ಕಾಪು ತಾಲೂಕಿಗೆ ತಾಲೂಕೇ ಹೋಬಳಿ!

>>

ಅಶ್ವಿನ್ ಲಾರೆನ್ಸ್ ಮೂಡುಬೆಳ್ಳೆ ಶಿರ್ವ
ಕಾಪು ತಾಲೂಕಾಗಿ ವರ್ಷ ಕಳೆದಿದ್ದರೂ, ಕಂದಾಯ ಇಲಾಖೆಗೆ ಮಾತ್ರ ಸೀಮಿತಗೊಂಡಿದೆ. ಇನ್ನೂ ಪೂರ್ಣ ಪ್ರಮಾಣದಲ್ಲಿ ಸಜ್ಜುಗೊಳ್ಳದ ಕಾಪು ತಾಲೂಕಿನ ಎಲ್ಲ 30 ಗ್ರಾಮಗಳೂ ಹಿಂದಿನಂತೆಯೇ ಕಾಪು ಹೋಬಳಿಯಲ್ಲೇ ಇವೆ. ಇಡೀ ತಾಲೂಕಿನಲ್ಲಿ ಒಂದೇ ಹೋಬಳಿ ಇದ್ದು, ಶಿರ್ವ ಹೋಬಳಿ ಕೇಂದ್ರವಾಗುವ ಕನಸು ನನಸಾಗದೆ ಉಳಿದಿದೆ.

ನೂತನ ಕಾಪು ತಾಲೂಕು ರಚನೆ ಪ್ರಕ್ರಿಯೆಗಳು ನಡೆಯುತ್ತಿದ್ದಾಗ ಶಿರ್ವಕ್ಕೆ ಹೋಬಳಿ ಕೇಂದ್ರ ಸ್ಥಾನ ದೊರೆಯುವ ನಿರೀಕ್ಷೆಯಿತ್ತು. ಒಂದೊಮ್ಮೆ ಶಿರ್ವಕ್ಕೆ ಹೋಬಳಿ ಕೇಂದ್ರ ದೊರೆತಲ್ಲಿ ಶಿರ್ವ, ಬೆಳ್ಳೆ, ಕಟ್ಟಿಂಗೇರಿ, ಕುರ್ಕಾಲು, ಕಳತ್ತೂರು, ಸಾಂತೂರು, ಪಿಲಾರು, ಕುತ್ಯಾರು ಮತ್ತಿತರ ಗ್ರಾಮೀಣ ಪ್ರದೇಶಗಳ ಜನರಿಗೆ ನಾಡಕಚೇರಿ ಸೇವೆ, ಕಂದಾಯ ಪರಿವೀಕ್ಷಕರ ಸೇವೆ, ಹೋಬಳಿ ಕೇಂದ್ರದ ಕೃಷಿ ಸಹಿತ ಹಲವು ಸೇವೆ ದೊರೆಯುತ್ತಿತ್ತು. ಆದರೆ ಜನರ ಈ ಆಶಯಕ್ಕೆ ಆಡಳಿತ ಈವರೆಗೂ ಸ್ಪಂದಿಸಿಲ್ಲ.
ಕಂದಾಯ ಇಲಾಖೆಗೆ ಸೀಮಿತ:

ಕಾಪು ನೂತನ ತಾಲೂಕಾಗಿದ್ದರೂ ಕಂದಾಯ ಇಲಾಖೆ ಸೇವೆಗಳಿಗೆ ಮಾತ್ರ ಸೀಮಿತವಾಗಿದೆ. ಪೂರ್ಣ ಪ್ರಮಾಣದ ಸೇವೆಗಳು ಇಲ್ಲಿ ಲಭ್ಯವಾಗುತ್ತಿಲ್ಲ. ತಹಸೀಲ್ದಾರ್ ಕಚೇರಿ, ಸರ್ವೇ ಇಲಾಖೆ ಕಚೇರಿ ಮಾತ್ರ ಇಲ್ಲಿ ಕಾರ‌್ಯ ನಿರ್ವಹಿಸುತ್ತಿವೆ.

ಏನೆಲ್ಲ ಬೇಕು?: ಉಪ ನೋಂದಣಿ ಕಚೇರಿ, ಖಜಾನೆ, ತಾಲೂಕು ಅಗ್ನಿಶಾಮಕ ಕೇಂದ್ರ, ತಾಪಂ, ಶಿಕ್ಷಣ ಸಹಿತ ಜಿಪಂ ಅಧೀನದ 30ಕ್ಕೂ ಹೆಚ್ಚು ಕಚೇರಿಗಳು, ರೆಕಾರ್ಡ್ ರೂಂ, ಮೇಲ್ದರ್ಜೆಗೇರಿದ ತಾಲೂಕು ಆಸ್ಪತ್ರೆ, ಸಾಂತ್ವನ ಕೇಂದ್ರ, ಮೇಲ್ದರ್ಜೆಗೇರಿದ ತಾಲೂಕು ಕೃಷಿ ಕೇಂದ್ರ ನೂತನ ಕಾಪು ತಾಲೂಕಿಗೆ ಬರಲು ಬಾಕಿ ಇದೆ.

ಹೋಬಳಿ ಕೇಂದ್ರವಾಗುವ ಎಲ್ಲ ಅರ್ಹತೆ: ಶಿರ್ವ ಹಿಂದಿನಿಂದ ಗ್ರಾಮೀಣ ಶಿಕ್ಷಣ ಕಾಶಿ ಎಂದು ಹೆಸರಾಗಿದ್ದು, ಶತಮಾನ ಕಂಡ ಶಿಕ್ಷಣ ಸಂಸ್ಥೆಗಳ ತವರಾಗಿದೆ. ಇಲ್ಲಿ ಸರ್ಕಾರಿ ಸಮುದಾಯ ಆರೋಗ್ಯ ಕೇಂದ್ರ, ಪಶು ಚಿಕಿತ್ಸಾಲಯ, ಖಜಾನೆ ಬ್ಯಾಂಕ್ ಸಹಿತ ರಾಷ್ಟ್ರೀಕೃತ ಬ್ಯಾಂಕ್‌ಗಳಿವೆ. ಎಲ್ಲ ಪ್ರದೇಶಗಳಿಂದಲೂ ಇಲ್ಲಿಗೆ ನೇರ ರಸ್ತೆ ಸಂಪರ್ಕವಿದ್ದು, ಕಟಪಾಡಿಗೆ ರಾಜ್ಯ ಹೆದ್ದಾರಿ ಸಂಪರ್ಕ ಇದೆ. ಮೂಲಸೌಕರ್ಯ ದೃಷ್ಟಿಯಲ್ಲೂ ಶಿರ್ವ ಹೋಬಳಿ ಕೇಂದ್ರಕ್ಕೆ ಪೂರಕವಾಗಿವೆ. ಮುಂದೆ ಹೆಚ್ಚಿನ ಸಾರಿಗೆ ಸೌಲಭ್ಯಕ್ಕೆ ನರ್ಮ್ ಬಸ್ ಬಂದಲ್ಲಿ ಇನ್ನಷ್ಟು ಅನುಕೂಲವಾಗಲಿದೆ.

ನಡೆದಾಡಿಯೇ ಸುಸ್ತು: ಕಾಪು ತಹಸೀಲ್ದಾರ್ ಕಚೇರಿ ಹೆದ್ದಾರಿ ಪಕ್ಕದಲ್ಲಿದ್ದರೆ, ಕಾಪುವಿನ ಏಕೈಕ ಹೋಬಳಿ ಕಂದಾಯ ಪರಿವೀಕ್ಷಣಾಧಿಕಾರಿ ಕಚೇರಿ ಹೊಸ ಪುರಸಭೆ ಕಟ್ಟಡದಲ್ಲಿದೆ. ಇದರಿಂದ ಜನರು ಕಚೇರಿಗಳಿಗೆ ನಡೆದಾಡಿ ಸುಸ್ತಾಗುತ್ತಿದ್ದಾರೆ. ತಹಸೀಲ್ದಾರ್ ಕಚೇರಿ ಸಂಕೀರ್ಣದಲ್ಲೇ ಕಂದಾಯ ಪರಿವೀಕ್ಷರ ಕಚೇರಿ ಇದ್ದರೆ ಜನರು ಅಲೆದಾಡುವುದು ತಪ್ಪಲಿದೆ. ಎರಡೂ ಕಚೇರಿಗಳು ಮೊದಲ ಮಹಡಿಯಲ್ಲಿದ್ದು, ವಯಸ್ಸಾದವರಿಗೆ ಮೆಟ್ಟಿಲು ಹತ್ತಿ ಬರುವುದು ಕಷ್ಟವಾಗಿದೆ.

ಈಡೇರದ ನರ್ಮ್ ಬಸ್ ಬೇಡಿಕೆ: ಮೂಡುಬೆಳ್ಳೆಯಿಂದ ಶಿರ್ವಕ್ಕೆ, ಶಿರ್ವದಿಂದ ಕಾಪು ತಾಲೂಕು ಕೇಂದ್ರಕ್ಕೆ ನರ್ಮ್ ಬಸ್ ಸಂಪರ್ಕ ಒದಗಿಸಲಾಗುತ್ತದೆ ಎಂಬ ಭರವಸೆಯ ಮಾತುಗಳು ನೂತನ ತಾಲೂಕು ರಚನೆ ಸಂದರ್ಭ ಕೇಳಿ ಬರುತ್ತಿತ್ತು. ಆದರೆ ಈವರೆಗೂ ಶಿರ್ವ ಹೋಬಳಿ ಕೇಂದ್ರವೂ ಆಗಿಲ್ಲ, ನರ್ಮ್ ಸೇವೆಯೂ ಆರಂಭವಾಗಿಲ್ಲ. ಹೋಬಳಿಯಾಗದಿದ್ದರೂ ನರ್ಮ್ ಬಸ್‌ಗಳು ಬಂದಿದ್ದರೆ ಈ ಭಾಗದ ವಿದ್ಯಾರ್ಥಿಗಳಿಗಾದರೂ ಅನುಕೂಲವಾಗುತ್ತಿತ್ತು.

ಕಾಪು ತಾಲೂಕು ರಚನೆಯ ನೈಜ ಆಶಯ ಈಡೇರಬೇಕಿದ್ದರೆ ಶಿರ್ವದಲ್ಲಿ ಹೋಬಳಿ ಕೇಂದ್ರ ಆಗಲೇಬೇಕು. ಇದರಿಂದ 5-6 ಗ್ರಾಮಗಳಿಗೆ ಅನುಕೂಲ ಇದೆ. ಶಿರ್ವದಲ್ಲಿ ಪ್ರವಾಸಿ ಮಂದಿರ ಮೈದಾನದಲ್ಲಿ ಈಗಾಗಲೇ ಈ ಬಗ್ಗೆ ಸ್ಥಳ ಒದಗಿಸಲು ನಿರ್ಣಯಿಸಲಾಗಿದೆ. ಮುಂದೆ ಶಿರ್ವ ಗ್ರಾಪಂ ಕಚೇರಿ, ವಿಎ ಕಚೇರಿ ಅಲ್ಲಿಯೇ ನಿರ್ಮಿಸುವ ಪ್ರಸ್ತಾವ ಇದೆ. ಮೈದಾನ ಅಭಿವೃದ್ಧಿಗೆ ಈಗಾಗಲೇ 5 ಲಕ್ಷ ರೂ. ಮೀಸಲು ಇರಿಸಲಾಗಿದ್ದು, ಹೋಬಳಿ ಕಚೇರಿಗೆ ಸ್ಥಳಾವಕಾಶ ಇರಿಸಿ ಮೈದಾನ ಅಭಿವೃದ್ಧಿಗೆ ಯೋಜನೆ ರೂಪಿಸಲಾಗಿದೆ. ಶಾಸಕರು, ಸರ್ಕಾರ ಈ ಬಗ್ಗೆ ಶೀಘ್ರ ಗಮನ ಹರಿಸಬೇಕು.
-ವಿಲ್ಸನ್ ರಾಡ್ರಿಗಸ್, ಜಿಲ್ಲಾ ಪಂಚಾಯಿತಿ ಸದಸ್ಯರು

Leave a Reply

Your email address will not be published. Required fields are marked *