ಏಕದಿನ ವಿಶ್ವಕಪ್​ಗೆ ಭಾರತ ತಂಡ ಪ್ರಕಟ

ಮುಂಬೈ: ಯಾವ ಗೊಂದಲಗಳಿಗೂ ಅವಕಾಶ ನೀಡದೆ, ಆಯಾ ಆಟಗಾರರ ಕೌಶಲವನ್ನೇ ಪ್ರಧಾನ ಅಂಶವನ್ನಾಗಿ ಪರಿಗಣಿಸಿ ಮುಂಬರುವ ಏಕದಿನ ವಿಶ್ವಕಪ್ ಟೂರ್ನಿಗೆ 15 ಸದಸ್ಯರ ಭಾರತ ತಂಡವನ್ನು ಬಿಸಿಸಿಐ ಸೋಮವಾರ ಪ್ರಕಟಿಸಿದೆ. 1983ರಲ್ಲಿ ದೇಶದ ಕ್ರಿಕೆಟ್ ಭವಿಷ್ಯವನ್ನೇ ಬದಲಿಸಿದ್ದ ವಿಶ್ವಕಪ್ ಗೆಲುವು ಕಂಡ ನೆಲದಲ್ಲಿ ಮತ್ತೊಮ್ಮೆ ಅದೇ ಸಾಧನೆ ಮಾಡುವ ಹಂಬಲದೊಂದಿಗೆ ವಿರಾಟ್ ಕೊಹ್ಲಿ ನೇತೃತ್ವದಲ್ಲಿ 15 ಸದಸ್ಯರ ತಂಡವನ್ನು ರಾಷ್ಟ್ರೀಯ ಆಯ್ಕೆ ಸಮಿತಿ ಪ್ರಕಟಿಸಿದೆ. ಕೋಟಿ ಕೋಟಿ ಭಾರತೀಯ ನಿರೀಕ್ಷೆ ಉಳಿಸಿಕೊಳ್ಳುವ ವಿಶ್ವಾಸದಲ್ಲಿರುವ ತಂಡದಲ್ಲಿ ಕರ್ನಾಟಕದ ಬ್ಯಾಟ್ಸ್ ಮನ್ ಕೆಎಲ್ ರಾಹುಲ್ ಕೂಡ ಸ್ಥಾನ ಸಂಪಾದಿಸಿದ್ದಾರೆ.

ಯುವ ವಿಕೆಟ್ಕೀಪರ್ ರಿಷಭ್ ಪಂತ್ ಹಾಗೂ ಕಳೆದೊಂದು ವರ್ಷದಿಂದ ಏಕದಿನ ತಂಡದ ನಾಲ್ಕನೇ ಕ್ರಮಾಂಕದಲ್ಲಿ ಸಾಕಷ್ಟು ಅವಕಾಶ ಪಡೆದುಕೊಂಡರೂ ಹೇಳಿಕೊಳ್ಳುವಂಥ ನಿರ್ವಹಣೆ ತೋರದ ಅಂಬಟಿ ರಾಯುಡು ವಿಶ್ವಕಪ್ ತಂಡದಲ್ಲಿ ಸ್ಥಾನ ಪಡೆದಿಲ್ಲ. ಆದರೆ, ಅನುಭವಿ ವಿಕೆಟ್ಕೀಪರ್ ದಿನೇಶ್ ಕಾರ್ತಿಕ್, ವೇಗದ ಬೌಲಿಂಗ್ ಆಲ್ರೌಂಡರ್ ವಿಜಯ್ ಶಂಕರ್ ಹಾಗೂ ಸ್ಪಿನ್ ಬೌಲಿಂಗ್ ಆಲ್ರೌಂಡರ್ ರವೀಂದ್ರ ಜಡೇಜಾ ತಂಡದಲ್ಲಿ ಸ್ಥಾನ ಪಡೆದಿದ್ದಾರೆ.

ಬಿಸಿಸಿಐ ಕೇಂದ್ರ ಕಚೇರಿಯಲ್ಲಿ ಸೋಮವಾರ ಬೆಳಗ್ಗೆ ನಡೆದ ಆಯ್ಕೆ ಸಮಿತಿ ಸಭೆಯಲ್ಲಿ, ಎಂಎಸ್​ಕೆ ಪ್ರಸಾದ್ ನೇತೃತ್ವದ ಆಯ್ಕೆ ಸಮಿತಿಯೊಂದಿಗೆ ನಾಯಕ ವಿರಾಟ್ ಕೊಹ್ಲಿ ಕೂಡ ಭಾಗವಹಿಸಿದ್ದರು.

ಒತ್ತಡದ ಸನ್ನಿವೇಶದಲ್ಲಿ ಪಂತ್​ಗಿಂತ ಉತ್ತಮವಾಗಿ ದಿನೇಶ್ ಕಾರ್ತಿಕ್ ಪರಿಸ್ಥಿತಿ ನಿಭಾಯಿಸುವ ವಿಶ್ವಾಸವಿದೆ ಎಂದ ಪ್ರಸಾದ್, ‘ಧೋನಿ ಗಾಯಗೊಂಡಾಗ ಇವರಿಬ್ಬರಲ್ಲಿ ಒಬ್ಬರು ಆಡುವ ಬಳಗದಲ್ಲಿ ಸ್ಥಾನ ಪಡೆಯುತ್ತಾರೆ ಎಂದುಕೊಳ್ಳೋಣ. ಕಠಿಣ ಪರಿಸ್ಥಿತಿಯಲ್ಲಿ ಪ್ರಮುಖ ಪಂದ್ಯ ಆಡುವಾಗ, ಇವರಿಬ್ಬರಲ್ಲಿ ಯಾರು ಉತ್ತಮವಾಗಿ ಒತ್ತಡ ನಿಭಾಯಿಸಬಲ್ಲರು? ಈ ಕಾರಣಕ್ಕಾಗಿಯೇ ದಿನೇಶ್ ಕಾರ್ತಿಕ್​ರನ್ನು ಆಯ್ಕೆ ಮಾಡಿದ್ದೇವೆ. ಪಂತ್ ಅದ್ಭುತ ಪ್ರತಿಭೆ ಎನ್ನುವುದರಲ್ಲಿ ಅನುಮಾನವಿಲ್ಲ. ಆದರೆ, ಅವರಿಗೆ ಕಲಿಯಲು ಇನ್ನೂ ಅವಕಾಶ ಹಾಗೂ ಸಮಯವಿದೆ. ಒತ್ತಡದ ಸನ್ನಿವೇಶದಲ್ಲಿ ಪಂದ್ಯವನ್ನು ಫಿನಿಷ್ ಮಾಡುವ ಸಾಮರ್ಥ್ಯ ಪಂತ್​ಗಿಂತ ಹೆಚ್ಚಾಗಿ ದಿನೇಶ್ ಕಾರ್ತಿಕ್​ಗೆ ಇದೆ’ ಎಂದರು.

4ನೇ ಕ್ರಮಾಂಕಕ್ಕೆ ಹಲವು ಆಯ್ಕೆಗಳಿವೆ

ಈಗಾಗಲೇ ತಂಡದ ಹಲವು ಸ್ಥಾನಗಳು ಖಚಿತಗೊಂಡಿದ್ದರಿಂದ 4ನೇ ಕ್ರಮಾಂಕದ ಬ್ಯಾಟಿಂಗ್​ನಲ್ಲಿ ರಾಯುಡು ಅಥವಾ ರಿಷಭ್ ಪಂತ್​ರಲ್ಲಿ ಯಾರನ್ನು ಆಯ್ಕೆ ಮಾಡುತ್ತಾರೆ ಎನ್ನುವ ಕುತೂಹಲವಿತ್ತು. ಆದರೆ, ಆಯ್ಕೆ ಸಮಿತಿ ಅನುಭವಿ ದಿನೇಶ್ ಕಾರ್ತಿಕ್ ಮೇಲೆ ವಿಶ್ವಾಸವಿಟ್ಟಿತು.ಮೀಸಲು ಆರಂಭಿಕನಾಗಿ ರಾಹುಲ್ ಹಾಗೂ ವಿಜಯ್ ಶಂಕರ್ ಕೂಡ ಇರುವುದರಿಂದ 4ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಲು ಮತ್ತೆರಡು ಆಯ್ಕೆ ತಂಡದ ಬಳಿ ಇದೆ. ‘2017ರ ಚಾಂಪಿಯನ್ಸ್ ಟ್ರೋಫಿ ಬಳಿಕ ಮಧ್ಯಮ ಕ್ರಮಾಂಕದಲ್ಲಿ ಕೆಲ ಆಟಗಾರರಿಗೆ ಅವಕಾಶ ನೀಡಿದೆವು. ದಿನೇಶ್ ಕಾರ್ತಿಕ್​ರೊಂದಿಗೆ ಶ್ರೇಯಸ್ ಅಯ್ಯರ್, ಮನೀಷ್ ಪಾಂಡೆ ಈ ಸ್ಥಾನದಲ್ಲಿ ಆಡಿದ್ದರು. ರಾಯುಡುಗೆ ಈ ಸ್ಥಾನದಲ್ಲಿ ಹೆಚ್ಚಿನ ಅವಕಾಶ ನೀಡಿದ್ದೆವು. ಆದರೆ, ವಿಜಯ್ ಶಂಕರ್ ಮೂರು ಕೋನಗಳಲ್ಲೂ ತಂಡದಲ್ಲಿ ಸ್ಥಾನ ಪಡೆಯಲು ಯಶ ಕಾಣುತ್ತಾರೆ’ ಎಂದು ಆಯ್ಕೆ ಸಮಿತಿ ಅಧ್ಯಕ್ಷ ಎಂಎಸ್​ಕೆ ಪ್ರಸಾದ್ ಹೇಳಿದರು. ಬ್ಯಾಟಿಂಗ್ ಮಾತ್ರವಲ್ಲದೆ, ಅವರು ವೇಗದ ಬೌಲಿಂಗ್ ಕೂಡ ಮಾಡುತ್ತಾರೆ. ಇಂಗ್ಲೆಂಡ್​ನ ವಾತಾವರಣದಲ್ಲಿ ಆಡುವಾಗ ಇದು ಪ್ರಮುಖ. ವಾತಾವರಣಕ್ಕೆ ಅಗತ್ಯಕ್ಕೆ ಇವರ ಬೌಲಿಂಗ್​ಅನ್ನು ಬಳಸಿಕೊಳ್ಳಬಹುದು. ಅದರೊಂದಿಗೆ ವಿಜಯ್ ಅದ್ಭುತ ಫೀಲ್ಡರ್. ಆ ಕಾರಣಕ್ಕಾಗಿ ತಂಡಕ್ಕೆ ಆಯ್ಕೆ ಮಾಡಿದೆವು. ಇವರನ್ನೂ ನಾವು 4ನೇ ಕ್ರಮಾಂಕದ ಬ್ಯಾಟ್ಸ್​ಮನ್ ಆಗಿ ನೋಡಿದ್ದೇವೆ. ದಿನೇಶ್ ಕಾರ್ತಿಕ್ ಹಾಗೂ ಕೇದಾರ್ ಜಾಧವ್ ಕೂಡ ಇರುವುದರಿಂದ ಈ ಕ್ರಮಾಂಕದಲ್ಲಿ ನಮಗೆ ಹಲವು ಆಯ್ಕೆಗಳಿವೆ’ ಎಂದು ತಿಳಿಸಿದರು.

ಮತ್ತೆ ಬದಲಾವಣೆ ಇಲ್ಲ

ಐಸಿಸಿಯ ತಾಂತ್ರಿಕ ಸಮಿತಿಯ ಒಪ್ಪಿಗೆ ಇಲ್ಲದೆ ಮೇ 23 ರವರೆಗೆ ತಂಡದಲ್ಲಿ ಬದಲಾವಣೆ ಮಾಡಬಹುದು. ಆದರೆ, ಲಾಜಿಸ್ಟಿಕ್ಸ್ ವ್ಯವಸ್ಥೆಗಳ ಕಾರಣ ಏಪ್ರಿಲ್ 23ರ ಒಳಗಾಗಿ ತಂಡವನ್ನು ಪ್ರಕಟಿಸಬೇಕು ಎಂದು ಐಸಿಸಿ ಹೇಳಿತ್ತು. ಆದರೆ, ಆಟಗಾರರು ಗಾಯಗೊಂಡಲ್ಲಿ ಮಾತ್ರವೇ ತಂಡದಲ್ಲಿ ಬದಲಾವಣೆ ಆಗಲಿದೆ ಎಂದು ಆಯ್ಕೆ ಸಮಿತಿ ತಿಳಿಸಿದೆ. ಭಾರತ ತಂಡ ಜೂನ್ 5 ರಂದು ದಕ್ಷಿಣ ಆಫ್ರಿಕಾ ವಿರುದ್ಧ ಸೌಥಾಂಪ್ಟನ್​ನಲ್ಲಿ ಆಡುವ ಮೂಲಕ ಅಭಿಯಾನ ಆರಂಭಿಸಲಿದೆ.

ಇತರ ವೇಗಿಗಳ ಪ್ರಯಾಣ

ವಿಶ್ವಕಪ್ ತಂಡದೊಂದಿಗೆ ನಾಲ್ವರು ಇತರ ವೇಗಿಗಳೂ ತೆರಳಲಿದ್ದಾರೆ. ತಂಡದ ಅಭ್ಯಾಸ ಹಂತದಲ್ಲಿ ಇವರು ನೆರವಾಗಲಿದ್ದಾರೆ. ನವ್​ದೀಪ್ ಸೈನಿ, ಆವೇಶ್ ಖಾನ್, ಎಡಗೈ ವೇಗಿ ಖಲೀಲ್ ಅಹ್ಮದ್ ಹಾಗೂ ದೀಪಕ್ ಚಹರ್​ರನ್ನು ಬಿಸಿಸಿಐ ತಂಡದ ಇತರ ವೇಗಿಗಳನ್ನಾಗಿ ಆಯ್ಕೆ ಮಾಡಿದೆ. ಖಲೀಲ್ ಅಹ್ಮದ್ ಹಾಗೂ ನವ್​ದೀಪ್ ಸೈನಿ ಹೆಸರುಗಳು ವಿಶ್ವಕಪ್ ತಂಡದ ಆಯ್ಕೆಯ ವೇಳೆ ಚರ್ಚೆಗೆ ಬಂದಿತ್ತು. ಆದರೆ, ಅನುಭವಿ ವೇಗಿಗಳಿಗೆ ಆಯ್ಕೆ ಸಮಿತಿ ಮಣೆ ಹಾಕಿತು ಎಂದು ಆಯ್ಕೆ ಸಮಿತಿ ಅಧ್ಯಕ್ಷ ಎಂಎಸ್​ಕೆ ಪ್ರಸಾದ್ ತಿಳಿಸಿದರು. ರಾಜ್ಯದ ಪ್ರಸಿದ್ಧಕೃಷ್ಣ ಮೀಸಲು ವೇಗಿಯಾಗಿ ತೆರಳುವ ಅವಕಾಶವನ್ನೂ ತಪ್ಪಿಸಿಕೊಂಡರು.