ಕಸ್ತೂರಿ ರಂಗನ್ ವರದಿ ವಿರೋಧಿಸಿ ಡಿ.1ರಂದು ಸಾಂಕೇತಿಕ ಬಂದ್

ಬಾಳೆಹೊನ್ನೂರು: ಕಸ್ತೂರಿರಂಗನ್ ವರದಿ ಜಾರಿ ವಿರೋಧಿಸಿ ಡಿ.1ರಂದು ಬಾಳೆಹೊನ್ನೂರಿನಲ್ಲಿ ಸಾಂಕೇತಿಕ ಬಂದ್ ಹಾಗೂ ಬೃಹತ್ ಪ್ರತಿಭಟನೆ ನಡೆಸಲು ಕಸ್ತೂರಿರಂಗನ್ ವಿರೋಧಿ ಹೋರಾಟ ಸಮಿತಿ ತೀರ್ವನಿಸಿದೆ.

ಬಿ.ಕಣಬೂರು ಗ್ರಾಪಂ ಹಾಗೂ ಕಸ್ತೂರಿರಂಗನ್ ವಿರೋಧಿ ಹೊರಾಟ ಸಮಿತಿ ವಿದ್ಯಾಗಣಪತಿ ಸಮುದಾಯ ಭವನದಲ್ಲಿ ಹಮ್ಮಿಕೊಂಡಿದ್ದ ಪೂರ್ವಭಾವಿ ಸಭೆಯಲ್ಲಿ ನಿರ್ಧಾರ ಕೈಗೊಳ್ಳಲಾಗಿದೆ.

ಎನ್​ಜಿಒಗಳ ಒತ್ತಡಕ್ಕೆ ಮಣಿದು ಕಸ್ತೂರಿರಂಗನ್ ವರದಿಯನ್ನು 6 ತಿಂಗಳಲ್ಲಿ ಜಾರಿಗೊಳಿಸುವಂತೆ ರಾಷ್ಟ್ರೀಯ ಹಸಿರು ಪೀಠ ಆದೇಶಿಸಿದೆ. ವರದಿ ಜಾರಿ ಪ್ರಕ್ರಿಯೆಗೆ ಅಂತಿಮ ಆಕ್ಷೇಪಣೆ ಸಲ್ಲಿಸಲು ಡಿ.3 ಕೊನೇ ದಿನ. ಆದ್ದರಿಂದ ತಕ್ಷಣ ಸರ್ಕಾರ ವರದಿ ಜಾರಿಗೊಳಿಸದಂತೆ ನ್ಯಾಯಾಲಯಕ್ಕೆ ಮೇಲ್ಮನವಿ ಸಲ್ಲಿಸಲು ಒತ್ತಡ ಹೇರುವಂತೆ ಸಭೆಯಲ್ಲಿ ತೀರ್ವನಿಸಲಾಯಿತು.

ಚಿಕ್ಕಮಗಳೂರಿನ 27, ಕೊಪ್ಪದ 32, ಮೂಡಿಗೆರೆಯ 27, ಎನ್.ಆರ್.ಪುರದ 35, ಶೃಂಗೇರಿಯ 26 ಗ್ರಾಮಗಳಲ್ಲಿ ವರದಿ ಜಾರಿಯಾಗಲಿದೆ. ಆದ್ದರಿಂದ ವರದಿ ಜಾರಿ ವಿರೋಧಿಸಿ ನಡೆಸುತ್ತಿರುವ ಹೋರಾಟಕ್ಕೆ ಶಾಲಾ ಕಾಲೇಜುಗಳು, ಸರ್ಕಾರಿ ಕಚೇರಿ ಹಾಗೂ ಬ್ಯಾಂಕ್​ಗಳು ಬೆಂಬಲ ನೀಡುವಂತೆ ಮನವಿ ಮಾಡಲು ನಿರ್ಧರಿಸಲಾಯಿತು.

ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಟಿ.ಎಂ.ಉಮೇಶ್ ಕಲ್ಮಕ್ಕಿ, ಬಿ.ಕಣಬೂರು ಗ್ರಾಪಂ ಅಧ್ಯಕ್ಷ ಮಹಮ್ಮದ್ ಹನೀಫ್, ಜಿಪಂ ಮಾಜಿ ಉಪಾಧ್ಯಕ್ಷ ಎಂ.ಎಸ್.ಚೆನ್ನಕೇಶವ, ಬನ್ನೂರು ಗ್ರಾಪಂ ಅಧ್ಯಕ್ಷ ಟಿ.ಎಂ.ವೆಂಕಟೇಶ್, ತಾಪಂ ಸದಸ್ಯ ಪ್ರವೀಣ್, ಅಧ್ಯಕ್ಷ ಎಂ.ಎಸ್.ಜಯಪ್ರಕಾಶ್, ಮಹಮ್ಮದ್ ಜುಹೇಬ್, ನಾಗರಿಕ ವೇದಿಕೆ ಸಂಚಾಲಕ ಹಿರಿಯಣ್ಣ, ಜೇಸಿಐ ರಾಷ್ಟ್ರೀಯ ಉಪಾಧ್ಯಕ್ಷ ನವೀನ್​ಲಾಯ್್ಡ ಮಿಸ್ಕಿತ್, ಭೈರೇಗುಡ್ಡ ಶಹಾಬ್, ಜೇಸಿ ಅಧ್ಯಕ್ಷ ಮನುಕುಮಾರ್, ಅರಳಿಕೊಪ್ಪ ಸತೀಶ್, ಲಯನ್ಸ್ ಕ್ಲಬ್ ಅಧ್ಯಕ್ಷ ತುಪ್ಪೂರು ಮಂಜುನಾಥ್ ಇದ್ದರು.