ಪ್ರತ್ಯೇಕತಾವಾದಿಗಳು, ಇಸ್ಲಾಂ ಮೂಲಭೂತವಾದಿ ಭಯೋತ್ಪಾದಕರು, ಪಾಕಿಸ್ತಾನ ಪ್ರೇರಿತ ಗಡಿಯಾಚೆಗಿನ ಉಗ್ರವಾದಗಳಲ್ಲಿ ಜಮ್ಮು ಕಾಶ್ಮೀರ ಏಳು ದಶಕಗಳ ಕಾಲ ನಲುಗಿತು. ಜತೆಗೆ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದ ಸರ್ಕಾರಗಳು ಕಾಂಗ್ರೆಸ್ ಮೊದಲಾದ ‘ಸೆಕ್ಯುಲರ್’ ರಾಜಕೀಯ ಪಕ್ಷಗಳ ತಪ್ಪು ನೀತಿ ಮತ್ತು ಅದನ್ನು ತಮ್ಮರಾಜಕೀಯ ಲಾಭಕ್ಕೆ ಬಳಸಿಕೊಂಡ ಕಾಶ್ಮೀರ ಕಣಿವೆಯ ಬೆರಳೆಣಿಕೆಯ ಕೆಲವೇ ಕುಟುಂಬಗಳ ಸ್ವಾರ್ಥಪರತೆ ರಾಜ್ಯವನ್ನು ಇನ್ನಷ್ಟು ದುಃಸ್ಥಿತಿಗೆ ದೂಡಿತು. ಪರಿಣಾಮ ರಾಜ್ಯದಲ್ಲಿ ಕಾಶ್ಮೀರ ಕಣಿವೆ ಕೇಂದ್ರಿತ ವ್ಯವಸ್ಥೆ ನಿರ್ವಣಗೊಂಡು ಒಂದು ಸಮುದಾಯಕ್ಕೆ ಸೇರಿದ ಕೆಲವೇ ಕುಟುಂಬಗಳ ಹಿತಾಸಕ್ತಿಗೆ ಇಡೀ ರಾಜ್ಯದ ಒಳಿತು ಬಲಿಯಾಯಿತು.
ಜಮ್ಮು ಮತ್ತು ಲಡಾಖ್ ನಿರ್ಲಕ್ಷ್ಯಕ್ಕೆ ಒಳಗಾದರೆ ಕಾಶ್ಮೀರದ ನಿವಾಸಿಗಳೇ ಆದ ಷಿಯಾ, ಗುರ್ಜರ, ಪಹಾಡಿ ಮೊದಲಾದ ಸಮುದಾಯಗಳ ಜನರೂ ಅಲಕ್ಷ್ಯಕ್ಕೊಳಗಾದರು. ಇವೆಲ್ಲದರ ನಡುವೆ ಅತ್ಯಂತ ದಯನೀಯ ಸ್ಥಿತಿಯಲ್ಲಿ ಜೀವನ ನಡೆಸುತ್ತಿರುವ, ವಿವಿಧ ಕಾರಣಗಳಿಂದ ತಮ್ಮದೆಲ್ಲವನ್ನೂ ಕಳೆದುಕೊಂಡು ನಿರಾಶ್ರಿತರಾದವರ ಒಂದು ವರ್ಗ ಜಮ್ಮುಪ್ರದೇಶದಲ್ಲಿ ನೆಲೆಸಿದೆ. ದೌರ್ಭಾಗ್ಯವೆಂದರೆ ಪ್ರತ್ಯೇಕತಾವಾದಿಗಳು, ಉಗ್ರವಾದಿಗಳು, ಕಣಿವೆಯ ಕಲ್ಲೆಸೆತಗಾರರ ಮಾನವ ಹಕ್ಕುಗಳ ಪರವಾಗಿ ಆಗಾಗ ಪ್ರತಿಭಟನೆ ಮಾಡುವ ಹೋರಾಟಗಾರರಿಗೆ, ‘ಬುದ್ಧಿಜೀವಿ’ಗಳಿಗೆ ಈ ನಿರ್ವಸಿತರಿಗೂ ಮಾನವ ಹಕ್ಕುಗಳಿವೆ ಎನ್ನುವ ಯೋಚನೆಯೇ ಬರುವುದಿಲ್ಲ. ಕೆಲವು ದಿನ ಇಂಟರ್ನೆಟ್ ಸ್ಥಗಿತಗೊಂಡಾಗ ಗುಲ್ಲೆಬ್ಬಿಸಿ ಸುಪ್ರೀಂ ಕೋರ್ಟಿನ ಮೆಟ್ಟಿಲೇರುವವರಿಗೆ 3-4 ತಲೆಮಾರುಗಳಿಂದ ನಿರಾಶ್ರಿತ ಕ್ಯಾಂಪ್ಗಳಲ್ಲಿ ಬದುಕು ಸವೆಸುತ್ತಿರುವ ಕುಟುಂಬಗಳು ಕಾಣುವುದೇ ಇಲ್ಲ.
ನಿರ್ವಸಿತರ ರಾಜಧಾನಿ: ಅಂಕಿಅಂಶಗಳ ಪ್ರಕಾರ ಏಷ್ಯಾದಲ್ಲಿ ಅತಿ ಹೆಚ್ಚು ನಿರ್ವಸಿತರಿರುವುದು ಜಮ್ಮುವಿನಲ್ಲಿ. 15 ಲಕ್ಷಕ್ಕೂ ಅಧಿಕ ನಿರ್ವಸಿತರು ಅಲ್ಲಿದ್ದಾರೆ. ಸ್ವಾತಂತ್ರಾ್ಯನಂತರದ ವಿವಿಧ ಕಾಲಘಟ್ಟಗಳಲ್ಲಿ ನೆಲೆಗೊಳ್ಳುತ್ತ ಬಂದ ನಿರ್ವಸಿತರನ್ನು ಸ್ಥೂಲವಾಗಿ ನಾಲ್ಕು ಗುಂಪುಗಳಾಗಿ ವಿಂಗಡಿಸಬಹುದು. ಮೊದಲನೆಯವರು, 1947ರಲ್ಲಿ ದೇಶದ ವಿಭಜನೆ ನಡೆದ ಸಂದರ್ಭದಲ್ಲಿ ಮುಸ್ಲಿಂ ಬಾಹುಳ್ಯದ ಪಶ್ಚಿಮ ಪಾಕಿಸ್ತಾನದಿಂದ ವಲಸೆಬಂದ ಹಿಂದೂಗಳು ಮತ್ತು ಸಿಖ್ಖರು. ಇವರ ಸಂಖ್ಯೆ 2 ಲಕ್ಷಕ್ಕೂ ಹೆಚ್ಚು. ಇವರಲ್ಲಿ ಹೆಚ್ಚಿನವರು ಪರಿಶಿಷ್ಟ ಜಾತಿಗೆ ಸೇರಿದವರು. ಸರ್ಕಾರಿ ಜಾಗದಲ್ಲಿ ಕಟ್ಟಿಕೊಂಡಿರುವ ತಾತ್ಕಾಲಿಕ ಶೆಡ್ಗಳಲ್ಲೇ 70 ವರ್ಷಗಳಿಂದ ದಿನ ದೂಡುತ್ತಿದ್ದಾರೆ.
ಎರಡನೆಯವರು, ಆಗಷ್ಟೇ ಜನ್ಮತಾಳಿದ್ದ ಪಾಕಿಸ್ತಾನದಿಂದ ಬೃಹತ್ ಸಂಖ್ಯೆಯಲ್ಲಿ ಭಾರತಕ್ಕೆ ವಲಸೆ ಬಂದ ಮುಸ್ಲಿಮೇತರರು. ದೇಶದ ವಿವಿಧ ಭಾಗಗಳಲ್ಲಿ ನೆಲೆಸಿದ ಅವರು ಭಾರತದ ನಾಗರಿಕತ್ವ ಪಡೆದು ಉಳಿದ ನಾಗರಿಕರಂತೆ ಎಲ್ಲ ಹಕ್ಕುಗಳನ್ನು ಪಡೆದರು. ಉದಾಹರಣೆಗೆ ಡಾ. ಮನಮೋಹನ ಸಿಂಗ್, ಲಾಲಕೃಷ್ಣ ಆಡ್ವಾಣಿ ಮೊದಲಾದವರು ಉನ್ನತ ಹುದ್ದೆಗೇ ಏರಿದರು. ವಿಭಜನೆಯ ಸಮಯದಲ್ಲಿ ಜಮ್ಮುಕಾಶ್ಮೀರದಲ್ಲಿ ನೆಲೆಗೊಂಡವರು ಮಾತ್ರ ಏಳು ದಶಕ ಕಳೆದರೂ ಇನ್ನೂ ನಿರಾಶ್ರಿತರ ಶಿಬಿರಗಳಲ್ಲೇ ಜೀವನ ನಡೆಸುತ್ತಿದ್ದಾರೆ. 370ನೇ ವಿಧಿ ಜಾರಿಯಲ್ಲಿ ಇರುವವರೆಗೆ ಅವರ ಸಮಸ್ಯೆಯನ್ನು ಸ್ಟೇಟ್ ಸಬ್ಜೆಕ್ಟ್ ಎಂದು ಪರಿಗಣಿಸಲಾಗುತ್ತಿರಲಿಲ್ಲ. ಅವರಿಗೆ ಭಾರತದ ಪೌರತ್ವ ಸಿಕ್ಕಿತ್ತು. ಆದರೆ ಜಮ್ಮು ಕಾಶ್ಮೀರದ ಸಂವಿಧಾನದಡಿ ರಾಜ್ಯದ ಖಾಯಂ ನಿವಾಸಿ ಪ್ರಮಾಣಪತ್ರ ದೊರಕಿರಲಿಲ್ಲ. ಹಾಗಾಗಿ ಅವರು ಅಲ್ಲಿ ಜಮೀನು ಖರೀದಿ ಮಾಡುವಂತಿರಲಿಲ್ಲ, ರಾಜ್ಯ ಸರ್ಕಾರಿ ಸವಲತ್ತು ನೌಕರಿಗಳಿಗೆ ಅರ್ಹರಾಗಿರಲಿಲ್ಲ. ಅವರಿಗೆ ಲೋಕಸಭೆ ಚುನಾವಣೆಯಲ್ಲಿ ಮತದಾನದ ಅಧಿಕಾರವಿತ್ತು; ಆದರೆ ವಿಧಾನಸಭೆ ಚುನಾವಣೆಯಲ್ಲಿ ಮತ ಚಲಾಯಿಸುವಂತಿರಲಿಲ್ಲ. ಜಮ್ಮು ಕಾಶ್ಮೀರಕ್ಕೆ ಹೊಂದಿಕೊಂಡಿರುವ ಪಾಕಿಸ್ತಾನದ ಜಿಲ್ಲೆಗಳಿಂದ ವಲಸೆ ಬಂದ ಇವರಿಗೆ ಜಮ್ಮು ಕಾಶ್ಮೀರವೇ ಭೌಗೋಳಿಕವಾಗಿ ಮತ್ತು ಸಾಂಸ್ಕೃತಿಕವಾಗಿ ಹತ್ತಿರವಾಗಿ ಕಂಡಿತು. ಹಾಗಾಗಿ ಇವರು ಇಲ್ಲಿ ನೆಲೆಗೊಂಡರು. ಇದೇ ತಪ್ಪಿಗೆ ಭಾರತದ ನಾಗರಿಕರಿಗೆ ಸಮಾನವಾದ ಅಧಿಕಾರ ಪಡೆಯಲು ಏಳು ದಶಕ ಕಾಯಬೇಕಾಯಿತು.
1947ರ ಅಕ್ಟೋಬರ್ನಲ್ಲಿ ಪಾಕಿಸ್ತಾನದ ಸೈನ್ಯ ಮತ್ತು ಕಬಾಲಿಗಳ ವೇಷದಲ್ಲಿ ಮುಸ್ಲಿಂ ದಾಳಿಕೋರರು ಜಮ್ಮುಕಾಶ್ಮೀರದ ಮೇಲೆ ದಾಳಿ ಪ್ರಾರಂಭಿಸಿದರು. ಮುಜಫರಾಬಾದ್ ಅವರ ಮೊದಲ ಗುರಿ.
ಬಳಿಕ ಮೀರ್ಪುರ್ ಮತ್ತು ಪೂಂಚ್. ಸಂಪೂರ್ಣ ಜಮ್ಮುಕಾಶ್ಮೀರದಿಂದ ಹಿಂದುಗಳನ್ನು ಹೊಡೆದೋಡಿಸಿ ಇಡೀ ರಾಜ್ಯವನ್ನು ವಶಪಡಿಸಿಕೊಳ್ಳುವ ಹುನ್ನಾರ ಅವರದಾಗಿತ್ತು. ಮುಜಫರಾಬಾದ್ನಲ್ಲಿ ಸಹಸ್ರಾರು ಜನರನ್ನು ಒಂದೇ ರಾತ್ರಿಯಲ್ಲಿ ಸಾಯಿಸಿದರು. ಇಂತಹ ಭಯದ ವಾತಾವರಣದಲ್ಲಿ ತಮ್ಮ ಮನೆಮಠ ತೊರೆದು ಉಟ್ಟ ಬಟ್ಟೆಯಲ್ಲೇ ಜೀವ ಉಳಿಸಿಕೊಳ್ಳಲು ಜಮ್ಮು ಕಡೆಗೆ ಬಂದವರು ಅದೆಷ್ಟೋ ಹಿಂದುಗಳು, ಸಿಕ್ಖರು. ಪುನಃ ಹಿಂತಿರುಗಿ ಹೋಗುತ್ತೇವೆಂಬ ಭರವಸೆಯೊಂದಿಗೆ ಬಂದ ಇವರ ಕನಸು ಕನಸಾಗಿಯೇ ಉಳಿಯಿತು. ಮುಜಫರಾಬಾದ್, ಮೀರ್ಪುರ, ಪೂಂಚ್ ಭಾರತಕ್ಕೆ ಸೇರಲೇ ಇಲ್ಲ. ‘ಪಾಕ್ ಆಕ್ರಮಿತ ಕಾಶ್ಮೀರ’ ಎಂದು ಇಂದಿಗೂ ಕರೆಯುತ್ತಿದ್ದೇವೆ. ಹೀಗೆ ಬಂದವರ ಸಂಖ್ಯೆಸುಮಾರು 12 ಲಕ್ಷ. ಅವರಲ್ಲಿ 10 ಲಕ್ಷದಷ್ಟು ಜನ ಜಮ್ಮುವಿನ ನಿರಾಶ್ರಿತರ ಶಿಬಿರದಲ್ಲೇ ಇದ್ದಾರೆ. ಉಳಿದ 2 ಲಕ್ಷ ಜನ ಇತರ ಭಾಗಗಳಲ್ಲಿದ್ದಾರೆ. ತಮ್ಮ ರಾಜ್ಯದಲ್ಲೇ ನಿರ್ವಸಿತರಾದ ಇವರನ್ನು ಸ್ಥಳಾಂತರಿತ ಜನ ಎಂದು ಕರೆದು ಒಂದಿಷ್ಟು ಪರಿಹಾರ ಕೊಟ್ಟು ಸರ್ಕಾರಗಳು ಸುಮ್ಮನಾದವು. ಶಾಶ್ವತ ಪರಿಹಾರ ಇದುವರೆಗೂ ಸಿಕ್ಕಿಲ್ಲ.
ಮೂರನೆಯವರು, ಪಾಕಿಸ್ತಾನದೊಂದಿಗೆ ಇದುವರೆಗೂ ನಡೆದ ಯುದ್ಧಗಳಲ್ಲಿ ನಿರಾಶ್ರಿತರಾದವರು. ಅವರ ಸಂಖ್ಯೆ 3 ಲಕ್ಷ. ಅವರಲ್ಲಿ 2 ಲಕ್ಷದಷ್ಟು ಜನ ಚಂಬ್ ಪ್ರದೇಶವೊಂದರಿಂದಲೇ ಬಂದವರು. ಮೊದಲು 1947ರಲ್ಲಿ ಪಾಕಿಸ್ತಾನ ಆಕ್ರಮಣ ಮಾಡಿದಾಗ ಅಲ್ಲಿಂದ ಸ್ಥಳಾಂತರಗೊಂಡರು. ಯುದ್ಧ ಮುಗಿದು ಅವರು ಹಿಂತಿರುಗಿ ಹೋಗಿ ನೋಡಿದರೆ, ಅವರ ಮನೆಗಳೆಲ್ಲ ಧ್ವಂಸವಾಗಿದ್ದವು, ಬರಿಯ ಅವಶೇಷಗಳು ಉಳಿದಿದ್ದವು. ದನಕರುಗಳು ಸತ್ತುಹೋಗಿದ್ದವು. ಅಂತೂ ಇಂತೂ ಪುನಃ ಶುರು ಮಾಡಿ, ಜೀವನ ಕಟ್ಟಿಕೊಂಡರು. ಅಷ್ಟರಲ್ಲೇ 1965ರಲ್ಲಿ ಮತ್ತೊಂದು ಯುದ್ಧ. ಪುನಃ ಸ್ಥಳಾಂತರ. ಹಿಂತಿರುಗಿ ಹೋಗಿ, ‘ಅಂತೂ ಮುಗಿಯಿತು’ ಎನ್ನುವಷ್ಟರಲ್ಲಿಯೇ 1971ರ ಯುದ್ಧ ಪ್ರಾರಂಭವಾಯಿತು. ಇದು ಹಿಂದಿನ ಯುದ್ಧದಂತಿರಲಿಲ್ಲ. ಇವರಿಗೆ ಮತ್ತೆ ಮತ್ತೆ ಹಿಂದೆ ಮುಂದೆ ಹೋಗುವ ಪರಿಸ್ಥಿತಿ ಮತ್ತೆಂದೂ ಬರಲಿಲ್ಲ. 1971ರ ಯುದ್ಧದ ಬಳಿಕ ನಡೆದ ಶಿಮ್ಲಾ ಒಪ್ಪಂದದ ಪ್ರಕಾರ ಚಂಬ್ ಪ್ರದೇಶದ 40 ಗ್ರಾಮಗಳನ್ನು ಪಾಕಿಸ್ತಾನಕ್ಕೆ ಬಿಟ್ಟುಕೊಡಲಾಯಿತು! ಹಾಗಾಗಿ ಪುನಃ ಹಿಂತಿರುಗಿ ಹೋಗುವ ಪ್ರಮೇಯವೇ ಇಲ್ಲ. ಶಾಶ್ವತವಾಗಿ ನಿರಾಶ್ರಿತರಾದರು ಈ 2 ಲಕ್ಷ ಜನ. ಸರ್ಕಾರ 1975ರವರೆಗೆ ಅವರನ್ನು ನಿರಾಶ್ರಿತರ ಶಿಬಿರದಲ್ಲಿಟ್ಟಿತು. ಬಳಿಕ ಜಮ್ಮುವಿನ 3 ಜಿಲ್ಲೆಗಳಲ್ಲಿ ಅವರಿಗೇ ಪ್ರತ್ಯೇಕ ವಸತಿ ಪ್ರದೇಶ ನಿರ್ವಿುಸಲಾಯಿತು. ಕೃಷಿಭೂಮಿ ಕೊಡುವುದಾಗಿ ಸರ್ಕಾರ ಮಾತು ಕೊಟ್ಟಿತ್ತಾದರೂ, ಅದಿನ್ನೂ ಈಡೇರಿಲ್ಲ.
ಇನ್ನು ನಾಲ್ಕನೆಯವರು, ಇಂದಿಗೂ ಸಹ ಗಡಿನಿಯಂತ್ರಣ ರೇಖೆಯ ಬಳಿ ಪಾಕಿಸ್ತಾನ ಅಪ್ರಚೋದಿತವಾಗಿ ನಡೆಸುವ ಶೆಲ್ ದಾಳಿಯಲ್ಲಿ ಮನೆ ಕಳೆದುಕೊಳ್ಳುತ್ತಿರುವವರು. ಬಂಕರ್ಗಳ ನಿರ್ಮಾಣ ಮತ್ತಿತರ ಕಾರಣಗಳಿಗೆ ಸೇನೆಯೂ ಕೆಲವರನ್ನು ಖಾಲಿ ಮಾಡಿಸುತ್ತದೆ.
ಪಂಡಿತರ ಕರುಣಾಜನಕ ಕಥೆ: ಕಾಶ್ಮೀರಿ ಪಂಡಿತರ ಕಥೆಯಂತೂ ಎಲ್ಲರಿಗೂ ತಿಳಿದಿರುವುದೇ. ಅನೇಕ ವರ್ಷಗಳಿಂದ ಇಸ್ಲಾಂ ಮೂಲಭೂತವಾದಿಗಳ ದೌರ್ಜನ್ಯಕ್ಕೆ ಗುರಿಯಾದ ಸಮುದಾಯವಿದು. ಅವರ ಮೇಲಿನ ಪ್ರಹಾರ 1988-89ರ ವೇಳೆ ತಾರಕಕ್ಕೇರಿತು. ಟೀಕಾಲಾಲ್ ಟಪ್ಲೂ, ನ್ಯಾಯಮೂರ್ತಿ ನೀಲಕಂಠ ಗಂಜೂ ಮುಂತಾಗಿ ಪಂಡಿತ ಸಮುದಾಯದ ಅನೇಕ ನಾಯಕರ ಕಗ್ಗೊಲೆ ನಡೆಯಿತು. ಮಹಿಳೆಯರ ಅಪಹರಣ ಅತ್ಯಾಚಾರ ನಡೆದವು. ಕಣಿವೆಯಿಂದ ಪಂಡಿತ ಸಮುದಾಯವನ್ನು ಇಲ್ಲವಾಗಿಸಲು ಮೂಲಭೂತವಾದಿಗಳು ಪಣ ತೊಟ್ಟರು. ಅವರ ಮುಂದೆ 3 ಆಯ್ಕೆಗಳನ್ನು ಇಡಲಾಯಿತು. ಒಂದೋ ಮುಸ್ಲಿಮರಾಗಿ ಮತಾಂತರಗೊಳ್ಳಿ; ಇಲ್ಲವೇ ಇಲ್ಲಿಂದ ಜಾಗ ಖಾಲಿ ಮಾಡಿ; ಅದೂ ಆಗದಿದ್ದರೆ ಸಾಯಲು ಸಿದ್ಧರಾಗಿ. 1990ರ ಜನವರಿ 19ರ ರಾತ್ರಿ ಕಾಶ್ಮೀರಿ ಪಂಡಿತರ ಜೀವನದಲ್ಲಿ ಅತ್ಯಂತ ಕರಾಳ ರಾತ್ರಿ. ಹಾಡಹಗಲೇ ಬೀದಿಗಳಲ್ಲಿ ನಿರಂಕುಶವಾಗಿ ದೌರ್ಜನ್ಯ ನಡೆಯಿತು. ಪರಿಣಾಮ ಸಾವಿರಾರು ವರ್ಷಗಳಿಂದ ನೆಲೆಸಿದ ತಮ್ಮ ಪೂರ್ವಜರ ನೆಲವನ್ನು ಬಿಟ್ಟು ಕಾಶ್ಮೀರಿ ಪಂಡಿತರು ಪಲಾಯನ ಮಾಡಬೇಕಾಯಿತು. 1989ರಿಂದ ಹೀಗೆ ಓಡಿಬಂದ ಕಾಶ್ಮೀರಿ ಪಂಡಿತರ ಸಂಖ್ಯೆ ಆರು ಲಕ್ಷ. ಇವರಲ್ಲಿ ಅರ್ಧದಷ್ಟು ಜನ ಬೇರೆ ಬೇರೆ ನಗರಗಳಿಗೆ ಹೋಗಿ ಬದುಕು ಕಟ್ಟಿಕೊಂಡರು. ಇನ್ನರ್ಧ ಜನ ಕಳೆದ 3 ದಶಕಗಳಿಂದ ಜಮ್ಮುವಿನ ನಿರ್ವಸಿತರ ಶಿಬಿರಗಳಲ್ಲಿದ್ದಾರೆ. ಮರಳಿ ತಮ್ಮನೆಲವನ್ನು ಪಡೆಯುತ್ತೇವೆ ಎನ್ನುವ ಕನಸು ಅವರಲ್ಲಿ ಇನ್ನೂ ಜೀವಂತವಾಗಿರುವ ಕುರುಹುಗಳು ಕಾಣುತ್ತಿಲ್ಲ.
ಬದಲಾದ ಪರಿಸ್ಥಿತಿ: ಈಗ ಜಮ್ಮುಕಾಶ್ಮೀರದ ಪರಿಸ್ಥಿತಿ ಭಿನ್ನವಾಗಿದೆ. ಈ ಎಲ್ಲ ಅಪಸವ್ಯಗಳಿಗೆ ಕಾರಣವಾದ, ನಿರಂತರ ದುರುಪಯೋಗಕ್ಕೊಳಗಾಗುತ್ತ ಬಂದ ಸಂವಿಧಾನದ ಆರ್ಟಿಕಲ್ 370ರ ತಿದ್ದುಪಡಿ ಮತ್ತು ಆರ್ಟಿಕಲ್ 35ಎ ಕೊನೆಗೊಂಡಿವೆ. ಅದರೊಂದಿಗೆ ಜಮ್ಮುಕಾಶ್ಮೀರದ ವ್ಯವಸ್ಥೆಯಲ್ಲಿ ಧನಾತ್ಮಕ ಗಾಳಿ ಬೀಸತೊಡಗಿದೆ. ಜತೆಗೆ ಜಮ್ಮುಕಾಶ್ಮೀರದ ಪುನರ್ವಿಂಗಡನೆ ರಾಜಕೀಯ ವ್ಯವಸ್ಥೆಯಲ್ಲಿಯೂ ಗಣನೀಯ ಬದಲಾವಣೆಯನ್ನು ತಂದಿದೆ. ಆರ್ಟಿಕಲ್ 370ನ್ನು ಕೊನೆಗೊಳಿಸುವ ಕೇಂದ್ರ ಸರ್ಕಾರದ ನಿರ್ಧಾರದಿಂದ ಮೊತ್ತಮೊದಲು ಸಂತಸಪಟ್ಟವರು ಜಮ್ಮುವಿನ ನಿರ್ವಸಿತ ಶಿಬಿರಗಳ ನಿವಾಸಿಗಳು. ನೆಮ್ಮದಿಯ ನಾಳೆಗಳನ್ನು ಈ ಸಮುದಾಯ ಎದುರು ನೋಡುತ್ತಿದೆ. ‘ಹೊಸ’ ಜಮ್ಮುಕಾಶ್ಮೀರದಲ್ಲಿ ಇನ್ನಾದರೂ ನಿರ್ವಸಿತ ಶಿಬಿರಗಳಿಂದ ಬರುವ ಕೂಗು ಕೇಳಬಲ್ಲದೇ? ಶೋಚನೀಯ ಬದುಕಿನಿಂದ ಇವರಿಗೆ ಬಿಡುಗಡೆ ಸಿಗಬಹುದೇ?
ಸತ್ಯನಾರಾಯಣ ಶಾನಭಾಗ (ಲೇಖಕರು ಜಮ್ಮುಕಾಶ್ಮೀರ ಅಧ್ಯಯನ ಕೇಂದ್ರ, ಕರ್ನಾಟಕ ಶಾಖೆಯ ಕಾರ್ಯದರ್ಶಿ)