ಸೇಡಂ ರೈತರಿಗೆ ಸರ್ಕಾರದಿಂದ ಋಣಮುಕ್ತ ಪತ್ರ: ರೈತರ ಹಿತ ಕಾಯಲು ಸರ್ಕಾರ ಬದ್ಧ ಎಂದ ಪ್ರಿಯಾಂಕ್​ ಖರ್ಗೆ

ಸೇಡಂ (ಕಲಬುರಗಿ): ರಾಜ್ಯದ ಸಮ್ಮಿಶ್ರ ಸರ್ಕಾರ ರೈತರ ಹಿತ ಕಾಯಲು ಬದ್ಧವಾಗಿದ್ದು, ಕೊಟ್ಟ ಮಾತಿನಂತೆ ರೈತರ ಸಾಲ ಮನ್ನಾ ಮಾಡುವತ್ತ ದಿಟ್ಟ ಹೆಜ್ಜೆ ಇಟ್ಟಿದೆ ಎಂದು ಸಮಾಜ ಕಲ್ಯಾಣ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದರು.

ಬೆಳೆ ಸಾಲ ಮನ್ನಾ ಯೋಜನೆಯಡಿ ರೈತರಿಗೆ ಋಣಮುಕ್ತ ಪ್ರಮಾಣಪತ್ರ ವಿತರಿಸಿ ಮಾತನಾಡಿ, ಸರ್ಕಾರ ಸಹಕಾರಿ ಸಂಘಗಳ 50,000 ಹಾಗೂ ವಾಣಿಜ್ಯ ಬ್ಯಾಂಕುಗಳ 2 ಲಕ್ಷ ರೂ.ವರೆಗಿನ ಸಾಲಮನ್ನಾ ಮಾಡಿದೆ. ಮೊದಲ ಹಂತವಾಗಿ ಸೇಡಂ ಮತ್ತು ದೊಡ್ಡಬಳ್ಳಾಪುರದಲ್ಲಿ ರೈತರಿಗೆ ಋಣಮುಕ್ತ ಪತ್ರ ವಿತರಿಸಲಾಗುತ್ತಿದೆ. ಮುಂದಿನ ದಿನಗಳಲ್ಲಿ ರಾಜ್ಯದ ಎಲ್ಲ ಜಿಲ್ಲೆಗಳ ರೈತರಿಗೂ ಸಾಲಮನ್ನಾದ ಋಣಮುಕ್ತ ಪತ್ರ ನೀಡಲಾಗುವುದು ಎಂದು ತಿಳಿಸಿದರು.

ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ 48,000 ಕೋಟಿ ಸಾಲಮನ್ನಾ ಮಾಡುವ ಉದ್ದೇಶ ಹೊಂದಿದ್ದಾರೆ. ಕಲಬುರಗಿ ಜಿಲ್ಲೆಯ ಸುಮಾರು 2.14 ಲಕ್ಷ ರೈತರು ಯೋಜನೆ ಲಾಭ ಪಡೆಯಲಿದ್ದಾರೆ ಎಂದು ತಿಳಿಸಿದರು.

ಸಹಕಾರ ಸಚಿವ ಬಂಡೆಪ್ಪ ಖಾಶೆಂಪುರ ಮಾತನಾಡಿ, ಸಿಎಂ ಕುಮಾರಸ್ವಾಮಿ ನುಡಿದಂತೆ ನಡೆದಿದ್ದಾರೆ. ಹಾಗಾಗಿ ಇಂದು ರೈತರಿಗೆ ಸಾಲಮನ್ನಾದ ಋಣಮುಕ್ತ ಪ್ರಮಾಣಪತ್ರ ನೀಡಲು ಸಾಧ್ಯವಾಗಿದೆ ಎಂದು ತಿಳಿಸಿದರು.

ಸಮ್ಮಿಶ್ರ ಸರ್ಕಾರ ಬಂದ ಮೇಲೆ ಸಿಎಂ ಎಚ್‌ಡಿಕೆ ತಮ್ಮ ಬಜೆಟ್‌ನಲ್ಲಿ ಸಾಲಮನ್ನಾ ಘೋಷಣೆ ಮಾಡಿದರು. ಕಾಂಗ್ರೆಸ್ ನಾಯಕರೆಲ್ಲರೂ ಇದಕ್ಕೆ ಬೆಂಬಲ ನೀಡಿದರು ಎಂದು ಕಾಂಶೆಂಪುರ ಸ್ಮರಿಸಿದರು.