ಸರ್ಕಾರಿ ಕಾಲೇಜಿನಲ್ಲಿ ಅವಹೇಳನಕಾರಿ ಗೋಡೆಬರಹ, ಕನ್ನಡ ಮಾಧ್ಯಮ ವಿದ್ಯಾರ್ಥಿಗಳ ಪ್ರತಿಭಟನೆ

ಕಾಸರಗೋಡು: ಇಲ್ಲಿನ ಸರ್ಕಾರಿ ಕಾಲೇಜಿನ ಕನ್ನಡ ಸ್ನಾತಕೋತ್ತರ ಅಧ್ಯಯನ ಮತ್ತು ಸಂಶೋಧನಾ ಕೇಂದ್ರ ವಿಭಾಗದಲ್ಲಿ ಕನ್ನಡ ಭಾಷೆ ಹಾಗೂ ಕನ್ನಡಿಗರ ವಿರುದ್ಧ ಅವಹೇಳನಕಾರಿ ಬರೆದಿದ್ದನ್ನು ಖಂಡಿಸಿ ಕನ್ನಡ ಮಾಧ್ಯಮ ವಿದ್ಯಾರ್ಥಿಗಳು ಗುರುವಾರ ಪ್ರತಿಭಟನೆ ನಡೆಸಿದರು.

‘ನವೆಂಬರ್ 1 ಕೇರಳದ ರಾಜ್ಯೋತ್ಸವ, ಮಲಯಾಳ ದಿನವನ್ನು ನಾವು ಆಚರಿಸುತ್ತೇವೆ, ನಿಮಗಿಲ್ಲಿ ಜಾಗವಿಲ್ಲ, ನೀವು ಕರ್ನಾಟಕಕ್ಕೆ ತೆರಳಿ’ ಮುಂತಾದ ಅವಹೇಳನಕಾರಿ ಬರಹ ಗೋಡೆಯಲ್ಲಿ ರಾರಾಜಿಸುತ್ತಿದೆ ಇದರ ವಿರುದ್ಧ ಕನ್ನಡ ಮಾಧ್ಯಮ ವಿದ್ಯಾರ್ಥಿಗಳು ಪ್ರತಿಭಟನೆ ವ್ಯಕ್ತಪಡಿಸಿ, ಪ್ರಾಂಶುಪಾಲರಿಗೆ ಮನವಿ ಸಲ್ಲಿಸಿದರು. ಈ ಬಗ್ಗೆ ವಿದ್ಯಾನಗರ ಠಾಣೆಗೂ ದೂರು ಸಲ್ಲಿಸಲಾಗಿದೆ. ಕಾಲೇಜು ಅಧಿಕಾರಿಗಳ ನಿರ್ಲಕ್ಷೃ ಧೋರಣೆಯಿಂದ ಕನ್ನಡ ವಿದ್ಯಾರ್ಥಿಗಳ ವಿರುದ್ಧ ನಿರಂತರ ದಬ್ಬಾಳಿಕೆ ನಡೆಯುತ್ತಿದೆ. ಕಳೆದ ವರ್ಷವೂ ಅವಹೇಳನಕಾರಿ ಬರೆಹ ಕಂಡುಬಂದಿದ್ದು, ಆರೋಪಿಗಳನ್ನು ಪತ್ತೆಹಚ್ಚಿಲ್ಲ. ಕನ್ನಡ ವಿಭಾಗಕ್ಕೆ ಸಿಸಿ ಕ್ಯಾಮರಾ ಅಳವಡಿಸಬೇಕು ಹಾಗೂ ಅಪರಿಚಿತರು ಒಳಬಾರದಂತೆ ಗೇಟು ನಿರ್ಮಿಸುವಂತೆ ಮಾಡಿಕೊಂಡ ಮನವಿಯನ್ನೂ ನಿರ್ಲಕ್ಷಿಸಲಾಗಿದೆ ಎಂದು ವಿದ್ಯಾರ್ಥಿಗಳು ದೂರಿದ್ದಾರೆ. ಕಾಲೇಜಿನಲ್ಲಿ ಕಿಡಿಗೇಡಿ ಕೃತ್ಯವನ್ನು ಕನ್ನಡಪರ ಸಂಘಟನೆಗಳು ಖಂಡಿಸಿದೆ.