ಕಟೀಲು ಮೇಳ ವೇಷ ಕ್ರಮ ಬದಲು

«ಹಿಮ್ಮೇಳದವರಿಗೆ ಮುಂಡಾಸು ಕಡ್ಡಾಯ * ಕಲಾವಿದರು ಇಂದು ನಿರ್ಧಾರ»

– ವಿಜಯವಾಣಿ ಸುದ್ದಿಜಾಲ ಕಟೀಲು
ಕಟೀಲು ಶ್ರೀ ದುರ್ಗಾಪರಮೇಶ್ವರಿ ದಶಾವತಾರ ಯಕ್ಷಗಾನ ಮಂಡಳಿಯ ಆರು ಮೇಳಗಳ ತಿರುಗಾಟ ಡಿ.2ರಂದು ದೇವಳದ ರಥಬೀದಿಯಲ್ಲಿ ಸೇವೆಯಾಟದೊಂದಿಗೆ ಆರಂಭವಾಗಲಿದೆ.
ಸಂಜೆ 5.15ಕ್ಕೆ ತಾಳಮದ್ದಳೆ, 6.30ಕ್ಕೆ ಕಲಾವಿದರಿಗೆ ಗೆಜ್ಜೆ ಹಸ್ತಾಂತರ ನಡೆಯಲಿದೆ. ಈ ಬಾರಿ ಪರಂಪರೆಯಂತೆ ಪ್ರತಿದಿನ ಕೇಳಿ ಬಡಿಯುವುದು (ಅಬ್ಬರ ತಾಳ) ಕಡ್ಡಾಯಗೊಳಿಸಲಾಗಿದೆ. ಬೆಳಗ್ಗೆ ರಂಗನಾಯಕ, ರಾಮಕೃಷ್ಣರ ಪದ್ಯಗಳನ್ನು ಹಾಡಬೇಕು, ಹಿಮ್ಮೇಳದವರು ಸಂಪ್ರದಾಯಬದ್ಧವಾಗಿ ಮುಂಡಾಸು ಹಾಕುವುದು ಕಡ್ಡಾಯಗೊಳಿಸಲಾಗಿದೆ.
ದೇವಿ ಮಹಾತ್ಮೆ ಪ್ರಸಂಗಗಳಲ್ಲಿ ಮಾಲಿನಿ, ಅರುಣಾಸುರ, ರಕ್ಕಸ ಪುರೋಹಿತ, ವಿಷ್ಣು ವೇಷಗಳ ಕ್ರಮಗಳಲ್ಲಿ ಸುಧಾರಣೆಗೊಳಿಸಲಾಗಿದೆ. ಪೂರ್ವರಂಗಗಳ ಪದ್ಯಗಳನ್ನು ಸಂಪ್ರದಾಯಬದ್ಧವಾಗಿ ಹಾಡುವುದನ್ನು ಕಡ್ಡಾಯಗೊಳಿಸಲಾಗಿದೆ. ಸೇವೆಯಾಟದ ಕೊನೆಯಲ್ಲಿ ವೀಳ್ಯವನ್ನು ಪ್ರಧಾನ ಭಾಗವತರೇ ಪಡೆಯಲಿದ್ದಾರೆ.

ಆಂತರಿಕ ವರ್ಗಾವಣೆ: ಕಳೆದ ಬಾರಿಗಿಂತ ಹೆಚ್ಚಿನ ಮಟ್ಟದಲ್ಲಿ ಮುಮ್ಮೇಳ ಕಲಾವಿದರ ಆಂತರಿಕ ವರ್ಗಾವಣೆ ನಡೆದಿದ್ದು, ಕಳೆದ ವರ್ಷ ಮೇಳದಿಂದ ಹೊರಗುಳಿದಿದ್ದ ನಗ್ರಿ ಮಹಾಬಲ ರೈ ಈ ಬಾರಿ ಮೇಳದಲ್ಲಿರಲಿದ್ದಾರೆ. ಹಿಮ್ಮೇಳದ ಕಲಾವಿದರ ವರ್ಗಾವಣೆ ನಿರ್ಧಾರ ಭಾನುವಾರ (ಇಂದು) ರಾತ್ರಿ ನಡೆಯಲಿದೆ.
ಮೇಳ ಹೊರಡುವ ದಿನ ಆರು ರಂಗಸ್ಥಳಗಳಲ್ಲಿ ನಡೆಯುವ ಯಕ್ಷಗಾನ ಹೊರತುಪಡಿಸಿ, ಬೇರೆ ದಿನಗಳಲ್ಲಿ ಪೂರ್ವಾಭಿಮುಖದ ಬದಲು ಪಶ್ಚಿಮಾಭಿಮುಖವಾಗಿ ಇರಲಿದೆ. ಈ ಬಗ್ಗೆ ಕಳೆದ ವರ್ಷ ದೇವಳದಲ್ಲಿ ನಡೆದ ಅಷ್ಟಮಂಗಳ ಪ್ರಶ್ನೆಯಲ್ಲಿ ದೇವದ ಒಪ್ಪಿಗೆ ಸಿಕ್ಕಿದೆ.
ರಂಗಸ್ಥಳ ಪ್ಲಾಟ್‌ಫಾರ್ಮ್ ಈ ಬಾರಿ ಇನ್ನೂ ಒಂದುವರೆ ಅಡಿ, ಮೇಳದ ದೇವರ ಪೀಠ ಸ್ವಲ್ಪ ಏರಿಕೆಯಾಗಿದೆ. ಪ್ರತಿ ಬಾರಿಯಂತೆ ಮೇಳಗಳ ಗುಣಮಟ್ಟ ಕಾಯ್ದುಕೊಳ್ಳುವ ದೃಷ್ಟಿಯಿಂದ ಕಲಾವಿದರ ಬದಲಾವಣೆ ನಡೆಯಲಿದೆ. 4 ಕಲಾವಿದರು ನಿವೃತ್ತಿ ಹೊಂದುತ್ತಿವುದರಿಂದ, ಕೆಲವು ಹೊಸ ಕಲಾವಿದರ ಸೇರ್ಪಡೆ ನಡೆಯಲಿದೆ.

ಸೇವಾಕರ್ತರಿಗೆ 61 ಸಾವಿರ ರೂ. ವೀಳ್ಯ
ಈ ಬಾರಿ ಸೇವೆಯಾಟದ ವೀಳ್ಯವನ್ನು ದೇವರ ಕಾಣಿಕೆ, ರಂಗಸ್ಥಳ, ವಿದ್ಯುತ್, ಬಸ್, ಕ್ಷೇಮನಿಧಿ ಎಲ್ಲ ಸೇರಿ ಕಾಯಂ ಆಟದವರಿಗೆ ವೀಳ್ಯ 55 ಸಾವಿರ ರೂ., ಬಾಕಿ ಸೇವಾಕರ್ತರಿಗೆ 61 ಸಾವಿರ ರೂ., ದೇವಿ ಮಹಾತ್ಮೆ ಆಟಕ್ಕೆ ಹೆಚ್ಚುವರಿಯಾಗಿ 1500 ರೂ. ಆಗಲಿದೆ.

(ಸಾಂದರ್ಭಿಕ ಚಿತ್ರ)