ಕಾರ್ತಿ ಚಿದಂಬರಂಗೆ ಸೇರಿದ್ದ 54 ಕೋಟಿ ರೂ.ಮೌಲ್ಯದ ಆಸ್ತಿ ವಶಪಡಿಸಿಕೊಂಡ ಇ.ಡಿ.

ನವದೆಹಲಿ: ಐಎನ್​ಎಕ್ಸ್ ಮೀಡಿಯಾ ಹಗರಣದ ಪ್ರಮುಖ ಆರೋಪಿಯಾಗಿರುವ ಕಾರ್ತಿ ಚಿದಂಬರಂ ಅವರ 54 ಕೋಟಿ ರೂಪಾಯಿ ವೆಚ್ಚದ ಆಸ್ತಿಯನ್ನು ಜಾರಿನಿರ್ದೇಶನಾಲಯ (ಇ.ಡಿ.)​ ಜಪ್ತಿ ಮಾಡಿದೆ. ಭಾರತ, ಯುಕೆ ಹಾಗೂ ಸ್ಪೇನ್​ಗಳಲ್ಲಿ ಇದ್ದ ಕಾರ್ತಿ ಅವರ ಸ್ವತ್ತನ್ನು ಇ.ಡಿ. ಮುಟ್ಟುಗೋಲು ಹಾಕಿಕೊಂಡಿದೆ.

ಅಕ್ರಮ ಹಣ ವರ್ಗಾವಣೆ ಕಾಯ್ದೆಯಡಿ ಆಸ್ತಿ ಮುಟ್ಟುಗೋಲು ಆದೇಶ ಜಾರಿಮಾಡಲಾಗಿದ್ದು, ಅದರ ಅನ್ವಯ ಇ.ಡಿ. ಕೊಡೈಕೆನಾಲ್​ ಮತ್ತು ಊಟಿಯಲ್ಲಿರುವ ಆಸ್ತಿ, ದೆಹಲಿಯ ಜೋರ್ಬಾಗ್​ನಲ್ಲಿರುವ ಫ್ಲಾಟ್​ , ಯುಕೆಯ ಸಮರ್​ಸೆಟ್​ನಲ್ಲಿರುವ ಕಾಟೇಜ್​, ಮನೆ, ಸ್ಪೇನ್​ನ ಬಾರ್ಸಿಲೋನಾದಲ್ಲಿರುವ ಟೆನ್ನಿಸ್​ ಕ್ಲಬ್​ನ್ನು ವಶಪಡಿಸಿಕೊಂಡಿದೆ.

ಚೆನ್ನೈನ ಬ್ಯಾಂಕ್​ನಲ್ಲಿ ಅಡ್ವಾಂಟೇಜ್​ ಸ್ಟ್ರಾಟಿಜಿಕ್​ ಕನ್ಸಲ್ಟಿಂಗ್​ ಪ್ರವೇಟ್​ ಲಿಮಿಟೆಡ್ (ಎಸ್​ಸಿಪಿಎಲ್​) ಕಂಪನಿ​ ಹೆಸರಿನಲ್ಲಿ ಇಡಲಾಗಿದ್ದ 90 ಲಕ್ಷ ರೂ. ಠೇವಣಿ ವಶಕ್ಕೆ ಪಡೆಯಲಾಗಿದೆ. ಈ ಎಲ್ಲ ಆಸ್ತಿಗಳ ಒಟ್ಟೂ ಮೊತ್ತ ಸುಮಾರು 54 ಕೋಟಿ ರೂಪಾಯಿ ಎಂದು ಇ.ಡಿ. ತಿಳಿಸಿದೆ.
ಇ.ಡಿ. ಜಾರಿಗೊಳಿಸಿದ ಆದೇಶ ನ್ಯಾಯಾಂಗ ಪರಿಶೀಲನೆಗೆ ಒಳಪಟ್ಟಿಲ್ಲ. ಸೂಕ್ತವಾಗಿ ಕಾನೂನಿನ ಪ್ರಕಾರ ಕ್ರಮ ತೆಗೆದುಕೊಳ್ಳಬೇಕು ಎಂದು ಕಾರ್ತಿ ಟ್ವೀಟ್​ ಮಾಡಿದ್ದಾರೆ.

ಕಾರ್ತಿ INX ಮೀಡಿಯಾ ಸಂಸ್ಥೆಗೆ ಕಾನೂನು ಬಾಹಿರವಾಗಿ ವಿದೇಶಿ ಬಂಡವಾಳ ಹೂಡಿಕೆಗೆ ಸಂಬಂಧಪಟ್ಟಂತೆ ಲಂಚ ಪಡೆದ ಪ್ರಕರಣದಲ್ಲಿ ಪ್ರಮುಖ ಆರೋಪಿಯಾಗಿದ್ದಾರೆ. ಯುಪಿಎ ಸರ್ಕಾರದಲ್ಲಿ ಹಣಕಾಸು ಸಚಿವರಾಗಿದ್ದ ಚಿದಂಬರಂ ಸಹಕಾರ ನೀಡಿದ್ದರೂ ಎಂದು ತನಿಖೆ ನಡೆಸಿದ ಅಧಿಕಾರಿಗಳು ತಿಳಿಸಿದ್ದರು.

ಕಾರ್ತಿ ಚಿದಂಬರಂಗೆ ಜಾಮೀನು ಮಂಜೂರು