ನಿಯೋಗದ ಮೂಲಕ ಭೇಟಿ ಮಾಡಿ ಮನವಿ ಸಲ್ಲಿಸುವ ಬಗ್ಗೆಯೂ ಸಭೆಯಲ್ಲಿ ರ್ಚಚಿಸಲಾಗಿದೆ. ಮನವಿ ಸಲ್ಲಿಕೆಗೆ ದಿನಾಂಕ ಇನ್ನೂ ನಿಗದಿಯಾಗಿಲ್ಲ.

ಕೇಂದ್ರ ರಾಸಾಯನಿಕ ರಸಗೊಬ್ಬರ ಸಚಿವ ಡಿ.ವಿ. ಸದಾನಂದ ಗೌಡರ ನಿವಾಸದಲ್ಲಿ ಗುರುವಾರ ಬೆಳಗ್ಗೆ ಕರೆಯಲಾಗಿದ್ದ ಸರ್ವಪಕ್ಷಗಳ ಸಂಸದರ ಸಭೆಯಲ್ಲಿ ಈ ಎರಡು ಪ್ರಮುಖ ನಿರ್ಧಾರ ತೆಗೆದುಕೊಳ್ಳಲಾಗಿದೆ. ರಾಜ್ಯ ಜಲಸಂಪನ್ಮೂಲ ಸಚಿವ ಡಿ.ಕೆ. ಶಿವಕುಮಾರ್ ಕೂಡ ಸಭೆಯಲ್ಲಿದ್ದರು. ಮೇಕೆದಾಟು ಜಲಾಶಯ ನಿರ್ವಣಕ್ಕೆ ರಾಜ್ಯದ ಬದ್ಧತೆ ಪ್ರದರ್ಶಿಸಲು ಸಂಸದರಲ್ಲಿ ಕೋರಿದರು. ವಿವಾದದ ಈಗಿನ ಸ್ಥಿತಿಗತಿ ಬಗ್ಗೆ ಮಾಹಿತಿ ನೀಡಿದರು.

ತಮಿಳುನಾಡು ಸಂಸದರ ಘೊಷಣೆಗೆ ಪ್ರತಿಭಟನಾತ್ಮಕವಾಗಿ ನಾವೂ ಯೋಜನೆಪರ ಘೊಷಣೆ ಕೂಗಲಿದ್ದೇವೆ. ಇದಕ್ಕೆ ಬಿಜೆಪಿ ಸಂಸದರೂ ಬೆಂಬಲ ಸೂಚಿಸಬೇಕು ಎಂದು ಕಾಂಗ್ರೆಸ್ ಸಂಸದರು ಹೇಳಿದರು. ಇದಕ್ಕೆ ಪ್ರತಿಕ್ರಿಯಿಸಿದ ಬಿಜೆಪಿ ಸಂಸದರು, ನಿಮ್ಮದೇ ಪಕ್ಷದ ಸಂಸದರು ರಫೇಲ್ ಹಗರಣದ ಕುರಿತ ಘೊಷಣಾ ಪತ್ರಗಳನ್ನು ಹಿಡಿದು ಸದನದ ಬಾವಿಗಿಳಿದು ಪ್ರತಿಭಟಿಸುತ್ತಿರುತ್ತೀರಿ. ನಾವು ಅಲ್ಲಿಗೆ ಬಂದಾಗ ಅದೇ ಘೊಷಣಾ ಪತ್ರಗಳನ್ನು ನಮ್ಮ ಮುಂದಿಡುತ್ತೀರಿ. ಈ ಮುಜುಗರ ತಪ್ಪಿಸಲು ನಾವು ನಿಗದಿಪಡಿಸಿದ ಸ್ಥಳದಲ್ಲಿ ಮೇಕೆದಾಟು ಪರ ಘೊಷಣೆ ಕೂಗುತ್ತೇವೆ ಎಂದರು. ಹೀಗಾಗಿ, ಮಹಾತ್ಮ ಗಾಂಧಿ ಪ್ರತಿಮೆ ಎದುರು ತಮಿಳುನಾಡು ಧೋರಣೆ ವಿರುದ್ಧ ಪ್ರತಿಭಟನೆ ನಡೆಸಲು ಸಭೆ ಸಮ್ಮತಿಸಿತು. ವೀರಪ್ಪ ಮೊಯಿಲಿ, ಆಸ್ಕರ್ ಫರ್ನಾಂಡಿಸ್, ಬಿ.ವಿ. ನಾಯಕ್ ಮತ್ತು ಪ್ರಕಾಶ್ ಹುಕ್ಕೇರಿ ಹೊರತುಪಡಿಸಿ ಉಳಿದೆಲ್ಲ ಸಂಸದರು ಸಭೆಯಲ್ಲಿದ್ದರು.

ಮೇಕೆದಾಟು ಜಲಾಶಯದ ನೀರನ್ನು ನೀರಾವರಿಗೆ ಬಳಸಿಕೊಳ್ಳುವ ಉದ್ದೇಶ ನಮಗಿಲ್ಲ. ಇದನ್ನು ಕುಡಿಯುವ ಉದ್ದೇಶಕ್ಕಾಗಷ್ಟೇ ನಿರ್ವಿುಸಲಾಗುತ್ತಿದೆ. ಜಲ ಬಿಕ್ಕಟ್ಟು ಎದುರಾದ ಸಂದರ್ಭ ಮೇಕೆದಾಟುವಿನಲ್ಲಿ ಸಂಗ್ರಹಗೊಂಡ ನೀರನ್ನು ತಮಿಳುನಾಡಿಗೆ ಕೂಡ ಹರಿಸಬಹುದು. ಯೋಜನೆಯಿಂದ ನಮಗೆಷ್ಟು ಅನುಕೂಲವಿದೆಯೋ ಅಷ್ಟೇ ಲಾಭ ಅವರಿಗೂ ಇದೆ.

| ಡಿ.ವಿ. ಸದಾನಂದ ಗೌಡ ಕೇಂದ್ರ ಸಚಿವ

ಲೋಕಸಭೆಯಲ್ಲಿ ಗದ್ದಲ

ನವದೆಹಲಿ: ಶೂನ್ಯ ಅವಧಿಯಲ್ಲಿ ಸ್ಪೀಕರ್ ಮಹಾಜನ್ ಅನುಮತಿ ಪಡೆದು ಎಐಎಡಿಎಂಕೆ ಸಂಸದ ವೇಣುಗೋಪಾಲ್ ಕಾವೇರಿ ನದಿಗೆ ಅಡ್ಡವಾಗಿ ಮೇಕೆದಾಟುವಿನಲ್ಲಿ ಕರ್ನಾಟಕ ಸರ್ಕಾರ ಅಣೆಕಟ್ಟು ನಿರ್ವಿುಸುವ ಕುರಿತು ಪ್ರಸ್ತಾಪಿಸಿದರು. ಈ ಯೋಜನೆಯಿಂದ

ಲಕ್ಷಾಂತರ ತಮಿಳುನಾಡು ರೈತರಿಗೆ ತೊಂದರೆಯಾಗಲಿದೆ. ಆದ್ದರಿಂದ ಯೋಜನೆಗೆ ಅನುಮತಿ ನೀಡಬಾರದು ಎಂದು ಆಗ್ರಹಿಸಿದರು. ಇದಕ್ಕೆ ಉತ್ತರಿಸಿದ ಸಂಸದ ಪ್ರಹ್ಲಾದ್ ಜೋಶಿ, ಕುಡಿಯುವ ನೀರಿನ ಯೋಜನೆ ಇದಾಗಿರುವುದರಿಂದ ಕರ್ನಾಟಕದ ಪಾಲಿಗೆ ಭಾರಿ ಮಹತ್ವದ್ದಾಗಿದೆ. ಯಾವುದೇ ಕಾರಣಕ್ಕೂ ಇದಕ್ಕೆ ತಡೆ ನೀಡುವುದು ಬೇಡ ಎಂದರು. ತಮಿಳುನಾಡು ಸಂಸದರ ಗದ್ದಲ ಜೋರಾದ ಹಿನ್ನೆಲೆಯಲ್ಲಿ ಸ್ಪೀಕರ್ ಹಲವು ಬಾರಿ ಕಲಾಪ ಮುಂದೂಡಿದರು.