ದೇವಳ ರಥಬೀದಿಯಲ್ಲಿ ತೂಟೆದಾರ ಸೇವೆ

>

ವಿಜಯವಾಣಿ ಸುದ್ದಿಜಾಲ ಕಿನ್ನಿಗೋಳಿ
ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಳ ವಾರ್ಷಿಕ ಜಾತ್ರೆ ಕೊನೆಯ ದಿನ ಸಂಪ್ರದಾಯದಂತೆ ಅತ್ತೂರು ಕೊಡೆತ್ತೂರು ಗ್ರಾಮಸ್ಥರಿಂದ ತೂಟೆದಾರ ಸೇವೆ ರಥಬೀದಿಯಲ್ಲಿ ಸೋಮವಾರ ಮುಂಜಾನೆ ನಡೆಯಿತು.
ಭಾನುವಾರ ರಥೋತ್ಸವ ಬಳಿಕ ಅಜಾರು ಸಮೀಪದ ನಂದಿನಿ ನದಿಯಲ್ಲಿ ದುರ್ಗೆಯ ಜಲಕ ಬಳಿಕ ರಕ್ತೇಶ್ವರಿ ಸನ್ನಿಧಿಯ ಬಳಿ ಹಾಗೂ ಕಟೀಲು ರಥಬೀದಿಯಲ್ಲಿ ತಲಾ ಮೂರು ಸುತ್ತು ತೂಟೆದಾರ ನಡೆಯಿತು.
ತೂಟೆದಾರವೆಂದರೆ ತೆಂಗಿನ ಗರಿಗಳಿಂದ ಕಟ್ಟಿದ ಕಟ್ಟು. ದೇವಳಕ್ಕೆ ಸಂಬಂಧಪಟ್ಟ ಅತ್ತೂರು ಮತ್ತು ಕೊಡೆತ್ತೂರು ಮಾಗಣೆಯ ಭಕ್ತರು ಅತ್ತೂರು ಮತ್ತು ಕೊಡೆತ್ತೂರು ಎರಡು ಪ್ರತ್ಯೇಕ ತಂಡಗಳಾಗಿ ಉರಿಯುತ್ತಿರುವ ತೂಟೆಯನ್ನು ಪರಸ್ಪರ ಎಸೆಯುತ್ತಾರೆ. ಇದರಲ್ಲಿ ಭಾಗವಹಿಸುವ ಭಕ್ತರು ದೇವಳದ ಧ್ವಜಾರೋಹಣದಿಂದ ಧ್ವಜಾವರೋಹಣದ ತನಕ ಮಾಂಸಾಹಾರ ತ್ಯಜಿಸಿ ಒಪ್ಪೊತ್ತು ಊಟ ಮಾಡುವ ನಿಯಮ ಪಾಲಿಸುತ್ತಾರೆ. ಮುಂಬೈ ಮತ್ತು ವಿದೇಶದಲ್ಲಿರುವ ಭಕ್ತರೂ ಈ ಸೇವೆಯಲ್ಲಿ ಭಾಗವಹಿಸುತ್ತಾರೆ.
ವಿಜಯದ ಸಂಕೇತ: ಅರುಣಾಸುರನನ್ನು ಸಂಹರಿಸಿದ ದೇವಿ ವಿಜಯಿಯಾಗಿ ಬರುವ ವೇಳೆ ಈ ರೀತಿ ಬೆಂಕಿಯಿಂದ ಸ್ವಾಗತ ಕೋರಿದ ಸಮಯ ಎಂಬ ಪ್ರತೀತಿ. ಅಗ್ನಿಯು ಶುದ್ಧತೆಯ ಸಂಕೇತವಾದ ಕಾರಣ ಕಟ್ಟೆ ಪೂಜೆ ನಡೆಸಿ ಬರುವ ದುರ್ಗೆ ಅಗ್ನಿಯ ಮೂಲಕ ಶುದ್ಧಗೊಂಡು ದೇವಳ ಪ್ರವೇಶಿಸುತ್ತಾಳೆ ಎಂಬ ನಂಬಿಕೆಯೂ ಇದೆ.

Leave a Reply

Your email address will not be published. Required fields are marked *