ಅಫ್ಘಾನಿಸ್ತಾನದಲ್ಲಿ ಉಗ್ರರಿಂದ ಕಾರವಾರ ಮೂಲದ ವ್ಯಕ್ತಿ ಹತ್ಯೆ

ಕಾರವಾರ: ಅಫ್ಘಾನಿಸ್ತಾನದ ಕಾಬುಲ್​ ಬಳಿ ಗುರುವಾರ ಉಗ್ರರಿಂದ ಹತ್ಯೆಗೀಡಾಗಿದ್ದ ಭಾರತೀಯ ಮೂಲದ ವ್ಯಕ್ತಿ ರಾಜ್ಯದ ಕಾರವಾರದವರು ಎಂದು ತಿಳಿದು ಬಂದಿದೆ.

ಉಗ್ರರು ಗುರುವಾರ ಬೆಳಗ್ಗೆ ಕಾಬುಲ್​ ನಗರದಿಂದ ಓರ್ವ ಭಾರತೀಯ, ಓರ್ವ ಮಲೇಷ್ಯಾ ಪ್ರಜೆ ಮತ್ತು ಓರ್ವ ಮೆಸಿಡೋನಿಯನ್ ಪ್ರಜೆಯನ್ನು ಅಪಹರಿಸಿದ್ದರು. ಆ ನಂತರ ಅವರ ಮೃತದೇಹಗಳು ಕಾಬುಲ್​ ಪ್ರಾಂತ್ಯದ ಮುಸ್ಸಹಿ ಜಿಲ್ಲೆಯಲ್ಲಿ ಪತ್ತೆಯಾಗಿತ್ತು. ಈಗ ಉಗ್ರರಿಂದ ಹತ್ಯೆಗೀಡಾದ ಭಾರತೀಯ ವ್ಯಕ್ತಿಯ ಗುರುತು ಪತ್ತೆಯಾಗಿದ್ದು ಅವರು ಕಾರವಾರದ ಕಡವಾಡದ ಪ್ಯಾಟ್ಸನ್​ (34) ಎಂದು ತಿಳಿದು ಬಂದಿದೆ.

ಇವರು ಕಾಬುಲ್​ನಲ್ಲಿರುವ ಸಾಡೆಕ್ಸೋ ಎಂಬ ವಿಶ್ವದ 2ನೇ ಅತಿದೊಡ್ಡ ಅಂತಾರಾಷ್ಟ್ರೀಯ ಫುಡ್ ಮತ್ತು ಕ್ಯಾಟರಿಂಗ್ ಸರ್ವಿಸ್ ಕಂಪನಿಯಲ್ಲಿ ಬಾಣಸಿಗರಾಗಿ ಕೆಲಸ ಮಾಡುತ್ತಿದ್ದರು. ಇವರೊಂದಿಗೆ ಹತ್ಯೆಗೀಡಾಗ ಉಳಿದ ಇಬ್ಬರೂ ಸಹ ಪ್ಯಾಟ್ಸನ್​ ಜತೆಗೆ ಕೆಲಸ ಮಾಡುತ್ತಿದ್ದರು.