ಬೆಂಗಳೂರು: ಪೊಲೀಸ್ ಪೇದೆಯೊಬ್ಬರ ಸಹಾಯದಿಂದ ಕಾಶ್ಮೀರಿ ಯುವತಿಗೆ ರಾಜ್ಯ ರಾಜಧಾನಿಯಲ್ಲಿ ಕೆಲಸ ಸಿಕ್ಕಿರುವ ವಿಶೇಷ ಘಟನೆ ನಡೆದಿದೆ. ಕಾಶ್ಮೀರಿ ಯುವತಿಗೂ ಬೆಂಗಳೂರು ಪೊಲೀಸ್ ಪೇದೆಗೂ ಎಲ್ಲಿಯ ಸಂಬಂಧ ಎಂದು ಚಿಂತಿಸುವ ಮೊದಲು ಪೂರ್ತಿ ಸ್ಟೋರಿಯನ್ನೊಮ್ಮೆ ಓದಿ….
ಕಾಶ್ಮೀರದ ಯುವತಿ ಮರಿಯಾ ಬೆಂಗಳೂರಿನ ಮಾನ್ಯತಾ ಟೆಕ್ ಪಾರ್ಕ್ನ ಖಾಸಗಿ ಕಂಪನಿಗೆ ಸಂದರ್ಶನಕ್ಕೆ ಬಂದಿದ್ದರು. ಸಂದರ್ಶನಕ್ಕೆ ಹೋಗುವ ತರಾತುರಿಯಲ್ಲಿ ತಮ್ಮ ದಾಖಲಾತಿಗಳನ್ನು ಮರಿಯಾ ಕಳೆದುಕೊಂಡಿದ್ದರು. ಮಾರ್ಕ್ಸ್ ಕಾರ್ಡ್ಸ್, ಆಧಾರ್ ಕಾರ್ಡ್ ಹಾಗೂ ಪಾಸ್ಪೋರ್ಟ್ ಸಮೇತ ಬ್ಯಾಗ್ ಕಳೆದುಕೊಂಡಿದ್ದು ಆಂತಕಕ್ಕೀಡಾಗಿದ್ದರು.
ಆದರೆ, ಮರಿಯಾ ಅದೃಷ್ಟ ಚೆನ್ನಾಗಿತ್ತು ಎಂದು ಕಾಣಿಸುತ್ತದೆ. ಇದೇ ವೇಳೆ ಮಾನ್ಯತಾ ಟೆಕ್ ಪಾರ್ಕ್ ಬಳಿ ಗಸ್ತಿನಲ್ಲಿದ ಸಂಪಿಗೆಹಳ್ಳಿ ಠಾಣೆ ಪೊಲೀಸ್ ಪೇದೆ ಸದಾಶಿವ ಬೆಳಗಲಿ ಅವರಿಗೆ ಸ್ಥಳೀಯರು ಮರಿಯಾ ಕಳೆದುಕೊಂಡಿದ್ದ ಬ್ಯಾಗನ್ನು ನೀಡಿದರು. ಮರಿಯಾ ಫೋನ್ ನಂಬರ್ ಸಿಗದೇ ಇದ್ದುದ್ದರಿಂದ ಬೆಳಗಲಿ ಅಕ್ಕಪಕ್ಕದ ಠಾಣೆಗಳಿಗೆ ಮಾಹಿತಿ ನೀಡಿದ್ದರು.
ಮರುದಿನ ಮರಿಯಾ ಇ- ಲಾಸ್ಟ್ನಲ್ಲಿ ದೂರು ದಾಖಲಿಸ್ತಿದ್ದಂತೆ ಮರಿಯಾ ನಂಬರ್ ಪಡೆದ ಪೊಲೀಸ್ ಪೇದೆ, ಕೂಡಲೇ ಅವರಿಗೆ ಕರೆ ಮಾಡಿ ಕಳೆದುಕೊಂಡಿದ್ದ ದಾಖಲಾತಿಗಳನ್ನು ಹಿಂದಿರುಗಿಸಿದ್ದಾರೆ. ಇದೀಗ ಓರಿಜಿನಲ್ ಡಾಕ್ಯುಮೆಂಟ್ಸ್ ಸಲ್ಲಿಸಿ ಸಂದರ್ಶನದಲ್ಲಿ ಮರಿಯಾ ಆಯ್ಕೆಯಾಗಿದ್ದಾರೆ. ಕಳೆದುಕೊಂಡಿದ್ದ ದಾಖಲೆಗಳು ಮತ್ತೆ ಸಿಕ್ಕಿದ್ದನ್ನ ಕಂಡು ಮರಿಯಾ ಒಂದು ಕ್ಷಣ ಭಾವುಕರಾದರು. ಸಂಪಿಗೆಹಳ್ಳಿ ಠಾಣೆ ಪೊಲೀಸರ ಸಹಾಯಕ್ಕೆ ಇದೇ ವೇಳೆ ಮರಿಯಾ ಧನ್ಯವಾದ ತಿಳಿಸಿದ್ದಾರೆ. (ದಿಗ್ವಿಜಯ ನ್ಯೂಸ್)