More

    ಆರ್‌ಟಿಇ ಸೀಟಿಗೆ ಹಿಂದೇಟು

    ಸುಭಾಸ ಧೂಪದಹೊಂಡ ಕಾರವಾರ
    ಆರ್ಥಿಕವಾಗಿ ಹಿಂದುಳಿದ, ಮೀಸಲು ವಿದ್ಯಾರ್ಥಿಗಳಿಗೆ ಅನುದಾನಿತ ಶಾಲೆಗಳಲ್ಲಿ ಶಿಕ್ಷಣ ಹಕ್ಕು ಕಾಯ್ದೆಯಡಿ (ಆರ್‌ಟಿಇ) ನೀಡುವ ಉಚಿತ ಸೀಟುಗಳನ್ನು ಕೇಳುವವರೇ ಇಲ್ಲವಾಗಿದ್ದಾರೆ.
    ಕಾಯ್ದೆಯಡಿ ಸೀಟುಗಳ ಸಂಖ್ಯೆಯೂ ಕಡಿಮೆಯಾಗಿದೆ. ಇನ್ನು ಸೀಟು ಲಭ್ಯವಾದರೂ ಅದರಡಿ ಮಕ್ಕಳ ದಾಖಲಾತಿಗೆ ಪಾಲಕರು ಆಸಕ್ತಿ ತೋರುತ್ತಿಲ್ಲ. ಜಿಲ್ಲೆಯ ಶಿರಸಿ ಹಾಗೂ ಕಾರವಾರ ಶೈಕ್ಷಣಿಕ ಜಿಲ್ಲೆಗಳಲ್ಲಿ 101 ಆರ್‌ಟಿಇ ಸೀಟುಗಳು ಲಭ್ಯವಿದೆ. ಅದರಲ್ಲಿ 41 ಜನ ಮಾತ್ರ ದಾಖಲಾತಿ ಮಾಡಿಕೊಂಡಿದ್ದಾರೆ.
    ಹಳಿಯಾಳದಲ್ಲಿ ಮಾತ್ರ ದಾಖಲಾತಿ: ಮಾ. 20ರಿಂದ ಏ. 20ರವರೆಗೆ ಆರ್‌ಟಿಇ ಅಡಿ ಸೀಟು ಪಡೆಯಲು ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗಿತ್ತು. ಏ. 21ರಂದು ಅರ್ಜಿಗಳ ಪರಿಶೀಲನೆ ನಡೆಸಿ, ಏ. 24ರಂದು ಲಾಟರಿ ಮೂಲಕ ಅರ್ಜಿಗಳನ್ನು ಆಯ್ಕೆ ಮಾಡಲಾಗಿದೆ. ಏ. 27ರಂದು ಸೀಟು ಹಂಚಿಕೆ ಮಾಡಲಾಗಿದೆ. ಏ. 28ರಿಂದಲೇ ದಾಖಲಾತಿಗೆ ಅವಕಾಶ ಕಲ್ಪಿಸಲಾಗಿದೆ.
    ಕಾರವಾರ ಶೈಕ್ಷಣಿಕ ಜಿಲ್ಲೆಯ ಅಂಕೋಲಾದ 2 ಹಾಗೂ ಭಟ್ಕಳದ 1 ಶಾಲೆ ಸೇರಿ ಒಟ್ಟು 14 ಆರ್‌ಟಿಇ ಸೀಟುಗಳು ಲಭ್ಯವಿದ್ದವು. ಅದಕ್ಕೆ ಯಾರೂ ಅರ್ಜಿಯನ್ನೇ ಸಲ್ಲಿಸಿಲ್ಲ. ಶಿರಸಿ ಶೈಕ್ಷಣಿಕ ಜಿಲ್ಲೆಯ ಹಳಿಯಾಳದ 5 ಶಾಲೆಗಳಲ್ಲಿ-70, ಮುಂಡಗೋಡಿನ 1 ಶಾಲೆಯಲ್ಲಿ -7, ಶಿರಸಿ 1 ಶಾಲೆಯಲ್ಲಿ-4, ಯಲ್ಲಾಪುರದ 1 ಶಾಲೆಯಲ್ಲಿ- 6 ಸೀಟುಗಳು ಲಭ್ಯವಿದ್ದವು. ಬಂದ ಅರ್ಜಿಗಳನ್ನು ಪರಿಶೀಲಿಸಿ ಮೊದಲ ಸುತ್ತಿನಲ್ಲಿ ಹಳಿಯಾಳದಲ್ಲಿ 49, ಮುಂಡಗೋಡ-2, ಶಿರಸಿ-3, ಯಲ್ಲಾಪುರ-1 ಸೇರಿ 55 ಸೀಟುಗಳನ್ನು ಹಂಚಿಕೆ ಮಾಡಲಾಗಿದೆ. ಬಹುತೇಕ ಬಂದ ಎಲ್ಲ ಅರ್ಹ ಅರ್ಜಿದಾರರಿಗೆ ಸೀಟು ಸಿಕ್ಕಿದೆ. ಆದರೆ, ಇದುವರೆಗೆ ಸೀಟು ಪಡೆದವರಲ್ಲಿ ಹಳಿಯಾಳದ 41 ಪಾಲಕರು ಮಾತ್ರ ಶಾಲೆಗಳಲ್ಲಿ ಮಕ್ಕಳ ದಾಖಲಾತಿ ಮಾಡಿದ್ದಾರೆ. ಉಳಿದೆಡೆ ಮಕ್ಕಳ ದಾಖಲಾತಿಯನ್ನೇ ಮಾಡಿಲ್ಲ.
    ಏಕೆ ಈ ಪರಿಸ್ಥಿತಿ..?: ಶಿಕ್ಷಣ ಹಕ್ಕು ಕಾಯ್ದೆಯಡಿ ಖಾಸಗಿ ಹಾಗೂ ಅನುದಾನಿತ ಶಾಲೆಗಳಲ್ಲಿ ಶೇ. 25ರಷ್ಟು ಸೀಟುಗಳನ್ನು ಆರ್ಥಿಕವಾಗಿ ಹಿಂದುಳಿದ ಮೀಸಲು ವರ್ಗಗಳಿಗೆ ಸೇರಿದ ವಿದ್ಯಾರ್ಥಿಗಳಿಗೆ ನೀಡುವ ವ್ಯವಸ್ಥೆಯನ್ನು 2009ರಲ್ಲಿ ಜಾರಿಗೆ ತರಲಾಯಿತು. ಖಾಸಗಿ ಶಾಲೆಗಳಿಗೆ ಆರ್‌ಟಿಇ ಸೀಟು ನೀಡುವಾಗ ಸೀಟು ಪಡೆಯಲು ಭಾರೀ ಪೈಪೋಟಿ ಇರುತ್ತಿತ್ತು. 100 ಸೀಟುಗಳಿದ್ದರೆ 500 ಕ್ಕೂ ಅಧಿಕ ಅರ್ಜಿಗಳು ಬಂದಿರುತ್ತಿದ್ದವು. ಹಾಗಾಗಿ ಆಯ್ಕೆಗೆ ಲಾಟರಿ ಪದ್ಧತಿ ಜಾರಿ ಮಾಡಲಾಯಿತು. ಆದರೆ, 2018ರ ನಂತರ ಆರ್‌ಟಿಇ ಅಡಿ ಖಾಸಗಿ ಶಾಲೆಗಳಲ್ಲಿ ಶೇ. 25 ರಷ್ಟು ಸೀಟುಗಳನ್ನು ನೀಡುವುದನ್ನು ಸ್ಥಗಿತ ಮಾಡಲಾಗಿದೆ. ಸರ್ಕಾರಿ ಶಾಲೆಗಳು ಸಮೀಪದಲ್ಲಿಲ್ಲದ ಅನುದಾನಿತ ಶಾಲೆಗಳಲ್ಲಿ ಮಾತ್ರ ಶೇ. 25ರಷ್ಟು ಸೀಟುಗಳನ್ನು ಆರ್ಥಿಕವಾಗಿ ದುರ್ಬಲ ವರ್ಗದ ಮಕ್ಕಳಿಗೆ ಉಚಿತವಾಗಿ ನೀಡಲಾಗುತ್ತಿದೆ.
    ‘ಜಿಲ್ಲೆಯ ಬಹುತೇಕ ಊರುಗಳಲ್ಲಿ ಸರ್ಕಾರಿ ಶಾಲೆಗಳಿವೆ. ಇನ್ನು ಸರ್ಕಾರಿ ಶಾಲೆಗಳು ದೂರದಲ್ಲಿರುವ ಕೆಲವು ಹಳ್ಳಿಗಳ ಕನ್ನಡ ಮಾಧ್ಯಮ ಅನುದಾನಿತ ಶಾಲೆಗಳಲ್ಲಿ ಮಾತ್ರ ಆರ್‌ಟಿಇ ಸೀಟುಗಳು ಲಭ್ಯವಿವೆ. ಆರ್‌ಟಿಇ ಅಡಿ ಅರ್ಜಿ ಸಲ್ಲಿಸುವ ಪಾಲಕರು ಮೊದಲು ಆಂಗ್ಲ ಮಾಧ್ಯಮ ಖಾಸಗಿ ಶಾಲೆಗಳಲ್ಲಿ ಸೀಟು ಸಿಗಲಿದೆ ಎಂದು ತಪ್ಪು ಕಲ್ಪನೆಯಿಂದ ಅರ್ಜಿ ಸಲ್ಲಿಸುತ್ತಾರೆ. ನಂತರ ಕನ್ನಡ ಮಾಧ್ಯಮ ಎಂದ ತಕ್ಷಣ ದೂರ ಉಳಿಯುತ್ತಾರೆ’ ಎಂಬುದು ಶಿಕ್ಷಣ ಇಲಾಖೆ ಅಧಿಕಾರಿಯೊಬ್ಬರ ಅಭಿಪ್ರಾಯ.

    ಸರ್ಕಾರಿ ಶಾಲೆಗಳು ಸಮೀಪದಲ್ಲಿಲ್ಲದ ಅನುದಾನಿತ ಶಾಲೆಗಳ ಶೇ. 25ರಷ್ಟು ಸೀಟುಗಳು ಮಾತ್ರ ಆರ್‌ಟಿಇ ಅಡಿ ಲಭ್ಯವಾಗಲಿವೆ. ಈ ವರ್ಷ ಶಿರಸಿ ಶೈಕ್ಷಣಿಕ ಜಿಲ್ಲೆಯಲ್ಲಿ 87 ಸೀಟುಗಳು ಲಭ್ಯವಿದ್ದು, 55 ಜನರಿಗೆ ಮೊದಲ ಸುತ್ತಿನಲ್ಲಿ ಸೀಟು ಹಂಚಿಕೆ ಮಾಡಲಾಗಿದೆ. ಹಳಿಯಾಳ ಹೊರತುಪಡಿಸಿ ಉಳಿದೆಲ್ಲೂ ಮಕ್ಕಳ ದಾಖಲಾತಿಯಾಗಿಲ್ಲ.
    ಪಿ. ಬಸವರಾಜ್ ಡಿಡಿಪಿಐ ಶಿರಸಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts