ಅಗಲಿದ ನಾಯಕರಿಗೆ ಸಂತಾಪ ಸೂಚಿಸಿ ಉಭಯ ಸದನಗಳು ಸೋಮವಾರಕ್ಕೆ ಮುಂದೂಡಿಕೆ

ಬೆಂಗಳೂರು: ರಾಜ್ಯ ರಾಜಕೀಯದ ಬಿಕ್ಕಟ್ಟು ತಾರಕಕ್ಕೇರಿರುವ ಬೆನ್ನಲ್ಲೇ ಇಂದಿನಿಂದ ವಿಧಾನಮಂಡಲ ಮುಂಗಾರು ಅಧಿವೇಶನ ಆರಂಭಗೊಂಡಿದ್ದು, ಕಲಾಪ ಆರಂಭವಾಗುತ್ತಿದ್ದಂತೆಯೇ ಉಭಯ ಸದನಗಳಲ್ಲಿ ಅಗಲಿದ ನಾಯಕರಿಗೆ ಸಂತಾಪ ಸೂಚಿಸಿ ಸೋಮವಾರಕ್ಕೆ ಮುಂದೂಡಲಾಯಿತು.

ವಿಧಾನಮಂಡಲ ಮುಂಗಾರು ಅಧಿವೇಶನದ ಮೊದಲ ದಿನವಾದ ಗುರುವಾರ ಇತ್ತೀಚಿಗೆ ಅಗಲಿದ ಗಣ್ಯರಿಗೆ ಸಂತಾಪ ಸೂಚಿಸಲಾಯಿತು. ಇನ್ನು ಇದಾದ ಬಳಿಕ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಮಾತನಾಡಿ, ವಿಶ್ವಾಸಮತ ಯಾಚಿಸುವುದಾಗಿ ಹೇಳಿ, ವಿಶ್ವಾಸಮತ ಯಾಚನೆಗೆ ಸಮಯ ನಿಗದಿಪಡಿಸುವಂತೆ ವಿಧಾನಸಭಾಧ್ಯಕ್ಷ ಕೆ.ಆರ್. ರಮೇಶ್​ಕುಮಾರ್​ ಅವರಲ್ಲಿ ಮನವಿ ಮಾಡಿದರು. ಬಳಿಕ ಕಲಾಪವನ್ನು ಸೋಮವಾರಕ್ಕೆ ಮುಂದೂಡಲಾಯಿತು.

ಇನ್ನೊಂದೆಡೆ ವಿಧಾನ ಪರಿಷತ್‌ನಲ್ಲಿಯೂ ಕಲಾಪ ಆರಂಭವಾಗುತ್ತಿದ್ದಂತೆ ಅಗಲಿದ ಗಣ್ಯರಿಗೆ ಸಂತಾಪ ಸೂಚಿಸಲಾಯಿತು. ಈ ವೇಳೆ ಸಭಾ ನಾಯಕಿ ಜಯಮಾಲಾ ಅವರು ಗಿರೀಶ್ ಕಾರ್ನಾಡ್‌ಗೆ ಸಂತಾಪ ಸೂಚನೆ ವೇಳೆ ಯಡವಟ್ಟು ಮಾಡಿದರು. ಗಿರೀಶ್ ಕಾರ್ನಾಡ್ ಎಂದು ಹೇಳುವ ಬದಲು ಗಿರೀಶ್ ಕಾಸರವಳ್ಳಿ ಎಂದು ಉಲ್ಲೇಖಿಸಿ ಕಾನೂರು ಹೆಗ್ಗಡತಿ ಸಿನಿಮಾದಂತಹ ಅದ್ಭುತ ಸಿನಿಮಾ ಕೊಟ್ಟವರು ಗಿರೀಶ್ ಕಾಸರವಳ್ಳಿ ಎಂದು ಹೇಳಿದರು. ಬಳಿಕ ತಪ್ಪನ್ನು ಸರಿ ಪಡಿಸಿಕೊಂಡು ಗಿರೀಶ್ ಕಾಸರಹಳ್ಳಿ ಅಲ್ಲ ಗಿರೀಶ್ ಕಾರ್ನಾಡ್ ಎಂದು ಹೇಳಿದರು. ಇದಾದ ಬಳಿಕ ಪರಿಷತ್‌ ಕಲಾಪವನ್ನು ಸೋಮವಾರ ಬೆಳಗ್ಗೆ 11 ಗಂಟೆಗೆ ಮುಂದೂಡಲಾಯಿತು.

ಪ್ರತಿಪಕ್ಷ ನಾಯಕ ಬಿ.ಎಸ್.ಯಡಿಯೂರಪ್ಪ ಅವರು ಕೂಡ ಅಗಲಿದ ನಾಯಕರಿಗೆ ಸಂತಾಪ ಸೂಚಿಸಿದರು.
ಗಣ್ಯರಾದ ಸಿ.ಎಸ್.ಶಿವಳ್ಳಿ, ಕೆ.ಎಲ್.ಶಿವಲಿಂಗೇಗೌಡ, ಗಿರೀಶ್ ಕಾರ್ನಾಡ್, ಎಸ್.ಎಸ್.ಅರಕೇರಿ, ಧಮಯಂತಿ ಬೋರೇಗೌಡ, ಡಾ.ವಿಜಯ ಕುಮಾರ್ ಖಂಡ್ರೆ, ಎಂ.ಸತ್ಯನಾರಾಯಣ ಸೇರಿದಂತೆ ಹಲವು ಗಣ್ಯರಿಗೆ ಸಂತಾಪ ಸೂಚಿಸಲಾಯಿತು. (ದಿಗ್ವಿಜಯ ನ್ಯೂಸ್)

Leave a Reply

Your email address will not be published. Required fields are marked *