ವಿರಾಜಪೇಟೆ: ಶೈಕ್ಷಣಿಕ ಕ್ಷೇತ್ರದಲ್ಲಿ ಮಠ ಮಾನ್ಯಗಳು ಮುಂದಿದ್ದು ಸುಸಂಸ್ಕೃತ ಶಿಕ್ಷಣವನ್ನು ನೀಡುವ ಮೂಲಕ ಉತ್ತಮ ಸಮಾಜ ನಿರ್ಮಾಣ ಮಾಡಲು ಸಹಕಾರಿಯಾಗುತ್ತಿವೆ ಎಂದು ಶಾಸಕ ಕೆ.ಜಿ.ಬೋಪಯ್ಯ ಹೇಳಿದರು.
ಅರಮೇರಿ ಕಳಂಚೇರಿ ಶಾಂತಮಲ್ಲ ವಿದ್ಯಾಪೀಠದಲ್ಲಿ ಭಾನುವಾರ ಸಂಜೆ ಆಯೋಜಿಸಲಾಗಿದ್ದ ಕರುನಾಡ ಕಲಾವೈಭವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಕೇಂದ್ರೀಯ ವಿದ್ಯಾಸಂಸ್ಥೆಗಳು ಭವಿಷ್ಯದ ದೃಷ್ಟಿಯಲ್ಲಿ ಸಹಕಾರಿಯಾಗಲಿವೆ. ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಿದರೆ ಮಾತ್ರ ಆತ ಸುಶಿಕ್ಷಿತನಾಗಲು ಸಾಧ್ಯ ಎಂದು ಹೇಳಿದರು.
ಮಠಗಳು ಸಮಾಜದಲ್ಲಿನ ಜಾತಿ, ಮತ ತಾರತಮ್ಯವಿಲ್ಲದೆ ಎಲ್ಲರಿಗೂ ಶಿಕ್ಷಣ ನೀಡುತ್ತಾ ಸಾಗಿವೆ. ಈ ಬಾರಿಯ ಪ್ರಕೃತಿ ವಿಕೋಪದಿಂದ ಈ ಶಾಲೆಯ ಅರ್ಧ ಭಾಗ ನೀರು ತುಂಬಿಕೊಂಡಿದ್ದ ಕಾರಣ ತೊಂದರೆಯಾಗಿತ್ತು. ಈ ನಿಟ್ಟಿನಲ್ಲಿ ಶಾಲೆಗೆ ಅಪಾಯವಾಗದಂತೆ ಶಾಶ್ವತ ತಡೆಗೋಡೆ ನಿರ್ಮಿಸಲು ಗ್ರಾಮೀಣಾಭಿವೃದ್ಧಿ ಇಲಾಖೆ ವತಿಯಿಂದ ಶೀಘ್ರದಲ್ಲೇ 1ಕೋಟಿ ರೂ. ಅನುದಾನ ಬಿಡುಗಡೆಯಾಗಲಿದೆ ಎಂದು ಮಾಹಿತಿ ನೀಡಿದರು.
ಪಿರಿಯಾಪಟ್ಟಣದ ಗಾವಡಗೆರೆಯ ನಟರಾಜ ಸ್ವಾಮೀಜಿ ಮಾತನಾಡಿ, ಬುದ್ಧಿವಂತಿಕೆ, ಹೃದಯವಂತಿಕೆಯ ವಿದ್ಯಾಸಂಸ್ಥೆಗಳಲ್ಲಿ ಸುಸಂಸ್ಕೃತ ಶಿಕ್ಷಣ ಲಭಿಸುತ್ತದೆ. ಕಲೆ, ಸಾಹಿತ್ಯ, ಪರಂಪರೆಯನ್ನು ಯುವ ಸಮೂಹಕ್ಕೆ ತಲುಪಿಸುವ ಕೆಲಸವನ್ನು ಮಠಮಾನ್ಯಗಳು ಮಾಡಬೇಕು. ಇಂದಿನ ದಿನಗಳಲ್ಲಿ ಕತ್ತಿನಿಂದ ಮಾತನಾಡುವವರ ಸಂಖ್ಯೆ ಹೆಚ್ಚಿದೆ. ಹೃದಯದಿಂದ ಮಾತನಾಡುವ ಪರಿಪಾಠ ಬೆಳೆಸಿಕೊಳ್ಳಬೇಕಿದೆ ಎಂದು ಹೇಳಿದರು.
ಅರಮೇರಿ ಕಳಂಚೇರಿ ಮಠಾಧೀಶ ಶಾಂತ ಮಲ್ಲಿಕಾರ್ಜನಾ ಸ್ವಾಮೀಜಿ ಮಾತನಾಡಿ, ಇಂದಿನ ಕಾಲಘಟ್ಟದಲ್ಲಿ ಪಾಶ್ಚಾತ್ಯ ಸಂಸ್ಕೃತಿಯ ಅಲೆಯಲ್ಲಿ ನಶಿಸಿ ಹೋಗಿರುವ ಗ್ರಾಮೀಣ ಕಲೆ, ಸಂಸ್ಕೃತಿಗಳು ಕೇವಲ ಪತ್ರಿಕೆಗಳಿಗೆ ಮಾತ್ರ ಸೀಮಿತವಾಗಿವೆ. ಈ ನಿಟ್ಟಿನಲ್ಲಿ ಯುವ ಮನಸ್ಸುಗಳಿಗೆ ಎಲ್ಲವನ್ನು ಪರಿಚಯಿಸಲು ಕರುನಾಡ ಕಲಾವೈಭವ ಎಂಬ ವಿನೂತನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದರು.
ವೇದಿಕೆಯಲ್ಲಿ ಜಿಲ್ಲಾ ಪಂಚಾಯಿತಿ ಸದಸ್ಯ ಮೂಕೊಂಡ ಶಶಿ ಸುಬ್ರಮಣಿ, ಸಂಸ್ಥೆ ಕಾರ್ಯದರ್ಶಿ ವಿರೂಪಾಕ್ಷಯ್ಯ, ಪ್ರಾಂಶುಪಾಲೆ ಕುಸುಂ ಉಪಸ್ಥಿತರಿದ್ದರು. ಕರುನಾಡ ಕಲಾವೈಭವದಲ್ಲಿ ಡೊಳ್ಳುಕುಣಿತ, ವೀರಗಾಸೆ. ಕೋಲಾಟ, ನವರಾತ್ರಿ ಉತ್ಸವ, ಅಗಸ್ತ್ಯ ಋಷಿಮುನಿ ಕಿರು ನಾಟಕ ಸೇರಿದಂತೆ ಇತರ ಜನಪದ ಕಲೆಗಳನ್ನು ಪ್ರದರ್ಶಿಸಲಾಯಿತು.