More

    ಹೋರಾಟದ ಡ್ರಾ ಸಾಧಿಸಿದ ಕರ್ನಾಟಕ

    ರಾಜ್​ಕೋಟ್: ಆತಿಥೇಯ ಸೌರಾಷ್ಟ್ರ ವಿರುದ್ಧ ಹೋರಾಟದ ಡ್ರಾ ಸಾಧಿಸುವಲ್ಲಿ ಯಶ ಕಂಡಿರುವ ಕರ್ನಾಟಕ ತಂಡ ರಣಜಿ ಟ್ರೋಫಿ ದೇಶೀಯ ಕ್ರಿಕೆಟ್ ಟೂರ್ನಿಯ ತನ್ನ 5ನೇ ಪಂದ್ಯದಲ್ಲಿ ಅಮೂಲ್ಯ ಒಂದು ಅಂಕ ಸಂಪಾದಿಸಿದೆ. ಆರಂಭಿಕ ಆರ್.ಸಮರ್ಥ್ ಹಾಗೂ ದೇವದತ್ ಪಡಿಕಲ್​ರ ಜಿಗುಟಿನ ಅರ್ಧಶತಕದ ಬ್ಯಾಟಿಂಗ್, ಫಾಲೋಆನ್ ಸಂಕಷ್ಟಕ್ಕೆ ಸಿಲುಕಿದ್ದ ರಾಜ್ಯ ತಂಡವನ್ನು ಸೋಲಿನ ಸುಳಿಯಿಂದ ಪಾರು ಮಾಡಿತು.

    ಮಾಧವ್​ರಾವ್ ಸಿಂಧಿಯಾ ಸ್ಟೇಡಿಯಂನಲ್ಲಿ ಮಂಗಳವಾರ ಮುಕ್ತಾಯಗೊಂಡ ಪಂದ್ಯದಲ್ಲಿ ಸೌರಾಷ್ಟ್ರ ತಂಡದ ಗೆಲುವಿಗೆ ಅಂತಿಮ ದಿನ 10 ವಿಕೆಟ್ ಅಗತ್ಯವಿದ್ದರೆ, ಕರ್ನಾಟಕ ತಂಡ ಇಡೀ ದಿನ ಬ್ಯಾಟಿಂಗ್ ಮಾಡಬೇಕಿತ್ತು. ಈ ಹಂತದಲ್ಲಿ ತಂಡದ ನೆರವಿಗೆ ನಿಂತ ಆರ್.ಸಮರ್ಥ್ (74 ರನ್, 159 ಎಸೆತ, 10 ಬೌಂಡರಿ) ಹಾಗೂ ದೇವದತ್ ಪಡಿಕಲ್ (53 ರನ್, 133 ಎಸೆತ, 9 ಬೌಂಡರಿ) ಸೌರಾಷ್ಟ್ರ ಬೌಲಿಂಗ್​ಗೆ ತಡೆಯೊಡ್ಡಿದರು. 89 ಓವರ್​ಗಳಲ್ಲಿ 4 ವಿಕೆಟ್​ಗೆ 211 ರನ್ ಬಾರಿಸಿದ್ದ ವೇಳೆ ಎರಡೂ ತಂಡಗಳ ನಾಯಕರು ಪಂದ್ಯವನ್ನು ಡ್ರಾ ಮಾಡಿಕೊಳ್ಳಲು ಸಮ್ಮತಿಸಿದರು. ಈ ವೇಳೆ ದಿನದಾಟ ಮುಗಿಯಲು ಇನ್ನೂ ಅಂದಾಜು 1 ಗಂಟೆಯ ಆಟ ಬಾಕಿ ಉಳಿದಿತ್ತು. ಮೊದಲ ಇನಿಂಗ್ಸ್ ಮುನ್ನಡೆ ಪಡೆದ ಆಧಾರಕ್ಕೆ ಸೌರಾಷ್ಟ್ರ ತಂಡ 3 ಅಂಕ ಸಂಪಾದನೆ ಮಾಡಿತು. ಪೂರ್ಣ ಅಂಕಕ್ಕಾಗಿ ರಾಜ್ಯದ ಬ್ಯಾಟ್ಸ್ ಮನ್​ಗಳ ಮೇಲೆ ಅತೀವ ಒತ್ತಡ ಹೇರಿದ ಸೌರಾಷ್ಟ್ರ ಶಿಸ್ತಿನ ಬೌಲಿಂಗ್ ದಾಳಿ ನಡೆಸಿತು. ಎಡಗೈ ವೇಗಿ ಜೈದೇವ್ ಉನಾದ್ಕತ್ ಹಾಗೂ ಸ್ಪಿನ್ ಜೋಡಿಯಾದ ಧಮೇಂದ್ರಸಿನ್ಹಾ ಜಡೇಜಾ-ಕಮಲೇಶ್ ಮಕ್ವಾನ ಬಿಗಿ ದಾಳಿ ನಡೆಸಿದರೆ, ಬ್ಯಾಟ್ಸ್​ಮನ್​ನ ಸುತ್ತಮುತ್ತ 5 ಫೀಲ್ಡರ್​ಗಳು ದಿನದ ಹೆಚ್ಚಿನ ಸಮಯ ಇರಿಸಿದ್ದರು. ಈ ಒತ್ತಡವನ್ನು ಯಶಸ್ವಿಯಾಗಿ ನಿಭಾಯಿಸಿದ ಕರ್ನಾಟಕದ ಬ್ಯಾಟ್ಸ್​ಮನ್​ಗಳು ಸೌರಾಷ್ಟ್ರಕ್ಕೆ ಗೆಲುವಿನ ಅವಕಾಶ ನೀಡಲಿಲ್ಲ. ಆತಿಥೇಯ ತಂಡದ ಸೋಲಿನ ಅವಕಾಶ ತಪ್ಪಿಸಿದ್ದೇ ರಾಜ್ಯ ತಂಡಕ್ಕೆ ಈ ಪಂದ್ಯದಲ್ಲಿನ ಯಶಸ್ಸು ಎಂದು ಹೇಳಬಹುದು. ಆರಂಭಿಕರಾದ ರೋಹನ್ ಕದಂ (42ರನ್, 132 ಎಸೆತ, 5 ಬೌಂಡರಿ) ಹಾಗೂ ಸಮರ್ಥ್ ಮೊದಲ ವಿಕೆಟ್​ಗೆ 96 ರನ್ ಕೂಡಿಸಿ ಬೆಳಗಿನ ಅವಧಿಯ ಅಪಾಯ ತಪ್ಪಿಸಿದ್ದರು. ಭೋಜನ ವಿರಾಮಕ್ಕೂ ಮುನ್ನ ಕದಂ ಔಟಾದರು. ಬೆನ್ನಲ್ಲಿಯೇ ಸಮರ್ಥ್ 2ನೇ ಇನಿಂಗ್ಸ್​ನಲ್ಲೂ ಅರ್ಧಶತಕ ದಾಖಲಿಸಿದರು. ನಂತರ ಉನಾದ್ಕತ್​ರ ಆಕರ್ಷಕ ಎಸೆತಕ್ಕೆ ಸಮರ್ಥ್ ಬೌಲ್ಡ್ ಆಗಿ ಹೊರನಡೆದರು.

    6ನೇ ಸುತ್ತಿನಲ್ಲಿ ವಿಶ್ರಾಂತಿ

    ಕರ್ನಾಟಕ ತಂಡಕ್ಕೆ ರಣಜಿ ಟ್ರೋಫಿಯ 6ನೇ ಸುತ್ತಿನಲ್ಲಿ ವಿಶ್ರಾಂತಿ ಸಿಗಲಿದ್ದು, 7ನೇ ಸುತ್ತಿನ ಪಂದ್ಯದಲ್ಲಿ ರೈಲ್ವೇಸ್​ಅನ್ನು ದೆಹಲಿಯಲ್ಲಿ ಎದುರಿಸಲಿದೆ. ನಂತರ ಮಧ್ಯಪ್ರದೇಶ ಹಾಗೂ ಬರೋಡ ವಿರುದ್ಧದ ಮುಖಾಮುಖಿ ನಾಕೌಟ್ ಹಾದಿಗೆ ನಿರ್ಣಾಯಕವಾಗಿರಲಿದೆ.

    ಎ-ಬಿ ಗ್ರೂಪ್ ಟಾಪ್​-5 ಅಂಕಪಟ್ಟಿ

    ತಂಡ ಪಂದ್ಯ/ಜಯ/ಸೋಲು/ಡ್ರಾ/ಅಂಕ

    ಆಂಧ್ರ  5  3  0  2  21

    ಪಂಜಾಬ್ 5 2 1 2 18

    ವಿದರ್ಭ 4 2 0 2 17

    ಕರ್ನಾಟಕ 5 2 0 3 17

    ಸೌರಾಷ್ಟ್ರ 4 2 1 1 16

    ಕಾಪಾಡಿದ ಪಡಿಕಲ್

    ಮೊದಲ ಇನಿಂಗ್ಸ್​ನಲ್ಲಿ ಶೂನ್ಯ ಸುತ್ತಿದ್ದ ಕೆವಿ ಸಿದ್ಧಾರ್ಥ್​ರನ್ನು (19) ಹಾಗೂ ಆಲ್ರೌಂಡರ್ ಪವನ್ ದೇಶಪಾಂಡೆ (12) ವಿಕೆಟ್​ಅನ್ನು 6 ಓವರ್​ಗಳ ಅಂತರದಲ್ಲಿ ಧಮೇಂದ್ರಸಿನ್ಹಾ ಜಡೇಜಾ ಪಡೆದರು. ಇನ್ನೊಂದೆಡೆ ಯುವ ಆಟಗಾರ ದೇವದತ್ ಎದುರಾಳಿಗೆ ಎದೆಯೊಡ್ಡಿ ನಿಂತಿದ್ದರು. ಮೊದಲ ಇನಿಂಗ್ಸ್​ನಲ್ಲಿ ಗೋಲ್ಡನ್ ಡಕ್ ಅವಮಾನ ಕಂಡಿದ್ದ ಪಡಿಕಲ್, 2ನೇ ಇನಿಂಗ್ಸ್​ನಲ್ಲಿ ತಮ್ಮ ಎಂದಿನ ಆಕ್ರಮಣಕಾರಿ ಶೈಲಿಯ ಬ್ಯಾಟಿಂಗ್​ಗೆ ಕಡಿವಾಣವಿಟ್ಟು ಆಡಿದ್ದರು. ಪಡಿಕಲ್ ಹಾಗೂ ನಾಯಕ ಶ್ರೇಯಸ್ ಗೋಪಾಲ್ (13 ರನ್, 55 ಎಸೆತ, 2 ಬೌಂಡರಿ) 5ನೇ ವಿಕೆಟ್​ಗೆ ತಾಳ್ಮೆಯ 52 ರನ್ ಜತೆಯಾಟವಾಡಿದ್ದ ವೇಳೆ ಸೌರಾಷ್ಟ್ರ ಪಂದ್ಯವನ್ನು ಡ್ರಾ ಮಾಡಿಕೊಳ್ಳಲು ನಿರ್ಧರಿಸಿತು. ದಿನದಾಟ ಮುಗಿಯಲು ಇನ್ನೂ 17 ಓವರ್​ಗಳು ಇರುವಾಗಲೇ ಸೌರಾಷ್ಟ್ರ ಡ್ರಾ ಮಾಡಿಕೊಳ್ಳಲು ನಿರ್ಧರಿಸಿದ್ದು ಅಚ್ಚರಿಗೆ ಕಾರಣವಾಯಿತು.

    ಮೊದಲ ಇನಿಂಗ್ಸ್​ನಲ್ಲಿ ನಮ್ಮ ಬ್ಯಾಟಿಂಗ್ ನಿರಾಸೆ ಮೂಡಿಸಿತು. ಕನಿಷ್ಠ ಒಂದು ಅಂಕ ಸಂಪಾದಿಸಲು 2ನೇ ಇನಿಂಗ್ಸ್ ನಲ್ಲಿ ಉತ್ತಮ ಆಟವಾಡುವುದು ಅಗತ್ಯವಾಗಿತ್ತು. ಪಂದ್ಯದ ನಾಲ್ಕೂ ದಿನವೂ ಪಿಚ್ ಒಂದೇ ರೀತಿಯಲ್ಲಿ ವರ್ತಿಸಿತು. ಅಂತಿಮ ದಿನ ಸ್ವಲ್ಪ ಪ್ರಮಾಣದ ತಿರುವು ಇತ್ತು. ಇದರ ಹೊರತಾಗಿ ಮತ್ತೆ ಯಾವುದೇ ಕಷ್ಟ ಎದುರಾಗಲಿಲ್ಲ.

    | ದೇವದತ್ ಪಡಿಕಲ್

    ಸೌರಾಷ್ಟ್ರ ಪ್ರ. ಇನಿಂಗ್ಸ್: 581/7 ಡಿಕ್ಲೇರ್

    ಕರ್ನಾಟಕ ಪ್ರಥಮ ಇನಿಂಗ್ಸ್: 171

    ಕರ್ನಾಟಕ ದ್ವಿತೀಯ ಇನಿಂಗ್ಸ್: 89 ಓವರ್​ಗಳಲ್ಲಿ 4 ವಿಕೆಟ್​ಗೆ 220 (ಸೋಮವಾರ ವಿಕೆಟ್ ನಷ್ಟವಿಲ್ಲದೆ 30)

    ರೋಹನ್ ಕದಂ ಸಿ ಹಾರ್ವಿಕ್ ಬಿ ಮಕ್ವಾನ 42

    ಆರ್. ಸಮರ್ಥ್ ಬಿ ಉನಾದ್ಕತ್ 74

    ದೇವದತ್ ಪಡಿಕಲ್ ಅಜೇಯ 53

    ಕೆವಿ ಸಿದ್ಧಾರ್ಥ್ ಸಿ ಚೌಹಾಣ್ ಬಿ ಧಮೇಂದ್ರ 19

    ಪವನ್ ಸಿ ಚೌಹಾಣ್ ಬಿ ಧಮೇಂದ್ರಸಿನ್ಹಾ 12

    ಶ್ರೇಯಸ್ ಗೋಪಾಲ್ ಔಟಾಗದೆ 13

    ಇತರ: 7. ವಿಕೆಟ್ ಪತನ: 1-96, 2-120, 3-142, 4-168. ಬೌಲಿಂಗ್: ಜೈದೇವ್ ಉನಾದ್ಕತ್ 18-5-53-1, ಚಿರಾಗ್ ಜಾನಿ 6-5-6-0, ಧಮೇಂದ್ರಸಿನ್ಹಾ ಜಡೇಜಾ 34-9-97-2, ಮಕ್ವಾನ 22-9-32-1, ಜೀವರಾಜನಿ 9-2-25-0.

    ಕರ್ನಾಟಕಕ್ಕೆ ಮುಂದಿನ ಪಂದ್ಯ

    ಎದುರಾಳಿ: ರೈಲ್ವೇಸ್

    ಯಾವಾಗ: ಜ. 27-30 ಎಲ್ಲಿ: ನವದೆಹಲಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts