ಎಂಡೋ ಸಂತ್ರಸ್ತರಿಗೆ ಉಚಿತ ಮನೆ

ಪುರುಷೋತ್ತಮ ಪೆರ್ಲ ಕಾಸರಗೋಡು
ಎಂಡೋಸಲ್ಫಾನ್ ದುಷ್ಪರಿಣಾಮ ಪೀಡಿತ ಕುಟುಂಬಗಳಿಗಾಗಿ ಶ್ರೀ ಸತ್ಯಸಾಯಿ ಅಭಯಾಶ್ರಮ ಟ್ರಸ್ಟ್ ವತಿಯಿಂದ ಎಣ್ಮಕಜೆಯಲ್ಲಿ ನಿರ್ಮಿಸಲಾದ ಮನೆಗಳು ಲೋಕಾರ್ಪಣೆಗೆ ಸಿದ್ಧಗೊಂಡಿವೆೆ. ಮಂಜೇಶ್ವರ ತಾಲೂಕು ಎಣ್ಮಕಜೆ ಪಂಚಾಯಿತಿಯ ಪೆರ್ಲ ಸನಿಹದ ಕಾನದಲ್ಲಿ ಒಟ್ಟು 36 ಮನೆ ನಿರ್ಮಿಸಲಾಗಿದ್ದು, ಸಂತ್ರಸ್ತ ಕುಟುಂಬಗಳಿಗೆ ಮನೆಗಳ ಕೀಲಿಕೈ ಹಸ್ತಾಂತರ ಶೀಘ್ರ ನಡೆಯಲಿದೆ.

ಕೇರಳ ಸರ್ಕಾರ ಮತ್ತು ಶ್ರೀ ಸತ್ಯಸಾಯಿ ಆರ್ಫನೇಜ್ ಟ್ರಸ್ಟ್ ಸಂಯುಕ್ತವಾಗಿ ಯೋಜನೆ ಜಾರಿಗೊಳಿಸುತ್ತಿವೆ. ಸರ್ಕಾರ ಮಂಜೂರುಗೊಳಿಸಿದ ಭೂಮಿಯಲ್ಲಿ ಟ್ರಸ್ಟ್ ಸುಸಜ್ಜಿತ ಮನೆಗಳನ್ನು ನಿರ್ಮಿಸಿ ಎಂಡೋ ದುಷ್ಪರಿಣಾಮ ಪೀಡಿತರಿಗೆ ಹಸ್ತಾಂತರಿಸುವ ಮೂಲಕ ಸಂತ್ರಸ್ತರ ಕಣ್ಣೀರು ಒರೆಸಲು ಮುಂದಾಗಿದೆ.

ಇಲ್ಲಿ ಸುಸಜ್ಜಿತ ಮನೆಗಳ ನಿರ್ಮಾಣವಾಗಿದೆ. ಕಾನ ತಿಂಗಳಪದವಿನ ಎತ್ತರ ಪ್ರದೇಶದಲ್ಲಿ ಸಾಲು ಮನೆಗಳನ್ನು ನಿರ್ಮಿಸಲಾಗಿದ್ದು, ಮಕ್ಕಳ ಪಾರ್ಕ್, ಉದ್ಯೋಗ ತರಬೇತಿ ಕೇಂದ್ರ, ಸಮುದಾಯಭವನ, ಎಂಡೋ ಸಂತ್ರಸ್ತರ ಮಕ್ಕಳಿಗಾಗಿ ಬಡ್ಸ್ ಶಾಲೆ ನಿರ್ಮಾಣದ ಗುರಿ ಇರಿಸಲಾಗಿದೆ. ಈಗಾಗಲೇ ಜಿಲ್ಲೆಯ ಎಂಡೋಸಂತ್ರಸ್ತ 36 ಕುಟುಂಬಗಳನ್ನು ಗುರುತಿಸಲಾಗಿದ್ದು, ಇವರಿಗೆ ಸಾಯಿ ಗ್ರಾಮದಲ್ಲಿ ಸೂರು ಕಲ್ಪಿಸುವ ಮಹತ್ವದ ಯೋಜನೆ ಕಾರ್ಯಗತಗೊಳ್ಳಲಿದೆ. ಮನೆಗಳ ನಿರ್ಮಾಣಕ್ಕಾಗಿ 2017 ಮಾರ್ಚ್ ತಿಂಗಳಲ್ಲಿ ಶಿಲಾನ್ಯಾಸ ನಡೆಸಲಾಗಿದ್ದು, ಎರಡು ವರ್ಷದೊಳಗೆ ಕಾಮಗಾರಿ ಪೂರ್ತಿಗೊಳಿಸಲಾಗಿದೆ.

ರಸ್ತೆ ತಕರಾರು: ಮುಖ್ಯ ರಸ್ತೆಯಿಂದ ಸಾಯಿಗ್ರಾಮಕ್ಕೆ ತೆರಳುವ ಮಾರ್ಗವಿರುವ ಭೂಮಿ ಖಾಸಗಿ ವ್ಯಕ್ತಿಯೊಬ್ಬರಿಗೆ ಸೇರಿದ್ದು, ಸರ್ವಋತು ಸಂಚಾರದ ರಸ್ತೆ ನಿರ್ಮಾಣಕ್ಕೆ ಇದು ತೊಡಕಾಗುತ್ತಿದೆ. ಈ ಜಾಗ ಲಭ್ಯವಾಗಿಸುವ ಬಗ್ಗೆ ಪ್ರಯತ್ನ ಮುಂದುವರಿದಿದೆ. ಈ ಜಾಗಕ್ಕೆ ಸಮಾನ ಭೂಮಿ ಬೇರೊಂದು ಕಡೆ ಒದಗಿಸಲು ಸರ್ಕಾರ ಮುಂದಾಗಿದೆ. ಈ ಬಗ್ಗೆ ಜಿಲ್ಲಾಧಿಕಾರಿಯವರೂ ಸಕಾರಾತ್ಮಕ ನಿಲುವು ವ್ಯಕ್ತಪಡಿಸಿದ್ದಾರೆ. ಎಂಡೋ ಸಂತ್ರಸ್ತರ ನೋವು ಪರಿಗಣಿಸಿ, ವಾರೀಸುದಾರರು ಜಾಗ ಬಿಟ್ಟುಕೊಡಲು ಮುಂದಾಗಲಿದ್ದಾರೆ ಎಂದೂ ಟ್ರಸ್ಟ್ ಅಧಿಕಾರಿಗಳು ಆಶಾಭಾವ ವ್ಯಕ್ತಪಡಿಸಿದ್ದಾರೆ.

ತೀರ್ಥಸ್ನಾನಕ್ಕೆ ಆತಂಕ: ಬಜಕೂಡ್ಲು ಶ್ರೀ ಮಹಾಲಿಂಗೇಶ್ವರ ದೇವರ ಅಭಿಷೇಕ ಹಾಗೂ ನೈವೇದ್ಯ ತಯಾರಿಗಾಗಿ ಕಾನ ಶ್ರೀ ಶಾಸ್ತಾರ ಸನ್ನಿಧಿಯ ತೊರೆಯಿಂದ ನೀರು ಕೊಂಡೊಯ್ಯಲಾಗುತ್ತಿದೆ. ತಿಂಗಳಪದವಿನಲ್ಲಿ ಸಾಯಿಟ್ರಸ್ಟ್ ಸಂತ್ರಸ್ತರಿಗಾಗಿ ಮನೆ ನಿರ್ಮಾಣ ಮಾಡಿರುವುದರಿಂದ, ಇಲ್ಲಿನ ಕೊಳಚೆ ನೀರು ಕಾನಕ್ಕೆ ಹರಿದು ಶುಚಿತ್ವ ಹಾಗೂ ಪಾವಿತ್ರ್ಯತೆ ಹಾಳಾಗುವ ಬಗ್ಗೆ ನಾಗರಿಕರು ಭೀತಿ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಟ್ರಸ್ಟ್ ಪದಾಧಿಕಾರಿಗಳು ಗಮನಹರಿಸುವಂತೆ ಭಕ್ತರು ಮನವಿ ಮಾಡಿದ್ದಾರೆ.

ಸುಮಾರು ಆರು ಲಕ್ಷ ರೂ. ವೆಚ್ಚದಲ್ಲಿ ತಲಾ ಒಂದು ಮನೆ ನಿರ್ಮಿಸಲಾಗಿದ್ದು, ಕೆಲಸ ಬಹುತೇಕ ಪೂರ್ತಿಗೊಂಡಿದೆ. ಚುನಾವಣೆ ಪ್ರಕ್ರಿಯೆ ಪೂರ್ತಿಗೊಂಡ ನಂತರ ಫಲಾನುಭವಿಗಳಿಗೆ ಕೀಲಿಕೈ ಹಸ್ತಾಂತರ ಸಮಾರಂಭ ನಡೆಯಲಿದೆ. ಮಕ್ಕಳ ಪಾರ್ಕ್ ಸಹಿತ ಕೆಲವೊಂದು ಸೌಕರ್ಯ ಒಳಗೊಂಡಂತೆ ಮತ್ತಷ್ಟು ಕೆಲಸಗಳೂ ಇಲ್ಲಿ ನಡೆಯಲು ಬಾಕಿಯಿದೆ. ಸಾಯಿ ಗ್ರಾಮಕ್ಕೆ ಆಗಮಿಸುವ ರಸ್ತೆ ಅಭಿವೃದ್ಧಿ ಕಾರ್ಯವೂ ನಡೆಯಬೇಕಾಗಿದೆ.
|ಮಧುಸೂದನನ್, ಕೋಶಾಧಿಕಾರಿ, ಶ್ರೀ ಸತ್ಯಸಾಯಿ ಆರ್ಫನೇಜ್ ಟ್ರಸ್ಟ್