ಡೆಹ್ರಾಡೂನ್/ಹರಿದ್ವಾರ: ಕರ್ನಾಟಕದ ಈಜುಪಟುಗಳು 38ನೇ ರಾಷ್ಟ್ರೀಯ ಕ್ರೀಡಾಕೂಟದ 4ನೇ ದಿನವೂ ಪದಕ ಬೇಟೆ ಮುಂದುವರಿಸಿದ್ದಾರೆ. 4/200 ಮೀ. ಫ್ರೀಸ್ಟೈಲ್ ರಿಲೇ ಸ್ಪರ್ಧೆಯಲ್ಲಿ ಕರ್ನಾಟಕದ ಪುರುಷರ ಹಾಗೂ ಮಹಿಳಾ ಈಜು ತಂಡಗಳು ಚಿನ್ನ ಗೆದ್ದರೆ, ವೈಯಕ್ತಿಕ 50 ಮೀಟರ್ ಬ್ರೆಸ್ಟ್‌ಸ್ಟ್ರೋಕ್‌ನಲ್ಲಿ ವಿದಿತ್ ಎಸ್. ಶಂಕರ್ ಸ್ವರ್ಣಕ್ಕೆ ಮುತ್ತಿಟ್ಟರು. ಪುರುಷರ ಬ್ಯಾಡ್ಮಿಂಟನ್ ತಂಡ ರಾಜ್ಯಕ್ಕೆ ದಿನದ 4ನೇ ಸ್ವರ್ಣ ಗೆದ್ದುಕೊಟ್ಟಿತು. ಇದರೊಂದಿಗೆ ಕರ್ನಾಟಕ ತಂಡ 13 ಚಿನ್ನ, 5 ಬೆಳ್ಳಿ, 5 ಕಂಚು ಸಹಿತ ಒಟ್ಟು 23 ಪದಕಗಳೊಂದಿಗೆ ಪದಕಪಟ್ಟಿಯಲ್ಲಿ ಎರಡನೇ ಸ್ಥಾನಕ್ಕೇರಿದೆ. ಸರ್ವೀಸಸ್ ತಂಡ 14 ಚಿನ್ನ, 7 ಬೆಳ್ಳಿ, 5 ಕಂಚು ಸಹಿತ ಒಟ್ಟು 26 ಪದಕದೊಂದಿಗೆ ಅಗ್ರಸ್ಥಾನದಲ್ಲಿದೆ.
ಶನಿವಾರ ನಡೆದ ಮಹಿಳೆಯರ 4/200 ಫ್ರೀಸ್ಟೈಲ್ ಸ್ಪರ್ಧೆಯಲ್ಲಿ ಶಿರಿನ್, ಶಾಲಿನಿ ಆರ್. ದಿಕ್ಷೀತ್, ಮೀನಾಕ್ಷಿ ಮೆನನ್, ಧಿನಿಧಿ ದೇಸಿಂಘು ಒಳಗೊಂಡ ತಂಡ 8 ನಿಮಿಷ 54.87 ಸೆಕೆಂಡ್‌ಗಳಲ್ಲಿ ಅಗ್ರಸ್ಥಾನಿಯಾಗಿ ಗುರಿ ತಲುಪಿ ಸ್ವರ್ಣ ಜಯಿಸಿದರೆ, ಮಹಾರಾಷ್ಟ್ರ (9 ನಿ, 9.37ಸೆ), ತಮಿಳುನಾಡು (9ನಿ,14.27ಸೆ) ತಂಡಗಳು ಕ್ರಮವಾಗಿ ರಜತ ಹಾಗೂ ಕಂಚು ಒಲಿಸಿಕೊಂಡವು. ದಕ್ಷಣ್ ಎಸ್., ಶೋನ್ ಗಂಗೂಲಿ, ಅನೀಶ್ ಎಸ್ ಗೌಡ ಹಾಗೂ ಶ್ರೀಹರಿ ನಟರಾಜ್ ಒಳಗೊಂಡ ಪುರುಷರ ತಂಡ 7 ನಿಮಿಷ, 45.82 ಸೆಕೆಂಡ್‌ಗಳಲ್ಲಿ ಗುರಿ ಕ್ರಮಿಸಿ ಮೊದಲ ಸ್ಥಾನ ಪಡೆದರೆ, ಗುಜರಾತ್ (7ನಿ, 49.41ಸೆ) ದ್ವಿತೀಯ, ಮಹಾರಾಷ್ಟ್ರ (7ನಿ,55.62ಸೆ) ಮೂರನೇ ಸ್ಥಾನಿಯಾಗಿ ಸ್ಪರ್ಧೆ ಮುಗಿಸಿದವು.
ಪುರುಷರ ವೈಯಕ್ತಿಕ 50 ಮೀಟರ್ ಬ್ರೆಸ್ಟ್ ಸ್ಟ್ರೋಕ್‌ನಲ್ಲಿ 29.12 ಸೆಕೆಂಡ್‌ಗಳಲ್ಲಿ ಸ್ಪರ್ಧೆ ಮುಗಿಸಿದ ರಾಜ್ಯದ ವಿದಿತ್ ಎಸ್ ಶಂಕರ್ ಸ್ವರ್ಣ ಗೆದ್ದುಕೊಂಡರೆ, ತಮಿಳುನಾಡಿನ ಯದೇಶ್ ಬಾಬು (29.20ಸೆ), ಎಸ್.ಧನುಷ್ (29.21ಸೆ) ನಂತರದ ಎರಡು ಸ್ಥಾನ ಪಡೆದರು. ಮಹಿಳೆಯರ 200 ಮೀಟರ್ ಬಟರ್ ್ಲೈನಲ್ಲಿ ಸುಹಾಸಿನಿ ೋಷ್ 2 ನಿಮಿಷ 24.53 ಸೆಕೆಂಡ್‌ನಲ್ಲಿ ಕ್ರಮಿಸಿ ರಜತ ಒಲಿಸಿಕೊಂಡರೆ, ಚಿನ್ನದ ಪದಕ ಮಹಾರಾಷ್ಟ್ರದ ಧೃತಿ ಅಹಿರ್‌ವಾಲಾ (2ನಿ, 23.80ಸೆ) ಪಾಲಾಯಿತು.
ಖೋಖೋದಲ್ಲಿ ಕಂಚು: ಮಹಿಳೆಯರ ಖೋಖೋ ತಂಡ 2-0 ಅಂತರದಿಂದ ದೆಹಲಿ ತಂಡವನ್ನು ಮಣಿಸಿ ಕಂಚು ಗೆದ್ದುಕೊಂಡರೆ, ಮಹಾರಾಷ್ಟ್ರ ಚಿನ್ನ, ಒಡಿಶಾ ಬೆಳ್ಳಿ ಜಯಿಸಿತು.
ಬ್ಯಾಡ್ಮಿಂಟನ್‌ನಲ್ಲಿ ಸ್ವರ್ಣ ಸಂಭ್ರಮ
ಬ್ಯಾಡ್ಮಿಂಟನ್ ವಿಭಾಗದಲ್ಲಿ ಕರ್ನಾಟಕದ ಪುರುಷರ ತಂಡ ಸ್ವರ್ಣ ಪದಕಕ್ಕೆ ಮುತ್ತಿಕ್ಕಿದೆ. ೈನಲ್‌ನಲ್ಲಿ ಆತಿಥೇಯ ಉತ್ತರಾಖಂಡ ಎದುರು 3-1ರಿಂದ ಗೆದ್ದು ಬೀಗಿತು. ರಘು ಎಂ., ತುಷಾರ್ ಸುವೀರ್, ನಿತೀನ್ ಎಚ್.ವಿ., ಅಶಿತ್ ಸೂರ್ಯ, ಭಾರ್ಗವ್ ಎಸ್., ನಿಕೋಲಸ್ ನಥಾನ್ ರಾಜ್ ಒಳಗೊಂಡ ರಾಜ್ಯ ತಂಡ, ದೇಶದ ಅಗ್ರ ಷಟ್ಲರ್ ಲಕ್ಷ್ಯ ಸೇನ್ ಸಹೋದರ ಚಿರಾಗ್ ಸೇನ್ ಸಾರಥ್ಯದ ಉತ್ತರಾಖಂಡವನ್ನು ಮಣಿಸಿ ಈ ಸಾಧನೆ ಮಾಡಿತು. ಛತ್ತೀಸ್‌ಗಢ ಹಾಗೂ ರಾಜಸ್ಥಾನ ತಂಡಗಳು ಕಂಚು ಗೆದ್ದುಕೊಂಡವು. ಮಹಿಳೆಯರಲ್ಲಿ ಹರಿಯಾಣ ಚಿನ್ನ ಗೆದ್ದರೆ, ಉತ್ತರಾಖಂಡ ಮತ್ತೆ ಬೆಳ್ಳಿಗೆ ತೃಪ್ತಿಪಟ್ಟಿತು.
ಕಲಾರಿಪಯಟ್ಟುವಿನಲ್ಲಿ ಕರ್ನಾಟಕ ರನ್ನರ್‌ಅಪ್
ದೇವಭೂಮಿ ಉತ್ತರಾಖಂಡದ ರಾಷ್ಟ್ರೀಯ ಕ್ರೀಡಾಕೂಟದಲ್ಲಿ ಪ್ರದರ್ಶನ ಕ್ರೀಡೆ ಎನಿಸಿರುವ ಭಾರತದ ಪ್ರಾಚೀನ ಯುದ್ಧಕಲೆ ಕಲಾರಿಪಯಟ್ಟು ಸ್ಪರ್ಧೆಯಲ್ಲಿ ಕರ್ನಾಟಕ ತಂಡ ಒಟ್ಟು 17 ಪದಕ ಗೆದ್ದು ಮೊದಲ ರನ್ನರ್ ಅಪ್ ಎನಿಸಿಕೊಂಡಿದೆ. ಆದರೆ ಪ್ರದರ್ಶನ ಕ್ರೀಡೆಯ ಈ ಸಾಧನೆ ರಾಜ್ಯದ ಒಟ್ಟು ಪದಕ ಗಣನೆಗೆ ಸೇರ್ಪಡೆಯಾಗಿಲ್ಲ. ಹರಿದ್ವಾರದ ರೋಷನ್‌ಬಾದ್ ಪೋಲಿಸ್ ಲೈನ್ ಕ್ರೀಡಾಂಗಣದಲ್ಲಿ ನಡೆದ 11 ಸ್ಪರ್ಧೆಗಳಲ್ಲಿ ರಾಜ್ಯದ 19 ಕ್ರೀಡಾಪಟುಗಳು ಸ್ಪರ್ಧಿಸಿದ್ದರು.
ಖಡ್ಗ ಮತ್ತು ಗುರಾಣಿ ವಿಭಾಗದಲ್ಲಿ ಬಿನೀಶ್ ಎ.ಎಂ. ಮತ್ತು ಹರಿನಾಥ್ ಯು. ಚಿನ್ನ, ಆಯುಧ ವಿಭಾಗದಲ್ಲಿ ಅಜಿತ್ ಪಿ. ಮತ್ತು ಜಿತು ಪಿ.ಎಸ್. ಬೆಳ್ಳಿ, ಖಡ್ಗ ಮತ್ತು ಖಡ್ಗ ವಿಭಾಗದಲ್ಲಿ ಉಪಾಸನಾ ಗುರ್ಜರ್ ಮತ್ತು ಶ್ರೀಪ್ರದ ಭಾವಾಗ್ನ ಅರವೇಟಿ ಕಂಚು ಜಯಿಸಿದರು. ಉರುಮಿ ಮತ್ತು ಗುರಾಣಿ ವಿಭಾಗದಲ್ಲಿ ಉಪಾಸನಾ ಗುರ್ಜರ್ ಮತ್ತು ಭಾವನಾ ಬಿಪಿನ್ ಕಂಚು, ಉದ್ದ ದಂಡ (ಲಾಂಗ್ ಸ್ಟಾಫ್) ವಿಭಾಗದಲ್ಲಿ ಅಜಿತ್ ಪಿ. ಮತ್ತು ಜಿತು ಪಿ.ಎಸ್. ಕಂಚು, ಉರುಮಿ ವೀಶಲ್ (ನಮನೀಯ ಖಡ್ಗ) ವಿಭಾಗದಲ್ಲಿ ಉಪಾಸನಾ ಗುರ್ಜರ್ ಮತ್ತು ಜಿತು ಸಿ.ಪಿ. ಬೆಳ್ಳಿ ಪದಕಕ್ಕೆ ಕೊರಳೊಡ್ಡಿದರು. ವೈಯಕ್ತಿಕ ವಿಭಾಗದ ಮೇಪಯಟ್ಟು-ಚುವಡು ಸ್ಪರ್ಧೆಗಳಲ್ಲಿ ಶ್ರೇಯಸ್ ಹರಿಹರನ್ ಮತ್ತು ಪ್ರವೀಣ್ ಪಿ. ಕ್ರಮವಾಗಿ ಬೆಳ್ಳಿ ಗೆದ್ದರೆ, ಮೇಪಯಟ್ಟುವಿನಲ್ಲಿ ಶ್ರೀಪ್ರದ ಭಾವಾಗ್ನ ಹಾಗೂ ಹೈಕಿಕ್ ವಿಭಾಗದಲ್ಲಿ ಭಾವನಾ ಬಿಪಿನ್ ಕಂಚು ಪಡೆದರು. ಖಡ್ಗ ಮತ್ತು ಗುರಾಣಿ ವಿಭಾಗದಲ್ಲಿ ಶ್ರೀಪ್ರದ ಮತ್ತೊಂದು ಕಂಚು ಗೆದ್ದರು.