ಕ್ರೀಡಾ ಆಕಸ್ಮಿಕಕ್ಕೆ ಮತ್ತೊಂದು ಬಲಿ: ಹೆಲ್ಮೆಟ್​ ಧರಿಸಿದ್ದ ಹೊರತಾಗಿ ಶಾರ್ಟ್​ಪಿಚ್​ ಚೆಂಡು ಕತ್ತಿಗೆ ಬಡಿದು ಬಾಲಕನ ಸಾವು

ಶ್ರೀನಗರ: ಕ್ರೀಡೆಗಳಲ್ಲಿ ಆಕಸ್ಮಿಕವಾಗಿ ಆಯಕಟ್ಟಿನ ಸ್ಥಳಕ್ಕೆ ಚೆಂಡು ಬಡಿದು ಆಟಗಾರರು ಮೃತಪಡುವ ಪರ್ವ ಮುಂದುವರಿದಿದೆ. ದಕ್ಷಿಣ ಕಾಶ್ಮೀರದ ಅನಂತ್​ನಾಗ್​ ಜಿಲ್ಲೆಯಲ್ಲಿ ಯುವಜನಸೇವೆ ಮತ್ತು ಕ್ರೀಡಾ ಇಲಾಖೆ ಆಯೋಜಿಸಿದ್ದ 19 ವಯೋಮಿತಿ ಕ್ರಿಕೆಟ್​ ಟೂರ್ನಿಯಲ್ಲಿ ಇಂಥದ್ದೇ ಆಕಸ್ಮಿಕ ಸಂಭವಿಸಿದ್ದು, ಬ್ಯಾಟ್ಸ್​ಮನ್​ ಮೃತಪಟ್ಟಿದ್ದಾನೆ.

ಉತ್ತರ ಕಾಶ್ಮೀರದ ಬಾರಾಮುಲ್ಲಾ ಜಿಲ್ಲೆಯ ಎಡಗೈ ಬ್ಯಾಟ್ಸ್​ಮನ್​ ಆಗಿದ್ದ ಜಹಂಗೀರ್​ ಅಹ್ಮದ್​ ವಾರ್​ (18) ಮೃತ ಯುವಕ. ಅನಂತ್​ನಾಗ್​ನಲ್ಲಿ ಆಯೋಜನೆಗೊಂಡಿದ್ದ ಟೂರ್ನಿಯಲ್ಲಿ ಬಾರಾಮುಲ್ಲಾ ಮತ್ತು ಬದ್ಗಾಂನ 19 ವಯೋಮಿತಿ ತಂಡದ ನಡುವಿನ ಪಂದ್ಯದ ವೇಳೆ ಈ ಅವಘಡ ಸಂಭವಿಸಿದೆ.

ವಾರ್​ ಹೆಲ್ಮೆಟ್​ ಧರಿಸಿಕೊಂಡು ಬ್ಯಾಟಿಂಗ್​ ಮಾಡುತ್ತಿದ್ದ. ಎದುರಾಳಿ ತಂಡದ ವೇಗದ ಬೌಲರ್​ ಹಾಕಿದ ಶಾರ್ಟ್​ಪಿಚ್​ ಚೆಂಡನ್ನು ಹುಕ್​ ಮಾಡಲು ವಾರ್​ ಪ್ರಯತ್ನಿಸಿದ್ದ. ದುರದೃಷ್ಟವಶಾತ್​ ಆ ಚೆಂಡು ಬೇರೊಂದು ಕೋನದಲ್ಲಿ ವಾರ್​ ಅವರ ಕತ್ತಿನ ಬಲಭಾಗಕ್ಕೆ ಜೋರಾಗಿ ಅಪ್ಪಳಿಸಿತ್ತು. ಪ್ರಜ್ಱಎ ತಪ್ಪಿ ಕೆಳಬಿದ್ದ ಅವರನ್ನು ಹತ್ತಿರದ ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ ಆ ವೇಳೆಗಾಗಲೆ ಅವರ ಪ್ರಾಣಪಕ್ಷಿ ಹಾರಿಹೋಗಿತ್ತು.

ಆತನನ್ನು ಪರೀಕ್ಷಿಸಿದ ವೈದ್ಯರು ವಾರ್​ ಅವರ ಬ್ರೇನ್​ಸ್ಟೆಮ್​ಗೆ ಗಂಭೀರ ಪೆಟ್ಟು ಬಿದ್ದಿದ್ದರಿಂದ ಮೃತಪಟ್ಟಿರುವುದಾಗಿ ಹೇಳಿದ್ದಾರೆ. ಸಿಡ್ನಿಯಲ್ಲಿ 2014ರ ನವೆಂಬರ್​ 25ರಂದು ಸಿಡ್ನಿಯಲ್ಲಿ ನಡೆದಿದ್ದ ಶೆಫೀಲ್ಡ್​ ಶೀಲ್ಡ್​ ಕ್ರಿಕೆಟ್​ ಟೂರ್ನಿಯ ಸಂದರ್ಭದಲ್ಲಿ ಆಸ್ಟ್ರೇಲಿಯಾದ ಬ್ಯಾಟ್ಸ್​ಮನ್​ ಫಿಲ್​ ಹೂಸ್​ಗೆ ಚೆಂಡು ಅಪ್ಪಳಿಸಿದ್ದ ರೀತಿಯಲ್ಲೇ ವಾರ್​ಗೂ ಚೆಂಡು ಅಪ್ಪಳಿಸಿತ್ತು. ಆದರೆ ಫಿಲ್​ ಹೂಸ್​ 2 ದಿನ ಜೀವನ್ಮರಣದ ಹೋರಾಟ ನಡೆಸಿ ಮೃತಪಟ್ಟಿದ್ದರು. ಆದರೆ ವಾರ್​ ಆ ಕ್ಷಣದಲ್ಲೇ ಪ್ರಾಣಬಿಟ್ಟಿದ್ದಾಗಿ ಜಮ್ಮು ಮತ್ತು ಕಾಶ್ಮೀರದ ಯುವಜನ ಸೇವೆ ಮತ್ತು ಕ್ರೀಡಾ ಇಲಾಖೆಯ ಪ್ರಧಾನ ನಿರ್ದೇಶಕ ಸಲೀಂ ಉರ್​ ರೆಹಮಾನ್​ ತಿಳಿಸಿದ್ದಾರೆ. (ಏಜೆನ್ಸೀಸ್​)

Leave a Reply

Your email address will not be published. Required fields are marked *