ಹೈಡ್ರಾಮಕ್ಕೆ ಕ್ಲೈಮ್ಯಾಕ್ಸ್?

ನಾಯಕರ ಮುನಿಸಿಗೆ ಮುಲಾಮು, ಅತೃಪ್ತರಿಗೆ ಲಕ್ಷ್ಮಣರೇಖೆ | ಕಾಂಗ್ರೆಸ್ ಥಂಡಾ, ಮೆತ್ತಗಾದ ದಳ, ಶಸ್ತ್ರ ಕೆಳಗಿಟ್ಟ ಬಿಜೆಪಿ

ಬೆಂಗಳೂರು: ದಿನಕ್ಕೊಂದು ವಿವಾದ, ಕ್ಷಣಕ್ಕೊಂದು ವದಂತಿಗಳಿಂದಾಗಿ ಕಳೆದ 15 ದಿನಗಳಿಂದ ಜನರ ಸಂಯಮ ಪರೀಕ್ಷಿಸಿದ್ದ ರಾಜಕೀಯ ಮೇಲಾಟ ಕೊನೆಗೂ ಕ್ಲೈಮ್ಯಾಕ್ಸ್ ಹಂತ ತಲುಪಿದೆ. ಸುನಾಮಿಯ ಸ್ವರೂಪ ಪಡೆದಿದ್ದ ಕಾಂಗ್ರೆಸ್​ನೊಳಗಿನ ಆಂತರಿಕ ಬೇಗುದಿಯನ್ನು ನಂದಿಸುವಲ್ಲಿ ಬಹುತೇಕ ಯಶಸ್ವಿಯಾಗಿರುವ ರಾಜ್ಯ ನಾಯಕರು ಉಳಿದಿರುವ ಸಣ್ಣಪುಟ್ಟ ಭಿನ್ನಾಭಿಪ್ರಾಯಗಳನ್ನು ಇನ್ನೆರಡು ದಿನಗಳಲ್ಲಿ ಬಗೆಹರಿಸಿಕೊಳ್ಳುವ ವಿಶ್ವಾಸದಲ್ಲಿದ್ದಾರೆ.

ಬೆಳಗಾವಿ ಸಹಕಾರ ಬ್ಯಾಂಕ್ ಚುನಾವಣೆಯಿಂದ ಆರಂಭವಾದ ರಾಜಕೀಯ ಕಿತ್ತಾಟ, ಅಂತಿಮವಾಗಿ ಆಡಳಿತ ಪಕ್ಷಗಳು ಬಿಜೆಪಿ ಮೇಲೆ ಆರೋಪ ಹೊರಿಸುವುದರೊಂದಿಗೆ ಇಡೀ

ಪ್ರಹಸನ ಅಂತಿಮ ಹಂತಕ್ಕೆ ಬಂದು ನಿಂತಿದೆ. ಎರಡು ವಾರಗಳಿಂದ ನಡೆಯುತ್ತಿದ್ದ ಶೀತಲ ಸಮರಕ್ಕೆ ತೆರೆ ಎಳೆಯಲು ಭಾನುವಾರ ಮಾಜಿ ಸಿಎಂ ಸಿದ್ದರಾಮಯ್ಯ ಅವರು ರಂಗಪ್ರವೇಶ ಮಾಡುತ್ತಿದ್ದು, ಇವರ ಜತೆಗೆ ಕಾಂಗ್ರೆಸ್ ರಾಜ್ಯ ಉಸ್ತುವಾರಿ ಕೆ.ಸಿ.ವೇಣುಗೋಪಾಲ್ ಒಗ್ಗೂಡಿ ಪಕ್ಷದೊಳಗಿನ ಸಣ್ಣಪುಟ್ಟ ಗೊಂದಲಕ್ಕೆ ತೆರೆ ಎಳೆಯುವ ಸುಳಿವು ಸಿಕ್ಕಿದೆ.

ಇಂದು ಇಡೀ ದಿನ ಕಾಂಗ್ರೆಸ್ ಸಭೆ

ಶನಿವಾರ ಬೆಂಗಳೂರಿಗೆ ಬಂದಿಳಿದಿರುವ ಕೆ.ಸಿ.ವೇಣುಗೋಪಾಲ್ ಭಾನುವಾರ ವಿವಿಧ ಮುಖಂಡರು, ಘಟಕಗಳ ಪ್ರಮುಖರ ಜತೆ ಸಭೆ ನಡೆಸಲಿದ್ದಾರೆ. ಲೋಕಸಭೆ ಚುನಾವಣೆ ತಯಾರಿಗಾಗಿ ಸಂಘಟನೆಯನ್ನು ಸಜ್ಜುಗೊಳಿಸಲು ವಿವಿಧ ಕಾರ್ಯಕ್ರಮ ರೂಪಿಸುವ ಜತೆಗೆ ನಾಯಕರ ನಡುವಿನ ತಿಕ್ಕಾಟಕ್ಕೆ ತೇಪೆ ಹಚ್ಚಲಿದ್ದಾರೆ. ಪ್ರಮುಖವಾಗಿ ಬೆಳಗಾವಿ ಮುಖಂಡರೊಂದಿಗೆ ರ್ಚಚಿಸಿ ಬಿಕ್ಕಟ್ಟು ಉಲ್ಬಣವಾಗದಂತೆ ಮಾಡಿದ್ದೇ ಕೆ.ಸಿ. ವೇಣುಗೋಪಾಲ್. ಜಾರಕಿಹೊಳಿ ಸಹೋದರರೊಂದಿಗೆ ದೂರವಾಣಿಯಲ್ಲಿ ಚರ್ಚೆ ನಡೆಸಿದ್ದ ಅವರು ಇದೀಗ ಮುಖತಃ ಭೇಟಿ ಮಾಡಿ ಗಾಯಕ್ಕೆ ಮುಲಾಮು ಸವರಲಿದ್ದಾರೆ. ಲಕ್ಷ್ಮೀ ಹೆಬ್ಬಾಳ್ಕರ್ ಮತ್ತು ಜಾರಕಿಹೊಳಿ ಸಹೋದರರ ನಡುವಿನ ಶೀತಲ ಸಮರ ಆಸ್ಪೋಟಗೊಂಡ ಬಳಿಕ ನಡೆದ ಘಟನೆಯಿಂದ ಪಕ್ಷದ ವರ್ಚಸ್ಸಿಗೆ ಒಂದಿಷ್ಟು ಧಕ್ಕೆಯಾಗಿದ್ದನ್ನು ಒಪ್ಪಿಕೊಳ್ಳುವ ಕೈ ನಾಯಕರು, ಕಾಂಗ್ರೆಸ್​ನಲ್ಲಿ ಇಂಥ ಬೆಳವಣಿಗೆ ಸಹಜ. ಆದರೆ, ಇದಕ್ಕೆ ಹೈಕಮಾಂಡ್ ಬಳಿ ಪರಿಹಾರವಿರಲಿದೆ ಎಂದು ಹೇಳುತ್ತಾರೆ. ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ ಪಕ್ಷದ ಬೆಳಗಾವಿ ಘಟಕದ ವಿಚಾರದಲ್ಲಿ ಮೂಗುತೂರಿಸಿದ್ದೇಕೆ ಎಂಬ ವಿಚಾರದಲ್ಲೂ ಒಂದು ಸ್ಪಷ್ಟ ನಿಲುವು ಈ ಸಂದರ್ಭದಲ್ಲಿ ಹೊರಬೀಳಲಿದ್ದು, ನಾಯಕರ ಪರಿಧಿಗಳಿಗೆ ಗಡಿ ಗುರುತು ಸಾಧ್ಯತೆ ಹೆಚ್ಚಿದೆ. ಸಮ್ಮಿಶ್ರ ಸರ್ಕಾರಕ್ಕೆ ಪಾಲುದಾರ ಪಕ್ಷವಾಗಿ ಯಾವುದೇ ಕಿರಿಕಿರಿ ಆಗದಂತೆ ನೋಡಿಕೊಳ್ಳಬೇಕೆಂದು ಪಕ್ಷದ ಅಧ್ಯಕ್ಷ ರಾಹುಲ್ ಸೂಚನೆ ನೀಡಿದ್ದು, ಅದರ ಅನುಸಾರವಾಗಿ ಕಾರ್ಯತಂತ್ರ ರೂಪುಗೊಳ್ಳಲಿದೆ.

ಸಿಎಂಗೆ ಬಿಜೆಪಿ ಸವಾಲ್

ಸಿಎಂ ಕುಮಾರಸ್ವಾಮಿಯವರು ತಮ್ಮ ನಾಯಕರನ್ನು ಕಿಂಗ್​ಪಿನ್​ಗಳೆಂದು ಜರಿದಿರುವುದಕ್ಕೆ ಬಿಜೆಪಿ ವ್ಯಘ್ರಗೊಂಡಿದೆ. ಲಾಟರಿ, ರಿಯಲ್ ಎಸ್ಟೇಟ್ ದಂಧೆಕೋರರ ಹೆಗಲಮೇಲೆ ಬಂದೂಕು ಇಟ್ಟು ಗುಂಡುಹೊಡೆದಿದ್ದು ನೀವು ಎಂದು ಟೀಕಿಸಿದೆ. ಜತೆಗೆ ನಿಮ್ಮ ಕೈಯಲ್ಲೇ ತನಿಖಾ ಸಂಸ್ಥೆಗಳಿರುವಾಗ ಲಾಟರಿ, ರಿಯಲ್ ಎಸ್ಟೇಟ್ ಮಾಫಿಯಾದವರನ್ನು ತನಿಖೆಗೊಳಪಡಿಸಿ ಎಂದು ಸವಾಲೆಸೆದಿದೆ.

ಸಾಧ್ಯತೆ

ಸರ್ಕಾರ ರಚಿಸುವ ಉತ್ಸಾಹದಲ್ಲಿದ್ದ ಬಿಜೆಪಿಯ ಆಶಯಕ್ಕೆ ಪೂರಕವಾಗಿ ಜಾರಕಿಹೊಳಿ ಸಹೋದರರ ಚಟುವಟಿಕೆ ನಡೆದಿತ್ತು. ಆದರೆ, ಈಗ ಕೈ ಪಾಳಯದಲ್ಲಿ ತಾತ್ಕಾಲಿಕವಾಗಿ ಎಲ್ಲವೂ ಸರಿಹೋದಂತೆ ಕಾಣುತ್ತಿರುವುದರಿಂದ ಬಿಜೆಪಿ ಶಸ್ತ್ರ ಕೆಳಗಿಡುವುದು ಬಹುತೇಕ ಖಚಿತ.

ಕಾಂಗ್ರೆಸ್​ನಲ್ಲಿ ಸೂಕ್ತ ಸ್ಥಾನಮಾನ ಸಿಗದೇ ಇದ್ದಲ್ಲಿ ಬಿಜೆಪಿ ಸೇರುವ ಆಶ್ವಾಸನೆ ನೀಡಿದ್ದ ಕೈ ಶಾಸಕರೀಗ ಹೆಜ್ಜೆ ಹಿಂದಿಟ್ಟಿದ್ದಾರೆ. ಲೋಕಸಭೆ ಚುನಾವಣೆ ಬಳಿಕ ತೀರ್ಮಾನ ಕೈಗೊಳ್ಳುವ ಭರವಸೆ ಬಿಜೆಪಿಗೆ ಸಿಕ್ಕಿದೆ.

ಕಾಂಗ್ರೆಸ್ ಬೆಳವಣಿಗೆಯಿಂದ ಸರ್ಕಾರದ ವರ್ಚಸ್ಸಿಗೆ ಪದೇಪದೆ ಆಗುತ್ತಿರುವ ಧಕ್ಕೆಯನ್ನು ತಡೆಗಟ್ಟಲು ಜೆಡಿಎಸ್ ವರಿಷ್ಠರು ಕೈರಾಷ್ಟ್ರೀಯ ನಾಯಕರ ಬಳಿ ಅಳಲು ತೋಡಿಕೊಂಡಿದ್ದಾರೆ. ಅದರ ಅನುಸಾರ ಕೆ.ಸಿ.ವೇಣುಗೋಪಾಲ್ ನೇತೃತ್ವದಲ್ಲಿ ಆಂತರಿಕ ಬಿಕ್ಕಟ್ಟು ಶಮನಕ್ಕೆ ಸೂತ್ರ ಸಿದ್ಧವಾಗಿದೆ.