ಕಾಸರಗೋಡು: ದಕ್ಷಿಣ ಕನ್ನಡದ ಜತೆ ಗಡಿ ಹಂಚಿಕೊಂಡಿರುವ ಕಾಸರಗೋಡು ಜಿಲ್ಲೆಯಲ್ಲಿ ಹೊಸದಾಗಿ 19 ಪ್ರಕರಣ ಸೋಮವಾರ ಪತ್ತೆಯಾಗಿದ್ದು, ಜಿಲ್ಲೆಯಲ್ಲಿ ಒಟ್ಟು ಕರೊನಾ ಪೀಡಿತರ ಸಂಖ್ಯೆ 38ಕ್ಕೆ ಏರಿಕೆಯಾಗಿದೆ. ಇದರೊಂದಿಗೆ ಕೇರಳದಲ್ಲಿ ಕೋವಿಡ್ ವೈರಸ್ ಬಾಧಿತರ ಸಂಖ್ಯೆ 91ಕ್ಕೆ ಮುಟ್ಟಿದೆ.
ಕಾಸರಗೋಡಿನಲ್ಲಿ ಇದುವರೆಗೆ 41 ಮಂದಿಗೆ ಕರೊನಾ ವೈರಸ್ ತಗುಲಿದ್ದು, ಇವರಲ್ಲಿ ಮೂರು ಮಂದಿ ಚಿಕಿತ್ಸೆ ನಂತರ ಗುಣಮುಖರಾಗಿ ಮನೆಗೆ ತೆರಳಿದ್ದಾರೆ. ಪ್ರಸಕ್ತ ಒಟ್ಟು 38 ಮಂದಿ ಸೋಂಕು ಪೀಡಿತರು ಐಸೊಲೇಶನ್ ವಾರ್ಡಿನಲ್ಲಿದ್ದಾರೆ.

ಸೋಂಕು ಹರಡುವಿಕೆ ಸಂಬಂಧ ಜಿಲ್ಲೆಯಲ್ಲಿ ಹಲವು ಮಂದಿಯನ್ನು ನಿಗಾದಲ್ಲಿರಿಸಲಾಗಿದೆ. ಜಿಲ್ಲೆಯ ಇಬ್ಬರು ಶಾಸಕರನ್ನೂ ಒಳಗೊಂಡಂತೆ 886 ಮಂದಿ ನಿಗಾದಲ್ಲಿದ್ದಾರೆ. ಇವರಲ್ಲಿ 61 ಮಂದಿ ಆಸ್ಪತ್ರೆಗಳಲ್ಲಿ, 825 ಮಂದಿ ಮನೆಗಳಲ್ಲೂ ನಿಗಾದಲ್ಲಿದ್ದಾರೆ. ನೂತನವಾಗಿ 81 ಮಂದಿಯ ಸ್ಯಾಂಪಲ್ ತಪಾಸಣೆಗೆ ಕಳುಹಿಸಲಾಗಿದೆ. ಕಾಸರಗೋಡಿನ ಕೂಡ್ಲು ನಿವಾಸಿಯೊಬ್ಬ ದುಬೈಯಿಂದ ಮಾರ್ಚ್ 12ರಂದು ಊರಿಗೆ ಆಗಮಿಸಿದ್ದು, ಯಾವುದೇ ನಿಯಂತ್ರಣವಿಲ್ಲದೆ ಹತ್ತು ಹಲವು ಕಾರ್ಯಕ್ರಮಗಳಲ್ಲಿ ಭಾಗವಹಿಸಿರುವುದರಿಂದ ವೈರಸ್ ಭಾರಿ ಪ್ರಮಾಣದಲ್ಲಿ ವ್ಯಾಪಿಸಲು ಕಾರಣವಾಗಿದೆ.
ಇಡೀ ಕೇರಳದಲ್ಲಿ ಕಾಸರಗೋಡಿನಲ್ಲೇ ಅತಿ ಹೆಚ್ಚು ಪ್ರಕರಣ ದಾಖಲಾಗಿರುವುದು ಮತ್ತು ಕರ್ನಾಟಕದೊಂದಿಗೆ ಗಡಿ ಹಂಚಿಕೊಂಡಿರುವುದು ಆತಂಕದ ವಿಚಾರವಾಗಿದೆ. ಈಗಾಗಲೇ ದ.ಕ. ಮತ್ತು ಕಾಸರಗೋಡು ಸಂಪರ್ಕದ ರಸ್ತೆಗಳನ್ನು ಮುಚ್ಚಲಾಗಿದ್ದು, ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಅನವಶ್ಯಕವಾಗಿ ರಸ್ತೆಗೆ ಇಳಿಯುವವರನ್ನು ಬಂಧಿಸುವುದರ ಜತೆಗೆ ದೊಡ್ಡ ಮೊತ್ತದ ದಂಡ ವಸೂಲಿ ಮಾಡುವಂತೆ ಆದೇಶಿಸಲಾಗಿದೆ.
ಸಂಪೂರ್ಣ ಬಂದ್: ಕಾಸರಗೋಡು ಜಿಲ್ಲೆಯನ್ನು ಸೆಕ್ಷನ್ 144 ನಿಷೇಧಾಜ್ಞೆ ಜತೆಗೆ ಸಂಪೂರ್ಣ ಲಾಕ್‌ಡೌನ್ ಮಾಡಲಾಗಿದೆ. ಮಂಗಳೂರು- ಕಣ್ಣೂರು ರಾಷ್ಟ್ರೀಯ ಹೆದ್ದಾರಿಯನ್ನು ತಲಪಾಡಿ ಮತ್ತು ಕಣ್ಣೂರು ಜಿಲ್ಲೆಯ ಗಡಿಪ್ರದೇಶ ಕಲಿಕಡವಿನಲ್ಲಿ ಸಂಪೂರ್ಣ ಬಂದ್ ಮಾಡಲಾಗಿದೆ. ಕಣ್ಣೂರು ಗಡಿಪ್ರದೇಶದಲ್ಲಿ ಬಿದಿರಿನ ತಾತ್ಕಾಲಿಕ ತಡೆಗೋಡೆ ನಿರ್ಮಿಸಿ, ಪೊಲೀಸ್ ಕಾವಲು ಏರ್ಪಡಿಸಲಾಗಿದೆ. ಈ ಮೂಲಕ ಕಾಸರಗೋಡು ಸಂಪೂರ್ಣ ಇತರ ಜಿಲ್ಲೆಗಳ ಸಂಪರ್ಕ ಕಳೆದುಕೊಂಡಿದೆ.
ಕಾಸರಗೋಡಿನಲ್ಲಿ 1500 ಪೊಲೀಸರ ನಿಯೋಜನೆ
ಜಿಲ್ಲೆಯಲ್ಲಿ ಕೋವಿಡ್-19 ಸೋಂಕು ಪ್ರತಿರೋಧ ಚಟುವಟಿಕೆಗಳ ಅಂಗವಾಗಿ ರಾಜ್ಯ ಸರ್ಕಾರ ಕೈಗೊಂಡಿರುವ ಕಠಿಣ ನಿಯಂತ್ರಣಗಳ ಜಾರಿಗೆ ಜಿಲ್ಲೆಯಲ್ಲಿ 1500 ಪೊಲೀಸರನ್ನು ನಿಯೋಗಿಸಲಾಗುವುದು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪಿ.ಎಸ್.ಸಾಬು ತಿಳಿಸಿದ್ದಾರೆ.
ಉತ್ತರ ವಲಯ ಐಜಿ ಅಶೋಕ್ ಯಾದವ್, ಎರ್ನಾಕುಲಂ ಸಿಟಿ ಪೊಲೀಸ್ ಕಮೀಷನರ್ ವಿಜಯ್ ಸಖಾರೆ, ಡಿಐಜಿ ಸೇತುರಾಮನ್, ಕೋಟ್ಟಾಯಂ ಕ್ರೈಂಬ್ರಾಂಚ್ ಎಸ್.ಪಿ. ಸಾಬು ಮ್ಯಾಥ್ಯೂ, ಟೆಲಿ ಕಮ್ಯೂನಿಕೇಷನ್ ಎಸ್.ಪಿ. ಶಿಲ್ಪಾ ಡಿ. ನೇತೃತ್ವ ವಹಿಸುವರು. ನಿಷೇಧಾಜ್ಞೆ ಜಾರಿಯಲ್ಲಿರುವ ವೇಳೆ ಅನಾವಶ್ಯಕ ಅಲೆದಾಡುವವರನ್ನು ಬಂಧಿಸುವ ನಿಟ್ಟಿನಲ್ಲಿ 10 ವಾಹನಗಳಲ್ಲಿ 50 ಪೊಲೀಸರನ್ನು ನಿಯೋಜಿಸಲಾಗಿಸಲಾಗುವುದು. ಮನೆಯಿಂದ ಹೊರಬಂದವರ ಅನಿವಾರ್ಯತೆಯನ್ನು ವಿಚಾರಿಸಿ, ಸರಿಯಾದುದೆಂದು ಕಂಡುಬಂದಲ್ಲಿ ತೆರಳಲು ಅನುಮತಿ ನೀಡಲಾಗುವುದು. ಬೆಳಗ್ಗೆ 11ರಿಂದ ಸಂಜೆ 5 ಗಂಟೆವರೆಗೆ ಅಂಗಡಿಗಳಿಗೆ ತೆರಳುವವರು ಗುಂಪಾಗಿ ನಿಲ್ಲುವಂತಿಲ್ಲ ಎಂದೂ ಸೂಚಿಸಲಾಗಿದೆ.