ವಿವಾದದಿಂದ ರದ್ದಾಗಿದ್ದ ಸ್ಟೀಲ್​ ಬ್ರಿಡ್ಜ್​ಗೆ ಮರುಜೀವ: ಸಂಪೂರ್ಣ ವಿವರ ಜನರ ಮುಂದಿಟ್ಟು ಜಾರಿ ಎಂದ ಪರಂ

ಬೆಂಗಳೂರು: ಭಾರೀ ವಿವಾದಗಳ ಹಿನ್ನೆಲೆಯಲ್ಲಿ ಸ್ಥಗಿತಗೊಂಡಿದ್ದ ಬಹುಕೋಟಿ ವೆಚ್ಚದ ಸ್ಟೀಲ್‌ಬ್ರಿಡ್ಜ್‌ ಯೋಜನೆಯನ್ನು ಸಾರ್ವಜನಿಕರ ಹಿತದೃಷ್ಟಿಯಿಂದ ನಿರ್ಮಿಸಲು ನಿರ್ಧರಿಸಲಾಗಿದೆ ಎಂದು ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್‌ ತಿಳಿಸಿದ್ದಾರೆ.

ಸದಾಶಿವನಗರದ ಬಿಡಿಎ ಕ್ವಾರ್ಟರ್ಸ್ ನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯ ಅವರ ನೇತೃತ್ವದ ಕಾಂಗ್ರೆಸ್‌ ಸರಕಾರ ಈ ಹಿಂದೆ ಸ್ಟೀಲ್‌ಬ್ರಿಡ್ಜ್‌ ಯೋಜನೆ ಜಾರಿಗೆ ಸಿದ್ಧತೆ ಮಾಡಿಕೊಂಡಿತ್ತು. ಆದರೆ ಈ ಯೋಜನೆಗೆ ವಿರೋಧ ವ್ಯಕ್ತವಾದ್ದರಿಂದ ಯೋಜನೆಯನ್ನು ಕೈಬಿಡಲಾಗಿತ್ತು. ಅದರೆ, ಸಾರ್ವಜನಿಕರ ಕೋರಿಕೆ ಮೇರೆಗೆ ಸದ್ಯ ಈ ಯೋಜನೆ ಕೈಗೊಳ್ಳಲು ತೀರ್ಮಾನಿಸಲಾಗಿದೆ ಎಂದು ಪರಮೇಶ್ವರ್​ ಹೇಳಿದ್ದಾರೆ.

ಚಾಲುಕ್ಯ ಸರ್ಕಲ್‌ನಿಂದ ಎಸ್ಟೀಮ್‌ ಮಾಲ್‌ ವರೆಗೆ ಸ್ಟೀಲ್‌ಬ್ರಿಡ್ಜ್‌ನ ಅವಶ್ಯಕತೆ ಇದೆ. ಆದರೆ ಕೆಲವರು ರಾಜಕೀಯ ಕಾರಣಕ್ಕಾಗಿ ಇದನ್ನು ವಿರೋಧಿಸಿದ್ದರು. ಹೀಗಾಗಿ ಯೋಜನೆ ಅರ್ಧಕ್ಕೆ ನಿಂತಿತ್ತು. ಪ್ರಸ್ತುತ ಈ ಯೋಜನೆಯ ಸಂಪೂರ್ಣ ಮಾಹಿತಿಯನ್ನು ಸಾರ್ವಜನಿಕರ ಮುಂದೆ ತೆರೆದಿಡಲಾಗುತ್ತದೆ. ಯೋಜನೆಯ ಉದ್ದೇಶ, ಇದರ ವೆಚ್ಚ, ಉಪಯೋಗ ಎಲ್ಲವನ್ನೂ ಜನರಿಗೆ ತಿಳಿಸಿ ಅವರ ಅಭಿಪ್ರಾಯ ಪಡೆದು ನಂತರ ಯೋಜನೆ ಅನುಷ್ಠಾನ ಮಾಡುತ್ತೇವೆ,” ಎಂದರು.

ಚಾಲುಕ್ಯ ಸರ್ಕಲ್‌ನಿಂದ ಏರ್‌ಪೋರ್ಟ್‌ಗೆ ತಲುಪಲು ಸದ್ಯ 45 ನಿಮಿಷಕ್ಕೂ ಹೆಚ್ಚು ಕಾಲಾವಕಾಶ ಬೇಕು. ಸ್ಟೀಲ್‌ಬ್ರಿಡ್ಜ್‌ ನಿರ್ಮಿಸಿದರೆ ಕೇವಲ 20 ನಿಮಿಷದಲ್ಲಿ ತಲುಪಬಹುದು. ಈ ಯೋಜನೆಯಲ್ಲಿ ಏನೇ ನ್ಯೂನತೆ ಇದ್ದರೂ ಅದನ್ನು ಸರಿ ಪಡಿಸಿಕೊಳ್ಳಲು ನಾವು ಸಿದ್ಧ ಎಂದು ಪರಮೇಶ್ವರ್​ ಹೇಳಿದ್ದಾರೆ.

ಇನ್ನು ಈ ಕುರಿತು ಮಾತನಾಡಿರುವ ಸಚಿವ ಡಿ.ಕೆ ಶಿವಕುಮಾರ್​, “ಯೋಜನೆ ವಿರೋಧಿಸುವವರು ಮೊಸರಲ್ಲಿ ಕಲ್ಲು ಹುಡುಕುತ್ತಿದ್ದಾರೆ. ಅವರ ಮಾತನ್ನು ಗಂಭೀರ ವಾಗಿ ತಗೊಳ್ಳಲು ಸಾಧ್ಯವೇ? ಈ ಹಿಂದೆ ಯೋಜನೆ ಕುರಿತು ಕಾಂಗ್ರೆಸ್​ ವಿರುದ್ಧ ಸುಳ್ಳು ಆರೋಪ ಮಾಡಲಾಗಿತ್ತು. ಈ ಯೋಜನೆಯಿಂದ ಜನರಿಗೆ ಅನುಕೂಲವಾಗಲಿದೆ. ಅವರಿವರು ವಿರೋಧಿಸುತ್ತಾರೆ ಎಂದು ನಾವು ಸುಮ್ಮನೆ ಇರಲು ಸಾಧ್ಯವಿಲ್ಲ ಎನ್ನುವ ಮೂಲಕ ಯೋಜನೆ ಜಾರಿ ಶತಸಿದ್ಧ,” ಎಂದರು.