ಕಾಶಪ್ಪನವರೇ, ಸೋಲಿಸಿದ್ದು ನಾವಲ್ಲ!

ಬಾಗಲಕೋಟೆ: ಕಾಶಪ್ಪನವರೇ ಚುನಾವಣೆಯಲ್ಲಿ ನಿಮ್ಮನ್ನು ಸೋಲಿಸಿದ್ದು ಪಕ್ಷದ ಹಿರಿಯ ಮುಖಂಡರಲ್ಲ. ನಿಮ್ಮ ಅಹಂಕಾರ, ಹಿಡಿತವಿಲ್ಲದ ಭಾಷೆ ಹಾಗೂ ದುರ್ನಡತೆಯೇ ಕಾರಣ. ನಿಮ್ಮ ತಪ್ಪನ್ನು ಮುಚ್ಚಿಟ್ಟುಕೊಂಡು ಇನ್ನೊಬ್ಬರ ಕಡೆ ಬೊಟ್ಟು ಮಾಡುವುದನ್ನು ನಿಲ್ಲಿಸಿ…

ಇದು ಮಾಜಿ ಶಾಸಕ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಎಸ್.ಜಿ. ನಂಜಯ್ಯನಮಠ ಅವರು ಹುನಗುಂದ ಮಾಜಿ ಶಾಸಕ ವಿಜಯಾನಂದ ಕಾಶಪ್ಪನವರಿಗೆ ಹೇಳಿದ ಕಿವಿಮಾತು.

ಕಳೆದ ವಿಧಾನಸಭೆ ಚುನಾವಣೆಯಲ್ಲಿ ತಮ್ಮ ಸೋಲಿಗೆ ಪಕ್ಷದ ಮಾಜಿ ಸಚಿವ ಎಸ್.ಆರ್. ಪಾಟೀಲ, ಆರ್.ಬಿ. ತಿಮ್ಮಾಪುರ, ಮಾಜಿ ಶಾಸಕ ಎಸ್.ಜಿ. ನಂಜಯ್ಯನಮಠ, ರವೀಂದ್ರ ಕಲಬುರ್ಗಿ ಮುಂತಾದವರೇ ಕಾರಣ ಎಂದು ಮೇಲಿಂದ ಮೇಲೆ ಆರೋಪ ಮಾಡುತ್ತಿದ್ದ ಕಾಶಪ್ಪನವರಿಗೆ ನಂಜಯ್ಯನಮಠ ನಗರದ ಪ್ರೆಸ್​ಕ್ಲಬ್​ನಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಕೊಟ್ಟ ಖಡಕ್ ಉತ್ತರವಿದು.

ಸುಳ್ಳು ಶೋಭೆ ತರುವುದಿಲ್ಲ: ನಾವುಗಳ್ಯಾರೂ ಪಕ್ಷ ದ್ರೋಹ ಕೆಲಸ ಮಾಡಿಲ್ಲ. ಎಸ್.ಆರ್. ಪಾಟೀಲ, ಆರ್.ಬಿ. ತಿಮ್ಮಾಪುರ ಅವರು ಬಾದಾಮಿ ಕ್ಷೇತ್ರದಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಚುನಾವಣೆ ಜವಾಬ್ದಾರಿ ಹೊತ್ತಿದ್ದರು. ಹೀಗಾಗಿ ಸಮಯದ ಅಭಾವದಿಂದ ಹುನಗುಂದ ಕ್ಷೇತ್ರಕ್ಕೆ ಪ್ರಚಾರಕ್ಕೆ ಬರಲಾಗಲಿಲ್ಲ. ಆದರೆ ನಾನು, ಆರು ಸಲ ವಿಜಯಾನಂದ ಕಾಶಪ್ಪನವರು ಕರೆದಿದ್ದ ಸಭೆಗಳಲ್ಲಿ ಪಾಲ್ಗೊಂಡಿದ್ದೇನೆ. ಹೀಗಿದ್ದರೂ ನನ್ನ ಪರ ಪ್ರಚಾರಕ್ಕೆ ಬಂದಿಲ್ಲ. ಇದರಿಂದಲೇ ಸೋಲಾಯಿತು. ನನ್ನ ಸೋಲಿಗೆ ಇವರೇ ಕಾರಣ ಎಂದೆಲ್ಲ ಮಾಧ್ಯಮದ ಎದುರು ಸುಳ್ಳು ಹೇಳುತ್ತಿರುವುದು ಕಾಶಪ್ಪ ಅವರಿಗೆ ಶೋಭೆ ತರುವಂತದ್ದಲ್ಲ ಎಂದರು.

ಪಕ್ಷ ವಿರೋಧಿ ಕೆಲಸ ಮಾಡಿಲ್ಲ: ನಾವೇ ನಿಜವಾಗಿಯೂ ಅವರ ಸೋಲಿಗೆ ಪಕ್ಷ ವಿರೋಧಿ ಕೆಲಸ ಮಾಡಿದ್ದೇವೆ ಎಂದು ಹೇಳುವುದಾದರೆ ಪಕ್ಷದ ವರಿಷ್ಠರು ಗುಪ್ತಚರ ಇಲಾಖೆಯಿಂದ ವರದಿ ತರಿಸಿಕೊಂಡು ಪರಿಶೀಲನೆ ನಡೆಸಲಿ. ಅದರಲ್ಲಿ ನಾನು ತಪ್ಪು ಮಾಡಿದ್ದೇನೆ ಎಂಬುದು ಸಾಬೀತಾದಲ್ಲಿ ನನಗೆ ಪಕ್ಷ ವಹಿಸಿರುವ ಎಲ್ಲಾ ಹುದ್ದೆಗಳನ್ನು ತೊರೆಯುವುದಾಗಿ ನಂಜಯ್ಯನಮಠ ಸವಾಲು ಹಾಕಿದರು.

ಸ್ವಯಂಕೃತ ಅಪರಾಧ: ವಿಜಯಾನಂದ ಕಾಶಪ್ಪನವರ ಸೋಲಿಗೆ ಅವರೇ ಕಾರಣರಾಗಿದ್ದಾರೆ. 2013ರಲ್ಲಿ ಅವರ ಗೆಲುವಿಗೆ ಶ್ರಮಿಸಿದ್ದ ಅಲ್ಪಸಂಖ್ಯಾತ ಸಮುದಾಯದ ಮುಖಂಡ ಉಸ್ಮಾನ್​ಗಣಿ ಅವರನ್ನು ಅಧಿಕಾರಿಗಳ ಮೇಲೆ ಒತ್ತಡ ತಂದು 17 ದಿನ ಜೈಲಿಗೆ ಹಾಕಿಸಿದ್ದರು. ನೇಕಾರರ ಸಮುದಾಯದ ಮುಖಂಡ ವೆಂಕಟೇಶ ಸಾಕಾ ಅವರ ನಗರಸಭೆ ಸದಸ್ಯತ್ವ ರದ್ದು ಮಾಡಿಸಿದ್ದರು. ವಿಧಾನಸಭೆ ಚುನಾವಣೆಗೆ ಕೇವಲ ಮೂರು ದಿನ ಇರುವಾಗ ಅವರ ಸಹೋದರ ದಲಿತ ವ್ಯಕ್ತಿ ಮೇಲೆ ಹಲ್ಲೆ ನಡೆಸಿದ್ದರು. ಮತದಾನದ ದಿನ ಸ್ವತಃ ವಿಜಯಾನಂದ ಅವರೇ ವ್ಯಕ್ತಿಯೊಬ್ಬರ ಮೇಲೆ ಹಲ್ಲೆ ನಡೆಸಿದ್ದರು. ಅಷ್ಟೇ ಅಲ್ಲ ಚುನಾವಣೆ ಪ್ರಚಾರದಲ್ಲಿಯೂ ತಮ್ಮ ಎದುರಾಳಿ ಅಭ್ಯರ್ಥಿಗಳ ವಿರುದ್ಧ ಬಹಳ ಹಗುರವಾಗಿ ಮಾತನಾಡಿ ‘ನಾನು ಗೆದ್ದ ತಕ್ಷಣ ಅವರನ್ನು ಊರು ಬಿಟ್ಟು ಓಡಿಸುವೆ’ ಎಂದೆಲ್ಲಾ ಭಾಷಣದಲ್ಲಿ ಪ್ರಸ್ತಾಪಿಸಿದ್ದರು. ಇದೆಲ್ಲವೂ ಅವರ ಸೋಲಿನಲ್ಲಿ ಸೇರಿಕೊಂಡಿದೆ. ಪ್ರಜಾಪ್ರಭುತ್ವದಲ್ಲಿ ಇಂಥಹ ನಡವಳಿಕೆ ಸರಿಯೇ? ಇದೆಲ್ಲವೂ ಅವರ ಸ್ವಯಂಕೃತ ಅಪರಾಧ ಹೀಗಾಗಿಯೇ ಅವರನ್ನು ಮತದಾರ ತಿರಸ್ಕರಿಸಿದ್ದಾನೆ ಎಂದು ಕಾಶಪ್ಪನವರ ಸೋಲನ್ನು ವಿಶ್ಲೇಷಿಸಿದರು.

ಕಾಂಗ್ರೆಸ್ ಪಕ್ಷದ ಮುಖಂಡ ಫೀರಪ್ಪ ಮ್ಯಾಗೇರಿ ಇತರರು ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

ವಿಜಯಾನಂದ ಅವರ ಪತ್ನಿ ವೀಣಾ ಕಾಶಪ್ಪನವರ ಜಿಪಂ ಅಧ್ಯಕ್ಷರಾಗಲು ಮಾಜಿ ಸಚಿವ ಎಸ್.ಆರ್. ಪಾಟೀಲರೇ ಕಾರಣ. ಅವರು ಪ್ರಯತ್ನ ಮಾಡದೇ ಇದ್ದಲ್ಲಿ ಕಾಂಗ್ರೆಸ್​ಗೆ ಅಧಿಕಾರ ಸಿಗುತ್ತಿರಲಿಲ್ಲ. ನಮ್ಮನ್ನು ಸೇರಿದಂತೆ ಜಿಪಂ ಸದಸ್ಯರೆಲ್ಲರ ಮನವೊಲಿಸಿ, ವೀಣಾ ಅವರನ್ನು ಅಧ್ಯಕ್ಷರನ್ನಾಗಿ ಮಾಡಿದರು. ಈ ಬಗ್ಗೆ ಬೇಕಿದ್ದರೆ ಮಾಜಿ ಸಚಿವ ಎಚ್.ವೈ. ಮೇಟಿ, ಜೆ.ಟಿ. ಪಾಟೀಲ, ಅಧ್ಯಕ್ಷ ಸ್ಥಾನದ ಆಕಾಂಕ್ಷಿಗಳಾಗಿದ್ದ ಸದಸ್ಯರನ್ನು ಕೇಳಬಹುದು. ಇದೀಗ ತಮ್ಮ ಪತ್ನಿ ಅಧ್ಯಕ್ಷರಾಗಲು ತಾವೊಬ್ಬರೇ ಕಾರಣ ಎಂದು ಸುಳ್ಳು ಹೇಳುತ್ತಿದ್ದಾರೆ.

| ಎಸ್.ಜಿ. ನಂಜಯ್ಯನಮಠ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ