ಸುಭಾಸ ಧೂಪದಹೊಂಡ ಕಾರವಾರ
ಅಂಕೋಲಾದಿಂದ ಹುಬ್ಬಳ್ಳಿಯನ್ನು ಸಂಪರ್ಕಿಸುವ ರಾಷ್ಟ್ರೀಯ ಹೆದ್ದಾರಿ 63 ನ್ನು ಹಂತ, ಹಂತವಾಗಿ ಚತುಷ್ಪಥವಾಗಿ ವಿಸ್ತರಿಸಲು ಯೋಜನೆ ರೂಪುಗೊಂಡಿದೆ. ಮೊದಲ ಹಂತದಲ್ಲಿ ಬಾಳೆಗುಳಿಯಿಂದ-ಮಾಸ್ತಿಕಟ್ಟೆವರೆಗೆ ಹೆದ್ದಾರಿ ವಿಸ್ತರಣೆಗೆ ಅನುಮೋದನೆ ದೊರಕಿದೆ.
18 ಕಿ.ಮೀ. ಹೆದ್ದಾರಿಯನ್ನು ನಡುವಿನಿಂದ 34 ಮೀಟರ್ ಅಗಲವಾಗಿ ವಿಸ್ತರಿಸಲು ಯೋಜಿಸಲಾಗಿದ್ದು, ಅದಕ್ಕೆ 11 ಹೆಕ್ಟೇರ್ ಅರಣ್ಯ ಭೂಮಿ ಹಾಗೂ 25 ಹೆಕ್ಟೇರ್ ಖಾಸಗಿ ಭೂಮಿ ಹೆಚ್ಚುವರಿಯಾಗಿ ಬೇಕಾಗಬಹುದು ಎಂದು ಅಂದಾಜಿಸಲಾಗಿದೆ. 25 ಹೆಕ್ಟೇರ್ ಖಾಸಗಿ ಭೂಮಿ ಸ್ವಾಧೀನಕ್ಕೆ ಈಗಾಗಲೇ 3ಎ ನೋಟಿಫಿಕೇಷನ್ ಹೊರಡಿಸಲಾಗಿದೆ. ಜಂಟಿ ಸರ್ವೇ ಮಾಡಿ ಜಾಗ ಗುರುತು ಮಾಡುವಂತೆ ಅಂಕೋಲಾ ಸರ್ವೇ ಇಲಾಖೆಗೆ ಮನವಿ ಮಾಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಕಂಚಿನಬಾಗಿಲು ಸೇರಿ ವಿವಿಧೆಡೆ ಇರುವ ಕಡಿದಾದ ತಿರುವುಗಳು, ಅಪಘಾತ ವಲಯಗಳಲ್ಲಿ ರಸ್ತೆಯನ್ನು ನೇರವಾಗಿ ಮಾಡಲು ಯೋಜಿಸಲಾಗಿದೆ. ಇನ್ನುಳಿದ ಪ್ರದೇಶಗಳಲ್ಲಿ ಹಾಲಿ ಇರುವ ರಸ್ತೆಯನ್ನೇ ವಿಸ್ತರಿಸಲಾಗುವುದು. ಇದರಲ್ಲಿ ಪ್ರಮುಖ ಸೇತುವೆಗಳೂ ಸೇರಿವೆ ಎಂದಿದ್ದಾರೆ.
ಅರಣ್ಯ ಭೂಮಿಯನ್ನು ಸ್ವಾಧೀನ ಮಾಡಿಕೊಳ್ಳಲು ಕೇಂದ್ರ ಅರಣ್ಯ ಮಂತ್ರಾಲಯಕ್ಕೆ ಅರ್ಜಿ ಸಲ್ಲಿಸಲಾಗಿದೆ. ಒಟ್ಟು 232.84 ಕೋಟಿ ರೂ. ವೆಚ್ಚದ ಯೋಜನೆ ಇದಾಗಿದ್ದು, ಡಿಸೆಂಬರ್ ಒಳಗೆ ಟೆಂಡರ್ ಕರೆಯುವ ಸಾಧ್ಯತೆ ಇದೆ. ಎಲ್ಲ ಯೋಜನೆಯಂತೆ ನಡೆದಲ್ಲಿ 2024ರ ತ ಅಂತ್ಯ ಅಥವಾ 2025ರ ಆರಂಭದ ಹೊತ್ತಿಗೆ ಕಾಮಗಾರಿ ಪ್ರಾರಂಭವಾಗುವ ಸಾಧ್ಯತೆ ಇದೆ.
ಘಟ್ಟದಲ್ಲೂ ಪ್ರಸ್ತಾವ:
ಬಾಳೆಗುಳಿ-ಗೂಟಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಹುಬ್ಬಳ್ಳಿ-ಹೊಸಪೇಟೆ ನಡುವೆ ಈಗಾಗಲೇ ವಿಸ್ತರಣೆ ಕಾಮಗಾರಿ ಎನ್‌ಎಚ್‌ಎಐನಿಂದ ನಡೆದಿದೆ. ಕಲಘಟಗಿಯಿಂದ ಬಾಳೆಗುಳಿಯವರೆಗೆ ಹೆದ್ದಾರಿಯು ರಾಜ್ಯ ಲೋಕೋಪಯೋಗಿ ಇಲಾಖೆಯ ರಾಷ್ಟ್ರೀಯ ಹೆದ್ದಾರಿ ವಿಭಾಗ ಉಸ್ತುವಾರಿ ನೋಡಿಕೊಳ್ಳುತ್ತಿದೆ. ಅರಬೈಲ್ ಘಟ್ಟದಲ್ಲಿ ಅತಿ ಕಡಿದಾದ ತಿರುವುಗಳಿದ್ದು, ಅವುಗಳನ್ನು ಅಗಲ ಮಾಡಿ ವಿಸ್ತರಣೆ ಮಾಡಲು ಈಗಾಗಲೇ ಪ್ರಸ್ತಾವವನ್ನು ಕೇಂದ್ರ ಭೂ ಸಾರಿಗೆ ಇಲಾಖೆಗೆ ಕಳುಹಿಸಲಾಗಿದೆ. ಅನುಮೋದನೆ ಇನ್ನಷ್ಟೇ ದೊರೆಯಬೇಕಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಅರಬೈಲ್ ಘಟ್ಟದ 16 ಕಿ.ಮೀ. ವ್ಯಾಪ್ತಿಯಲ್ಲಿ ಹೆಚ್ಚು ಅಪಘಾತ ಸಂಭವಿಸುವ ಆರು ಜಾಗಗಳನ್ನು ಗುರುತಿಸಲಾಗಿದೆ. ಅವುಗಳನ್ನು ವಿಸ್ತರಿಸಲು 34 ಕೋಟಿ ರೂ. ವೆಚ್ಚದಲ್ಲಿ ವಿಸ್ತರಣೆ ಮಾಡಲು ಯೋಜನೆ ರೂಪಿಸಲಾಗಿದೆ. ಅಲ್ಲದೆ, ಮರು ಡಾಂಬರೀಕರಣ ಕೂಡ ಇದರಲ್ಲಿ ಸೇರಿದೆ. ಇನ್ನು ಕಲಘಟಗಿಯಿಂದ ಅಂಚಟಗೇರಿಯವರೆಗೆ 15 ಕಿ.ಮೀ. ವಿಸ್ತರಣೆಗೂ ಪ್ರಸ್ತಾವನೆ ಸಿದ್ಧವಾಗಿದೆ. ಕೇಂದ್ರದಿಂದ ಅನುಮೋದನೆ ದೊರೆತ ತಕ್ಷಣ ಕಾಮಗಾರಿ ಪ್ರಾರಂಭಿಸಲಾಗುವುದು ಎಂದು ಅಧಿಕಾರಿಗಳು ವಿವರಿಸಿದ್ದಾರೆ.
ರಾಷ್ಟ್ರೀಯ ಹೆದ್ದಾರಿ 63ರ ವಿಸ್ತರಣೆಗೆ ಅನುಮೋದನೆ ದೊರಕಿದೆ. ಭೂ ಸ್ವಾಧೀನ ಪ್ರಕ್ರಿಯೆಯನ್ನು ಪ್ರಾರಂಭಿಸಬೇಕಿದೆ. ಇನ್ನೊಂದೆಡೆ ಅರಣ್ಯ ಭೂಮಿ ಹಸ್ತಾಂತರಕ್ಕೆ ನಾವು ಪ್ರಸ್ತಾವನೆ ಸಲ್ಲಿಸಿದ್ದೇವೆ.
ಮಹೇಶ ಎಇಇ ರಾಷ್ಟ್ರೀಯ ಹೆದ್ದಾರಿ ಇಲಾಖೆ ಕಾರವಾರ