More

    ಮಾರುಕಟ್ಟೆ ಪ್ರವೇಶಿಸಲಿದೆ ಕಸ ಘಟಕದ ಗೊಬ್ಬರ!, ಜಿಪಂ ಮೊಟ್ಟ ಮೊದಲ ಪ್ರಯೋಗ, 25 ಕೆ.ಜಿ.ಬ್ಯಾಗ್‌ಗಳಲ್ಲಿ ಲಭ್ಯ

    ಶಿವರಾಜ ಎಂ. ಬೆಂಗಳೂರು
    ತ್ಯಾಜ್ಯ ಸಂಪನ್ಮೂಲ ಹೆಸರಿನೊಂದಿಗೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಆರಂಭವಾದ ತ್ಯಾಜ್ಯ ಘಟಕ (ಬಯೋಗ್ಯಾಸ್ ್ಲಾಂಟ್)ಗಳಿಂದ ತಯಾರಾಗುತ್ತಿರುವ ಗೊಬ್ಬರ ಇದೇ ಮೊದಲ ಬಾರಿಗೆ ಮಾರುಕಟ್ಟೆಗೆ ಪ್ರವೇಶಿಸಲಿದೆ. ತಲಾ 25 ಕೆಜಿ ಬ್ಯಾಗ್‌ನಲ್ಲಿ ರಾಸಾಯನಿಕ ಗೊಬ್ಬರ ಪ್ಯಾಕ್ ಮಾಡಿ ಮಾರುಕಟ್ಟೆಗೆ ಬಿಡುಗಡೆ ಮಾಡಲು ಗ್ರಾಮಾಂತರ ಜಿಲ್ಲಾ ಪಂಚಾಯಿತಿ ಮೊಟ್ಟ ಮೊದಲ ಪ್ರಯೋಗಕ್ಕೆ ಮುಂದಾಗಿದೆ.

    ದೊಡ್ಡಬಳ್ಳಾಪುರ ತಾಲೂಕು ಬಾಶೆಟ್ಟಿಹಳ್ಳಿ ಗ್ರಾಪಂ ವ್ಯಾಪ್ತಿಯಲ್ಲಿ ಜಿಪಂನಿಂದ 2019ರ ಜೂನ್ 11ರಂದು ಪ್ರಥಮ ಬಾರಿಗೆ ತ್ಯಾಜ್ಯ ಸಂಪನ್ಮೂಲ ಘಟಕದ ಹೆಸರಿನಲ್ಲಿ ಕಸ ಸಂಸ್ಕರಣೆ ಕಾರ್ಯ ಆರಂಭವಾಯಿತು. ಹಸಿ ಹಾಗೂ ಒಣ ಕಸವನ್ನು ಸಂಸ್ಕರಿಸಿ ಆ ಕಸವನ್ನು ಸಂಪನ್ಮೂಲವಾಗಿ ಪರಿವರ್ತಿಸುವ ಉದ್ದೇಶದೊಂದಿಗೆ ಘಟಕ ಕಾರ್ಯ ಆರಂಭಿಸಿತು. ಈಗ ಜಿಲ್ಲೆಯಾದ್ಯಂತ ಸರಾಸರಿ 60 ಕಸದ ಘಟಕಗಳು ಕಾರ್ಯಾರಂಭ ಮಾಡಿವೆ. ಇಷ್ಟು ಘಟಕಗಳಲ್ಲಿ ತಯಾರಾಗುತ್ತಿರುವ ಗೊಬ್ಬರವನ್ನು ಪ್ಯಾಕೆಟ್ ರೂಪದಲ್ಲಿ ಮಾರುಕಟ್ಟೆಗೆ ಬಿಡುಗಡೆಗೊಳಿಸುವ ಚಿಂತನೆ ನಡೆದಿದೆ.

    ಬಯೋಗ್ಯಾಸ್ ಪ್ಲಾಂಟ್ ಕಾರ್ಯವೇನು?: ಗ್ರಾಮೀಣ ಭಾಗದಲ್ಲಿ ಉತ್ಪತ್ತಿಯಾಗುವ ಹಸಿ ಹಾಗೂ ಒಣ ಕಸವನ್ನು ಪ್ರತ್ಯೇಕವಾಗಿ ಸಂಸ್ಕರಿಸಿ ಸಂಪನ್ಮೂಲವನ್ನಾಗಿ ಪರಿವರ್ತನೆ ಮಾಡಿ ಮರುಬಳಕೆ ಮಾಡುವುದು ಬಯೋಗ್ಯಾಸ್ ಪ್ಲಾಂಟ್‌ನ ಉದ್ದೇಶ. ಸಂಸ್ಕರಿಸಿದ ಹಸಿ ಕಸದ ಮೂಲಕ ಬಯೋಗ್ಯಾಸ್ ಉತ್ಪಾದಿಸಿ ವಿದ್ಯುತ್ ಆಗಿ ಪರಿವರ್ತಿಸುವುದು ಒಂದೆಡೆಯಾದರೆ, ಸಂಸ್ಕರಿಸಿದ ಒಣಕಸವನ್ನು ಮಾರಾಟ ಮಾಡಿ ಅಭಿವೃದ್ಧಿ ಕೆಲಸಗಳಿಗೆ ಆರ್ಥಿಕ ಸಬಲತೆ ಸಾಧಿಸುವುದು ಮತ್ತೊಂದು ಉದ್ದೇಶವಾಗಿತ್ತು. ಇದೀಗ ಹಸಿ ಕಸವನ್ನು ಉತ್ತಮ ರಾಸಾಯನಿಕ ಗೊಬ್ಬರವನ್ನಾಗಿ ಪರಿವರ್ತಿಸಿ ಮಾರುಕಟ್ಟೆಗೆ ಬಿಡುವ ಬಗ್ಗೆ ಅಧಿಕಾರಿಗಳು ಚಿಂತನೆ ನಡೆಸಿದ್ದಾರೆ.

    ಮಾದರಿ ಘಟಕಗಳು:
    ಜಿಲ್ಲೆಯಲ್ಲಿ ಪ್ರಮುವಾಗಿ ಅಣ್ಣೇಶ್ವರ ಪಂಚಾಯಿತಿ, ಮಜರಾಹೊಸಹಳ್ಳಿ, ಅರಿಶಿನಕುಂಟೆ ಹಾಗೂ ಬಾಶೆಟ್ಟಿಹಳ್ಳಿ ಕಸದ ಘಟಕಗಳು ಮಾದರಿ ಎನಿಸಿವೆ, ಈ ಪಂಚಾಯಿತಿ ವ್ಯಾಪ್ತಿಯಲ್ಲಿ ಘಟಕಗಳು ನಿರೀಕ್ಷೆ ಮೀರಿ ಕಾರ್ಯನಿರ್ವಹಿಸುತ್ತಿದ್ದು, ಇತರ ಘಟಕಗಳಿಗೆ ಮಾದರಿ ಎನಿಸಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

    ರಿಯಾಯಿತಿ ದರದಲ್ಲಿ ಉತ್ತಮ ಗೊಬ್ಬರ: ಪ್ರಸ್ತುತ ಕಸದ ಘಟಕಗಳಲ್ಲಿ ಉತ್ಪತ್ತಿಯಾಗುವ ಗೊಬ್ಬರವನ್ನು ಸ್ಥಳೀಯ ರೈತರು ಟ್ರಾಕ್ಟರ್‌ಗಳ ಮೂಲಕ ಲೋಡಿನ ಲೆಕ್ಕದಲ್ಲಿ ಖರೀದಿಸುತ್ತಿದ್ದಾರೆ. ಇದರಿಂದ ಜಿಪಂಗೆ ಯಾವುದೇ ಆದಾಯವಿಲ್ಲ. ಪ್ಲಾಂಟ್ ನಿರ್ವಹಣೆಗೂ ಸಾಕಾಗುತ್ತಿಲ್ಲ. ಈ ಹಿನ್ನೆಲೆಯಲ್ಲಿ ಇದೇ ಗೊಬ್ಬರಕ್ಕೆ ನೈಟ್ರೋಜನ್, ಹೈಡ್ರೋಜನ್, ಪೊಟಾಷಿಯಂ ಮತ್ತಿತರ ಅಂಶಗಳನ್ನು ಅನುಪಾತದಂತೆ ಸೇರಿಸಿ ಉತ್ತಮ ದರ್ಜೆಯ ಗೊಬ್ಬರವನ್ನಾಗಿ ರೂಪುಗೊಳಿಸುವುದು, ಬಳಿಕ ಮಾರುಕಟ್ಟೆಗೆ ತಕ್ಕಂತೆ ಪ್ಯಾಕ್ ಮಾಡಿ ಮಾರಾಟ ನಡೆಸುವುದರ ಬಗ್ಗೆ ಜಿಪಂ ಚಿಂತನೆ ನಡೆಸಿದೆ. ಈಗಾಗಲೇ ಮಾರುಕಟ್ಟೆಯಲ್ಲಿ ತರಹೇವಾರಿ ಖಾಸಗಿ ಗೊಬ್ಬರ ಮಾರಾಟವಾಗುತ್ತಿದೆ. ಇವುಗಳಿಗೆ ಸವಾಲೊಡ್ಡುವ ರೀತಿಯಲ್ಲಿ ಹಾಗೂ ರೈತರಿಗೆ ರಿಯಾಯಿತಿ ದರದಲ್ಲಿ ಉತ್ತಮ ಗೊಬ್ಬರ ಲಭ್ಯವಾಗಬೇಕು ಎಂಬ ಉದ್ದೇಶದೊಂದಿಗೆ ಈ ಯೋಜನೆ ಸಿದ್ಧವಾಗುತ್ತಿದೆ. ಕೃಷಿ ಇಲಾಖೆ, ತೋಟಗಾರಿಕೆ ಹಾಗೂ ಕಂದಾಯ ಇಲಾಖೆ ಅಧಿಕಾರಿಗಳ ಸಭೆ ಕರೆದು ಇದರ ಸಾಧಕ ಬಾಧಕಗಳ ಬಗ್ಗೆ ಚರ್ಚೆ ನಡೆಸುವ ಸಿದ್ಧತೆ ನಡೆದಿದೆ.

    ನಗರ ಪ್ರದೇಶವೂ ಟಾರ್ಗೆಟ್: ಬೆಂಗಳೂರಿನಂತಹ ಮಹಾನಗರಗಳಲ್ಲಿ ಕೈತೋಟ, ತಾರಸಿ ತೋಟಗಳು ಹೆಚ್ಚೆಚ್ಚು ಕಂಡುಬರುತ್ತವೆ. ಇವುಗಳ ನಿರ್ವಹಣೆಗೆ ಗೊಬ್ಬರ ತಲುಪಿಸುವುದೂ ಈ ಯೋಜನೆಯ ಹಿಂದಿನ ಉದ್ದೇಶವಾಗಿದೆ. 25 ಕೆಜಿ ಚೀಲದಂತೆ ಕಡಿಮೆ ತೂಕದ ಸಣ್ಣ ಸಣ್ಣ ಪ್ಯಾಕ್‌ಗಳ ಮೂಲಕ ನಗರ ಪ್ರದೇಶದಲ್ಲೂ ಮಾರುಕಟ್ಟೆ ತೆರೆಯುವ ಬಗ್ಗೆ ಜಿಪಂ ಚಿಂತಿಸಿದೆ.

    ಕಸ ಘಟಕದಿಂದ ಯಾವುದೇ ಲಾಭದ ಉದ್ದೇಶವಿಲ್ಲ. ಗ್ರಾಮಗಳು ಸ್ವಚ್ಛವಾಗಿರಬೇಕು. ಗುಣಮಟ್ಟದ ಗೊಬ್ಬರ ರಿಯಾಯಿತಿ ದರದಲ್ಲಿ ರೈತರಿಗೆ ತಲುಪಬೇಕು ಎಂಬುದಷ್ಟೆ ಜಿಪಂ ಧ್ಯೇಯ. ಎಲ್ಲ ಕಡೆ ಘಟಕಗಳಿಂದ ಉತ್ಪತ್ತಿಯಾಗುವ ಗೊಬ್ಬರದ ಪ್ರಮಾಣ ಆಧರಿಸಿ ಹಂತ ಹಂತವಾಗಿ ಮಾರುಕಟ್ಟೆಗೆ ಬಿಡುಗಡೆ ಮಾಡಲು ಚಿಂತಿಸಲಾಗಿದೆ.
    ಎನ್.ಎಂ.ನಾಗರಾಜ್, ಜಿಪಂ ಸಿಇಒ ಬೆಂಗಳೂರು ಗ್ರಾಮಾಂತರ ಜಿಲ್ಲೆ

     

    ಸಿನಿಮಾ

    ಲೈಫ್‌ಸ್ಟೈಲ್

    ಸಿನಿಮಾ

    Latest Posts