ಮೀನುಗಾರರ ಪತ್ತೆಗೆ ಆಗ್ರಹಿಸಿ ಬುಗಿಲೆದ್ದ ಆಕ್ರೋಶ: ಕರಾವಳಿಯಲ್ಲಿ ಬೃಹತ್‌ ಪ್ರತಿಭಟನೆ

ಉಡುಪಿ: ಮಲ್ಪೆಯಲ್ಲಿ 7 ಮೀನುಗಾರರು ನಾಪತ್ತೆ ಹಿನ್ನೆಲೆಯಲ್ಲಿ ಆಕ್ರೋಶ ಭುಗಿಲೆದ್ದಿದ್ದು, ಮೀನುಗಾರರ ಪತ್ತೆಗೆ ಆಗ್ರಹಿಸಿ ಪ್ರತಿಭಟನೆ ಕೈಗೊಂಡಿರುವ ಮೀನುಗಾರರು ರಾಷ್ಟ್ರೀಯ ಹೆದ್ದಾರಿ 66ನ್ನು ಸಂಪೂರ್ಣ ಬಂದ್ ಮಾಡಿ ಆಕ್ರೋಶ ವ್ಯಕ್ತಪಡಿಸಿದರು.

ಅಂಬಲಪಾಡಿ ಬೈಪಾಸ್ ಬಳಿ ಜನರು ಜಮಾಯಿಸಿರುವ ಜನರು ರಾಷ್ಟ್ರೀಯ ಹೆದ್ದಾರಿಯನ್ನು ಒಂದು ಗಂಟೆಗೂ ಹೆಚ್ಚು ಕಾಲ ಬಂದ್ ಮಾಡಿ ಆಕ್ರೋಶ ವ್ಯಕ್ತಪಡಿಸಿದರು. ಪರ್ಯಾಯ ರಸ್ತೆ ಮೂಲಕ ವಾಹನ ಸಂಚಾರಕ್ಕೆ ವ್ಯವಸ್ಥೆ ಮಾಡಲಾಗಿದೆ.

ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿ ಪ್ರತಿಭಟನಾ ಸಭೆ ನಡೆಸಿ ಮೀನುಗಾರರ ಸುರಕ್ಷಿತ ವಾಪಸಾತಿಗೆ ಪ್ರಾರ್ಥನೆ ಸಲ್ಲಿಸಿದರು.

ಬೃಹತ್‌ ಪ್ರತಿಭಟನಾ ಮೆರವಣಿಗೆ

ಪತ್ತೆ ಕಾರ್ಯಾಚರಣೆ ಚುರುಕುಗೊಳಿಸುವಂತೆ ಒತ್ತಾಯಿಸಿ ಉಡುಪಿಯ ಮಲ್ಪೆಯಿಂದ ಮೀನುಗಾರರು ರಾಜ್ಯ ಸರ್ಕಾರದ ವಿರುದ್ಧ ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಸಿದರು. ಉಡುಪಿ, ದಕ್ಷಿಣ ಕನ್ನಡ, ಉತ್ತರಕನ್ನಡ ಜಿಲ್ಲೆಯ ಇಪ್ಪತ್ತು‌ ಸಾವಿರಕ್ಕೂ ಅಧಿಕ ಮೀನುಗಾರರು, ಮೀನುಗಾರ ಮಹಿಳೆಯರು ಉಡುಪಿಯ ಮಲ್ಪೆಯಿಂದ ಅಂಬಲಪಾಡಿವರೆಗೆ ಪ್ರತಿಭಟನಾ ಮೆರವಣಿಗೆ ಕೈಗೊಂಡರು.

ಡಿಸೆಂಬರ್ 13 ರಂದು ಮಲ್ಪೆಯಿಂದ ತೆರಳಿದ್ದ ಮೀನುಗಾರಿಕಾ ಬೋಟ್ ಮಹಾರಾಷ್ಟ್ರ- ಗೋವಾ ಗಡಿಯಲ್ಲಿ ನಾಪತ್ತೆಯಾಗಿತ್ತು. ಅದರಲ್ಲಿ 7 ಜನ ಮೀನುಗಾರರಿದ್ದರು. ಅಂದಿನಿಂದ ಇಂದಿನವರೆಗೂ ನಾಪತ್ತೆಯಾದವರ ಬಗ್ಗೆ ಯಾವುದೇ ಸುಳಿವು ಪತ್ತೆಯಾಗಿಲ್ಲ.

ಕಾರವಾರದಲ್ಲೂ ಬುಗಿಲೆದ್ದ ಆಕ್ರೋಶ

ಮಲ್ಪೆ ಮೀನುಗಾರಿಕೆ ಬೋಟ್ ಮೀನುಗಾರರು ನಾಪತ್ತೆ ಹಿನ್ನೆಲೆಯಲ್ಲಿ ಬೈತಖೋಲ್ ಬಂದರಿನಲ್ಲಿ ಟಯರ್‌ಗೆ ಬೆಂಕಿ ಹಚ್ಚಿ ಮೀನುಗಾರರು ಪ್ರತಿಭಟನೆ ನಡೆಸಿದರು. ನಾಪತ್ತೆಯಾದ 7 ಮೀನುಗಾರರನ್ನು ಹುಡುಕಿಕೊಡುವಂತೆ ಆಗ್ರಹಿಸಿ ಬೈತಖೋಲ್ ಬಂದರು ಪ್ರವೇಶ ದ್ವಾರ ಬಂದ್ ಮಾಡಿದ್ದಾರೆ. ಸ್ಥಳದಲ್ಲಿ ಪೊಲೀಸರ ಬಿಗಿ ಭದ್ರತೆ ಒದಗಿಸಲಾಗಿದೆ. (ದಿಗ್ವಿಜಯ ನ್ಯೂಸ್)