ಕಟೀಲು ದೇವಳ ಜೀರ್ಣೋದ್ಧಾರ

ವಿಜಯವಾಣಿ ಸುದ್ದಿಜಾಲ ಕಿನ್ನಿಗೋಳಿ
ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಜನವರಿ 23ರಿಂದ 28ರ ತನಕ ಅಷ್ಟಬಂಧ, ನೂತನ ಧ್ವಜಸ್ತಂಭ ಪ್ರತಿಷ್ಠಾಪನೆ ನಡೆಯಲಿದ್ದು, ಈ ಹಿನ್ನೆಲೆಯಲ್ಲಿ ಅಗತ್ಯ ಜೀರ್ಣೋದ್ಧಾರ ಕಾರ್ಯ ಆರಂಭಗೊಂಡಿದೆ.

ದೇವಳದ ಒಳ ಪ್ರವೇಶಿಸುವಾಗ ಇರುವ ಮೇಲ್ಛಾವಣಿ ನಡಪ್ಪರ್‌ನ್ನು ಹಾಗೂ ಒಳಭಾಗದಲ್ಲಿ ದೊಡ್ಡದಾಗಿದ್ದ ಆರು ಕಂಬಗಳನ್ನು ತೆಗೆಯಲಾಗುತ್ತಿದೆ. ಇದರಿಂದ ಒಳಾಂಗಣದಲ್ಲಿ ಹೆಚ್ಚಿನ ಸ್ಥಳಾವಕಾಶ ದೊರೆಯುವುದರ ಜತೆ ದೇವಸ್ಥಾನ ಪ್ರವೇಶಿಸುವಾಗಲೇ ಗರ್ಭಗುಡಿ ನೇರ ಕಾಣಲಿದೆ. ಅಷ್ಟಬಂಧಕ್ಕಿಂತ ಮುಂಚಿತವಾಗಿ ಗರ್ಭಗುಡಿಯ ಮೇಲ್ಛಾವಣಿ ದುರಸ್ತಿ, ತಾಮ್ರದ ಪುನರ್ ಹೊದಿಕೆ, ನೂತನ ಧ್ವಜಸ್ತಂಭ ಪ್ರತಿಷ್ಠಾಪನೆ ನಡೆಯಲಿದೆ. ಎರಡು ವರ್ಷಗಳಿಂದ ಧ್ವಜಸ್ತಂಭವನ್ನು ತೈಲಭಾಂಡದಲ್ಲಿಡಲಾಗಿದ್ದು, ಕೆಲದಿನಗಳ ಹಿಂದೆ ತೆಗೆಯಲಾಗಿದೆ.

ಅಷ್ಟಬಂಧ ಕಾರ್ಯ ನಡೆಯುವವರೆಗೆ ಕ್ಷೇತ್ರದಲ್ಲಿ ಚಂಡಿಕಾಹೋಮ ಮತ್ತು ರಂಗಪೂಜೆ ನಡೆಯುವುದಿಲ್ಲ. ಉಳಿದಂತೆ ಎಲ್ಲ ಪೂಜೆ-ಸೇವೆಗಳು ನಡೆಯುತ್ತವೆ.

2020ಕ್ಕೆ ಬ್ರಹ್ಮಕಲಶೋತ್ಸವ: ಹೊರಗಡೆಯಲ್ಲಿರುವ ರಕ್ತೇಶ್ವರಿ ಸನ್ನಿಧಿ ಜೀರ್ಣೋದ್ಧಾರ, ಒಳಗಿನ ಶಾಸ್ತಾರ, ನಾಗಸನ್ನಿಧಿ ಜೀರ್ಣೋದ್ಧಾರ, ಗಣಪತಿ ದೇವರ ಎದುರಿನ ದಳಿಯ ರಿಪೇರಿ ಕಾರ‌್ಯಗಳು ನಡೆಯಲಿದೆ. 2020ರಲ್ಲಿ ಬ್ರಹ್ಮಕಲಶೋತ್ಸವ ಜರುಗಲಿದ್ದು, ಈ ಒಂದು ವರ್ಷದ ಅವಧಿಯಲ್ಲಿ ನೂತನ ಧ್ವಜಸ್ತಂಭಕ್ಕೆ ಚಿನ್ನದ ಲೇಪನ, ನೂತನ ಭೋಜನ ಶಾಲೆ ಮುಂತಾದ ಅಭಿವೃದ್ಧಿ ಕಾರ‌್ಯಗಳು ಆಗಲಿವೆ ಎಂದು ದೇವಳದ ಮೂಲಗಳು ತಿಳಿಸಿವೆ.