ಬರಡಾಗುತ್ತಿದೆ ಹೊಳೆ, ಜಲಮೂಲ

ಪುರುಷೋತ್ತಮ ಪೆರ್ಲ ಕಾಸರಗೋಡು

ಜಿಲ್ಲಾದ್ಯಂತ ಹೊಳೆ, ಬಾವಿಗಳು ಬತ್ತಿ ಬರಡಾಗುತ್ತಿದ್ದು, ಕುಡಿಯುವ ನೀರಿನ ಯೋಜನೆಗಳೆಲ್ಲ ಅಯೋಮಯವಾಗುತ್ತಿವೆ. ಶುದ್ಧ ಕುಡಿಯುವ ನೀರು ಒದಗಿಸುವ ಜಲ ನಿಧಿ ಯೋಜನೆಗಳೂ ನೀರಿಲ್ಲದೆ ನಿಷ್ಪ್ರಯೋಜಕವಾಗುವ ಸ್ಥಿತಿ ತಲುಪಿದೆ. ಪೈವಳಿಕೆ ಪಂಚಾಯಿತಿ ವ್ಯಾಪ್ತಿಯಲ್ಲಿ ನಾಲ್ಕು ವರ್ಷಗಳ ಮೊದಲು ಕೋಟ್ಯಂತರ ರೂ. ವೆಚ್ಚದಲ್ಲಿ ಆರಂಭಗೊಂಡ ಜಲನಿಧಿ ಯೋಜನೆ ನೀರಿಲ್ಲದೆ ಬರಡಾಗುತ್ತಿದೆ. ಸುಮಾರು ಎರಡೂವರೆ ಸಾವಿರ ಮನೆಗಳಿಗೆ ಶುದ್ಧ ಕುಡಿಯುವ ನೀರು ಪೂರೈಸುವ ಯೋಜನೆ ಇದಾಗಿತ್ತು.
ಎಣ್ಮಕಜೆ ಪಂಚಾಯಿತಿ ವ್ಯಾಪ್ತಿಯಲ್ಲೂ ಶುದ್ಧ ಜಲ ವಿತರಣಾ ಯೋಜನೆ ಬುಡಮೇಲಾಗುತ್ತಿದೆ. ಕರ್ನಾಟಕದಿಂದ ಹುಟ್ಟಿ, ಕೇರಳದಲ್ಲಿ ಅರಬ್ಬಿ ಸಮುದ್ರ ಸೇರುತ್ತಿರುವ ಅಡ್ಕಸ್ಥಳ ಸೀರೆ ಹೊಳೆ ಒಂದು ತಿಂಗಳಿಂದ ನೀರಿಲ್ಲದೆ ಬರಡಾಗಿದೆ. ಇದರೊಂದಿಗೆ ಅಡ್ಕಸ್ಥಳದಲ್ಲಿ ಬೃಹತ್ ಬಾವಿ ನಿರ್ಮಾಣದೊಂದಿಗೆ ಪಂಚಾಯಿತಿ ವ್ಯಾಪ್ತಿಗೆ ಶುದ್ಧ ಕುಡಿಯುವ ನೀರು ಪೂರೈಸುವ ಯೋಜನೆಯೂ ಚಟುವಟಿಕೆ ಅಸ್ತವ್ಯಸ್ತಗೊಂಡಿದೆ. ಹೊಳೆಯಲ್ಲಿ ನೀರು ಸಂಗ್ರಹಿಸಿಟ್ಟುಕೊಳ್ಳಲು ಶಾಶ್ವತ ಅಣೆಕಟ್ಟು ಯೋಜನೆಯ ಕಾಮಗಾರಿ ಪ್ರಗತಿಯಲ್ಲಿದೆ.

ನೀರಿಗಾಗಿ ಪರದಾಟ: ಪೈಪ್‌ಲೈನ್ ನೀರು ಆಶ್ರಯಿಸಿರುವ ಅಡ್ಕಸ್ಥಳ, ನಲ್ಕ, ಪೆರ್ಲ, ಬಜಕೂಡ್ಲು, ಕನ್ನಟಿಕಾನ, ಕಾಟುಕುಕ್ಕೆ ರಸ್ತೆಯ ಅಡ್ಕ ಸಹಿತ ವಿವಿಧ ಪ್ರದೇಶಗಳ 500ಕ್ಕೂ ಹೆಚ್ಚು ಕುಟುಂಬ ಕುಡಿಯುವ ನೀರಿಗಾಗಿ ಪರದಾಡುವ ಸ್ಥಿತಿ ನಿರ್ಮಾಣವಾಗಿದೆ. ಅಡ್ಕಸ್ಥಳ ಹೊಳೆ ಕೇಂದ್ರೀಕರಿಸಿ ಆರಂಭಿಸಿರುವ ನೀರು ವಿತರಣೆ ಯೋಜನೆಗೆ ಫೆಬ್ರವರಿ ತಿಂಗಳಿಂದ ನೀರು ಲಭ್ಯವಾಗದಿರುವುದರಿಂದ ಅಡ್ಕಸ್ಥಳದ ಪಂಪ್‌ಹೌಸ್, ಗೋಳಿತ್ತಡ್ಕದ ನೀರು ಶುದ್ಧೀಕರಣ ಘಟಕ ಹಾಗೂ ಪೆರ್ಲದ ನೀರು ಸಂಗ್ರಹಣಾ ಟ್ಯಾಂಕ್‌ಗಳು ಪ್ರದರ್ಶನ ವಸ್ತುವಾಗಿ ಉಳಿದುಕೊಂಡಿದೆ.

ಕುಡಿಯುವ ನೀರಿನೊಂದಿಗೆ ಕೃಷಿ ಚಟುವಟಿಕೆಗಾಗಿ ಹೊಳೆ ನೀರನ್ನು ಕೃಷಿಕರು ಆಶ್ರಯಿಸುತ್ತಿದ್ದು, ಪ್ರಸಕ್ತ ಅಡಕೆ, ತೆಂಗಿನ ತೋಟಗಳೂ ನೀರಿಲ್ಲದೆ ಒಣಗುವ ಸ್ಥಿತಿಯಲ್ಲಿದೆ. ಹೊಳೆಯಲ್ಲಿ ಹೊಂಡ ತೋಡಿ ರಿಂಗ್ ಅಳವಡಿಸುವ ಮೂಲಕ ತೋಟಗಳಿಗೆ ನೀರು ಹಾಯಿಸಲಾಗುತ್ತಿದ್ದರೂ, ಹೊಳೆ ಬರಡಾಗಿರುವುದರಿಂದ ಹೊಂಡಗಳಲ್ಲೂ ನೀರು ಖಾಲಿ. ಹೊಳೆಯಲ್ಲಿ ಅನಧಿಕೃತವಾಗಿ ಬೃಹತ್ ಅಶ್ವಶಕ್ತಿಯ ಮೋಟಾರು ಅಳವಡಿಸಿ ಭಾರಿ ಪ್ರಮಾಣದಲ್ಲಿ ನೀರು ಮೇಲಕ್ಕೆತ್ತುತ್ತಿರುವುದಾಗಿಯೂ ಆರೋಪ ಕೇಳಿ ಬರುತ್ತಿದೆ. ಕೋಟ್ಯಂತರ ರೂ. ವೆಚ್ಚದಲ್ಲಿ ಆರಂಭಿಸಿರುವ ಶುದ್ಧ ಜಲ ಪೂರೈಕೆ ಯೋಜನೆ ನೀರಿಲ್ಲದೆ ವ್ಯರ್ಥವಾಗುತ್ತಿದೆ.

ಜಲ ಸಂರಕ್ಷಣೆಗೆ ಕ್ರಮವಿಲ್ಲ: ಕುಡಿಯುವ ನೀರು ವಿತರಣೆಗೆ ಹಲವಾರು ಯೋಜನೆ ತಯಾರಿಸುವ ಸರ್ಕಾರ, ಜಲ ಸಂರಕ್ಷಣೆಗೆ ಯಾವುದೇ ಕ್ರಮ ಕೈಗೊಳ್ಳದಿರುವುದರಿಂದ ಲಕ್ಷಾಂತರ ರೂ. ವ್ಯಯಿಸುವ ಯೋಜನೆಗಳೆಲ್ಲ ವಿಫಲವಾಗುತ್ತಿರುವುದಾಗಿ ದೂರು ಕೇಳಿ ಬರುತ್ತಿದೆ. ಉದ್ಯೋಗ ಖಾತ್ರಿ ಯೋಜನೆ ಮೂಲಕ ಇಂಗುಗುಂಡಿ ನಿರ್ಮಾಣ ಕಾರ್ಯ ಕೈಗೆತ್ತಿಕೊಳ್ಳುತ್ತಿದ್ದರೂ, ಇವು ಸಮರ್ಪಕವಾಗಿ ನಡೆಯುತ್ತಿಲ್ಲ ಎಂಬ ದೂರೂ ಇದೆ.

ಎಣ್ಮಕಜೆ ಶುದ್ಧ ಕುಡಿಯುವ ನೀರಿನ ಯೋಜನೆಗೆ ನಿರಂತರ ನೀರು ಲಭ್ಯವಾಗಿಸುವ ನಿಟ್ಟಿನಲ್ಲಿ ನಿರ್ಮಿಸಲಾದ ಶಾಶ್ವತ ಅಣೆಕಟ್ಟು ಕಾಮಗಾರಿ ಪ್ರಗತಿಯಲ್ಲಿದ್ದು, ಮುಂದಿನ ವರ್ಷದಿಂದ ಇದರಲ್ಲಿ ನೀರು ಸಂಗ್ರಹಿಸಲು ಸಾಧ್ಯವಾಗಬಹುದು. ಪ್ರಸಕ್ತ ಹೊಳೆಯಲ್ಲಿ ನೀರಿನ ಲಭ್ಯತೆ ಕಡಿಮೆಯಿರುವುದರಿಂದ ಪಂಪಿಂಗ್ ವ್ಯವಸ್ಥೆ ಅಸ್ತವ್ಯಸ್ತಗೊಂಡಿದೆ. ಅಣೆಕಟ್ಟಿನಲ್ಲಿ ನೀರು ದಾಸ್ತಾನುಗೊಳ್ಳುವುದರಿಂದ ಸಮಸ್ಯೆ ಬಗೆಹರಿಯಲಿದೆ.
|ಪದ್ಮನಾಭನ್, ಸಹಾಯಕ ಮಹಾ ಅಭಿಯಂತ ಜಲ ಪ್ರಾಧಿಕಾರ, ಕಾಸರಗೋಡು