ನೀಟ್ ತಪ್ಪಿದವರಿಗೆ ಮತ್ತೊಂದು ಅವಕಾಶ

ಬೆಂಗಳೂರು: ಹಂಪಿ ಎಕ್ಸ್​ಪ್ರೆಸ್ ರೈಲು ವಿಳಂಬದಿಂದಾಗಿ ಎಂಬಿಬಿಎಸ್ ಮತ್ತು ದಂತವೈದ್ಯಕೀಯ ಕೋರ್ಸ್ ಪ್ರವೇಶಕ್ಕೆ ನಡೆದ ರಾಷ್ಟ್ರೀಯ ಅರ್ಹತಾ ಪರೀಕ್ಷೆ (ನೀಟ್)ತಪ್ಪಿಸಿಕೊಂಡು ಕಂಗಾಲಾಗಿದ್ದ ರಾಜ್ಯದ ನೂರಾರು ವಿದ್ಯಾರ್ಥಿಗಳ ನೆರವಿಗೆ ಕೇಂದ್ರ ಸರ್ಕಾರ ಬಂದಿದೆ.

ರೈಲು ವಿಳಂಬ ಕಾರಣಕ್ಕಾಗಿಯೇ ಪರೀಕ್ಷೆ ಬರೆಯಲಾಗದವರಿಗೆ ಮತ್ತೊಂದು ಅವಕಾಶ ನೀಡುವುದಾಗಿ ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವ ಪ್ರಕಾಶ್ ಜಾವಡೇಕರ್ ಟ್ವೀಟ್ ಮೂಲಕ ಭರವಸೆ ನೀಡಿದ್ದಾರೆ.

ಭಾನುವಾರ ಹಂಪಿ ಎಕ್ಸ್​ಪ್ರೆಸ್ ರೈಲು ಏಳು ತಾಸು ವಿಳಂಬವಾಗಿ ಬೆಂಗಳೂರು ತಲುಪಿದ್ದರಿಂದಾಗಿ ಉತ್ತರ ಕರ್ನಾಟಕ ಭಾಗದ ನೂರಾರು ವಿದ್ಯಾರ್ಥಿಗಳು ನಿಗದಿತ ಸಮಯದೊಳಗೆ ಪರೀಕ್ಷಾ ಕೇಂದ್ರ ತಲುಪಲಾಗದೆ ನೀಟ್ ಪರೀಕ್ಷೆ ಅವಕಾಶ ಕಳೆದುಕೊಂಡಿದ್ದರು. ಒಡಿಶಾದಲ್ಲೂ ಸಾಕಷ್ಟು ವಿದ್ಯಾರ್ಥಿಗಳು ಫೊನಿ ಚಂಡಮಾರುತದಿಂದಾಗಿ ಪರೀಕ್ಷೆ ಎದುರಿಸಲು ಸಾಧ್ಯವಾಗಿರಲಿಲ್ಲ. ಹೀಗಾಗಿ ಎರಡೂ ರಾಜ್ಯಗಳ ವಿದ್ಯಾರ್ಥಿಗಳಿಗೆ ಒಂದೇ ದಿನ ಪರೀಕ್ಷೆ ನಡೆಯುವ ಸಾಧ್ಯತೆ ಇದೆ. ಕೇಂದ್ರ ಮಾನವ ಸಂಪನ್ಮೂಲ ಇಲಾಖೆ ಇನ್ನೊಂದು ವಾರದೊಳಗೆ ಪರೀಕ್ಷಾ ವಿಧಾನಗಳ ಬಗ್ಗೆ ರ್ಚಚಿಸಿ ದಿನಾಂಕ ಪ್ರಕಟಿಸುವ ನಿರೀಕ್ಷೆ ಇದೆ.

ರಾಜ್ಯದಿಂದ ಒತ್ತಡ: ರೈಲು ವಿಳಂಬದಿಂದಾಗಿ ನೀಟ್ ತಪ್ಪಿಸಿಕೊಂಡ ವಿದ್ಯಾರ್ಥಿಗಳ ಪರವಾಗಿ ರಾಜ್ಯದಲ್ಲಿ ದೊಡ್ಡ ದನಿ ಎದ್ದಿತ್ತು. ಕೇಂದ್ರ ಸಚಿವ ಸದಾನಂದ ಗೌಡ ಸೇರಿ ಅನೇಕ ನಾಯಕರು ಸಮಸ್ಯೆ ಬಗ್ಗೆ ಕೇಂದ್ರದ ಗಮನ ಸೆಳೆದಿದ್ದರು. ಕಾಂಗ್ರೆಸ್ ಕೂಡ ಪರೀಕ್ಷೆ ಬರೆಯಲು ಮತ್ತೊಂದು ಅವಕಾಶ ನೀಡುವಂತೆ ಒತ್ತಾಯಿಸಿತ್ತು. ಸಿಎಂ ಕುಮಾರಸ್ವಾಮಿ ಸೋಮವಾರ ಕೇಂದ್ರಕ್ಕೆ ಪತ್ರ ಬರೆಯಲು ನಿರ್ಧರಿಸಿದ್ದರು.