ಸರ್ವರನ್ನು ಮೆಚ್ಚಿಸಲು ಹೊರಟ ಸಿಎಂ; ರೈತರ ಕಲ್ಯಾಣಕ್ಕೆ ಉದಾರ ಕೊಡುಗೆ

ಬೆಂಗಳೂರು: ಬಜೆಟ್​ ಅಧಿವೇಶನದ ಆರಂಭದಲ್ಲೇ ರಾಜ್ಯಪಾಲರ ಭಾಷಣಕ್ಕೆ ಅಡ್ಡಿ ಮಾಡಿದ್ದ ಬಿಜೆಪಿ ಇಂದು ಬಜೆಟ್​ ಮಂಡನೆ ವೇಳೆಯೂ ಪ್ರತಿಭಟನೆಗಿಳಿಯುವ ಸಾಧ್ಯತೆಗಳಿದ್ದವು. ಇದನ್ನು ಅರಿತ ಮುಖ್ಯಮಂತ್ರಿ ಎಚ್​.ಡಿ ಕುಮಾರಸ್ವಾಮಿ ಒಂದೇ ಒಂದು ಸುದ್ದಿಗೋಷ್ಠಿ ಮೂಲಕ ಪ್ರತಿಭಟನೆಯನ್ನು ಹಿಮ್ಮೆಟ್ಟಿಸಿ, ಬಜೆಟ್​ಗಿದ್ದ ತೊಡಕು ನಿವಾರಿಸಿಕೊಂಡಿದ್ದೂ ಅಲ್ಲದೆ, ತಮ್ಮ ಸುದೀರ್ಘ ಬಜೆಟ್​ ಭಾಷಣದಲ್ಲಿ ಸರ್ವರನ್ನೂ ಮೆಚ್ಚಿಸುವ ಪ್ರಯತ್ನ ಮಾಡಿದ್ದಾರೆ.

ಬಜೆಟ್​ ಮಂಡನೆಗೂ ಮೊದಲು ಸುದ್ದಿಗೋಷ್ಠಿ ನಡೆಸಿದ ಮುಖ್ಯಮಂತ್ರಿ ಎಚ್​.ಡಿ. ಕುಮಾರಸ್ವಾಮಿ, ಬಿಜೆಪಿಯಿಂದ ನಡೆಯುತ್ತಿದೆ ಎನ್ನಲಾದ ಆಪರೇಷನ್​ ಕಮಲಕ್ಕೆ ಸಂಬಂಧಿಸಿದ ಆಡಿಯೋ ತುಣುಕುಗಳನ್ನು ಬಿಡುಗಡೆ ಮಾಡಿ ಬಿಜೆಪಿ ಮತ್ತು ಅದರ ನಾಯಕ ಯಡಿಯೂರಪ್ಪ ಅವರನ್ನು ಇಕ್ಕಟ್ಟಿಗೆ ಸಿಲುಕಿಸಿದರು. ಈ ಮೂಲಕ ಯಡಿಯೂರಪ್ಪ ನೇತೃತ್ವದಲ್ಲಿ ಸದನದಲ್ಲಿ ಬಜೆಟ್​ ವಿರೋಧಿಸಿ ನಡೆಯಲಿದೆ ಎಂದೇ ನಂಬಲಾಗಿದ್ದ ಪ್ರತಿಭಟನೆಯನ್ನು ಆರಂಭದಲ್ಲೇ ತಣ್ಣಗಾಗಿಸಿದರು.

ನಂತರ ಬಜೆಟ್ ಹೊತ್ತಿಗೆಗಳೊಂದಿಗೆ ಸದನಕ್ಕೆ ಬಂದ ಮುಖ್ಯಮಂತ್ರಿ ಎಚ್​.ಡಿ ಕುಮಾರಸ್ವಾಮಿ ಅವರು ಬಜೆಟ್​ ಓದಲಾರಂಭಿಸಿದರು. ಅದಾಗಲೇ ಮುಜುಗರಕ್ಕೀಡಾಗಿದ್ದ ಬಿಜೆಪಿ ಸಭಾತ್ಯಾಗ ಮಾಡುವ ಮೂಲಕ ತನ್ನ ಸಾಂಕೇತಿಕ ಪ್ರತಿಭಟನೆಯನ್ನು ದಾಖಲಿಸಿತು. ನಂತರ ಸದನದಲ್ಲಿ ಆಗಿದ್ದು ಎಚ್​ಡಿಕೆ ಬಜೆಟ್​ ಆಲಾಪವಷ್ಟೇ.

ಉತ್ತರದಿಂದ ದಕ್ಷಿಣಕ್ಕೂ

ಸುದೀರ್ಘ ಮೂರೂವರೆ ಗಂಟೆಗಳ ಕಾಲ ಬಜೆಟ್​ ಭಾಷಣ ಮಾಡಿದ ಮುಖ್ಯಮಂತ್ರಿ ಎಚ್​ಡಿಕೆ ಉತ್ತರ, ದಕ್ಷಿಣ, ಕರಾವಳಿ ಎನ್ನದೆ ಎಲ್ಲ ಪ್ರದೇಶಕ್ಕೂ, ಎಲ್ಲ ವರ್ಗಕ್ಕೂ, ಎಲ್ಲ ಸಮುದಾಯಕ್ಕೂ ಸ್ವಲ್ಪ ಸ್ವಲ್ಪವೇ ಅನುದಾನದ ನೀಡುವ ಮೂಲಕ ಎಲ್ಲರನ್ನೂ ಮೆಚ್ಚಿಸುವ ಪ್ರಯತ್ನ ಮಾಡಿದರು.

ಕೃಷಿ ಸಾಲಮನ್ನಾದ ಹೊರೆಯನ್ನು ಒಂದೇ ವಿತ್ತೀಯ ವರ್ಷಕ್ಕೆ ಹೊತ್ತುಕೊಳ್ಳದ ಕುಮಾರಸ್ವಾಮಿ, ಈ ಬಾರಿ ಸಹಕಾರಿ ಮತ್ತು ವಾಣಿಜ್ಯ ಬ್ಯಾಂಕ್​ಗಳಿಗೆ ಬಿಡುಗಡೆ ಮಾಡಲೆಂದು ಒಟ್ಟಾರೆ 12 ಸಾವಿರ ಕೋಟಿಗೂ ಹೆಚ್ಚು ಹಣ ಬಿಡುಗಡೆ ಮಾಡಿದರು. ಈ ಮೂಲಕ ಒಂದೇ ಬಾರಿಗೆ ಸಾಲಮನ್ನಾ ಆಗಲಿದೆ ಎಂಬ ರೈತರ ನಿರೀಕ್ಷೆ ಅಷ್ಟರ ಮಟ್ಟಿಗೆ ಹುಸಿಯಾಯಿತು.

ರಾಜ್ಯದ ಬಹುತೇಕ ಭಾಗಗಳಿಗೆ ನೀರಾವರಿ ಕಲ್ಪಿಸುವ ಏತ ನೀರಾವರಿ ಯೋಜನೆಗಳನ್ನು ಸಿಎಂ ಪ್ರಕಟಿಸಿದ್ದಾರೆ. ಇದರಲ್ಲಿ ಯಡಿಯೂರಪ್ಪ ಅವರು ಪ್ರತಿನಿಧಿಸುವ ಶಿಕಾರಿಪುರದ ಕೆರೆಗಳನ್ನು ತುಂಬುವ ಯೋಜನೆಗೆ 200 ಕೋಟಿ ನೀಡಿರುವುದು, ಸಿದ್ದರಾಮಯ್ಯ ಅವರ ಬಾದಾಮಿ ಕ್ಷೇತ್ರದ ನೀರಾವರಿಗೆ 300 ಕೋಟಿ ನೀಡಿರುವುದು ಪ್ರಮುಖವಾದವು. ನೀರಾವರಿ ಯೋಜನೆಯಲ್ಲಿ ಬಹುತೇಕ ಕರ್ನಾಟಕದ ಎಲ್ಲ ವಲಯಗಳಿಗೂ ಹಣ ನೀಡಿದ್ದು ಎಚ್​ಡಿಕೆ ಬಜೆಟ್​ನ ಪ್ರಮುಖಾಂಶ.

ಕಳೆದ ಬಾರಿ ಕರಾವಳಿ, ಮಲೆನಾಡಿಗೆ ಬಜೆಟ್​ನಲ್ಲಿ ಕಡಿಮೆ ಅನುದಾನ ನೀಡಲಾಗಿತ್ತು ಎಂಬ ಆರೋಪಗಳು ಕೇಳಿ ಬಂದಿದ್ದವು. ಆದರೆ, ಈ ಬಾರಿ ಅಂಥ ಆರೋಪಗಳನ್ನೆಲ್ಲ ಮೆಟ್ಟಿನಿಂತ ಎಚ್​ಡಿಕೆ, ಕರಾವಳಿಯಲ್ಲಿ ಭತ್ತ ಬೆಳೆಗಾರರಿಗೆ ಕರಾವಳಿ ಪ್ಯಾಕೇಜ್​ನಡಿ 5 ಕೋಟಿ ರೂ. ಅನುದಾನ ಒದಗಿಸಿದ್ದಾರೆ. ಅಲ್ಲದೆ, ರೈತರ ಪ್ರತಿ ಹೆಕ್ಟೇರ್​​ಗೆ 7,500 ನೇರ ವರ್ಗಾವಣೆ ಮಾಡಲು ಉದ್ದೇಶಿಸಿರುವುದಾಗಿ ಪ್ರಕಟಿಸಿದ್ದಾರೆ.

ಕೊಡಗಿಗೂ ಕೊಡುಗೆ

ನೆರೆಪೀಡಿತ ಕೊಡಗಿಗೂ ಕುಮಾರಸ್ವಾಮಿ ಅವರು ಭರಪೂರ ಯೋಜನೆಗಳನ್ನು ತಮ್ಮ ಬಜೆಟ್​ನಲ್ಲಿ ಪ್ರಕಟಿಸಿದ್ದಾರೆ. ಮನೆಗಳ ನಿರ್ಮಾಣ, ಆಸ್ಪತ್ರೆ, ರೀ ಸರ್ವೆ, ಪುನರ್​ನಿರ್ಮಾಣ ಪ್ರಾಧಿಕಾರಕ್ಕೆ ಅನುದಾನ ನೀಡಲಾಗಿದೆ.

ಶಿಕ್ಷಣದ ವಿಚಾರಕ್ಕೆ ಬಂದರೆ, ರಾಜ್ಯಾದ್ಯಂತ ಇನ್ನು ನಾಲ್ಕು ವರ್ಷಗಳಲ್ಲಿ ಒಂದು ಸಾವಿರ ಪಬ್ಲಿಕ್​ ಶಾಲೆಗಳನ್ನು ಆರಂಭಿಸಲು ರಾಜ್ಯ ಸರ್ಕಾರ ನಿರ್ಧರಿಸಿದೆ. ಕರಾವಳಿ, ಮಲೆನಾಡು ಪ್ರದೇಶಗಳಲ್ಲಿ ವಿದ್ಯಾರ್ಥಿಗಳು ದೂರದ ಶಾಲೆಗಳಿಗೆ ತೆರಳುವಾಗ ಕಾಲುವೆಗಳನ್ನು ದಾಟುವ ವೇಳೆ ಅವಘಡಕ್ಕೀಡಾಗುತ್ತಿರುವುದನ್ನು ಮನಗಂಡಿರುವ ಸರ್ಕಾರ, ಅಗತ್ಯವಿರುವೆಡೆಗಳಲ್ಲಿ ಕಾಲುಸಂಕಗಳನ್ನು ನಿರ್ಮಿಸಲು ಉದ್ದೇಶಿಸಿದೆ.

ರಾಜ್ಯ ಸರ್ಕಾರ ಜಾರಿಗೆ ತಂದಿರುವ ಆರೋಗ್ಯ ಕರ್ನಾಟಕ ಮತ್ತು ಕೇಂದ್ರ ಸರ್ಕಾರದ ಆಯುಷ್ಮಾನ್​ ಭಾರತ್​ ಅನ್ನು ಸಂಯೋಜನೆ ಮಾಡಿರುವ ಸರ್ಕಾರ 950 ಕೋಟಿ ರೂ. ವೆಚ್ಚದಲ್ಲಿ ನಾಗರಿಕರಿಗೆ ಆರೋಗ್ಯ ಸೇವೆ ನೀಡಲು ಮುಂದಾಗಿದೆ.

ವೃದ್ಧಾಪ್ಯ ವೇತನವನ್ನು 1,000 ರೂಗಳಿಗೆ, ಆಶಾ ಕಾರ್ಯಕರ್ತರ ಗೌರವಧನವನ್ನು 500 ರೂ.ಗಳಿಗೆ ಏರಿಸಲಾಗಿದೆ. ಮಹಿಳೆಯರಿಗೆ ಹೆರಿಗೆ ಪೂರ್ವದಲ್ಲಿ ಮತ್ತು ಹೆರಿಗೆ ನಂತರದ ಮೂರು ತಿಂಗಳು ನೀಡಲಾಗುತ್ತಿದ್ದ 1000 ಧನ ಸಹಾಯವನ್ನು ಈ ಬಾರಿಯಿಂದ 2000 ಸಾವಿರ ರೂ.ಗಳಿಗೆ ಏರಿಸಲಾಗಿದ್ದು, ಇದಕ್ಕಾಗಿ 470 ಕೋಟಿ ರೂ. ಮೀಸಲಿಡಲಾಗಿದೆ.

ಪರಿಶಿಷ್ಟ ಜಾತಿ ಮತ್ತು ಪಂಗಡದ ಶ್ರೇಯೋಭಿವೃದ್ಧಿಗಾಗಿ ಈ ಸಾಲಿನಲ್ಲಿ ಸಮಾಜ ಕಲ್ಯಾಣ ಇಲಾಖೆಗೆ 30,445ಕೋಟಿ ರೂ.ಗಳನ್ನು ನೀಡಲಾಗಿದೆ.

4 ಲಕ್ಷ ಮನೆಗಳ ನಿರ್ಮಾಣ

ಇನ್ನು ವಸತಿ ಇಲಾಖೆಗೆ ಬಂದರೆ, ಈ ಸಾಲಿನಲ್ಲಿ ಸರ್ಕಾರ ವಸತಿ ರಹಿತರಿಗಾಗಿ ಒಟ್ಟು 4 ಲಕ್ಷ ಮನೆಗಳನ್ನು ನಿರ್ಮಾಣ ಮಾಡುವ ಮಹತ್ವಾಕಾಂಕ್ಷೆಯನ್ನು ಸರ್ಕಾರ ಹೊಂದಿದೆ. 4 ಕೋಟಿಗೂ ಮಿಗಿಲಾದ ನಾಗರಿಕರ ಆಹಾರ ಪೂರೈಕೆಗಾಗಿ ಈ ವರ್ಷ 3700 ಕೋಟಿ ರೂ.ಗಳನ್ನು ನೀಡಲಾಗಿದೆ.

ಬೆಂಗಳೂರು ನಗರದ ಅಭಿವೃದ್ಧಿಗಾಗಿ ಮುಂದಿನ ಮೂರು ವರ್ಷಗಳಲ್ಲಿ 8015 ಕೋಟಿ ರೂ.ಗಳನ್ನು ಖರ್ಚು ಮಾಡಲು ಉದ್ದೇಶಿಸಿರುವ ಸರ್ಕಾರ ಈ ಬಾರಿ 2,300 ಕೋಟಿ ರೂ.ಗಳನ್ನು ಬಿಡುಗಡೆ ಮಾಡುವುದಾಗಿ ತಿಳಿಸಿದೆ. ಇದರ ಜತೆಗೆ, ಸಂಚಾರ ದಟ್ಟಣೆ ನಿಯಂತ್ರಣ, ಮಾಲಿನ್ಯ ತಡೆಗಟ್ಟಲು, ಕಾಲುವೆಗಳ ಅಭಿವೃದ್ಧಿ, ತ್ಯಾಜ್ಯ ನಿರ್ವಹಣೆ, ಕೊಳೆಗೇರಿ ಅಭಿವೃದ್ಧಿಗಾಗಿಯೂ ಸಾಕಷ್ಟು ಅನುದಾನ ನೀಡಿದೆ.

ರಾಜ್ಯದ ಭೌಗೋಳಿಕ ಮತ್ತು ಆಡಳಿತಾತ್ಮಕ ಅಗತ್ಯತೆಗಳನ್ನು ಪರಿಗಣಿಸಿ, ರಾಮನಗರ ಜಿಲ್ಲೆಯ ಹಾರೋಹಳ್ಳಿ, ಚಿಕ್ಕಬಳ್ಳಾಪುರ ಜಿಲ್ಲೆಯ ಚೇಳೂರು, ಬಾಗಲಕೋಟೆ ಜಿಲ್ಲೆಯ ತೇರದಾಳ ಹಾಗೂ ಚಿಕ್ಕಮಗಳೂರು ಜಿಲ್ಲೆಯ ಕಳಸಾವನ್ನು ಹೊಸ ತಾಲೂಕುಗಳನ್ನಾಗಿ ರಚಿಸಲಾಗಿದೆ.

ಇನ್ನುಳಿದಂತೆ ಮಠ ಮಾನ್ಯಗಳಿಗೂ ಸಿಎಂ ಅಲ್ಪ ಸ್ವಲ್ಪ ಕಾಣಿಕೆ ನೀಡಿದ್ದಾರೆ. ಹತ್ತಾರು ಸಮುದಾಯದ ಹತ್ತಾರು ಮಠ ಮಾನ್ಯಗಳಿಗೆ ಒಂದರಿಂದ ಎರಡು ಕೋಟಿ ರೂ.ಗಳ ವರೆಗೆ ಅನುದಾನ ನೀಡಿ, ಎಲ್ಲ ಸಮುದಾಯದ ಗಮನ ಸೆಳೆಯುವ ಕಾರ್ಯ ಮಾಡಿದ್ದಾರೆ.

ರಾಜ್ಯ ಇನ್ನೇನು ಲೋಕಸಭೆ ಚುನಾವಣೆಗೆ ಸಿದ್ಧವಾಗುತ್ತಿರುವ ಹಿನ್ನೆಲೆಯಲ್ಲಿ 2.43 ಲಕ್ಷ ಕೋಟಿ ರೂ ಮೊತ್ತದ ಬಜೆಟ್​ ಮಂಡಿಸಿರುವ ಮುಖ್ಯಮಂತ್ರಿ ಎಚ್​.ಡಿ ಕುಮಾರಸ್ವಾಮಿ ಜನಪ್ರಿಯ ಕಾರ್ಯಕ್ರಮಗಳಿಗೆ ಕೈಹಾಕಿ, ಸಮತೋಲಿತ ಬಜೆಟ್​ ಮಂಡಿಸಿದ್ದಾರೆ.