ವಡೋದರ: ಕರ್ನಾಟಕದಿಂದ ವಲಸೆ ಹೋಗಿರುವ ಅನುಭವಿ ಬ್ಯಾಟರ್ ಕರುಣ್ ನಾಯರ್ (122* ರನ್, 13 ಬೌಂಡರಿ, 5 ಸಿಕ್ಸರ್) ಹಾಲಿ ಆವೃತ್ತಿಯಲ್ಲಿ ಸಿಡಿಸಿದ ಸತತ 4ನೇ ಹಾಗೂ ಒಟ್ಟಾರೆ 5ನೇ ಶತಕದ ನೆರವಿನಿಂದ ವಿದರ್ಭ ತಂಡ ವಿಜಯ್ ಹಜಾರೆ ಟ್ರೋಫಿ ದೇಶೀಯ ಏಕದಿನ ಟೂರ್ನಿಯ ಕ್ವಾರ್ಟರ್‌ೈನಲ್‌ನಲ್ಲಿ ರಾಜಸ್ಥಾನ ಎದುರು 9 ವಿಕೆಟ್‌ಗಳ ಗೆಲುವು ದಾಖಲಿಸಿದೆ.
ಮೋತಿಬಾಗ್ ಸ್ಟೇಡಿಯಂನಲ್ಲಿ ಭಾನುವಾರ ನಡೆದ ಕಾದಾಟದಲ್ಲಿ ಟಾಸ್ ಸೋತ ರಾಜಸ್ಥಾನ ಮೊದಲು ಬ್ಯಾಟಿಂಗ್‌ಗೆ ಇಳಿಯಿತು. ಯಶ್ ಠಾಕೂರ್ (39ಕ್ಕೆ 4) ಬಿಗಿ ದಾಳಿಯ ನಡುವೆಯೂ ಕಾರ್ತಿಕ್ (62) ಅರ್ಧಶತಕದ ಬಲದಿಂದ ರಾಜಸ್ಥಾನ 8 ವಿಕೆಟ್‌ಗೆ 291 ರನ್‌ಗಳ ಸ್ಪರ್ಧಾತ್ಮಕ ಮೊತ್ತ ಪೇರಿಸಿತು. ಪ್ರತಿಯಾಗಿ ನಾಯಕ ಕರುಣ್ ನಾಯರ್ ಮತ್ತು ಆರಂಭಿಕ ಧ್ರುವ ಶೋರೆ (118* ರನ್, 131 ಎಸೆತ, 10 ಬೌಂಡರಿ, 3 ಸಿಕ್ಸರ್) ಶತಕದಾಟ ಹಾಗೂ ಮುರಿಯದ 2ನೇ ವಿಕೆಟ್‌ಗೆ ಇವರಿಬ್ಬರು ಕಲೆಹಾಕಿದ ಭರ್ತಿ 200 ರನ್‌ಗಳ ಜತೆಯಾಟದ ನೆರವಿನಿಂದ ವಿದರ್ಭ 43.3 ಓವರ್‌ಗಳಲ್ಲಿ 1 ವಿಕೆಟ್‌ಗೆ 292 ರನ್‌ಗಳಿಸಿ ಸುಲಭ ಗೆಲುವು ದಾಖಲಿಸಿತು.
ರಾಜಸ್ಥಾನ: 8 ವಿಕೆಟ್‌ಗೆ 291 (ಮಹಿಪಾಲ್ 32, ದೀಪಕ್ 45, ಶುಭಂ 59, ಕಾರ್ತಿಕ್ 62, ಎಸ್‌ವಿ ಜೋಷಿ 23, ಯಶ್ ಠಾಕೂರ್ 39ಕ್ಕೆ 4, ಭುಟೆ 53ಕ್ಕೆ 1). ವಿದರ್ಭ: 1ವಿಕೆಟ್‌ಗೆ 292 (ಧ್ರುವ 118*, ಯಶ್ 39, ಕರುಣ್ ನಾಯರ್ 122*).
ಕರುಣ್ ನಾಯರ್ ದಾಖಲೆ: ಕರುಣ್ ನಾಯರ್ ಲಿಸ್ಟ್ ಎ ಕ್ರಿಕೆಟ್‌ನಲ್ಲಿ ಸತತ 4 ಶತಕ ಸಿಡಿಸಿದ ಮೂರನೇ ಭಾರತೀಯ ಮತ್ತು ಒಟ್ಟಾರೆ ವಿಶ್ವದ 5ನೇ ಬ್ಯಾಟರ್ ಎನಿಸಿದರು. ಜತೆಗೆ ವಿಜಯ್ ಹಜಾರೆ ಟ್ರೋಫಿ ಆವೃತಿಯೊಂದರಲ್ಲಿ ಗರಿಷ್ಠ ಶತಕ ಸಿಡಿಸಿದ ಎನ್.ಜಗದೀಶನ್ (5) ದಾಖಲೆ ಸರಿಗಟ್ಟಿದರು. 2020-21ರಲ್ಲಿ ತಮಿಳುನಾಡಿನ ಜಗದೀಶನ್ ಸತತ 5 ಹಾಗೂ ಕನ್ನಡಿಗ ದೇವದತ್ ಪಡಿಕ್ಕಲ್ ಸತತ 4 ಶತಕ ಸಿಡಿಸಿದ್ದರು.
ಕುಮಾರ್ ಸಂಗಕ್ಕರ (4), ಅಲ್ವಿರೋ ಪೀಟರ್‌ರ್ಸೆನ್ (4) ಇನ್ನಿಬ್ಬರು ಸಾಧಕರು. 33 ವರ್ಷದ ಕರುಣ್ ನಾಯರ್ ಒಟ್ಟು 661 ರನ್ ಸಿಡಿಸುವ ಮೂಲಕ ಮತ್ತೋರ್ವ ಕನ್ನಡಿಗ ಮಯಾಂಕ್ ಅಗರ್ವಾಲ್‌ರನ್ನು (619) ಹಿಂದಿಕ್ಕಿ ಹಾಲಿ ಟೂರ್ನಿಯ ಗರಿಷ್ಠ ರನ್‌ಸ್ಕೋರರ್ ಎನಿಸಿದ್ದಾರೆ. ಕರುಣ್ ಟೂರ್ನಿಯ 6 ಇನಿಂಗ್ಸ್‌ಗಳಲ್ಲಿ ಇದುವರೆಗೆ ಕ್ರಮವಾಗಿ 112*, 44*, 163*, 111*, 112, 122* ರನ್ ಸಿಡಿಸಿದ್ದಾರೆ. ಈ ಮುನ್ನ ಅವರು 2 ಬಾರಿ ಔಟ್ ಆಗುವ ನಡುವೆ ಗರಿಷ್ಠ 542 ರನ್ ಸಿಡಿಸಿದ ಲಿಸ್ಟ್ ಎ ದಾಖಲೆಯನ್ನೂ ಬರೆದಿದ್ದರು.
ಹರಿಯಾಣಕ್ಕೆ ರೋಚಕ ಜಯ
ಸಂಘಟಿತ ನಿರ್ವಹಣೆ ತೋರಿದ ಹಾಲಿ ಚಾಂಪಿಯನ್ ಹರಿಯಾಣ ತಂಡ ಸತತ 2ನೇ ಬಾರಿಗೆ ಸೆಮಿೈನಲ್ ಪ್ರವೇಶಿಸಿದೆ. ಗುಜರಾತ್ ನೀಡಿದ 196 ರನ್‌ಗಳ ಸಾಧಾರಣ ಗುರಿ ಚೇಸಿಂಗ್‌ಗೆ ಇಳಿದ ಹರಿಯಾಣ, ಲೆಗ್‌ಸ್ಪಿನ್ನರ್ ರವಿ ಬಿಷ್ಣೋಯಿ (46ಕ್ಕೆ 4) ಬಿಗಿ ದಾಳಿಯ ನಡುವೆಯೂ ಹಿಮಾಂಶು ರಾಣಾ (66) ಅರ್ಧಶತಕದ ನೆರವಿನಿಂದ 44 ಓವರ್‌ಗಳಲ್ಲಿ 8 ವಿಕೆಟ್‌ಗೆ 201 ರನ್‌ಗಳಿಸಿ 2 ವಿಕೆಟ್‌ಗಳ ರೋಚಕ ಗೆಲುವು ಒಲಿಸಿಕೊಂಡಿತು. ಬುಧವಾರ ನಡೆಯಲಿರುವ ಸೆಮಿೈನಲ್‌ನಲ್ಲಿ ಕರ್ನಾಟಕ-ಹರಿಯಾಣ ಮುಖಾಮುಖಿ ಆಗಲಿವೆ.
ಸೆಮಿೈನಲ್ಸ್
ಕರ್ನಾಟಕ-ಹರಿಯಾಣ
ಯಾವಾಗ: ಬುಧವಾರ
ವಿದರ್ಭ-ಮಹಾರಾಷ್ಟ್ರ
ಯಾವಾಗ: ಗುರುವಾರ
ಆರಂಭ: ಮಧ್ಯಾಹ್ನ 1.30
ನೇರಪ್ರಸಾರ: ಜಿಯೋ ಸಿನಿಮಾ