ಜೈಲುಗಳ ಹುಳುಕು ಹುಡುಕಾಟ

| ಗೋವಿಂದರಾಜು ಚಿನ್ನಕುರ್ಚಿ, ಬೆಂಗಳೂರು

ರಾಜ್ಯ ಕಾರಾಗೃಹಗಳ ಹೊರ-ಒಳ ಬಣ್ಣ ಬಯಲು ಮಾಡುವ ಅಧ್ಯಯನ ಆರಂಭವಾಗಿದೆ. ಜೈಲುಗಳ ಸುಧಾರಣೆ ಮತ್ತು ಅಕ್ರಮಗಳನ್ನು ತಡೆಯುವುದು ಮುಖ್ಯ ಉದ್ದೇಶವಾಗಿದೆ. ಸಂಶೋಧನ ಅಧ್ಯಯನದ ಮುಂದಾಳತ್ವವನ್ನು ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರ(ಕೆಎಸ್​ಎಲ್​ಎಸ್​ಎ) ವಹಿಸಿದೆ. ಸುಪ್ರೀಂಕೋರ್ಟ್ ಸೂಚನೆ ಮೇರೆಗೆ ಕೈದಿಗಳ ಹಕ್ಕು ಕಾಪಾಡುವುದು, ಮೂಲಸೌಕರ್ಯ ಒದಗಿಸುವುದರ ಜತೆಗೆ ಕಾರಾಗೃಹಗಳ ಸಮಗ್ರ ಸುಧಾರಣೆ ಅಧ್ಯಯನದ ಮುಖ್ಯ ಉದ್ದೇಶವಾಗಿದೆ.

ಕೆಎಸ್​ಎಲ್​ಎಸ್​ಎ ಕಾರ್ಯದರ್ಶಿ ಸದಸ್ಯ, ನ್ಯಾಯಮೂರ್ತಿ ಹಂಚಾಟೆ ಸಂಜೀವಕುಮಾರ್, ದೆಹಲಿಯ ಸರ್ಕಾರೇತರ ಸಂಸ್ಥೆ ಕಾಮನ್ವೆಲ್ತ್ ಹ್ಯೂಮನ್ ರೈಟ್ಸ್ ಇನಿಷಿಯೆಟಿವ್ (ಸಿಎಚ್​ಆರ್​ಐ) ಜತೆಗೆ ಒಪ್ಪಂದಕ್ಕೆ ಸಹಿ ಮಾಡಿ ಅಧ್ಯಯನ ವರದಿ ಸಿದ್ದಪಡಿಸುವ ಜವಾಬ್ದಾರಿ ವಹಿಸಿದ್ದಾರೆ. ಈ ಅಧ್ಯಯನ ವರದಿಗೆ ‘ಕರ್ನಾಟಕ ರಾಜ್ಯ ಕಾರಾಗೃಹಗಳು’ ಎಂದು ಹೆಸರಿಡಲಾಗಿದೆ. ಈಗಾಗಲೇ ಅಧ್ಯಯನ ಆರಂಭಿಸಿರುವ ಸಿಎಚ್​ಆರ್​ಐ ಸದಸ್ಯರು ಮಾಹಿತಿ ಕಲೆ ಹಾಕುತ್ತಿದ್ದಾರೆ.

ರಾಜ್ಯದಲ್ಲಿ 68 ಬಂದೀಖಾನೆಗಳು ಇದ್ದು, ಈ ಪೈಕಿ 52 ಜೈಲುಗಳು ಕಾರ್ಯನಿರ್ವಹಿಸುತ್ತಿವೆ. 9 ಕೇಂದ್ರ ಜೈಲುಗಳಿದ್ದು, 21 ಜಿಲ್ಲಾ ಕಾರಾಗೃಹ, 14 ತಾಲ್ಲೂಕು ಜೈಲುಗಳು, 1 ಬಯಲು ಜೈಲು ಇವೆ.

ಅಧ್ಯಯನ ದೃಷ್ಟಿಯಿಂದ ಸಿಎಚ್​ಆರ್​ಐ ಸಿಬ್ಬಂದಿಗೆ ಜೈಲುಗಳಿಗೆ 5 ಹಂತದಲ್ಲಿ ಭೇಟಿ ಮಾಡುವ ಅಧಿಕಾರವನ್ನು ಪ್ರಾಧಿಕಾರ ನೀಡಿದೆ. ಎಲ್ಲ ಜೈಲುಗಳಿಗೆ ಖುದ್ದು ಭೇಟಿ ನೀಡಿ ಜೈಲಾಧಿಕಾರಿ, ಸಿಬ್ಬಂದಿ ಮತ್ತು ವಿಚಾರಣಾಧಿನ ಕೈದಿ, ಸಜಾ ಕೈದಿ, ಮಹಿಳಾ ಕೈದಿಗಳ ಸಂದರ್ಶನ ಮತ್ತು ಪ್ರಶ್ನಾವಳಿ ಮಾದರಿ ಮಾಹಿತಿ ಕಲೆ ಹಾಕುತ್ತಿದ್ದಾರೆ. 2ನೇ ಹಂತದಲ್ಲಿ ಜೈಲುಗಳ ವ್ಯವಸ್ಥೆಯನ್ನು ಪರಿವೀಕ್ಷಣೆ ಮಾಡಿ ವಾಸ್ತವ ಅಂಶಗಳನ್ನು ಸಂಗ್ರಹಿಸುತ್ತಿದ್ದಾರೆ. ಎಲ್ಲ ಮೂಲಗಳಿಂದ ಮಾಹಿತಿ ಪಡೆದ ಮೇಲೆ ಪರಿಶೀಲನೆ ನಡೆಸಿ ಅಂತಿಮ ವರದಿಯನ್ನು ಸಿದ್ಧಪಡಿಸಲಿದ್ದಾರೆ.

ಜೂ.30ಕ್ಕೆ ಅಂತಿಮ ವರದಿ ?

ಜ.7ರಿಂದ ಅಧ್ಯಯನ ಆರಂಭವಾಗಿದ್ದು, ಆ.7ರ ನಡುವೆ ಐದು ಹಂತದಲ್ಲಿ ಎಲ್ಲ ಜೈಲುಗಳನ್ನು ಭೇಟಿ ಕೊಟ್ಟು ಮಾಹಿತಿ ಕಲೆ ಹಾಕಬೇಕು. ಮೊದಲ 5 ತಿಂಗಳ ಅಧ್ಯಯನ ನಡೆಸಿ ಮಂದಿನ 2 ತಿಂಗಳು ವಿಶ್ಲೇಷಣೆ ಮತ್ತು ಮೌಲ್ಯಮಾಪನ ಮಾಡಿ ಜೂ.30ರ ಒಳಗಾಗಿ ಅಂತಿಮ ವರದಿ ನೀಡಬೇಕು. ಮಾಹಿತಿ ಕೊರತೆ, ವಿಳಂಬ ಅಥವಾ ಅನಿವಾರ್ಯ ಸ್ಥಿತಿ ಉಂಟಾದರೆ 2 ತಿಂಗಳು ಹೆಚ್ಚುವರಿಯಾಗಿ ಸಮಯ ಬಳಸಿಕೊಳ್ಳಲು ಅಧ್ಯಯನ ತಂಡಕ್ಕೆ ಅವಕಾಶ ನೀಡಲಾಗಿದೆ.

ಎಲ್ಲವೂ ದಾಖಲೀಕರಣ

ಸಿಎಚ್​ಆರ್​ಐ ಮತ್ತು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧಿಕಾರಿಗಳು ಜೈಲುಗಳ ಅಧ್ಯಯನದ ವೇಳೆ ಪ್ರತಿಯೊಂದನ್ನು ದಾಖಲೀಕರಣ ಮಾಡಬೇಕು. ಪ್ರತಿ ತಿಂಗಳು ಸಭೆ ನಡೆಸಿ ಚರ್ಚೆ ನಿರ್ಧರ ತೆಗೆದುಕೊಳ್ಳಬೇಕು. ವಿಶ್ಲೇಷಣೆ ಮತ್ತು ಮೌಲ್ಯಮಾಪನ ಮಾಡಿ ಮಾದರಿ ಕಾರಾಗೃಹಗಳ ಕೈಪಿಡಿಯನ್ನು ಸಿದ್ಧಪಡಿಸಲು ಸೂಚಿಸಲಾಗಿದೆ. ಖರ್ಚು ವೆಚ್ಚಕ್ಕೆ ಕೆಎಸ್​ಎಲ್​ಎಸ್​ಎ 6.22 ಲಕ್ಷ ರೂ.ಗಳನ್ನು ಬಿಡುಗಡೆ ಮಾಡಿದೆ.

ಯಾವ ವಿಷಯಗಳ ಅಧ್ಯಯನ?

ಕಾರಾಗೃಹ ಇಲಾಖೆ ಆಡಳಿತ, ಮೂಲಸೌಕರ್ಯ, ಕೈದಿಗಳಿಗೆ ವೈದ್ಯಕೀಯ ಸೇವೆ ಮತ್ತು ಅವರ ಆರೋಗ್ಯ, ಕೈದಿಗಳ ಸಂದರ್ಶನ ಹಕ್ಕು ಮತ್ತು ಸೌಲಭ್ಯಗಳು, ಸಾಮಾನ್ಯ ಮಾಹಿತಿ ಲಭ್ಯ, ಉಚಿತ ಕಾನೂನು ನೆರವು, ವೃತ್ತಿಪರ ತರಬೇತಿ ಮತ್ತು ಕಾರ್ವಿುಕ ಕೈದಿಗಳ ಸ್ಥಿತಿಗತಿ, ಕೈದಿಗಳ ವರ್ಗೀಕರಣ, ಮಹಿಳಾ ಕೈದಿ ಮತ್ತು ಅವರ ಮಕ್ಕಳು, ಮಾನಸಿಕ ಖಿನ್ನತೆಗೆ ಒಳಗಾದ ಕೈದಿಗಳು. ಸಜಾ ಕೈದಿ, ವಿಚಾರಣಾಧಿನ ಕೈದಿಗಳ, ವಿದೇಶಿ ಕೈದಿಗಳ ಕುರಿತ ವಿಷಯಗಳು ಅಧ್ಯಯನ ನಡೆಸುತ್ತಿದ್ದಾರೆ.

ಕಾರಾಗೃಹಗಳ ಸುಧಾರಣೆ ಮತ್ತು ಕೈದಿಗಳಿಗೆ ಮೂಲಸೌಲಭ್ಯ ಒದಗಿಸುವ ಉದ್ದೇಶದಿಂದ ಅಧ್ಯಯನ ನಡೆಯುತ್ತಿದೆ. ಇದರಿಂದ ಜೈಲುಗಳು ಸಾಕಷ್ಟು ಸುಧಾರಿಸಲಿವೆ.

| ನ್ಯಾ. ಹಂಚಾಟೆ ಸಂಜೀವಕುಮಾರ್, ಕೆಎಸ್​ಎಲ್​ಎಸ್​ಎ ಕಾರ್ಯದರ್ಶಿ ಸದಸ್ಯ

ಪ್ರಾಧಿಕಾರದಿಂದ ಜೈಲು ಸುಧಾರಣೆ

ಸಜಾ ಮತ್ತು ವಿಚಾರಣಾಧಿನ ಕೈದಿಗಳಿಗೆ ಜೈಲುಗಳು ಮನಪರಿವರ್ತನೆಯ ಕೇಂದ್ರಗಳಾಗಬೇಕು. ಸುಪ್ರೀಂ ಕೋರ್ಟ್ ಸೂಚನೆ ಮೇರೆಗೆ ಕಾನೂನು ಸೇವೆಗಳ ಪ್ರಾಧಿಕಾರ ಹಲವು ಸುಧಾರಣೆಗಳನ್ನು ತರುತ್ತಿದೆ. ಕೈದಿಗಳಿಗೆ ಉಚಿತ ಕಾನೂನು ಸೇವೆ, ಅಪರಾಧ ಪ್ರಕರಣಗಳಲ್ಲಿ ನೊಂದ ಕುಟುಂಬಗಳಿಗೆ ಪರಿಹಾರ ಹಣ ನೀಡುವುದು ಮತ್ತು ಮಕ್ಕಳಿಗೆ ಶಿಕ್ಷಣ ಕೊಡಿಸುವ ಕೆಲಸ ಮಾಡುತ್ತಿದೆ.

Leave a Reply

Your email address will not be published. Required fields are marked *